ಹೋರಾಟಕ್ಕೆ ಕನ್ನಡ ಜನಪ್ರತಿನಿಧಿಗಳ ಬೆಂಬಲ
0
ಮಾರ್ಚ್ 05, 2019
ಕುಂಬಳೆ: ಭಾಷಾ ಅಲ್ಪಸಂಖ್ಯಾತ ಕಾಸರಗೋಡು ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಕನ್ನಡ ಉದ್ಯೋಗಾರ್ಥಿಗಳ ನೇಮಕಾತಿ ಮಾಡಬೇಕು, ಈ ನಿಟ್ಟಿನಲ್ಲಿ ಹೆಚ್ಚಿನ ಕನ್ನಡಿಗರು ವಿವಿಧ ಇಲಾಖೆಗಳ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ಭಾಗವಹಿಸಬೇಕೆಂದು ಕುಂಬಳೆ ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಕುಂಬಳೆ ಮಾಧವ ಪೈ ಸಭಾಂಗಣದಲ್ಲಿ ಭಾನುವಾರ ನಡೆದ ಕನ್ನಡ ಜನಪ್ರತಿನಿಧಿಗಳ ಹಾಗೂ ಕನ್ನಡ ಪರ ಸಂಘಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿ.ಪಂ. ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಮಾತನಾಡಿ ತಳಮಟ್ಟದಿಂದ ಕನ್ನಡ ಕಟ್ಟುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಭಾರತೀಯ ಜನತಾಪಕ್ಷ ಸಂಪೂರ್ಣ ಬೆಂಬಲ ನೀಡುವುದು ಎಂದು ಭರವಸೆ ನೀಡಿದರು. ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಸಮಸ್ತ ಕನ್ನಡಿಗರನ್ನು ಒಟ್ಟು ಸೇರಿಸಿ ನಡೆಸುವ ಹೋರಾಟಕ್ಕೆ ಮುಂದೆಯೂ ಸಂಪೂರ್ಣ ಬೆಂಬಲ ನೀಡಲಾಗುವುದೆಂದು ಜಿ.ಪಂ.ಸ್ಥಾಯೀ ಸಮಿತಿ ಸದಸ್ಯ ಹರ್ಷಾದ್ ವರ್ಕಾಡಿ ಈ ಸಮದರ್ಭ ತಿಳಿಸಿದರು.
ಮಂಜೇಶ್ವರ ಬ್ಲಾ.ಪಂ.ಉಪಾಧ್ಯಕ್ಷೆ ಮಮತಾ ದಿವಾಕರ್, ಕುಂಬಳೆ ಗ್ರಾ.ಪಂ.ಉಪಾಧ್ಯಕ್ಷೆ ಗೀತಾ ಲೋಕನಾಥ ಶೆಟ್ಟಿ, ಎಣ್ಮಕಜೆ ಗ್ರಾ.ಪಂ. ಉಪಾಧ್ಯಕ್ಷೆ ಆಯಿಷಾ ಎ.ಎ.ಪೆರ್ಲ,ಮೀಂಜ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಶೋಭಾ ಮೊದಲಾದವರು ಮಾತನಾಡಿ ತಮ್ಮ ತಮ್ಮ ಗ್ರಾ.ಪಂ.ಗಳಲ್ಲಿ ಕನ್ನಡದ ಬೆಳವಣಿಗೆಗೆ ಪೂರಕ ಕ್ರಮಗಳನ್ನು ಶಕ್ತಿಮೀರಿ ಅನುಸರಿಸುವುದಾಗಿ ತಿಳಿಸಿದರು.
ಕನ್ನಡ ಹೋರಾಟ ಸಮಿತಿ ಮುಂದಾಳುಗಳಾದ ಬಾಲಕೃಷ್ಣ ಅಂಬಾರು, ಡಿ.ವೀರೇಶ್ವರ ಮಾಸ್ತರ್, ಲಕ್ಷ್ಮಣ ಪ್ರಭು ಕುಂಬಳೆ, ಪುರುಷೋತ್ತಮ ಕಾಸರಗೋಡು, ಗುರುಪ್ರಸಾದ್ ಕೋಟೆಕಣಿ, ಮೊಹಮ್ಮದಾಲಿ ಪೆರ್ಲ, ಸುಂದರ ಬಾರಡ್ಕ, ವಿಶಾಲಾಕ್ಷ ಪುತ್ರಕಳ, ಪ್ರೊ.ಎ.ಶ್ರೀನಾಥ್, ಕೆ.ವಿಶ್ವನಾಥ ರಾವ್, ಎಂ.ಎಚ್.ಜನಾರ್ದನ, ತಾರಾನಾಥ ಮಧೂರು, ಅನಿತಾ ಮಂಗಲ್ಪಾಡಿ, ಡಾ.ರತ್ನಾಕರ ಮಲ್ಲಮೂಲೆ, ರವಿ ಮಂಗಲ್ಪಾಡಿ, ಡಾ.ಯು.ಮಹೇಶ್ವರಿ, ರಾಜೇಶ್, ಸ್ವಾತಿ, ಪ್ರಭಾವತಿ ಕೆದಿಲಾಯ ಪುಂಡೂರು, ಲೋಕನಾಥ ಶೆಟ್ಟಿ, ಜಯಂತಿ ಶೆಟ್ಟಿ, ಸುರೇಶ್ ರಾವ್ ಕುಂಬಳೆ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳುಕುರಾಯ ಅಧ್ಯಕ್ಷತೆ ವಹಿಸಿದ್ದರು. ಎಂ.ವಿ.ಮಹಾಲಿಂಗೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಸ್ವಾಗತಿಸಿ, ನಿರೂಪಿಸಿದರು. ಸತೀಶ ಕೂಡ್ಲು ವಂದಿಸಿದರು.