ಆಡಳಿತದಲ್ಲಿ ಜನ ಪರ ಧೋರಣೆಯಿಂದ ಮೋದಿ ಮತ್ತೊಮ್ಮೆ ಪ್ರಧಾನಿ; ಜನರ ನಾಡಿ ಮಿಡಿತ ಅರಿತ ಕನ್ನಡಿಗ ಅಭ್ಯರ್ಥಿ ಎಂಬ ನೆಲೆಯಲ್ಲಿ ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು
0
ಮಾರ್ಚ್ 29, 2019
ಪೆರ್ಲ: ಪ್ರಧಾನಮಂತ್ರಿ ಮೋದಿಯವರ ನೇತೃತ್ವದ ಭಾರತೀಯ ಜನತಾ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಬಲ ಶಕ್ತಿಯಾಗಿ ಹೊರ ಹೊಮ್ಮಲಿದೆ ಎಂದು ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಹೇಳಿದರು.
ಪೆರ್ಲದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಕಚೇರಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮೋದಿಯವರು ಪ್ರಧಾನಿಯಾದ ಬಳಿಕ ವಿಶ್ವ ಮಟ್ಟದಲ್ಲೇ ಅವರ ಸಾಧನೆ ಗುರುತಿಸಲ್ಪಟ್ಟಿದೆ.ಜನ ಪರ ಧೋರಣೆಯಿಂದ ಕೂಡಿದ ಅವರ ಆಡಳಿತದಿಂದ ದೇಶಾದ್ಯಂತ ಮೋದಿ ಅಲೆ ಎದ್ದಿದೆ.ಪಕ್ಷದ ಕಾರ್ಯಕರ್ತರು ಅವರು ಕಾರ್ಯ ರೂಪಕ್ಕೆ ತಂದಿರುವ ಯೋಜನೆಗಳನ್ನು ಜನತೆಗೆ ತಿಳಿಸಲು ಪ್ರಯತ್ನಿಸಬೇಕು.ಕೇರಳದಲ್ಲಿ ಆಡಳಿತ ನಡೆಸುತ್ತಾ ಬಂದಿರುವ ಎಡ, ಬಲರಂಗ ಸರಕಾರ ಹಾಗೂ ಆಯ್ಕೆಯಾದ ಪ್ರತಿನಿಧಿಗಳಿಂದ ಕಾಸರಗೋಡು ನಿರ್ಲಕ್ಷ್ಯಕ್ಕೊಳಗಾಗಿದೆ. ಜನರು ಬದಲಾವಣೆ ಬಯಸುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಯ ಕನಸನ್ನು ನನಸಾಗಿಸಲು ಭಾಷಾ ಅಲ್ಪ ಸಂಖ್ಯಾತ ಜಿಲ್ಲೆಯಲ್ಲಿ ಜನರ ನಾಡಿ ಮಿಡಿತ ಅರಿತಿರುವ, ಹಾಗೂ ಕನ್ನಡಿಗ ಅಭ್ಯರ್ಥಿ ಎಂಬ ನೆಲೆಯಲ್ಲಿ ಅನುಕೂಲಕರ ವಾತಾವರಣವಿದೆ.ಪ್ರತಿಯೊಂದು ಮತವೂ ಮೌಲ್ಯದಿಂದ ಕೂಡಿದೆ.ಮತದಾನದಲ್ಲಿ ಪಾಲ್ಗೊಳ್ಳುವುದರ ಮೂಲಕ ತಮ್ಮ ತಮ್ಮ ಕ್ಷೇಮವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಎಲ್ಲರೂ ಪರೋಕ್ಷವಾಗಿ ಕಾರಣರಾಗಬೇಕು ಎಂದ ಅವರು ಕಾಸರಗೋಡು ಲೋಕಸಭಾ ಕ್ಷೇತ್ರವನ್ನು ಜಯಿಸುವ ಆತ್ಮ ವಿಶ್ವಾಸ ವ್ಯಕ್ತ ಪಡಿಸಿದರು.
ಮಂಡಲಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಕಾರ್ಯದರ್ಶಿ ಆದರ್ಶ ಬಿ.ಎಂ., ಗೋಪಾಲ ಶೆಟ್ಟಿ ಅರಿಬೈಲು, ಎಣ್ಮಕಜೆ ಪಂಚಾಯಿತಿ ಸಮಿತಿ ಕಾರ್ಯದರ್ಶಿ ಪದ್ಮಶೇಖರ್ ನೇರೋಳು, ಬಿಜೆಪಿ ಜನ ಪ್ರತಿನಿಧಿಗಳು, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.