ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಪೈಪೋಟಿ ಒಳ್ಳೆಯದಲ್ಲ; ಭಾರತಕ್ಕೆ ರಷ್ಯಾ ಕಿವಿಮಾತು
0
ಮಾರ್ಚ್ 30, 2019
ಮಾಸ್ಕೋ: ಬಾಹ್ಯಾಕಾಶದಲ್ಲಿ ಸಕ್ರಿಯ ಉಪಗ್ರಹಗಳನ್ನೂ ಹೊಡೆದುರುಳಿಸುವ ಭಾರತದ ಆಂಟಿ ಸ್ಯಾಟೆಲೈಟ್ ಮಿಸೈಲ್ ಎ-ಸ್ಯಾಟ್ ನ ಯಶಸ್ವೀ ಪರೀಕ್ಷಾರ್ಥ ಉಡಾವಣೆ, ವಿಶ್ವದ ಬಲಿಷ್ಠ ರಾಷ್ಟ್ರಗಳ ಕಣ್ಣು ಕೆಂಪಾಗುವಂತೆ ಮಾಡಿದೆ.
ಕ್ಷಿಪಣಿ ಉಡಾವಣೆ ಯಶಸ್ವಿಯಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಚೀನಾ ರಕ್ಷಣಾತ್ಮಕ ಹೇಳಿಕೆ ನೀಡಿದ್ದರೆ. ವಿಶ್ವದ ದೊಡ್ಡಣ್ಣ ಬಾಹ್ಯಾಕಾಶದಲ್ಲಿ ತ್ಯಾಜ್ಯಗಳ ಪ್ರಮಾಣ ಹೆಚ್ಚಾಗುವ ಕುರಿತು ಆತಂಕ ವ್ಯಕ್ತಪಡಿಸಿತ್ತು. ಇದೀಗ ರಷ್ಯಾ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಪೈಪೋಟಿ ಒಳ್ಳೆಯದಲ್ಲ ಎಂದು ಭಾರತಕ್ಕೆ ಕಿವಿಮಾತು ಹೇಳಿದೆ.
ಜಾಗತಿಕ ಮಟ್ಟದಲ್ಲಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಭಾರತದ ಪ್ರತೀಯೊಂದು ಯತ್ನದಲ್ಲಿಯೂ ರಷ್ಯಾ ಕೈ ಜೋಡಿಸಲು ಸಿದ್ಧ. ಆದರೆ ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಪೈಪೋಟಿ ಸರಿಯಲ್ಲ. ರಷ್ಯಾ-ಚೀನಾದಂತಹ ಸಮಾನ ಮನಸ್ಕ ರಾಷ್ಟ್ರಗಳು ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಪೈಪೋಟಿಯನ್ನು ವಿರೋಧಿಸುತ್ತವೆ. ಬಾಹ್ಯಾಕಾಶ ಉಪಗ್ರಹಳಿಗೆ ಇದು ಮಾರಣಾಂತಿಕವಾಗಿ ಪರಿಣಮಿಸಬಲ್ಲವು ಎಂದು ರಷ್ಯಾ ಹೇಳಿದೆ.
ಇದೇ ಮಾರ್ಚ್ 27ರಂದು ಭಾರತ ತನ್ನ ಮೊಟ್ಟ ಮೊದಲ ಸ್ವದೇಶಿ ನಿರ್ಮಿತ ಆಂಟಿ ಸ್ಯಾಟೆಲೈಟ್ ಮಿಸೈಲ್ ಎ-ಸ್ಯಾಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ಬಾಹ್ಯಾಕಾಶದಲ್ಲಿದ್ದ ಸಕ್ರಿಯ ಉಪಗ್ರಹವೊಂದನ್ನು ಧ್ವಂಸ ಮಾಡಿತ್ತು. ಆ ಮೂಲಕ ಈ ಸಾಮಥ್ರ್ಯವನ್ನು ಹೊಂದಿದ್ದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಕೀರ್ತಿಗೂ ಭಾರತ ಭಾಜನವಾಯಿತು.