ನೀರಿಲ್ಲದೆ ಕಂಗೆಟ್ಟ ಕಾಲನಿ ನಿವಾಸಿಗರು- ಜನಪ್ರತಿನಿಧಿಗೆ ಹಾಗೂ ಸಂಬಂಧಿಕರಿಗೆ ಮಾತ್ರ ನೀರು ಪೂರೈಕೆ: ಉಳಿದವರಿಗೆ ನೀರಿಲ್ಲ- ಕಾಲನಿವಾಸಿಗಳ ಆರೋಪ
0
ಮಾರ್ಚ್ 06, 2019
ಮಂಜೇಶ್ವರ: ಮಂಜೇಶ್ವರ ಗ್ರಾ. ಪಂ. ನ 18 ನೇ ವಾರ್ಡು ಅಯ್ಯರ್‍ಕಟ್ಟೆ ಪರಿಶಿಷ್ಟ ಜಾತಿ, ವರ್ಗದ ಕಾಲನಿಯಲ್ಲಿ ಪರಿಶಿಷ್ಟ ವರ್ಗದ ಫಂಡ್ ನಿಂದ ಸುಮಾರು ಮೂರು ಲಕ್ಷ ರೂ. ನಲ್ಲಿ ನಿರ್ಮಿಸಲಾದ ಕುಡಿಯುವ ನೀರಿನ ಯೋಜನೆಯಲ್ಲಿ ಗ್ರಾ.ಪಂ.ಸದಸ್ಯರಿಗೆ ಹಾಗೂ ಆಕೆಯ ಕುಟುಂಬಸ್ಥರಿಗೆ ನೀರು ಪೂರೈಕೆಯಾಗುತ್ತಿದೆ ಹೊರತು ಉಳಿದ ಕುಟುಂಬಗಳಿಗೆ ನೀರು ಲಭಿಸುತ್ತಿಲ್ಲವೆಂದು ಕಾಲನಿ ನಿವಾಸಿಗಳು ತಮ್ಮ ಅಲಳನ್ನು ಹೇಳಿ ಕೊಂಡಿದ್ದಾರೆ.
ಸುಮಾರು ಎಂಟು ತಿಂಗಳ ಹಿಂದಷ್ಟೆ ಈ ಕಾಲನಿಯಲ್ಲಿ ಕೊಳವೆ ಬಾವಿ ಹಾಗೂ ಟ್ಯಾಂಕನ್ನು ನಿರ್ಮಿಸಲಾಗಿತ್ತು. ಕಾಲನಿಯ ಎಲ್ಲಾ ಮನೆಗಳಿಗೂ ಪೈಪನ್ನು ಅಳವಡಿಸಲಾಗಿದೆ. ಆದರೆ ಟ್ಯಾಂಕ್ ನಿಂದ ಸರಬರಾಜಾಗುವ ನೀರು ಸುಮಾರು ಐದು ಕುಟುಂಬಸ್ಥರಿಗೆ ಲಭಿಸುತ್ತಿಲ್ಲವೆಂದು ಆರೋಪಿಸಲಾಗಿದೆ. ಕೇವಲ ಬೆರಳೆಣಿಕೆಯ ದಿನ ಮಾತ್ರ ಲಭಿಸಿದ ನೀರು ಮತ್ತೆ ಬರಲೇ ಇಲ್ಲವೆಂದು ಕಾಲನಿ ವಿವಾಸಿಗಳು ಸಂಕಷ್ಟದ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಕಾಲನಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗದ ಸುಮಾರು ಹತ್ತು ಕುಟುಂಬಗಳು ಮಾತ್ರ ವಾಸಿಸುತ್ತವೆ. ಈ ಬಗ್ಗೆ ಹಲವಾರು ಬಾರಿ ಸ್ಥಳೀಯ ಗ್ರಾ.ಪಂ. ಸದಸ್ಯೆಯರ ಬಳಿ ಸಮಸ್ಯೆಯ ಬಗ್ಗೆ ದೂರಿಕೊಂಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ತಿಳಿದುಬಂದಿದೆ.
ಇದೀಗ ನೀರು ಲಭಿಸದ ಕಾಲನಿ ನಿವಾಸಿಗಳು ಸುಮಾರು ಒಂದು ಕಿಲೋ ಮೀಟರ್ ದೂರಕ್ಕೆ ಸಾಗಿ ನೀರನ್ನು ತರಬೇಕಾತ್ತಿದೆ, ಮಾತ್ರವಲ್ಲದೆ ವಾರದಲ್ಲಿ ಎರಡು ಬಾರಿ ದುಡ್ಡು ನೀಡಿ ನೀರನ್ನು ತರಿಸಬೇಕಾದ ದುಸ್ಥಿತಿ ಬಂದೊದಗಿರುವುದಾಗಿ ಇವರು ಆರೋಪಿಸುತಿದ್ದಾರೆ.
ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಪರಿಸರದ ಬಾವಿಗಳಲ್ಲೂ ನೀರು ಬತ್ತಿ ಹೋಗಿದ್ದು ಇನಷ್ಟು ಸಂಕಷ್ಟಕ್ಕೆ ಕಾರಣವಾಗಿದೆ. ಈ ಬಗ್ಗೆ ಈಗಾಗಲೇ ಕಾಸರಗೋಡು ಪರಿಶಿಷ್ಟ ವರ್ಗದ ಇಲಾಖೆ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂ. ಗೆ ದೂರನ್ನು ನೀಡಲಾಗಿದೆ.
ಈ ಮಧ್ಯೆ ಜಿಲ್ಲಾ ಪಂ. ವತಿಯಿಂದ ಪ್ರತಿನಿಧಿಯೋರ್ವರು ವೀಕ್ಷಿಸಿ ತೆರಳಿದ್ದು ಬಳಿಕ ಯಾವುಧೆ ಮಾಹಿತಿ ಲಭ್ಯವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತಾರಕ್ಕೇರುತ್ತಿರುವಾಗ ಸಂಬಂಧಪಟ್ಟವರು ಮೌನವಹಿಸಿರುವುದು ಕಾಲನಿ ನಿವಾಸಿಗಳನ್ನು ಆಕ್ರೋಶಿತರನ್ನಾಗಿಸಿದೆ. ಕೂಡಲೇ ನೀರಿನ ವ್ಯವಸ್ಥೆಯನ್ನು ಕಲ್ಪಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಗೆ ಮುಂದಾಗುವುದಾಗಿ ಸ್ಥಳೀಯರು ಮುನ್ನೆಚ್ಚೆರಿಕೆಯನ್ನು ನೀಡಿದ್ದಾರೆ.
ಈ ಬಗ್ಗೆ ಗ್ರಾ.ಪಂ. ಸದಸ್ಯೆ ಪ್ರಮೀಳಾರನ್ನು ವಿಜಯವಾಣಿ ಸಂಪರ್ಕಿಸಿದಾಗ ಇಂತಹ ಸಮಸ್ಯೆಯ ಬಗ್ಗೆ ನನ್ನ ಗಮನಕ್ಕೇ ಬಂದಿಲ್ಲವೆಂದು ತಿಳಿಸಿದ್ದಾರೆ.