HEALTH TIPS

ಸಮರಸ-ಮಹಾ ಭಾರತದ ಜನತಂತ್ರದ ಹೆಜ್ಜೆಗಳು-08- ಚುನಾವಣೆಯ ಪೂರ್ವಾಪರ


             ಲೋಕಸಭಾ ಚುನಾವಣೆಯ ಇತಿಹಾಸ ಹಾಗೂ ನಡೆದು ಬಂದ ಹಾದಿ!!-
      (ಮುಂದುವರಿದ ಭಾಗ)
      ಮತದಾರನ ವೈಯಕ್ತಿಕ ದೃಷ್ಟಿಯಿಂದಲೂ ಚುನಾವಣೆಗೆ ವಿಶೇಷ ಮಹತ್ತ್ವವಿದೆ. ರಾಜಕೀಯ ಅಧಿಕಾರದಲ್ಲಿ ತನ್ನದೊಂದು ಚಿಕ್ಕದಾದರೂ ಪಾಲು ಇದೆ ಎಂಬ ಹೆಮ್ಮೆ ಸಮಾಜದಲ್ಲಿ ತನಗೂ ಒಂದು ಸ್ಥಾನವಿದೆಯೆಂಬ ಭಾವನೆ ಎಂಥ ದಲಿತನಿಗೂ ಇತರರಿಂದ ಕಡೆಗಣಿಸಲ್ಪಟ್ಟವನಿಗೂ ಬದಲು ಇದು ಒಂದು ಸಂದರ್ಭ. ಇದರಿಂದ ಸಾಮಾನ್ಯ ಮನುಷ್ಯನಿಗೂ ಒಂದು ಮಾನಸಿಕ ಸಮಾಧಾನ ಉಂಟಾಗುತ್ತದೆ. ಪ್ರಜಾಸತ್ತಾತ್ಮಕ ಸಮಾನತೆಯಂಥ ಆದರ್ಶಸಾಧನೆಗೆ ಇಂಥ ಮನೋಭಾವ ರೂಪುಗೊಳ್ಳುವುದು ಅಗತ್ಯ.
    ಸರ್ವಾಧಿಕಾರಿ ರಾಷ್ಟ್ರಗಳಲ್ಲೂ ಚುನಾವಣೆಗಳಾಗುವುದಾದರೂ ಅವಕ್ಕೆ ಹೆಚ್ಚಿನ ಮಹತ್ತ್ವವಿರುವುದಿಲ್ಲ. ಅದೊಂದು ಔಪಚಾರಿಕತೆ, ಪೂರ್ವ ನಿಶ್ಚಿತವಾದ ಫಲಿತಾಂಶ ಸುಮಾರಾಗಿ ತಿಳಿದೇ ಇರುತ್ತದೆ. ಜನತೆ ಅನಿವಾರ್ಯವೆಂದು ಚುನಾವಣೆಯಲ್ಲಿ ಭಾಗವಹಿಸುತ್ತದೆ. ಮುಕ್ತಮನಸ್ಸಿನ ಮತ್ತು ನ್ಯಾಯಸಮ್ಮತ ಅಭಿಪ್ರಾಯ ಪ್ರಕಟಣೆಗೆ ಅಲ್ಲಿ ಅವಕಾಶ ಇರುವುದಿಲ್ಲ.
    ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅನೇಕ ವಿಭಾಗಗಳಿವೆ. ರಾಷ್ಟ್ರದ ಜನರು, ಮತದಾರರು, ರಾಜಕೀಯ ಪಕ್ಷಗಳು, ಶಾಸನ ಸಭೆಗಳು ಮತ್ತು ಕಾಯಾರ್ಂಗ. ಈ ಎಲ್ಲ ವಿಭಾಗಗಳ ದೃಷ್ಟಿಯಿಂದಲೂ ಯೋಗ್ಯವೆನಿಸಿದಾಗ ಮಾತ್ರ ಚುನಾವಣೆಗಳು ಯೋಗ್ಯ ಹಾಗೂ ನ್ಯಾಯಸಮ್ಮತವೆಂದು ಹೇಳಬಹುದು. ಆದರೆ ಒಂದು ವಿಭಾಗಕ್ಕೆ ಸೇರಿಕೊಂಡ ಚುನಾವಣಾ ಪದ್ಧತಿ ಇನ್ನೊಂದಕ್ಕೆ ಸರಿಯೆನಿಸದಿರಬಹುದು. ಉದಾಹರಣೆಗೆ ಅನುಪಾತೀಯ ಪ್ರತಿನಿಧಿತ್ವ (ಪ್ರೊಪೋರ್ಷನಲ್ ರೆಪ್ರಸೆಂಟೇಷನ್). ಬಹುಸದಸ್ಯ ಚುನಾವಣಾ ಕ್ಷೇತ್ರಕ್ಕೆ (ಮಲ್ಟಿ-ಮೆಂಬರ್ ಕಾಸ್ಟಿಟ್ಯುಯೆನ್ಸಿಗೆ) ಸಂಬಂಧಿಸಿದಂತೆ ಈ ಚುನಾವಣಾಪದ್ಧತಿ ರಾಜಕೀಯ ಪಕ್ಷಗಳ ದೃಷ್ಟಿಯಿಂದ ಸರಿಕಾಣಬಹುದು. ಏಕೆಂದರೆ ಅವರಲ್ಲಿಯ ಬಹುಜನರಿಗೆ ಶಾಸನಸಭೆಗಳಲ್ಲಿ ಪ್ರಾತಿನಿಧ್ಯ ಸಿಗುವಂತಾಗುತ್ತದೆ. ಆದರೆ ಪಾರ್ಲಿಮೆಂಟರಿ ಮಾದರಿಯ ಸರ್ಕಾರವಿದ್ದಲ್ಲಿ ಕಾಯಾರ್ಂಗದ ದೃಷ್ಟಿಯಿಂದ ಈ ತರದ ಚುನಾವಣೆ ಸರಿಯೆನಿಸದು. ಏಕೆಂದರೆ ಇದು ಅಸ್ಥಿರ ಸಂಮಿಶ್ರ ಸರ್ಕಾರಕ್ಕೆ ದಾರಿ ಮಾಡಿಕೊಡಬಹುದು. ಆದ್ದರಿಂದ ವಿವಿಧ ಚುನಾವಣಾ ಪದ್ಧತಿಗಳ ಗುಣದೋಷಗಳನ್ನು ತೂಗಿ ನೋಡಿ ಒಂದು ದೇಶದ ವಿಶಿಷ್ಟ ಪರಿಸ್ಥಿತಿಗಳಿಗೆ ಹೆಚ್ಚು ಅನುಕೂಲವಾಗಬಲ್ಲಂಥ ಒಂದು ಸಮತೂಕದ ಚುನಾವಣಾ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ.

                  ಮತಾಧಿಕಾರ:
      ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಎಷ್ಟು ಜನರಿಗೆ ಮತಾಧಿಕಾರವಿರುವುದೋ ಅಷ್ಟರಮಟ್ಟಿಗೆ ಚುನಾವಣೆ ನ್ಯಾಯಸಮ್ಮತವೆಂದು ಜನ ಪರಿಗಣಿಸುತ್ತಾರೆ. ಸಾರ್ವತ್ರಿಕ ವಯಸ್ಕ ಮತದಾನದ ಪದ್ಧತಿ ನ್ಯಾಯಸಮ್ಮತ ಚುನಾವಣೆಗೆ ಅಗತ್ಯವೆನ್ನುವುದು ಆದ್ದರಿಂದಲೇ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಮತಾಧಿಕಾರಕ್ಕೆ ಕನಿಷ್ಠ ವಯೋಮಿತಿ 18-25 ವರ್ಷ. ಭಾರತದ ಸಂವಿಧಾನದ 326ನೆಯ ಅನುಚ್ಛೇದದ ಪ್ರಕಾರ 21 ವರ್ಷಗಳಿಗೆ ಕಡಿಮೆಯಿಲ್ಲದ ವಯಸ್ಸಿನ ಪ್ರತಿಯೊಬ್ಬ ಭಾರತೀಯನಿಗೂ, ಆತ ಇತರ ಯಾವುದೇ ಕಾನೂನಿನ ಪ್ರಕಾರ ಅನರ್ಹವೆನಿಸದಿದ್ದರೆ (ಉದಾ: ಬುದ್ಧಿಭ್ರಮಣೆ, ದುರಾಚಾರ, ಅಕ್ರಮ ವರ್ತನೆ ಇತ್ಯಾದಿ) ಮತದಾರನೆಂದು ಪಟ್ಟಿಯಲ್ಲಿ ಸೇರ್ಪಡೆಯಾಗಲು ಹಕ್ಕು ಇರುತ್ತದೆ.
      ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಭಾರತದಲ್ಲಿದ್ದ ಮತಾಧಿಕಾರಕ್ಕೂ ಈಗಿನ ವಯಸ್ಕ ಮತಾಧಿಕಾರಕ್ಕೂ ಬಹಳಷ್ಟು ಅಂತರವಿದೆ. 1919ರ ಭಾರತ ಸರ್ಕಾರ ಅಧಿನಿಯಮದಲ್ಲಿ ಪ್ರಪ್ರಥಮವಾಗಿ ವಿಧಾನಸಭೆಗಳಿಗೆ ನೇರ ಚುನಾವಣೆಯ ಅವಕಾಶ ಕಲ್ಪಿಸಲಾಯಿತು. ಈ ಅಧಿನಿಯಮದ ಪ್ರಕಾರ ಮತಾಧಿಕಾರ ಆಸ್ತಿವಂತರಿಗೆ ಹಾಗೂ ನಿರ್ದಿಷ್ಟ ತೆರಿಗೆ ಕೊಡುವವರಿಗೆ ಮಾತ್ರ ದೊರೆಯಿತು. ಇಂಥ ಮತದಾರರು ಇಡೀ ದೇಶದಲ್ಲಿ ಕೇವಲ 50 ಲಕ್ಷ-ಒಟ್ಟು ಜನಸಂಖ್ಯೆಯ ಶೇ. 2ರಷ್ಟು ಮತ್ತು ವಯಸ್ಕ ಪುರುಷರ ಶೇ. 9-ಇದ್ದರು. 1935ರ ಅಧಿನಿಯಮ ಮತಾಧಿಕಾರವನ್ನು ಸ್ವಲ್ಪ ಹೆಚ್ಚಿಸಿ ಕನಿಷ್ಠ ಒಂದು ನಿರ್ದಿಷ್ಟ ಮಟ್ಟದ ಶಿಕ್ಷಣ ಪಡೆದವರಿಗೂ ಮತಾಧಿಕಾರ ಕೊಟ್ಟಿತು. ಆಗ ಮತಾಧಿಕಾರ ಪಡೆದಿದ್ದವರ ಸಂಖ್ಯೆ 350 ಲಕ್ಷ. ಇದು ಜನಸಂಖ್ಯೆಯ ಶೇ. 14. ಇದಾದ 15 ವರ್ಷಗಳ ಅನಂತರ ಜಾರಿಗೆ ಬಂದ ಸ್ವತಂತ್ರ ಭಾರತ ಸಂವಿಧಾನದಿಂದ ಸಾರ್ವತ್ರಿಕ ವಯಸ್ಕ ಮತಾಧಿಕಾರ ಜಾರಿಗೆ ಬಂತು.
      ಪಶ್ಚಿಮದ ಅನೇಕ ದೇಶಗಳಲ್ಲಿ ಸಾರ್ವತ್ರಿಕ ವಯಸ್ಕ ಮತಾಧಿಕಾರ ಪಡೆಯಲು ಜನರು ಹೋರಾಟ ನಡೆಸಬೇಕಾಯಿತು. ಇಂಗ್ಲೆಂಡಿನಲ್ಲಿ 1838ರಲ್ಲೇ ಮತಾಧಿಕಾರದ ವಿಸ್ತರಣೆ ಆರಂಭವಾದರೂ ಅಲ್ಲಿಯ ಹೆಂಗಸರಿಗೆ ಮತದಾನದ ಹಕ್ಕು ದೊರೆತದ್ದು 1928ರಲ್ಲಿ. ಅಮೆರಿಕಾದಲ್ಲಿ ಎಲ್ಲ ಮಾನವರೂ ಸಮಾನರಾಗಿಯೇ ಹುಟ್ಟಿದ್ದಾರೆ ಎಂಬ ಘೋಷಣೆಯನ್ನೊಳಗೊಂಡ ಸ್ವಾತಂತ್ರ್ಯ ಘೋಷಣೆಯಾದ 65 ವರ್ಷಗಳ ಅನಂತರ 1840ರಲ್ಲಿ ಪುರುಷರಿಗೆ ವಯಸ್ಕ ಮತದಾನ ಲಭಿಸಿತು. ಮತ್ತೆ 80 ವರ್ಷಗಳ ಅನಂತರ ಮಹಿಳೆಯರಿಗೆ ಆ ಅಧಿಕಾರ ಸಿಕ್ಕಿತು. ಫ್ರಾನ್ಸಿನಲ್ಲಿ ಕ್ರಾಂತಿಯಾಗಿ ಮಾನವ ಹಕ್ಕುಗಳ ಮಹಾಘೋಷಣೆಯಾದ 85 ವರ್ಷಗಳ ಅನಂತರ, 1875ರಲ್ಲಿ ಪುರುಷ ವಯಸ್ಕ ಮತದಾನದ ಹಕ್ಕು ಲಭಿಸಿತು. ಅಲ್ಲಿ ಮಹಿಳೆಯರಿಗೆ ಮತಾಧಿಕಾರ ಲಭಿಸಿದ್ದು 1944ರಷ್ಟು ಈಚೆಗೆ, ಪುರೋಗಾಮಿ ಪ್ರಜಾಸತ್ತೆಗಳೆನಿಸಿಕೊಳ್ಳುವ ಸ್ವೀಡನ್ನಿನಂಥ ದೇಶಗಳಲ್ಲಿ ಇಂದಿಗೂ ಮಹಿಳೆಯರಿಗೆ ಮತಾಧಿಕಾರವಿಲ್ಲ. ಇತ್ತೀಚೆಗೆ ಸ್ವಾತಂತ್ರ್ಯ ಪಡೆದ ಅನೇಕ ಏಷ್ಯನ್ ಮತ್ತು ಆಫ್ರಿಕನ್ ದೇಶಗಳಲ್ಲಿ ಯಾವ ಹೋರಾಟವೂ ಇಲ್ಲದೆ ಒಮ್ಮೆಲೇ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ದೊರೆತದ್ದು ಗಮನಾರ್ಹವಾದ ಸಂಗತಿ. ಆದರೆ ಕೆಲವು ಜನ ಸಮರ್ಥ ನಿರೀಕ್ಷಕರ ಅಭಿಪ್ರಾಯವೇನೆಂದರೆ ನಿಧಾನವಾಗಿ, ಹಂತಹಂತವಾಗಿ, ಹೋರಾಟದ ಮೂಲಕ ಮತಾಧಿಕಾರ ಪಡೆದ ಕ್ರಮ ಹೆಚ್ಚು ಒಳ್ಳೆಯದಾಗಿ ಕಾಣುತ್ತದೆ. ಏಕೆಂದರೆ ಜನರಲ್ಲಿ ಮತದ ಮೌಲ್ಯದ ಪರಿಜ್ಞಾನ ಚೆನ್ನಾಗಿ ಉಂಟಾಗಿ ಪ್ರಜಾಸತ್ತಾತ್ಮಕ ಸಂಸ್ಥೆಗಳ ಸ್ಥಿರತೆಗೆ ಅದು ಸಹಾಯಕವಾಗಿರುತ್ತದೆ.
       ಮತದಾನಕ್ಕೆ ಯೋಗ್ಯತೆಯನ್ನು ಅಲೆಯುವುದಕ್ಕಾಗಿ ಆಸ್ತಿ. ತೆರಿಗೆ ಕೊಡುವುದು, ಲಿಂಗ ಜಾತಿ, ಶಿಕ್ಷಣಮಟ್ಟ, ವಯಸ್ಸು ಇತ್ಯಾದಿಗಳನ್ನು ಅಳತೆಗೋಲನ್ನಾಗಿ ಭಾವಿಸಬೇಕೆಂದು ವಾದಿಸುವವರು ಈಗಲೂ ಇಲ್ಲದಿಲ್ಲ. ವಿಚಿತ್ರವಾದ ಮಾತೆಂದರೆ, ನಾಗರಿಕ ನಿತ್ಯ ವ್ಯವಹರಿಸುವ ವಿಚಾರಗಳಲ್ಲಿ, ಎಂದರೆ ತನಗಾಗಿ ವಕೀಲನನ್ನೊ, ವೈದ್ಯನನ್ನೊ, ಶಿಕ್ಷಕನನ್ನೊ, ಯಂತ್ರವನ್ನೊ ಆರಿಸಿಕೊಳ್ಳುವಲ್ಲಿ, ಆತನ ಯೋಗ್ಯತೆ ಬಗ್ಗೆ ಯಾರೂ ಪ್ರಶ್ನಿಸುವುದಿಲ್ಲ. ಸಾಮಾನ್ಯವಾಗಿ ಒಳ್ಳೆಯ ಹೆಸರು ಗಳಿಸಿದವನನ್ನು ಅಥವಾ ಒಳ್ಳೆಯ ಯಂತ್ರವನ್ನು ಅವನು ಆರಿಸಿಕೊಳ್ಳುತ್ತಾನೆ. ಅವಶ್ಯವೆನಿಸಿದರೆ ಸ್ನೇಹಿತರ ಸಲಹೆ ಪಡೆಯುತ್ತಾನೆ. ತನ್ನ ವಿಧಾನಸಭಾ ಪ್ರತಿನಿಧಿಯನ್ನು ಆರಿಸುವ ಸಮಸ್ಯೆ ಇಂಥ ಆಯ್ಕೆಗಿಂತ ಹೆಚ್ಚು ಜಟಿಲವಾದ್ದೇನೂ ಅಲ್ಲ. ಇತರ ಕ್ಷೇತ್ರಗಳಂತೆ ಇಲ್ಲೂ ಅವನು ಉಮೇದುವಾರನ ಯೋಗ್ಯತೆಯ ಮೇಲಿಂದ, ಅವನ ಕೃತಿಗಳ ಪರಿಣಾಮಗಳ ಮೇಲಿಂದ ನಿರ್ಣಯಕ್ಕೆ ಬರುತ್ತಾನೆ. ಆದ ಕಾರಣ ಚುನಾವಣೆಗಾಗಿಯೇ ನಾಗರಿಕನಿಗೆ ಪ್ರತ್ಯೇಕ ಯೋಗ್ಯತೆ ಇರಬೇಕೆಂಬ ವಾದದಲ್ಲಿ ವಿಶೇಷ ಅರ್ಥವಿಲ್ಲ. ವಿಶಿಷ್ಟ ಶಿಕ್ಷಣ, ಆಸ್ತಿ ಇತ್ಯಾದಿಗಳನ್ನು ಹೊಂದಿದವರಿಂದ ರಾಜಕೀಯ ನಿರ್ಣಯಗಳ ಮೇಲೆ ಗಮನಾರ್ಹವಾದ ಪರಿಣಾಮವಾಗಿದೆಯೆಂಬುದು ಅಮೆರಿಕ, ಇಂಗ್ಲೆಂಡ್ ಗಳಲ್ಲಿ ನಡೆದ ಮತದಾನ ವರ್ತನೆಗಳ ಅಧ್ಯಯನದಿಂದಲೂ ಕಂಡುಬಂದಿಲ್ಲ. ಅಲ್ಲದೆ ಮತದಾರನಿಗೆ ಇರಬೇಕಾದ ಯೋಗ್ಯತೆಯೇನೆಂಬುದನ್ನು ನಿರ್ಧರಿಸುವುದೂ ಅಸಾಧ್ಯವೇ.
     ಚುನಾವಣೆ ಪ್ರಧಾನವಾಗಿ ಮಹತ್ತ್ವದ ಪ್ರಶ್ನೆಗಳಿಗೆ ಸಂಬಂಧಿಸಿರುವುದರಿಂದ ಆ ಪ್ರಶ್ನೆಗಳನ್ನು ಮತದಾರ ಅರ್ಥ ಮಾಡಿಕೊಳ್ಳಬಲ್ಲನಾಗಿರಬೇಕೆಂಬ ತತ್ತ್ವದ ಮೇಲೆ ಇಂಥ ವಾದ ಮಂಡಿಸಲಾಗುತ್ತದೆ. ಆದರೆ ಇದು ಒಂದು ಭ್ರಮೆ. ರಾಜಕೀಯ ಪಕ್ಷಗಳು ತಮ್ಮ ಧ್ಯೇಯ ಧೋರಣೆಗಳ ಘೋಷಣಾಪತ್ರಗಳನ್ನು ಪ್ರಕಟಿಸುವುವಾದರು ಅವಕ್ಕೆ ಚುನಾವಣೆಗಳಲ್ಲಿ ಹಾಗೂ ಅನಂತರ ಕೇವಲ ಅನುಷಂಗಿಕ ಮಹತ್ತ್ವವಿರುವುದೂ ಎಲ್ಲರಿಗೂ ತಿಳಿದ ವಿಚಾರ. ಮತದಾರ ಚುನಾವಣೆಯಲ್ಲಿ ಪ್ರಧಾನವಾಗಿ ಮತ ಹಾಕುವುದು ವ್ಯಕ್ತಿಗಾಗಿ ಅಥವಾ ಪಕ್ಷಕ್ಕಾಗಿ. ಧೋರಣೆಯ ಪ್ರಶ್ನೆಗಳಿಗಾಗಿ ಅಲ್ಲ. ಮತದಾರರ ಪೈಕಿ ಬಹಳ ಮಂದಿಗೆ ಪಕ್ಷಗಳ ಧ್ಯೇಯ ಮತ್ತು ಕಾರ್ಯಕ್ರಮಗಳ ಪರಿಜ್ಞಾನವೇ ಇರುವುದಿಲ್ಲವೆಂಬುದು ಮುಂದುವರಿದ ಮತ್ತು ಸುಶಿಕ್ಷಿತ ಮತದಾರರಿಂದ ದೇಶಗಳಲ್ಲಿ ನಡೆಸಿದ ಅಧ್ಯಯನಗಳಿಂದ ತಿಳಿದು ಬಂದಿದೆ. ಪಕ್ಷಗಳು ಅಸ್ಪಷ್ಟವಾಗಿ ಹೇಳುವ ಅನೇಕ ವಿಷಯಗಳ ತಿಳಿವಳಿಕೆ ಮತದಾರನಿಗೆ ಇರುವುದೂ ಶಕ್ಯವಿಲ್ಲ. ತನಗೇ ನೇರವಾಗಿ ಸಂಬಂಧಿಸುವ ಯುದ್ಧ ಅಥವಾ ಅರ್ಥವ್ಯವಸ್ಥೆಯಂಥ ಕೇಂದ್ರ ಸಮಸ್ಯೆಯ ಬಗ್ಗೆ ಖಚಿತ ಮತವನ್ನು ಕೇಳಿದರೆ ಹೇಳಬಹುದು. ಇತರ ಅನೇಕ ಸಮಸ್ಯೆಗಳ ಬಗ್ಗೆ ಮತದಾರ ಮತಕೊಡುವುದಾದರೆ ಪ್ರಜಾಪ್ರಭುತ್ವ ನಡೆಯುವುದೇ ಕಷ್ಟವಾದೀತು. ಆದಕಾರಣ ಸಾಮಾನ್ಯವಾಗಿ ಮತದಾನವಾಗುವುದು ವ್ಯಕ್ತಿಗೆ, ಪಕ್ಷಕ್ಕೆ, ಶ್ರೀಮಂತರ ಅಥವಾ ಬುದ್ಧಿಜೀವಿಗಳ ಸರ್ಕಾರ ಬೇಕೆನ್ನುವವರ ಮತ್ತು ಪ್ರಜಾಪ್ರಭುತ್ವವಾದಿಗಳ ನಡುವೆ ಈ ವಿವಾದ ಇನ್ನೂ ನಡೆದೇ ಇದೆ. ಭಾರತದಲ್ಲೂ ವಯಸ್ಕ ಮತದಾನ ಒಂದು ಶಾಪವಾಯಿತೆಂದು ಮರುಗುವವರು ಇದ್ದಾರೆ. ಇವರ ಉದ್ವಿಗ್ನತೆಗೆ ಕಾರಣವಿಲ್ಲದೆ ಇಲ್ಲ. ಅಶಿಕ್ಷಿತರಿರುವ ಹಾಗೂ ಹಿಂದುಳಿದ ದೇಶಗಳಲ್ಲಿ ಸಾರ್ವತ್ರಿಕ ಮತದಾನ ನಿಷ್ಪ್ರಯೋಜಕ. ಏಕೆಂದರೆ ಅಲ್ಲಿ ಮತಗಳನ್ನು ಮಾರಲಾಗುತ್ತದೆ. ಮತಗಳನ್ನು ಖರೀದಿ ಮಾಡಬಲ್ಲಂಥ ಕೆಲವರೇ ಅಧಿಕಾರಕ್ಕೆ ಬರುತ್ತಾರೆ. ಅಲ್ಲದೆ, ಸಮಾಜಶಾಸ್ತ್ರದ ಪ್ರಕಾರ, ಎಲ್ಲ ಸಂಸ್ಥೆಗಳಲ್ಲೂ ಒಂದು ಬಗೆಯ ಅಲ್ಪ ಜನಾಧಿಪತ್ಯ ಕೆಲಸ ಮಾಡುತ್ತಿರುತ್ತದೆ. ಹಣ, ಜಾತಿ, ಭಾಷೆ, ಪಕ್ಷಗಳಂಥವುಗಳ ನೆರವಿನಿಂದ ಕೆಲವೇ ಜನರೇ ಯಾವಾಗಲೂ ಅಧಿಕಾರಸ್ಥಾನದಲ್ಲಿ ಇರುತ್ತಾರೆ. ಇಂಥವರ ಮೇಲೆ ಜನಸಮೂಹದ ನಿಯಂತ್ರಣ ಎಂದೂ ಶಕ್ಯವಾಗುವುದಿಲ್ಲ. ರಾಜಕೀಯ ಅಧಿಕಾರ ಆರ್ಥಿಕ ಅಧಿಕಾರದ ಕೈಗೊಂಬೆಯಾಗಿರುವುದರಿಂದ ರಾಜ್ಯದ ಅರ್ಥವ್ಯವಸ್ಥೆಯಲ್ಲಿ ನಿಯಂತ್ರಕ ಸಾಮಥ್ರ್ಯ ಪಡೆದವರೇ ರಾಜಕೀಯ ಅಧಿಕಾರವನ್ನು ಒಂದಿಲ್ಲೊಂದು ರೀತಿಯಲ್ಲಿ ಚಲಾಯಿಸುವರೆಂಬುದು ಮಾನವತಾ ವಾದಿಗಳ ವಿಚಾರ, ಸಾರ್ವತ್ರಿಕ ವಯಸ್ಕ ಮತದಾನದಿಂದ ಪರಿಸ್ಥಿತಿಯಲ್ಲಿ ವಿಶೇಷ ಮಾರ್ಪಾಡು ಬರಲಾರದೆಂಬುದು ಈ ಎಲ್ಲ ವಾದಗಳ ನಿರ್ಣಯ.
      ಆದರೆ ಮತಾಧಿಕಾರಿಗಳ ವ್ಯಾಪ್ತಿಯನ್ನು ವಿಸ್ತರಿಸಿದ್ದರಿಂದ ಪೊಲೀಸ್ ರಾಜ್ಯ ಹೋಗಿ ಕಲ್ಯಾಣರಾಜ್ಯ ಬರುವ ಭರವಸೆಯುಂಟಾದ್ದನ್ನೂ ಅಲ್ಪಜನಾಧಿಪತ್ಯ ಬಂದರೂ ಒಂದೇ ಗುಂಪಿನ ಆಳ್ವಿಕೆ ಶಾಶ್ವತವಾಗದೆ ಚುನಾವಣೆಗಳ ಮೂಲಕ ಬದಲಾಗುವ ಸಾಧ್ಯತೆ ಇರುವುದನ್ನೂ ಪೈಪೋಟಿ ನಡೆಸುವ ಪಕ್ಷಗಳಿರುವುದರಿಂದ ಜನನಿಯಂತ್ರಣ ಹೆಚ್ಚು ಸಫಲವಾಗುವ ಸಂಭಾವ್ಯತೆಯನ್ನೂ ಜನರ ನಡುವೆ ವರ್ಗಭೇದವಿರದ ಹಾಗೆ ಚುನಾವಣೆ ಸಮಾನತಾ ತತ್ತ್ವವನ್ನು ತಂದದ್ದನ್ನೂ ಮರೆಯುವ ಹಾಗಿಲ್ಲ. ಜನರು ಮತದಾನ ಮಾಡದಿರುವುದರಿಂದ ಕೆಲವು ಸಲ ನಿರಾಶೆಯಾಗುವುದಾದರೂ ಮತಾಧಿಕಾರವನ್ನು ಜನ ಕಾಪಾಡಿಕೊಂಡು ಹೋಗುವುದೇ ಪ್ರಜಾಪ್ರಭುತ್ವದ ಯಶಸ್ಸಿನ ಭರವಸೆಯಾಗಿದೆ. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಮುಂದೊಡ್ಡಿದ ಒಂದು ಸಮಸ್ಯೆಯೆಂದರೆ, ಕೋಟಿಗಟ್ಟಲೆ ಮತದಾರರನ್ನು ಸಂಘಟಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ತಿಳುವಳಿಕೆಗಳನ್ನು ಒದಗಿಸುವ ಕೆಲಸ. ಚುನಾವಣೆಗೆ ತಗಲುವ ಭಾರಿ ವೆಚ್ಚದ್ದು ಇನ್ನೊಂದು ಸಮಸ್ಯೆ. ಇವು ಸಾಮಾನ್ಯ ಮನುಷ್ಯನ ಹಿಡಿತಕ್ಕೆ ನಿಲುಕಲಾರವಾದ್ದರಿಂದ ಪಕ್ಷಗಳ ಅಗತ್ಯ ಉಂಟಾಗಿವೆ. ಈ ಪಕ್ಷಗಳು ಧನಸಂಗ್ರಹ ಮಾಡುವ ರೀತಿಯಿಂದಾಗಿ ಪ್ರಜಾಪ್ರಭುತ್ವಕ್ಕೆ ಮಾರಕವಾಗುವಂಥ ಸೂತ್ರಚಾಲಕ ಶಕ್ತಿ ವಿಶಿಷ್ಟ ಹಿತಾಸಕ್ತಿಗಳಿಗೆ ಲಭಿಸುವ ಅಪಾಯವಿದೆ. ಸಾರ್ವತ್ರಿಕ ವಯಸ್ಕ ಮತಾಧಿಕಾರ ಅಪೇಕ್ಷಣೀಯ, ಯೋಗ್ಯ ಮತ್ತು ಅನಿವಾರ್ಯವಾದರು ಅದರೊಂದಿಗೆ ಬೆರೆತು ಬಂದ ಈ ಅಪಾಯಗಳನ್ನು ದೂರ ಮಾಡುವ ಉಪಾಯವನ್ನು ಹುಡುಕಬೇಕಾಗಿದೆ.
                (ಮುಂದುವರಿಯುವುದು..........)



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries