ಮುಳ್ಳೇರಿಯ: ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ಕ್ಷೇತ್ರದ ಜಾತ್ರೋತ್ಸವದ ಅಂಗವಾಗಿ ಇಂದು(ಮಾ.30ರಂದು) ರಾತ್ರಿ ನಡೆಯುವ ಸಭಾಕಾರ್ಯಕ್ರಮದಲ್ಲಿ ಲೇಖಕಿ ಚಂದ್ರಿಕಾ ಮಂಜುನಾಥ ಶೆಣೈ ಮುಳ್ಳೇರಿಯ, ಝೀ ಕನ್ನಡ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಅನೂಪ್ ರಮಣ ಶರ್ಮಾ, ಹಿರಿಯರಾದ ಮಹಾಲಿಂಗ ನಾಯ್ಕ ಮತ್ತು ಕಮಲ ಅವರನ್ನು ಸನ್ಮಾನಿಸಲಾಗುವುದು.
ಚಂದ್ರಿಕಾ ಮಂಜುನಾಥ ಶೆಣೈ-
ಮುಳ್ಳೇರಿಯದ ವ್ಯಾಪಾರಿ ಮಂಜುನಾಥ ಶೆಣೈ ಅವರ ಪತ್ನಿಯಾದ ಇವರು ಸಾಹಿತ್ಯ ಕ್ಷೇತಕ್ಕೆ ಕನ್ನಡ, ಇಂಗ್ಲೀಷ್ ಮತ್ತು ಕೊಂಕಣಿ ಭಾಷೆಗಳಲ್ಲಿ ಹಲವು ಲೇಖನ, ಚುಟುಕು, ಕವನಗಳನ್ನು ಬರೆಯುವ ಮೂಲಕ ತಮ್ಮ ಪ್ರತಿಭೆಯನ್ನು ಮೆರೆಯುತ್ತಿದ್ದಾರೆ. ಆದರೆ ಎಲೆಮರೆಯ ಕಾಯಿಯಂತೆ ಇವರ ಸಾಧನೆಗಳು ಇನ್ನೂ ಅನಾವರಣಗೊಂಡಿಲ್ಲ.
ಇವರ ಬರವಣಿಗೆಗಳ ಹಿಂದೆ ನೋವಿನ ಕಥೆಯಿದೆ. ಮಗ ಮಹೇಶ ಕಳೆದ 21 ವರ್ಷಗಳಿಂದ ಎಂಡೋ ಸಲ್ಫಾನ್ ಎಂಬ ಮಾರಕ ರೋಗಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದು ಈ ನೋವಿನ ಬದುಕಿನ ನಡುವೆ ಮಾನಸಿಕ ನೆಮ್ಮದಿಗಾಗಿ ಬರೆವಣಿಗೆಯನ್ನು ಹವ್ಯಾಸವಾಗಿಟ್ಟುಕೊಂಡವರು ಇವರು. ಕಳೆದ 6 ವರ್ಷಗಳಿಂದ ಮಂಗಳ ವಾರ ಪತ್ರಿಕೆಯ ಪ್ರತಿಧ್ವನಿ ವಿಭಾಗದಲ್ಲಿ ಇವರ ಲೇಖನಗಳು ಪ್ರಕಟಗೊಳ್ಳುತ್ತಿವೆ. ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಬಹುಮಾನ, ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕಾಸರಗೋಡು ಜಿಲ್ಲೆಯ 4ನೇ ಚುಟುಕು ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಅಂತರ್ ರಾಜ್ಯ ಮಟ್ಟದ ಅಂಚೆಕಾರ್ಡು ಚುಟುಕು ಸ್ಪರ್ಧೆಯಲ್ಲಿ, ಕಯ್ಯಾರ ಕಿಂಞಣ್ಣ ರೈ ಅವರ ನೂರನೇ ಜನ್ಮ ವರ್ಷಾಚರಣೆಯ ಅಂಗವಾಗಿ ನಡೆದ ಅಂಚೆ ಕಾರ್ಡು ಚುಟುಕು ಸ್ಪರ್ಧೆಯಲ್ಲಿ, ಸಾಂಸ್ಕøತಿಕ ಕಲಾಕೇಂದ್ರ ಬೊಳುವಾರು ಇದರ ರಾಜ್ಯ ಮಟ್ಟದ ಕನ್ನಡ ಕವನ ಸ್ಪರ್ಧೆಯಲ್ಲಿ ಬಹುಮಾನಗಳು ಲಭಿಸಿವೆ. ಎಡನೀರು ಮಠದಲ್ಲಿ 2018ರಲ್ಲಿ ನಡೆದ ಪ್ರಥಮ ಅಂತರ್‍ರಾಜ್ಯ ಚಿಟುಕು ಕವಿಗೋಷ್ಠಿ, 2018ರಲ್ಲಿ ಚುನಾವಣಾ ಆಯೋಗದ ದ.ಕ. ಜಿಲ್ಲಾ ಸ್ವೀಪ್ ಸಮಿತಿ ಮಂಗಳೂರು ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ ಬಹುಭಾಷಾ ಕವಿಗೋಷ್ಠಿಯಲ್ಲಿ, 2018ರಲ್ಲಿ ಕೊಂಡೆಯೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಇವರ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯು ಆಯೋಜಿಸಿದ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಅಭಿನಂದನೆಗಳನ್ನು ಪಡೆದಿದ್ದಾರೆ. ಉದಯವಾಣಿ ಪತ್ರಿಕೆಯಲ್ಲಿ ಇವರ ಸಂಪಾದಕೀಯ ಲೇಖನವು ಪ್ರಕಟಗೊಂಡಿದೆ.
ವೈದ್ಯ ವಾರ್ತಾ ಪ್ರಕಾಶನ ಮೈಸೂರು ಇವರ ಚುಟುಕು ಕಿರಣ ಮತ್ತು ಕೈರಳಿ ಪ್ರಕಾಶನ ಸುಬ್ಬಯ್ಯಕಟ್ಟೆ ಇವರ ಗಡಿನಾಡ ಕಾವ್ಯ ಕೈರಳಿ ಪುಸ್ತಕಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. ಹಾಗೆಯೇ ಸಾಕಷ್ಟು ಬರವಣಿಗೆಗಳು ಇವರ ಸಂಗ್ರಹದಲ್ಲಿವೆ. ಮಗನ ನೋವಿನ ಜೀವನದಲ್ಲಿ ಹೊಂಗಿರಣಗಳನ್ನು ಆಶಿಸುತ್ತಿರುವ, ಪ್ರತಿಭಾನ್ವಿತರಾದ ಇವರಿಗೆ ಸಾಹಿತ್ಯ ರತ್ನ ಬಿರುದನ್ನು ನೀಡಿ ಗೌರವಿಸಲಾಗುತ್ತಿದೆ.
ಅನೂಪ್ ರಮಣ ಶರ್ಮಾ-
ಪೆರ್ಲ ಎಸ್‍ಎನ್‍ಎಎಲ್‍ಪಿ ಶಾಲೆಯ ಮುಖ್ಯ ಶಿಕ್ಷಕ ಮಹಾಲಿಂಗೇಶ್ವರ ಶರ್ಮ ಮತ್ತು ಮುಳ್ಳೇರಿಯ ಎಯುಪಿ ಶಾಲೆಯ ಶಿಕ್ಷಕಿ ಪದ್ಮ.ಕೆ.ಕೆ ಅವರ ಪುತ್ರರಾದ ಅನೂಪ್ ರಮಣ.ಎನ್.ಎಂ. ಅವರು ಝೀ ಕನ್ನಡ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಕೋಮಿಡಿ ಕಿಂಗ್. ಇವರು ಪ್ರಸ್ತುತ ಮುಳ್ಳೇರಿಯ ಎಯುಪಿ ಶಾಲೆಯ 7ನೇ ತರಗತಿ ವಿದ್ಯಾರ್ಥಿ. ಇವರು 2017ರಲ್ಲಿ ಝೀ ಕನ್ನಡ ಚಾನೆಲ್ ನಡೆಸಿದ ಡ್ರಾಮಾ ಜೂನಿಯರ್ಸ್ ಸೀಸನ್-2 ಮತ್ತು 2018ರಲ್ಲಿ ಡೇನ್ಸ್ ಕರ್ನಾಟಕ ಡೇನ್ಸ್ ಸೀಸನ್-3 ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಯನ್ನು ಮೆರೆದು ಅನೂಪ್ ಕೋಮಿಡಿ ಕಿಂಗ್ ಪ್ರಶಸ್ತಿಯನ್ನು ಪಡೆದು ಹೆಗ್ಗಳಿಕೆಗೆ ಪಾತ್ರರಾದವರು. ಹಾಗೆಯೇ 2015ರಲ್ಲಿ ನಡೆದ ಜಿಲ್ಲಾ ಮಟ್ಟದ ಗಣಿತ ಪಝ್ಲ್ ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ ಪ್ರತಿಭಾನ್ವಿತ. ಶಾಲಾ ಮಟ್ಟದ ಚೆಸ್ ಚಾಂಪ್ಯನ್ ಕೂಡಾ ಆಗಿರುವ ಈತ ಹಲವು ಬಹುಮಾನ, ಅಭಿನಂದನೆಗಳನ್ನು ಪಡೆದಿದ್ದಾರೆ. ಈ ಬಾಲ ಪ್ರತಿಭೆಯನ್ನು ನಾಟಕ ರತ್ನ ಬಿರುದನ್ನು ನೀಡಿ ಗೌರವಿಸಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಮಾಯಿಲಂಕೋಟೆಯ ಹಿರಿಯರಾದ ಮಹಾಲಿಂಗ ನಾಯ್ಕ ಮತ್ತು ಕುಂಟಾರಿನ ಹಿರಿಯರಾದ ಕಮಲ ಅವರನ್ನು ಸನ್ಮಾನಿಸಲಾಗುವುದು.
