ಬದಿಯಡ್ಕ: ಜಿಲ್ಲೆಯಲ್ಲೇ ಅತ್ಯಧಿಕ ಜನಸಂಖ್ಯೆಯಿರುವ ಕೊರಗ ಕಾಲನಿ ಎಂಬ ಪ್ರಖ್ಯಾತಿಯ ಬದಿಯಡ್ಕ ಗ್ರಾ.ಪಂ. ವ್ಯಾಪ್ತಿಯ ಪೆರಡಾಲ ಕೊರಗ ಕಾಲನಿಯಲ್ಲಿ ಸೂಕ್ತ ಕಟ್ಟಡವಿಲ್ಲದೆ ಅಂಗನವಾಡಿ ಮತ್ತು ಏಕೋಪಾಧ್ಯಾಯ ಶಾಲಾ ತರಗತಿಗಳು ಸಮೀಪದ ಸಮುದಾಯ ಭವನ(ಕಮ್ಯುನಿಟಿ ಹಾಲ್)ವನ್ನು ಆಶ್ರಯಿಸಿ ಬಳಿಕ ಇದೀಗ ವ್ಯಕ್ತಿಯೊಬ್ಬರ ಮನೆಗೆ ಸ್ಥಳಾಂತರಗೊಂಡ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಹಿಂದುಳಿದ ವರ್ಗದ ಶಿಕ್ಷಣ ಪ್ರಗತಿಗಾಗಿ ವರ್ಷಗಳ ಹಿಂದೆ ನಿರ್ಮಿಸಲಾದ ಅಂಗನವಾಡಿ ಕಟ್ಟಡವು ಪ್ರಸ್ತುತ ಶಿಥಿಲಾವಸ್ಥೆಗೆ ತಲುಪಿದ್ದು, ಸಮರ್ಪಕ ರೀತಿಯಲ್ಲಿ ಅಗತ್ಯ ಸೌಕರ್ಯಗಳನ್ನು ಕೊಡಮಾಡದ ಕಾರಣ ಅಂಗನವಾಡಿ ಕೇಂದ್ರ ಸೊರಗಿದೆ. ಸಮೀಪದಲ್ಲಿರುವ ಏಕೋಪಾಧ್ಯಾಯ ಶಾಲೆಗೂ ಸೂಕ್ತ ಕಟ್ಟಡವಿಲ್ಲದ ಕಾರಣ ಸಮುದಾಯ ಭವನಕ್ಕೆ ಸ್ಥಳಾಂತರ ಗೊಂಡಿತ್ತು. ಆ ಬಳಿಕ ಇದೀಗ ಅಲ್ಲಿಯ ಅನನುಕೂಲತೆಯಿಂದ ಸಮೀಪದ ಅಂಗಾರೆ ಎಂಬವರ ಮನೆಗೆ ಸ್ಥಳಾಂತರ ಹೊಂದಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಅಂಗನವಾಡಿ ಕಟ್ಟಡದ ದುರಸ್ಥಿತಿ ಕಾರ್ಯದ ನಿಮಿತ್ತ ತರಗತಿಗಳನ್ನು ಸ್ಥಳಾಂತರಿಸಲಾಗಿತ್ತು. ಹಲವು ತಿಂಗಳು ಉರುಳಿದರೂ ಶಿಥಿಲಾವಸ್ಥೆಯಲ್ಲಿ ಶೋೀಚನೀಯವಾಗಿರುವ ಅಂಗನವಾಡಿ ಕಟ್ಟಡದ ದುರಸ್ತಿಯಾಗಲಿ, ಏಕೋಪಾಧ್ಯಾಯ ಶಾಲೆಗೆ ಸೂಕ್ತ ಕಟ್ಟಡವನ್ನಾಗಲಿ ನಿರ್ಮಿಸಲಾಗಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. ಶೀಘ್ರದಲ್ಲೆ ಶೌಚಾಲಯ ಸಹಿತ ಅಂಗನವಾಡಿ ಕೊಠಡಿಗಳನ್ನು ದುರಸ್ತಿಗೊಳಿಸಿ, ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿ ಮಕ್ಕಳನ್ನು ಸಮೀಪದ ಸಮುದಾಯ ಕೇಂದ್ರದ ಕಟ್ಟಡಕ್ಕೆ ಕಳುಹಿಸಲಾಗಿತ್ತು. ಸಮುದಾಯ ಭವನಕ್ಕೆ ಸ್ಥಳಾಂತರಗೊಂಡ ಅಂಗನವಾಡಿಯಲ್ಲಿ ಮಕ್ಕಳಿಗಾಗಿರುವ ಭೋಜನ ತಯಾರಿ ಅಡುಗೆ ಕೋಣೆಗೆ ತೆರಳಲು ಸರಿಯಾದ ದಾರಿಯಿಲ್ಲದ ಕಾರಣ ಸಮೀಪದ ಬೇಲಿ ಹಾರಿ ತೆರಳಬೇಕಾದ ದುರವಸ್ಥೆ ಎದುರಾಯಿತು. ಎರಡು ತಿಂಗಳು ಅಲ್ಲಿ ಕಾರ್ಯಾಚರಿಸಿದ ಅಂಗನವಾಡಿಡಿ ಇದೀಗ ಅಂಗಾರೆಯವರ ಮನೆಗೆ ಸ್ಥಳಾಂತರಗೊಂಡಿದೆ. ಅಂಗನವಾಡಿಯನ್ನು ಬೇರೆಡೆಗೆ ಸ್ಥಳಾಂತರಿಸಿ ಐದು ತಿಂಗಳುಗಳು ಕಳೆದರೂ ಶೋಚನೀಯವಸ್ಥೆಯಲ್ಲಿರುವ ಅಂಗನವಾಡಿಯ ದುರಸ್ತಿ ಕಾರ್ಯ ಇನ್ನೂ ಆರಂಭಗೊಂಡಿಲ್ಲ.
ಏಕೆ ಬೇಕಿತ್ತು ಏಕೋಪಾಧ್ಯಾಯ ಶಾಲೆ?!-ಏಕೋಪಾಧ್ಯಾಯ ಶಾಲೆಗೂ ಕಟ್ಟಡವಿಲ್ಲದೆ 18 ವರ್ಷ
ಕೊರಗ ಕಾಲನಿಗೆಂದು ಶೈಕ್ಷಣಿಕ ಪ್ರಗತಿಗಾಗಿರುವ ಏಕೋಪಾಧ್ಯಾಯ ಶಾಲಾ ತರಗತಿಯನ್ನು 2000 ದಲ್ಲಿ ಆರಂಭಿಸಲಾಗಿತ್ತು. ಸಮುದಾಯ ಭವನ ಕೇಂದ್ರದ ಕಟ್ಟಡದಲ್ಲಿ ತತ್ಕಾಲಿಕವಾಗಿ ಕಾರ್ಯಾರಂಭಗೊಂಡ ಏಕೋಪಾಧ್ಯಾಯ ಶಾಲೆಗೆ 18 ವರ್ಷಗಳಾದರೂ ಸೂಕ್ತ ಕಟ್ಟಡದ ಭಾಗ್ಯ ದೊರೆಯದಿರುವುದು ದುರ್ದೈವ. ಮಳೆಗಾಲದಲ್ಲಿ ಸೋರುವ ಕಟ್ಟಡದಲ್ಲಿ ತರಗತಿ ನಡೆಸಲೂ ಕಷ್ಟಸಾಧ್ಯ. ಕಾಂಕ್ರೀಟ್ ಮೇಲ್ಛಾವಣಿಯ ಮೇಲೆ ಶೀಟುಗಳನ್ನು ಹೊದಿಸಿದ್ದರೂ ಮಳೆಗಾಲದ ವೇಳೆ ತರಗತಿ ಕೊಠಡಿಗಳಲ್ಲಿ ನೀರು ಸೋರಿಕೆ ಆಗುತ್ತಿದೆ. ಏಕೋಪಾಧ್ಯಾಯ ಶಾಲಾ ಕಟ್ಟಡಕ್ಕೆ ವರ್ಷಗಳ ಹಿಂದೆಯೇ ಬೇಡಿಕೆಯಿರಿಸಿದ್ದರೂ ಯಾವುದೇ ಕ್ರಮವನ್ನು ಸ್ಥಳೀಯಾಡಳಿತವಾಗಲಿ ಸರಕಾರವಾಗಲಿ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಹಿಂದುಳಿದ ಕೊರಗ ಸಮುದಾಯದ ಶೈಕ್ಷಣಿಕ ಮನ್ವಂತರಕ್ಕೆ ಮಾದರಿಯಾಗಬಹುದಾದ ಶಿಕ್ಷಣ ಕೇಂದ್ರಕ್ಕೆ ಸೂಕ್ತ ರೀತಿಯ ಕಟ್ಟಡ ಭಾಗ್ಯ ಒದಗಬೇಕಿದೆ.

