ಎ-ಸ್ಯಾಟ್ ಮಿಸೈಲ್ ಹೊಡೆದುರುಳಿಸಿದ್ದು ಸೇವೆ ಸ್ಥಗಿತಗೊಂಡಿದ್ದ ಸಕ್ರಿಯ ಉಪಗ್ರಹ: ಡಿಆರ್ ಡಿಒ
0
ಮಾರ್ಚ್ 27, 2019
ನವದೆಹಲಿ: ಎ-ಸ್ಯಾಟ್ ಆಂಟಿ ಸ್ಯಾಟೆಲೈಟ್ ಕ್ಷಿಪಣಿಯು ಇಂದು(ಬುಧವಾರ) ಬೆಳಗ್ಗೆ ಹೊಡೆದುರುಳಿಸಿದ್ದು, ಸೇವೆಯಿಂದ ಸ್ಥಗಿತಗೊಂಡಿದ್ದ ಸಕ್ರಿಯ ಉಪಗ್ರಹವನ್ನು ಎಂದು ಭಾರತೀಯ ರಕ್ಷಣಾ ಸಂಶೋಧನಾ ಮತ್ತು ಅಭಿವದ್ದಿ ಸಂಸ್ಥೆ ಡಿಆರ್ ಡಿಒ ಹೇಳಿದೆ.
ಪ್ರಧಾನಿ ಮೋದಿ ಡಿಆರ್ ಡಿಒದ 'ಮಿಷನ್ ಶಕ್ತಿ' ಯಶಸ್ಸಿನ ಕುರಿತು ಘೋಷಣೆ ಮಾಡಿದ ಬೆನ್ನಲ್ಲೇ ಇಡೀ ಯೋಜನೆ ಕುರಿತು ಭಾರತೀಯ ರಕ್ಷಣಾ ಸಂಶೋಧನಾ ಮತ್ತು ಅಭಿವದ್ಧಿ ಸಂಸ್ಥೆ ಡಿಆರ್ ಡಿಒ ಮಾಹಿತಿ ನೀಡಿದೆ. ಕಳೆದ ಜನವರಿ 24ರಂದು ಇಸ್ರೋ ಉಡಾಯಿಸಿದ್ದ ಮೈಕ್ರೋ ಸ್ಯಾಟೆಲೈಟ್ ಅನ್ನು ಇಂದು ಎ-ಸ್ಯಾಟ್ ಆಂಟಿ ಸ್ಯಾಟೆಲೈಟ್ ಕ್ಷಿಪಣಿ ಹೊಡೆದುರುಳಿಸಿದೆ. ಇಂದು ಬೆಳಿಗ್ಗೆ 11.16ಕ್ಕೆ ಎ-ಸ್ಯಾಟ್ ಮಿಸೈಲ್ ಅನ್ನು ಉಡಾಯಿಸಲಾಗಿದ್ದು, ಭೂಕಕ್ಷೆಯಿಂದ ಸುಮಾರು 300 ಕಿ.ಮೀ ದೂರದಲ್ಲಿ ಲೋ ಅರ್ಥ್ ಆರ್ಬಿಟ್ (ಭೂ ಕೆಳ ಕಕ್ಷೆ)ಯಲ್ಲಿದ್ದ ಸಕ್ರಿಯ ಉಪಗ್ರಹವನ್ನು ಎ-ಸ್ಯಾಟ್ ಮಿಸೈಲ್ ಹೊಡೆದುರುಳಿಸಿದೆ. ಈ ಕಾರ್ಯಕ್ಕೆ ಎ-ಸ್ಯಾಟ್ ಮಿಸೈಲ್ ತೆಗೆದುಕೊಂಡಿದ್ದು ಕೇವಲ 3 ನಿಮಿಷಗಳ ಅವಧಿ. ಈ ಕಾರ್ಯದ ಸಮಯ ಚಿಕ್ಕದಾದರೂ ಈ ಕಾರ್ಯ ಅತ್ಯಂತ ಕ್ಲಿಷ್ಟಕರವಾದದ್ದು ಎಂದು ಡಿಆರ್ ಡಿಒ ಅಧ್ಯಕ್ಷ ಜಿ ಸತೀಶ್ ರೆಡ್ಡಿ ಹೇಳಿದ್ದಾರೆ.
ಜೊತೆಗೆ ಈ ಎ-ಸ್ಯಾಟ್ ಮಿಸೈಲ್ ಭಾರತದ ರಕ್ಷಣಾ ವ್ಯವಸ್ಥೆಗೆ ಹೊಸ ಶಕ್ತಿಯನ್ನು ತಂದಿದ್ದು, ಈ ಸಾಮಥ್ರ್ಯವನ್ನು ಹೊಂದಿರುವ ದೇಶಗಳ ಪಟ್ಟಿಗೆ ಇದೀಗ ಭಾರತ ಕೂಡ ಸೇರಿದೆ. ಇದಕ್ಕೂ ಮೊದಲು ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಈ ವ್ಯವಸ್ಥೆಯನ್ನು ಹೊಂದಿವೆ. ಇನ್ನು ಎ-ಸ್ಯಾಟ್ ಸಂಪೂರ್ಣ ಸ್ವದೇಶಿ ನಿರ್ಮಿತ ಮಿಸೈಲ್ ಆಗಿದ್ದು, ಸ್ವದೇಶಿ ತಂತ್ರಜ್ಞಾನದ ಮೂಲಕ ಮಿಸೈಲ್ ಅಭಿವೃದ್ದಿಯಾಗಿದೆ ಎಂದು ಸತೀಶ್ ರೆಡ್ಡಿ ಹೇಳಿದ್ದಾರೆ.
ಮಿಸೈಲ್ ಲಾಂಚ್ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ಸೇರಿದಂತೆ ಡಿಆರ್ ಡಿಒದ ಹಿರಿಯ ವಿಜ್ಞಾನಿಗಳು ಉಪಸ್ಥಿತರಿದ್ದರು.