ಜಿಎಂಆರ್‍ಎಸ್ ಪರೀಕ್ಷೆ ಅವಕಾಶ ವಂಚಿತರಾದ ಕನ್ನಡ ವಿದ್ಯಾರ್ಥಿಗಳು
0
ಮಾರ್ಚ್ 05, 2019
ಮುಳ್ಳೇರಿಯ : ಜಿಲ್ಲೆಯ ಪರವನಡ್ಕ ಸರ್ಕಾರಿ ಶಾಲೆಯಲ್ಲಿ ಶನಿವಾರ ನಡೆದ ಪರಿಶಿಷ್ಟ ಜಾತಿ/ವರ್ಗದ ಜಿಎಂಆರ್‍ಎಸ್ ಪ್ರವೇಶ ಪರೀಕ್ಷೆಯಲ್ಲಿ ಅಡೂರು ಸರ್ಕಾರಿ ಶಾಲೆಯ 5 ಮಂದಿ ಕನ್ನಡ ವಿಭಾಗದ ವಿದ್ಯಾರ್ಥಿನಿಯರು ಕೊನೆಯ ಘಳಿಗೆಯಲ್ಲಿ ನಡೆದ ಅಚಾತುರ್ಯದಿಂದಾಗಿ ಪರೀಕ್ಷೆಗೆ ಬರೆಯಲು ಸಾಧ್ಯವಾಗದೆ, ಹಿಂದಿರುಗಬೇಕಾಗಿ ಬಂದಿದೆ.
ನಿಗದಿತ ಸಮಯಕ್ಕೆ ಮೊದಲೇ ಪರವನಡ್ಕದ ಪರೀಕ್ಷಾ ಕೇಂದ್ರಕ್ಕೆ ತಲುಪಿದ ಅಡೂರು ಸರ್ಕಾರಿ ಶಾಲೆಯ ಕನ್ನಡ ವಿಭಾಗದ ವಿದ್ಯಾರ್ಥಿಗಳಾದ ಯಶಸ್ವಿ, ಮಹಾಲಕ್ಷ್ಮಿ, ಪೂರ್ಣಿಮಾ, ಧನ್ಯಶ್ರಿ ಹಾಗೂ ಭವ್ಯಶ್ರೀ ಅವರಿಗೆ ಪರೀಕ್ಷೆಗೆ ಬರೆಯಲು ಮಲಯಾಳ ಭಾಷೆಯ ಪ್ರಶ್ನೆಪತ್ರಿಕೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಕನ್ನಡ ಪ್ರಶ್ನೆಪತ್ರಿಕೆಯನ್ನು ವಿತರಿಸಲು ಒತ್ತಾಯಿಸಿದರು. ಆಗ ಕನ್ನಡ ಪ್ರಶ್ನೆಪತ್ರಿಕೆ ಇಲ್ಲ ಎಂಬ ನಿರ್ಲಕ್ಷ್ಯದ ಉತ್ತರ ಸಂಬಂಧಿಸಿದ ಅಧಿಕಾರಿಗಳಿಂದ ಬಂದಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಕನ್ನಡ ವಿಭಾಗದ ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯಲು ಬರುವರೆಂಬ ಮಾಹಿತಿ ಇದ್ದರೂ ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ಕನ್ನಡ ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯಲಾಗದೆ ಬರಿಗೈಲಿ ಹಿಂದಿರುಗಬೇಕಾಯಿತು. ಜಿಲ್ಲೆಯ ಕನ್ನಡ ಪರ ಸಂಘಟನೆಗಳು ಕೂಡಲೇ ಅವಕಾಶ ವಂಚಿತರಾದ ಈ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.