ಪಾಕ್‍ನಿಂದ ಜೆಯುಡಿ, ಎಐಎಫ್ ಉಗ್ರ ಸಂಘಟನೆ ಬ್ಯಾನ್!
0
ಮಾರ್ಚ್ 06, 2019
ಇಸ್ಲಾಮಾಬಾದ್: ಪಾಕಿಸ್ತಾನ ನೆಲದಲ್ಲಿ ಎಲ್ಲೆ ಅಡಗಿದ್ದರು ಭಯೋತ್ಪಾದಕರನ್ನು ಹುಡುಕಿ ಹುಡುಕಿ ಹೊಡೆಯುತ್ತೇವೆ ಎಂದು ಪ್ರಧಾನಿ ಮೋದಿ ಗುಡುಗಿದ್ದು ಇದೇ ವೇಳೆ ಭಾರತೀಯ ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ ಅವರು ಕಾರ್ಯಾಚರಣೆ ಮುಂದುವರೆಯುತ್ತದೆ ಎಂದು ಹೇಳಿದ್ದ ಬೆನ್ನಲ್ಲೇ ಹೆದರಿದ ಪಾಕಿಸ್ತಾನ ಇದೀಗ ಜೆಯುಡಿ ಹಾಗೂ ಎಐಎಫ್ ಉಗ್ರ ಸಂಘಟನೆಯನ್ನು ನಿಷೇಧಿಸಿದೆ.
ಮೋಸ್ಟ್ ವಾಂಡೆಟ್ ಉಗ್ರ ಹಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದವಾ(ಜೆಡಿಯು) ಮತ್ತು ಫಲಾ ಇ ಇನ್ಸಾನಿಯತ್ ಫೌಂಡೆಷನ್(ಎಐಎಫ್) ಅನ್ನು ನಿಷೇಧಿಸಿ ಪಾಕಿಸ್ತಾನ ಘೋಷಿಸಿದೆ.
ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ಕಾಯ್ದೆ 1977ರ ಅಡಿಯಲ್ಲಿ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಪ್ರಾಧಿಕಾರ ನಿನ್ನೆ ಸಭೆ ನಡೆಸಿ ಈ ಘೋಷಣೆಯನ್ನು ಮಾಡಿದೆ.
ಇದಕ್ಕೂ ಮೊದಲು ಜೈಷ್ -ಇ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಝರ್ ಸಹೋದರ ಹಾಗೂ ಇತರ ನಿಷೇಧಿತ ಉಗ್ರ ಸಂಘಟನೆಯ 43 ಸದಸ್ಯರನ್ನು ಬಂಧಿಸಿತ್ತು. ಅಲ್ಲದೆ ಸರ್ಕಾರದ ಆದೇಶದ ಪ್ರಕಾರ ನಿಷೇಧಿತ ಎಲ್ಲಾ ಉಗ್ರ ಸಂಘಟನೆಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ತಿಳಿಸಿದ್ದಾರೆ.