ಆರ್ ಬಿಐಯಿಂದ ರೆಪೊ ದರ ಶೇ.0.25ರಷ್ಟು ಕಡಿತ; ಗೃಹ, ವಾಹನ ಸಾಲ ಬಡ್ಡಿ ಅಗ್ಗ?
0
ಏಪ್ರಿಲ್ 05, 2019
ಹೈದರಾಬಾದ್: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ತನ್ನ ಆರ್ಥಿಕ ನೀತಿಯನ್ನು ಪ್ರಕಟಿಸಿದ್ದು ರೆಪೊ ದರವನ್ನು ಶೇಕಡಾ 0.25ರಷ್ಟು ಕಡಿತ ಮಾಡಿದೆ. ಇದರಿಂದಾಗಿ ರೆಪೊ ದರ ಶೇಕಡಾ 6.25ರಿಂದ ಶೇಕಡಾ 6ಕ್ಕೆ ತಲುಪಿದೆ.
ಇದರಿಂದ ಗೃಹ ಮತ್ತು ವಾಹನ ಸಾಲಗಳ ಇಎಂಐ ಪಾವತಿ ತಿಂಗಳಿಗೆ 300ರಿಂದ 400 ರೂಪಾಯಿಗಳಷ್ಟು ಅಗ್ಗವಾಗಲಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಇದರ ಲಾಭ ಗ್ರಾಹಕರಿಗೆ ಸಿಗಬೇಕಾದರೆ ಬ್ಯಾಂಕುಗಳು ಗ್ರಾಹಕರ ಮೇಲಿನ ಸಾಲದ ಬಡ್ಡಿದರ ಇಳಿಕೆ ಮಾಡಬೇಕು.
ಪ್ರಸಕ್ತ ಹಣಕಾಸು ವರ್ಷದಲ್ಲಿ ರಿಸರ್ವ್ ಬ್ಯಾಂಕ್‍ನ(ಆರ್‍ಬಿಐ) ಆರ್ಥಿಕ ಪರಾಮರ್ಶೆಗೆ ಸಂಬಂಧಿಸಿದ ಇಂದಿನ ಸಭೆಯಲ್ಲಿ ಈ ವಿಷಯ ಪ್ರಕಟಿಸಲಾಯಿತು. ಕಳೆದ ಜನವರಿಯಿಂದ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧಿಕಾರದಡಿ ರೆಪೊ ದರ ಇಳಿಕೆಯಾಗುತ್ತಿರುವುದು ಇದು ಎರಡನೇ ಬಾರಿ.
ಕಳೆದ ಫೆಬ್ರವರಿಯಲ್ಲಿ ಆರ್‍ಬಿಐ ಬಡ್ಡಿ ದರವನ್ನು(ರೆಪೊ ದರ) ಶೇ.0.25ರಷ್ಟು ಇಳಿಕೆ ಮಾಡಿತ್ತು. ಈ ಪರಿಣಾಮ ರೆಪೊ ದರ ಶೇ.6.50ರಿಂದ ಶೇ.6.25ಕ್ಕೆ ಇಳಿಕೆಯಾಗಿತ್ತು. ಈಗ ಮತ್ತೆ ರೆಪೊ ದರ ಶೇ.0.25 ಕಡಿತವಾಗಿದೆ. ಆರಂಭದಲ್ಲಿ ಶೇ.0.50ರ ರೆಪೊ ದರ ಕಡಿತವಾಗಬಹುದು ಎಂದು ನಿರೀಕ್ಷಿಸಲಾಗಿತ್ತು.
ರಿವರ್ಸ್ ರೆಪೊ ದರ ಶೇಕಡಾ 5.75ರಷ್ಟಿದೆ. ಕಳೆದ 6 ತಿಂಗಳಲ್ಲಿ ಹಣದುಬ್ಬರವು ಕಡಿಮೆಯಿದ್ದು, ಆರ್‍ಬಿಐನ ಗುರಿಯಾದ ಶೇ.4ರೊಳಗೇ ಇದೆ. ಮುಂದಿನ 6 ತಿಂಗಳೂ ಹಣದುಬ್ಬರವು ನಿರೀಕ್ಷಿತ ಇಳಿಕೆಯ ಮಟ್ಟದಲ್ಲಿಯೇ ಸಾಗಲಿದೆ ಎಂದು ಅಂದಾಜು ಮಾಡಲಾಗಿದೆ. ''ಆರ್ಥಿಕ ಬೆಳವಣಿಗೆಗೆ ತ್ವರಿತವೇಗ ನೀಡುವ ನಿಟ್ಟಿನಲ್ಲಿ ರೆಪೊ ದರವನ್ನು ಆರ್‍ಬಿಐ ಮತ್ತೆ ಇಳಿಕೆ ಮಾಡಲಿದೆ,'' ಎಂದು ಕೇರ್ ರೇಟಿಂಗ್ ಇತ್ತಿಚೆಗಿನ ವರದಿಯಲ್ಲಿ ಹೇಳಿದೆ.
ದೇಶದ ಒಟ್ಟು ದೇಶೀಯ ಉತ್ಪನ್ನ ಮುಂದಿನ ಹಣಕಾಸು ವರ್ಷಕ್ಕೆ ಶೇಕಡಾ 7.2ರಷ್ಟಿರಬಹುದೆಂದು ಅಂದಾಜಿಸಲಾಗಿದ್ದು ಈ ವರ್ಷದ ಮೊದಲ ಅರ್ಧವರ್ಷದಲ್ಲಿ ಶೇಕಡಾ 6.8ರಿಂದ ಶೇಕಡಾ 7.1ರಷ್ಟು ಇರಬಹುದೆಂದು ಅಂದಾಜಿಸಲಾಗಿದೆ.
ರೆಪೊ ದರ: ತಾತ್ಕಾಲಿಕ ಅವಧಿಯ ಅಗತ್ಯ ಪೂರೈಸಲು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಬ್ಯಾಂಕುಗಳು ಫಂಡ್ ಪಡೆಯುತ್ತವೆ. ಬ್ಯಾಂಕುಗಳು ಪಡೆದ ಸಾಲದ ಮೇಲೆ ಆರ್‍ಬಿಐ ಕೊಂಚ ಬಡ್ಡಿದರ ವಿಧಿಸುತ್ತದೆ. ಈ ಬಡ್ಡಿದರವನ್ನೇ ರೆಪೊ ದರ ಎನ್ನಲಾಗುತ್ತದೆ.
ರಿವರ್ಸ್ ರೆಪೊ ದರ: ಬ್ಯಾಂಕುಗಳಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‍ಬಿಐ) ಹಣ ಸಾಲ ಪಡೆದರೆ, ಅದರ ಮೇಲೆ ವಿಧಿಸುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎನ್ನಲಾಗುತ್ತದೆ.