ಹಿಂದೂ ಆಚರಣೆಗಳ ಹಿಂದೆ ಆಳವಾದ ತತ್ವಗಳಿವೆ-ರಾಧಾಕೃಷ್ಣ ಅಡ್ಯಂತಾಯ
0
ಮಾರ್ಚ್ 06, 2019
ಪೆರ್ಲ: ಅಶ್ವತ್ಧ ಕಟ್ಟೆಯ ಪೂಜೆ ವ್ಯಕ್ತಿ ಪೂಜೆಯಲ್ಲ. ಶಕ್ತಿ ಪೂಜೆ. ತ್ರಿಮೂರ್ತಿಗಳ ದೇವತಾ ಸ್ವರೂಪಿ ಈ ವೃಕ್ಷ ಪ್ರಾಣ ವಾಯುವಿನ ಆಕರ. ಶಕ್ತಿ ಪೂಜೆಯ, ಪ್ರಕೃತಿ ಪೂಜೆಯ ಪ್ರತೀಕ. ಹಿಂದೂ ಒಂದು ಮತವಲ್ಲ ಧರ್ಮ. ಪ್ರಕೃತಿ ಆರಾಧನೆ ಮೂಲಕ ನಾವು ದೇವರನ್ನು ಸಮೀಪಿಸುತ್ತೇವೆ. ಇಂತಹ ಹಿಂದೂ ಆಚರಣೆಗಳ ಹಿಂದೆ ಆಳವಾದ ತತ್ವಗಳಿವೆ ಎಂದು ನಿವೃತ್ತ ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ ಹೇಳಿದರು.
ಅವರು ಕಾಟುಕುಕ್ಕೆ ಸಮೀಪದ ಖಂಡೇರಿಯಲ್ಲಿ ಶ್ರೀ ಅಶ್ವತ್ಥ ಕಟ್ಟೆ ಸೇವಾ ಸಮಿತಿ ಹಮ್ಮಿಕೊಂಡ ಅಶ್ವತ್ಥ ಸಿರಿ-2019 ಇದರ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ವಿನೋಬ ಶೆಟ್ಟಿ ದಂಬೆಕಾನ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಭಾಗವತರಾದ ಕೊರಗಪ್ಪ ನಾಯ್ಕ ಅರೆಕ್ಕಾಡಿ ದಂಪತಿಗಳನ್ನು ಸಮ್ಮಾನಿಸಲಾಯಿತು.
ಜಯರಾಮ ರೈ ಕಾಟುಕುಕ್ಕೆ ಸ್ವಾಗತಿಸಿದರು. ಕಾರ್ತಿಕ್ ಶಾಸ್ತ್ರಿ ವಂದಿಸಿದರು. ಶ್ರೀಪತಿ ಭಟ್ ಸಮ್ಮಾನಿತರ ವಿವರ ನೀಡಿದರು.
ಈ ಸಂದರ್ಭದಲ್ಲಿ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಜರಗಿತು. ಅಪರಾಹ್ನ ತೆಂಕುತಿಟ್ಟಿನ ಸುಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಿಂದ ರುಕ್ಮಿಣಿ ಸ್ವಯಂವರ, ಕಂಸ ವಿವಾಹ ಮತ್ತು ಮಾಗಧ ವಧೆ ಯಕ್ಷಗಾನ ಬಯಲಾಟ ಜರಗಿತು.