ಅವಕಾಶ ಸಿಕ್ಕಿದರೆ ಹುದ್ದೆ ವಹಿಸಿಕೊಳ್ಳಲು ಸಿದ್ಧ; ರಘುರಾಮ್ ರಾಜನ್
0
ಮಾರ್ಚ್ 28, 2019
ನವದೆಹಲಿ: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಪಕ್ಷ ಗೆದ್ದರೆ ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹಣಕಾಸು ಸಚಿವರಾಗಬಹುದು ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿರುವ ರಘುರಾಮ್ ರಾಜನ್, ಸರ್ಕಾರದಲ್ಲಿ ಅಥವಾ ಸಾರ್ವಜನಿಕ ಸೇವೆಯಲ್ಲಿ ತಮ್ಮ ಅಗತ್ಯವಿದೆ ಎಂದು ಅನಿಸಿ ಅವಕಾಶ ನೀಡಿದರೆ ಹುದ್ದೆ ವಹಿಸಿಕೊಳ್ಳಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಮಾಜಿ ಗವರ್ನರ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ(ಐಎಂಎಫ್) ಮಾಜಿ ಮುಖ್ಯ ಆರ್ಥಿಕ ತಜ್ಞರಾಗಿರುವ ರಘುರಾಮ್ ರಾಜನ್ ಅವರಿಗೆ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಎರಡನೇ ಬಾರಿಗೆ ಗವರ್ನರ್ ಹುದ್ದೆ ನಿರಾಕರಿಸಲಾಗಿತ್ತು. ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಇದೀಗ ಮತ್ತೆ ಅವರ ಹೆಸರು ತೇಲಿಬಂದಿದೆ.
ಇದಕ್ಕೆ ಸ್ಪಷ್ಟನೆ ನೀಡಿರುವ ರಘುರಾಮ್ ರಾಜನ್, ನಾನು ಈಗಿರುವ ಪರಿಸ್ಥಿತಿಯಲ್ಲಿ ಸಂತೋಷವಾಗಿದ್ದೇನೆ. ಮುಂದೆ ಅವಕಾಶ ಸಿಕ್ಕಿದರೂ ಕೂಡ ಮುಕ್ತವಾಗಿ ಒಪ್ಪಿಕೊಳ್ಳುತ್ತೇನೆ, ನನ್ನ ಅಗತ್ಯವಿದೆ ಎಂದು ಅನ್ನಿಸಿ ಕರೆದಲ್ಲಿ ಖಂಡಿತಾ ಹೋಗುತ್ತೇನೆ ಎಂದು ನಿನ್ನೆ ದೆಹಲಿಯಲ್ಲಿ ತಮ್ಮ ಪುಸ್ತಕ ದ ಥರ್ಡ್ ಪಿಲ್ಲರ್ ಪುಸ್ತಕ ಬಿಡುಗಡೆ ಸಮಾರಂಭದ ವೇಳೆ ಹೇಳಿದ್ದಾರೆ.
ರಘುರಾಮ್ ರಾಜನ್ ಅವರು ಪ್ರಸ್ತುತ ಅಮೆರಿಕಾದ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಹಣಕಾಸು ಪ್ರೊಫೆಸರ್ ಹುದ್ದೆಯಲ್ಲಿದ್ದಾರೆ. ಭಾರತಕ್ಕೆ ಮತ್ತೆ ಬರುತ್ತೀರಾ ಎಂದು ಕೇಳಿದಾಗ ಸರ್ಕಾರದಲ್ಲಿ ರಾಜಕೀಯ ಹುದ್ದೆ ಅಥವಾ ಸಾರ್ವಜನಿಕ ಸೇವೆಯಲ್ಲಿ ಅವಕಾಶ ಸಿಕ್ಕಿದರೆ ಮತ್ತೆ ತೊಡಗಿಕೊಳ್ಳುತ್ತೇನೆ ಎಂದಿದ್ದಾರೆ.
ವಿರೋಧ ಪಕ್ಷಗಳಾದ ಟಿಎಂಸಿ, ಸಮಾಜವಾದಿ ಪಕ್ಷ, ಬಿಎಸ್ ಪಿ, ಟಿಡಿಪಿ ಮೈತ್ರಿಕೂಟ ಗೆದ್ದು ಅಧಿಕಾರ ಪಡೆದರೆ ರಘುರಾಮ್ ರಾಜನ್ ಹಣಕಾಸು ಮಂತ್ರಿಯಾಗಬಹುದು ಎಂಬ ಊಹಾಪೋಹ ದಟ್ಟವಾಗಿ ಕೇಳಿಬರುತ್ತಿದೆ.
ಕನಿಷ್ಠ ಆದಾಯ ಖಾತ್ರಿ ಯೋಜನೆ, ನ್ಯಾಯ್ ಮೊದಲಾದ ಯೋಜನೆಗಳನ್ನು ಜಾರಿಗೊಳಿಸುವಾಗ ತಮ್ಮ ಪಕ್ಷ ಸಲಹೆ ಪಡೆದ ಆರ್ಥಿಕ ತ???ರಲ್ಲಿ ರಘುರಾಮ್ ರಾಜನ್ ಮುಖ್ಯವಾಗಿದ್ದರು ಎಂದು ನಿನ್ನೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದರು. ಕಾಂಗ್ರೆಸ್ ಗೆ ಮತ ಹಾಕಿ ಗೆಲ್ಲಿಸಿದರೆ ಭಾರತದಲ್ಲಿರುವ ಶೇಕಡಾ 20ರಷ್ಟು ಬಡ ಕುಟುಂಬಗಳಿಗೆ ತಿಂಗಳಿಗೆ 6 ಸಾವಿರ ರೂಪಾಯಿಯಂತೆ ವರ್ಷಕ್ಕೆ 72 ಸಾವಿರ ರೂಪಾಯಿ ನೀಡುವುದಾಗಿ ರಾಹುಲ್ ಗಾಂಧಿ ಘೋಷಣೆ ಮಾಡಿದ್ದರು.
ಮಂಗಳವಾರ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ವೇಳೆ ರಘುರಾಮ್ ರಾಜನ್, ಚುನಾವಣೆ ಗೆಲ್ಲಲು ಸಹಕಾರಿಯಾಗುವ ಯೋಜನೆಗಳನ್ನು ರೂಪಿಸಲು ಯಾವುದಾದರೂ ರಾಜಕೀಯ ಪಕ್ಷಗಳು ತಮ್ಮನ್ನು ಸಂಪರ್ಕಿಸಿದ್ದವೇ ಎಂದು ಕೇಳಿದ್ದಕ್ಕೆ ಅದನ್ನು ಹೇಳಲು ಸಮಯ ಇನ್ನೂ ಪಕ್ವವಾಗಿಲ್ಲ ಎಂದಿದ್ದರು.
ಭಾರತಕ್ಕೆ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು ನಾವು ಹೊಸ ರೀತಿಯ ಸುಧಾರಣೆಗಳನ್ನು ತರಬೇಕು. ಅಂತಹ ಆಲೋಚನೆಗಳನ್ನು ನೀಡಲು ನಾನು ಸಿದ್ದನಿದ್ದೇನೆ, ಅದನ್ನು ಕೇಳುವವರು ಇರಬೇಕಷ್ಟೆ ಎಂದಿರುವರು.
ರಘುರಾಮ್ ರಾಜನ್ ಆರ್ ಬಿಐ ಗವರ್ನರ್ ಆಗಿದ್ದಾಗ ಬ್ಯಾಂಕ್ ಬ್ಯಾಲೆನ್ಸ್ ಶೀಟ್ ಬಗ್ಗೆ ಗಟ್ಟಿ ನಿರ್ಧಾರ ಹೊಂದಿದ್ದರು. 2013 ಸೆಪ್ಟೆಂಬರ್ ನಿಂದ 2016 ಸೆಪ್ಟೆಂಬರ್ ವರೆಗೆ ಗವರ್ನರ್ ಆಗಿದ್ದರು. ಅದಕ್ಕೂ ಮೊದಲು 2003ರಿಂದ 2006ರವರೆಗೆ ಐಎಂಎಫ್ ಗೆ ಮುಖ್ಯ ಆರ್ಥಿಕ ತಜ್ಞರಾಗಿ ಮತ್ತು ನಿರ್ದೇಶಕರಾಗಿ ಕೂಡ ಕೆಲಸ ಮಾಡಿದ್ದರು.