HEALTH TIPS

ಸಮರಸ- ಈ ಹೊತ್ತಿಗೆ-ಹೊಸ ಹೊತ್ತಗೆ-08-ಕೃತಿ ವಾತ್ಸಲ್ಯ ಸಿಂಧು

            ಪುಸ್ತಕ ವಾತ್ಸಲ್ಯ ಸಿಂಧು
   ಲೇಖಕರು: ಪರಿಣಿತ ರವಿ.ಎಡನಾಡು
     ಬರಹ: ಚೇತನಾ ಕುಂಬಳೆ.
    ಮೂಲತಃ ಗಡಿನಾಡು ಕಾಸರಗೋಡಿನ ಕುಂಬಳೆ ಸಮೀಪದ ಎಡನಾಡಿನ ಪರಿಣಿತ ರವಿಯವರು ಉದ್ಯೋಗದ ನಿಮಿತ್ತ ದೂರದ ಕೊಚ್ಚಿಯಲ್ಲಿ ಕುಟುಂಬ ಸಮೇತ ವಾಸ್ತವ್ಯ ಹೊಂದಿರುವವರು. ಎಂ.ಎ, ಬಿ.ಎಡ್ ಮುಗಿಸಿದ ಅವರು ಆಂಗ್ಲಭಾಷಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಂಗ್ಲಭಾಷಾ ಶಿಕ್ಷಕಿಯಾದರೂ, ಕನ್ನಡದ ಗಂಧ ಗಾಳಿಯೂ ಇಲ್ಲದ, ಕನ್ನಡದ ಪುಸ್ತಕಗಳು ಅಲಭ್ಯವಿರುವ ಮಲಯಾಳಂ ನಾಡಿನಲ್ಲಿದ್ದರೂ, ಕನ್ನಡ ಭಾಷೆಯ ಬಗೆಗಿನ ಪ್ರೀತಿ ಅಭಿಮಾನ, ಕನ್ನಡ ಸಾಹಿತ್ಯದ ಬಗೆಗಿನ ಅಭಿರುಚಿ ಓದಿನ ಆಸಕ್ತಿ ಅವರಲ್ಲಿ ಸದಾ ಜಾಗೃತವಾಗಿತ್ತು. ಶಾಲಾ ಕಾಲೇಜುಗಳಲ್ಲಿ ನಟನೆ, ಭಾಷಣ, ನಿರೂಪಣೆ, ಬರವಣಿಗೆ ಹೀಗೆ ಎಲ್ಲ ರಂಗಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು, ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿ, ಜನಮನ್ನಣೆಗಳಿಸಿದವರು. ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಮೇಲೆ ಎಲ್ಲವನ್ನೂ ಬದಿಗಿರಿಸಿ ಸ್ವಲ್ಪ ಸಮಯ ಮೌನವಾದರೂ, ಈಗ ಮತ್ತೆ ಸುಮಾರು 16 ವರ್ಷಗಳ ನಂತರ ತಮ್ಮೊಳಗಿನ ಸುಪ್ತಭಾವಗಳಿಗೆ ಜೀವ ತುಂಬಿದವರು, ಬಣ್ಣ ಹಚ್ಚಿದವರು.ವಾರಗಳ ಹಿಂದೆಯಷ್ಟೇ ಬದಿಯಡ್ಕದ ರಾಮಲೀಲಾ ಸಭಾಂಗಣದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ  ಏಕಕಾಲದಲ್ಲಿ ಕವನ ಮತ್ತು ಕಥಾ ಸಂಕಲನಗಳೆರಡನ್ನೂ ಸಾರಸ್ವತ ಲೋಕಕ್ಕೆ ನೀಡಿ ತಮ್ಮ ಕನಸನ್ನು ನನಸಾಗಿಸಿದವರು.
    'ಸಿಂಪರ ಪ್ರಕಾಶನ'ದಿಂದ ಪ್ರಕಟಗೊಂಡ *ವಾತ್ಸಲ್ಯ ಸಿಂಧು* ಎಂಬ ಈ ಕಥಾ ಸಂಕಲನವು  ಪರಿಣಿತ ರವಿ ಅವರ ಚೊಚ್ಚಲ ಕೃತಿ. ವಾತ್ಸಲ್ಯ ಸಿಂಧು ಹೆಸರೇ ಸೂಚಿಸುವಂತೆ ಇಲ್ಲಿನ ಕಥೆಗಳಲ್ಲಿ ಮಾತೃ ವಾತ್ಸಲ್ಯದ ಸ್ಪರ್ಶವಿದೆ. ಈ ಕಥಾ ಸಂಕಲನಕ್ಕೆ ಅವರ ಗುರುಗಳಾದ ಪ್ರೊ. ಭುವನೇಶ್ವರಿ ಹೆಗಡೆಯವರು ಮುನ್ನುಡಿಯನ್ನು ಬರೆದಿದ್ದಾರೆ. "ಕೂತು ಓದುವ ಸುಖವನ್ನು ಒದಗಿಸುವ ಪುಸ್ತಕ ಸಂಸ್ಕೃತಿಗೆ ಕಾಣಿಕೆ ನೀಡುವ ಸಾಹಿತ್ಯ ರಚನೆಗಳು ಈ ನಿಟ್ಟಿನಲ್ಲಿ ನಮ್ಮನ್ನು ಬದುಕಿಗೆ ಬೆಸೆಯುವ ಸಾಧನಗಳಾಗಿವೆ." ಎನ್ನುವ ಭುವನೇಶ್ವರಿ ಹೆಗಡೆಯವರ ಮಾತುಗಳಲ್ಲಿ ತಮ್ಮ ಶಿಷ್ಯೆ ಪರಿಣಿತರ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಹೊಂದಿರುವುದನ್ನು ಕಾಣಬಹುದು. ಅನುಪಮಾ ಪ್ರಸಾದ್ ಅವರು ಕಥೆಗಳೊಳಗಿನ ತಿರುಳನ್ನು ಸಂಕ್ಷಿಪ್ತವಾಗಿ ಹೇಳುತ್ತಾ, ಅವರ ಬರವಣಿಗೆಗೆ ಪ್ರೋತ್ಸಾಹದ ನುಡಿಗಳನ್ನಾಡಿ ಬೆನ್ನುತಟ್ಟಿದ್ದಾರೆ.
        "ಋಣಾತ್ಮಕ ಶಕ್ತಿಯನ್ನು ತುಂಬುವ, ನಕಾರಾತ್ಮಕ ಪಾತ್ರಗಳನ್ನು ನನ್ನ ಕಥೆಗಳಿಂದ ದೂರವಿಟ್ಟು, ಎಲ್ಲೆಲ್ಲೂ ಒಳ್ಳೆತನವೇ ಕಾಣುವಂತಾಗಲಿ" ಎಂಬುದು ಲೇಖಕಿಯ ಮನದಿಂಗಿತ. ಸಮಾಜದಲ್ಲಿ ತಾನು ಕಂಡ, ಕೇಳಿದ ನೈಜ ಘಟನೆಗಳಿಗೆ ಒಂದಷ್ಟು ಕಲ್ಪನೆಯನ್ನು ಬೆರೆಸಿ ಕಥೆಯ ರೂಪ ನೀಡುತ್ತಾರೆ. "ಭವ್ಯವಾದ ಬಂಗಲೆಯೋ, ಒಡವೆಯೋ, ದುಬಾರಿ ವಾಹನವೋ ಬ್ಯಾಂಕಲ್ಲಿ ಕೂಡಿಟ್ಟ ಹಣವೋ ಮಾಡಿಟ್ಟ ಆಸ್ತಿಯೋ, ಇದ್ಯಾವುದೂ ಸಂತೋಷದ ನೆಮ್ಮದಿಯ ಕೀಲಿಕೈ ಆಗಲಾರದು. ಬದಲಾಗಿ ಮಾನವ ಪರಸ್ಪರ ಜೊತೆಗಿರುವವರನ್ನು ಪ್ರೀತಿಸುತ್ತಾ, ಒಬ್ಬರಿಗೊಬ್ಬರು ನೆರವಾಗುತ್ತಾ ಬದುಕುವುದರಲ್ಲಿ ಬಾಳಿನ ನೈಜ ಸಂತೋಷ ಅಡಗಿದೆ". ಎಂಬುದನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡುತ್ತಾರೆ. ಇಲ್ಲಿ ಅವರು ಜೀವನ ಮೌಲ್ಯಗಳಿಗೆ, ಮಾನವ ಸಂಬಂಧಗಳಿಗೆ, ಮಾನವೀಯತೆಗೆ ಆಧ್ಯತೆ ನೀಡುವುದನ್ನು ಗಮನಿಸಬಹುದು.
   ಈ ಸಂಕಲನದಲ್ಲಿ ಒಟ್ಟು 15 ಕಥೆಗಳಿವೆ. ಕೃತಿಗೆ ಮುನ್ನುಡಿ ಬರೆದಿರುವ ನಿವೃತ್ತ ಪ್ರಾಧ್ಯಾಪಕಿ ಭುವನೇಶ್ವರಿ ಹೆಗಡೆ ಯವರು ಹೇಳುವಂತೆ "ಇದೊಂದು ಭಾವಲೋಕದೊಳಗಿನ ಹುಡುಕಾಟ. ಬೇರೆ ಬೇರೆ ಮಜಲುಗಳಲ್ಲಿ ವಾತ್ಸಲ್ಯದ ಕಡಲಿನಲ್ಲಿ ಹನಿಹನಿಗಳ ಹುಡುಕಾಟ. ವರ್ತಮಾನದ ಕಟುವಾಸ್ತವವನ್ನು ತೆರೆದಿಡುವಾಗಲೂ ಒಂದು ವಾತ್ಸಲ್ಯದ ಸ್ಪರ್ಶ ಇಲ್ಲಿ ಇದ್ದೇ ಇದೆ". ಮನುಷ್ಯರಲ್ಲಿ ಒಳಿತು ಕೆಡುಕುಗಳೆರಡೂ ಇರುವುದು ಸಹಜ. ಹಾಗಿದ್ದರೂ ಲೇಖಕಿ ತಮ್ಮ ಎಲ್ಲಾ ಕಥೆಗಳಲ್ಲೂ ಒಳಿತಿಗೆ, ಧನಾತ್ಮಕ ಚಿಂತನೆಗಳಿಗೆ ಪ್ರಾಧಾನ್ಯ ನೀಡಿ ಎಲ್ಲಾ ಕಥೆಗಳನ್ನೂ ಸುಖಾಂತ್ಯಗೊಳಿಸುತ್ತಾರೆ. ಅಂದರೆ ಇಲ್ಲಿ ದುಃಖ, ನೋವುಗಳಿಲ್ಲವೆಂದಲ್ಲ. ಅವುಗಳನ್ನೆಲ್ಲ ಎದೆಯೊಳಗೆ ಬಚ್ಚಿಟ್ಟು, ಎಲ್ಲ ಕಷ್ಟಗಳನ್ನೂ ಧೈರ್ಯದಿಂದ ಎದುರಿಸಿ,  ಗೆಲುವಿನ, ಸಾಧನೆಯ ಮೆಟ್ಟಿಲೇರಿ ನಿಂತು ಸಂತಸಪಡುವ ಹಲವು ಪಾತ್ರಗಳಿವೆ. ಇಲ್ಲಿನ ಎಲ್ಲಾ ಕಥೆಗಳು ಸಣ್ಣದಾಗಿದ್ದು, ಆಸಕ್ತಿ ಕುತೂಹಲವನ್ನು ಮೂಡಿಸುವುದರೊಂದಿಗೆ, ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿವೆ. ಇಲ್ಲಿ ಬಳಸಿದ ಸರಳ ಭಾಷೆ, ಭಿನ್ನ ನಿರೂಪಣಾ ಶೈಲಿ ಆಕರ್ಷಕವಾಗಿದ್ದು, ಆಪ್ತವೂ ಅರ್ಥವೂ ಆಗುತ್ತವೆ. ಲೇಖಕಿಯು,ಹದಿಹರಯದ, ಯುವ ಜನಾಂಗಕ್ಕಾಗಿಯೇ ಇಲ್ಲಿನ ಕಥೆಗಳನ್ನು ಬರೆದಿದ್ದಾರೆ ಎಂದನಿಸುತ್ತದೆ. ಅವರ ಮೂಲಕ ಸಮಾಜದ ಬದಲಾವಣೆಗೆ ಪ್ರಯತ್ನಿಸುತ್ತಾರೆ. ಈ ಸಂಕಲನದ ಮತ್ತೊಂದು ವೈಶಿಷ್ಟ್ಯವೇನೆಂದರೆ ಚಿತ್ರ,ಕವನ ಹಾಗೂ ಕಥೆ ಹೀಗೆ 3 ಪ್ರಕಾರಗಳನ್ನೂ ಒಂದೇ ಕಡೆ ನೋಡಬಹುದು.
    ಪ್ರತಿಯೊಂದು ಕಥೆಯನ್ನು ಓದಿ ಅರ್ಥೈಸಿಕೊಂಡು ಅದರ ಒಳಾರ್ಥವನ್ನು ಪ್ರತಿಯೊಂದು ಚಿತ್ರದಲ್ಲೂ ಹಿಡಿದಿಟ್ಟ ಕಲಾವಿದ ಸದಾಶಿವ ಶಿವಗಿರಿ ಕಲ್ಲಡ್ಕರ ಶ್ರಮ ಶ್ಲಾಘನೀಯ. ಅದೂ ಅಲ್ಲದೆ ಪ್ರತಿಯೊಂದು ಕಥೆಯೊಳಗಿನ ಸಾರವನ್ನು ಪ್ರತಿಬಿಂಬಿಸುವ ನಾಡಿನ ಹಿರಿಯಕವಿಗಳ ಕವನಗಳು, ಹಾಗೂ ವಚನಕಾರರ ವಚನಗಳು ಎಲ್ಲ ಕಥೆಗಳಲ್ಲಿವೆ. ಇದೊಂದು ಹೊಸ ಪ್ರಯೋಗವೇ ಸರಿ. ಲೇಖಕಿಗೆ ಯಾವಾಗಲೂ ಹೊಸತನವನ್ನು ಹುಡುಕುವ, ಅಧ್ಯಯನಶೀಲ, ಚಿಂತನಾಶೀಲ ಮನಸ್ಸಿರುವುದನ್ನು ಗಮನಿಸಬಹುದು. ಇದರಿಂದಾಗಿ ಒಂದಿಷ್ಟು ಹಿರಿಯ ಕವಿಗಳ, ಅವರ ಕವನಗಳ, ವಚನಕಾರರು ಹಾಗೂ ವಚನಗಳ ಪರಿಚಯವೂ ನಮಗಾಗುತ್ತದೆ.  ಕಾವ್ಯದ ಬಗೆಗೆ ಅಭಿರುಚಿ ಮೂಡಿಸುವುದಲ್ಲದೆ ಕಾವ್ಯಗಳ ಮತ್ತು ವಚನಗಳ ಹೆಚ್ಚಿನ ಅಧ್ಯನಕ್ಕೂ ಇದು ದಾರಿಮಾಡಿಕೊಡುತ್ತದೆ. 
           'Ragpicker's son craked IAS'   ' ಎಂದು ಮಾಧ್ಯಮವೊಂದರಲ್ಲಿ ಬಂದ  ಸುದ್ದಿಯನ್ನೇ  *ಕೆಸರಿನ ಒಸರು* ಕಥೆಯನ್ನಾಗಿಸುತ್ತಾರೆ. ಬಡತನದ ನಡುವೆಯೂ ಬಾಲಕನೊಬ್ಬ ಶ್ರದ್ಧೆಯಿಂದ, ಕಷ್ಟಪಟ್ಟು  ತನ್ನ ಕನಸಿನಂತೆಯೇ ಐ.ಎ.ಎಸ್ ಅಧಿಕಾರಿಯಾಗುವ, ತನ್ನಾಸೆಯಂತೆಯೇ ಜಗತ್ತೇ ಮೆಚ್ಚಿದ ನಾಯಕ ಮೋದಿಯನ್ನು ನೋಡುವ ಭೇಟಿಯಾಗುವ ಸೌಭಾಗ್ಯ ಒದಗಿ ಬರುವಂಥ ರೋಚಕ ಕಥೆಯನ್ನು ಹೇಳುತ್ತಾರೆ.
     ತಮ್ಮ ಊರಲ್ಲೇ ಕಲಿತು ಯುವಕರು ಹೆತ್ತವರನ್ನು ಹಳ್ಳಿಯನ್ನು  ಬಿಟ್ಟು ದೂರದ ಅಮೇರಿಕಾಕ್ಕೆ ಹೋಗುವುದನ್ನು ಕಾಣಬಹುದು. ಇಷ್ಟಪಟ್ಟ ಹುಡುಗಿಯೊಂದಿಗೆ ಮದುವೆಯಾಗುವುದು, ಅನಿರೀಕ್ಷಿತ ಸಂದರ್ಭದಲ್ಲಿ ಮಗುವಿನಾಗಮನವಾದಾಗ ವೃತ್ತಿಯ ನೆಪದಿಂದ ಅದನ್ನು ಅಜ್ಜಿಯ ಬಳಿ ಬಿಟ್ಟು ತಮ್ಮ ಸುಖವನ್ನರಸಿ ಹೊರಡುವುದು, ಭಾರತದ ಶಿಕ್ಷಣದ ಬಗೆಗಿನ ತಾತ್ಸಾರ, ಮಗ ಮತ್ತು ಮೊಮ್ಮಗಳ ಭಿನ್ನ  ವ್ಯಕ್ತಿತ್ವದ ದರ್ಶನವಾಗುತ್ತದೆ. ಒಬ್ಬರು ಆಧುನಿಕತೆಗೆ, ಪಾಶ್ಚಾತ್ಯ ಸಂಸ್ಕೃತಿಗೆ ತೆರೆದುಕೊಂಡರೆ,ಹಿರಿಯರ ಬಗೆಗೆ ಪ್ರೀತಿ ಕಾಳಜಿ ತೋರದೆ ಸಂಬಂಧಗಳ ಮೌಲ್ಯವನ್ನರಿಯದೆ ಹೆತ್ತವರನ್ನೇ ವೃದ್ಧಾಶ್ರಮಕ್ಕೆ ಕಳುಹಿಸಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ವರ್ಗ ಒಂದೆಡೆಯಾದರೆ, ಮತ್ತೊಬ್ಬರು ಹುಟ್ಟಿ ಬೆಳೆದ ಊರಿಗೆ ಮರಳಿ ಬರುವ, ಒಂಟಿಯಾಗಿದ್ದ ಅಜ್ಜಿಯೊಂದಿಗೆ ಬದುಕುವ, ಅವರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಸಂತೋಷದಿಂದಲೇ ಸ್ವೀಕರಿಸುವ, ಕಿರಿಯಳ ಪುಟ್ಟ ಮನದಲ್ಲಿ ವಯಸ್ಸಿಗೆ ಮೀರಿದ ಆಲೋಚನೆಗಳನ್ನು ಕಾಣಬಹುದು ಹೀಗೆ *ಬತ್ತದ ಒಡಲು* ಕತೆಯಲ್ಲಿ ಎರಡು ತಲೆಮಾರುಗಳ ಭಿನ್ನ ವ್ಯಕ್ತಿತ್ವ ಚಿತ್ರಣವನ್ನು ನೀಡುತ್ತಾರೆ.
   *ಭಯಾನಕ* ಕಥೆ ನಿಜಕ್ಕೂ ಭಯಾನಕ ಕಲ್ಪನೆಯೊಂದರ ಸುತ್ತ ಹೆಣೆದ ಕಥೆ. ಪತ್ತೇದಾರಿ ಕಾದಂಬರಿಯಂತೆ ಓದಿನುದ್ದಕ್ಕೂ ಉದ್ವೇಗ, ಕುತೂಹಲ, ಕರುಣೆ, ಅಸಹ್ಯ ಮೊದಲಾದ ಭಾವಗಳನ್ನು ಹುಟ್ಟಿಸುತ್ತಾ, ಕೊನೆವರೆಗೂ ಸಸ್ಪೆನ್ಸನ್ನು ಕಾಯ್ದುಕೊಳ್ಳುತ್ತದೆ. ಎಲ್ಲಾ ಕಥೆಗಳಲ್ಲಿ ವಾಸ್ತವದೊಂದು ಎಳೆಯನ್ನು ಹಿಡಿದು ಕಥೆ ರಚಿಸಿದ್ಧರೂ ಇದೊಂದು ಮಾತ್ರ ಪೂರ್ತಿ ಕಲ್ಪನೆಯನ್ನೊಳಗೊಂಡದ್ದಾಗಿದೆ. ಇದನ್ನು ಗಮನಿಸುವಾಗ ಕಾಲ್ಪನಿಕ ಕಥೆಗಳನ್ನೂ ಅದ್ಭುತವಾಗಿ ರಚಿಸುವ ಸಾಮಥ್ರ್ಯ ಲೇಖಕಿಗಿದೆ.
    ಪ್ರಸ್ತುತ ಕಾಲಘಟ್ಟದಲ್ಲಿ ಮನುಷ್ಯರೇ ದೇವರಾಗುವುದು ಬಹಳ ಕಷ್ಟ. ಅದು ಎಲ್ಲರಿಗೂ ಆಗಲು ಸಾಧ್ಯವೂ ಇಲ್ಲ. ಅಷ್ಟೊಂದು ನಿಸ್ವಾರ್ಥ ಪ್ರೀತಿ ತೋರುವ, ವಿಶಾಲ ಮನೋಭಾವವುಳ್ಳ ಮನುಷ್ಯರನ್ನು ಹುಡುಕಿದರೂ ಸಿಗುವುದು ಕಷ್ಟ. ಅಂಥ ಮನುಷ್ಯನೊಬ್ಬ  ಹುಡುಗನ ಹೃದಯದಲ್ಲಿ ದೇವರ ಸ್ಥಾನ ಪಡೆದ ಕಥೆ *ದೇವರಾಗಿ ಬಿಟ್ಟರು* ಕಥೆಯಲ್ಲಿದೆ.  ಬಿಹಾರದ ಹುಡುಗನೊಬ್ಬ ತನ್ನ ಕಲಿವ ಆಸೆಯನ್ನು ಬದಿಗಿರಿಸಿ ಬಡತನದಿಂದಾಗಿ ಕುಟುಂಬದ ಜವಾಬ್ದಾರಿ ಹೊತ್ತು ಕೆಲಸವನ್ನರಸಿ ಕಾಸರಗೋಡಿಗೆ ಬರುವುದು. ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಈ ಹುಡುಗನ ಕಲಿವ ಆಸೆಯನ್ನು ತಿಳಿದು ಹೋಟೆಲ್ ನ ಒಡೆಯರು ಆತನಿಗೂ ಆತನ ಕುಟುಂಬಕ್ಕೂ ಆಸರೆಯಾಗುವುದನ್ನು ಕಾಣಬಹುದು.  ಮುನ್ನನೂ ಆತನ ಒಡಹುಟ್ಟಿದವರೂ ಒಡೆಯರಾದ ಕೃಷ್ಣಾನಂದರ ದಯೆಯಿಂದ ಅವರವರ ಕಾಲ ಮೇಲೆ ನಿಲ್ಲುವಷ್ಟು ಸಾಮಥ್ರ್ಯ ಹೊಂದುವರು. ಅವರನ್ನೇ ತಮ್ಮ ದೇವರೆಂದು ಪೂಜಿಸುತ್ತಾರೆ. ಆ ಬಡ ಹುಡುಗ ಮುನ್ನನ ಪಾಲಿಗಂತೂ ಕೃಷ್ಣಾನಂದರು ದೇವರಾಗಿ  ಬಿಡುತ್ತಾರೆ.  *ಮತ್ತೆ ನನ್ನವರು* ಕಥೆಯಲ್ಲಿ ಸಂಬಂಧಗಳಲ್ಲಿ ಬಿರುಕು ಮೂಡಿದರೂ ಅರಿಯದಷ್ಟು  ಸಾಮಾಜಿಕ ಜಾಲತಾಣಗಳಿಗೆ ಮಾರುಹೋಗಿರುವ ಯುವ ಪೀಳಿಗೆಯನ್ನು ಎಚ್ಚರಿಸುವ ಒಂದು ಧ್ವನಿಯಿದೆ.
      ನಮ್ಮ ದೇಶದ್ದಲ್ಲದ, ವಿದೇಶಿ ಸಂಸ್ಕೃತಿಯಾದ 'ಸಲಿಂಗ ಕಾಮ'ದ ಸಮಸ್ಯೆ *ಅಬಂಧ* ಕಥೆಯಲ್ಲಿದೆ.
ಹದಿಹರಯಕ್ಕೆ ಕಾಲಿರಿಸಿದ ಪ್ರತಿಯೊಬ್ಬರ ಮನಸ್ಥಿತಿಯೂ ಚಂಚಲವೇ. ಹೆತ್ತವರು ಉಪದೇಶ ಮಾಡುವುದಾಗಲೀ ಬದ್ಧಿ ಹೇಳುವುದಾಗಲೀ ಬಯ್ಯುವುದಾಗಲೀ ಯಾವುದನ್ನೂ ಇಷ್ಟ ಪಡುವುದಿಲ್ಲ. ಅದರಲ್ಲೂ ಅಮ್ಮ ಹೇಳುವ ಮಾತುಗಳನ್ನಂತೂ ಕೇಳಿಸಿಕೊಳ್ಳುವುದೇ ಇಲ್ಲ. ಅವರು ನಮ್ಮ ಒಳಿತನ್ನೇ ಬಯಸುವವರು. ಆದರೂ ನಮಗೆ ನಿರ್ಲಕ್ಷ್ಯ ಭಾವ. ಅಮ್ಮನ ಮಹತ್ವ ಆಕೆ ಇರುವಾಗ ಗೊತ್ತಾಗುವುದಿಲ್ಲ. ಇಲ್ಲದಾಗ ಮಾತ್ರ ವಾತ್ಸಲ್ಯದ ಸಿಂಧುವಾಗಿರುವ ಅಮ್ಮನ ಪ್ರೀತಿ ಆಕೆಯ ಮಹತ್ವ ಏನೆಂಬುದರ ಅರಿವಾಗುತ್ತದೆ. ಅದನ್ನೇ ವಾತ್ಸಲ್ಯ ಸಿಂಧು ಕಥೆಯಲ್ಲಿ ಮಾನಸಿ ಹಾಗೂ ರಾಧಿಕಾರ ಪಾತ್ರಗಳ ಮೂಲಕ ತಿಳಿಸಿಕೊಡುತ್ತಾರೆ.
      *ಸುಪ್ತ ಸಿಂಹಿಣಿ* ಕತೆಯಲ್ಲಿ ಸಿನಿಮಾ ಮಂದಿರದಲ್ಲಿ ಬಿಸಿ ಪಾನೀಯದ ಬಳಕೆಯಿಂದ ನಡೆದ ಅನಾಹುತ, ಅದರ ಪರಿಣಾಮವನ್ನು ತಿಳಿಸುತ್ತಾರೆ. ಅದು ಹೆಣ್ಣೊಬ್ಬಳಲ್ಲಿ ಹೋರಾಟ ಮಾಡುವಷ್ಟು ಧೈರ್ಯ ತುಂಬುತ್ತದೆ. ತನ್ನಮ್ಮನಿಗಾದ ಅನುಭವ ಮತ್ಯಾರಿಗೂ ಆಗಬಾರದೆಂಬ ಸದುದ್ದೇಶದಿಂದ ಆಕೆ ಸಿನಿಮಾ ಮಂದಿರಗಳಲ್ಲಿ ಬಿಸಿ ಪಾನೀಯಗಳುನ್ನು ನಿಷೇಧಿಸಬೇಕೆಂಬ ಬೇಡಿಕೆಯನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸುತ್ತಾಳೆ. ಆಕೆಯಲ್ಲಿ ಸಮಾಜಿಕ ಕಳಕಳಿಯಿದ್ದದ್ದರಿಂದ ನ್ಯಾಯಾಲಯ ಕೂಡ ಆಕೆಯ ಬೇಡಿಕೆಯನ್ನು ಅಂಗೀಕರಿಸಿ ಸಿನಿಮಾ ಮಂದಿರದ ಒಳಗೆ ಬಿಸಿ ಪಾನೀಯಗಳನ್ನು ನಿಷೇಧಿಸುತ್ತದೆ. ಕೊನೆಗೆ ಸರಕಾರ ಆಕೆಗೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ.
       *ಭಿಕ್ಷುಕ ತಾತ* ಕತೆಯಲ್ಲಿ  ಒಬ್ಬ ಭಿಕ್ಷಕನ ಮೇಲೂ ಕಾಳಜಿ ತೋರಿಸಿ, ಆತನ ವೃತ್ತಾಂತವನ್ನು ತಿಳಿದು ಅವನ ಮಕ್ಕಳೊಂದಿಗೆ ಕಳುಹಿಸಿಕೊಟ್ಟು  ಹೊಸ ಜೀವನಕ್ಕೆ ಕಾರಣರಾದ ಒಬ್ಬ ಟೀಚರ್ ಇದ್ದಾರೆ. ವಿದ್ಯಾರ್ಥಿಗಳು ದುಡುಕಿ ಕೈಗೊಳ್ಳುವ ತೀರ್ಮಾನದ ಪರಿಣಾಮ, ತಮ್ಮ ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಬುದ್ಧಿ ಹೇಳುವ, ಅವರ ಎಲ್ಲಾ ಕಷ್ಟಗಳಲ್ಲೂ ಹೆಗಲಾಗುವ, ತಪ್ಪು ಹೆಜ್ಜೆಯಿರಿಸಿದಾಗ ಎಚ್ಚರಿಸಿ ಸರಿ ದಾರಿ ತೋರುವ, ಪಾಠದ ನಡುವೆ ನೀತಿ ಕತೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸುವ ತನ್ನ ಮಕ್ಕಳಂತೆ ವಿದ್ಯಾರ್ಥಿಗಳನ್ನು ಪ್ರೀತಿಸುವ, ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಅಧ್ಯಾಪಕಿಯನ್ನು ಕೆಲವು ಕಥೆಗಳಲ್ಲಿ ನೋಡಬಹುದು. ಗಂಡು ಮಗುವಿಗಾಗಿ ಹಂಬಲಿಸಿ ಅಬಾರ್ಷನ್ ಮಾಡಿಸಿದವಳು ಹೆಣ್ಣು ಮಗುವಿಗೇ ಜನ್ಮ ನೀಡುವುದನ್ನು ಕಾಣುವಾಗ 'ತಾನು ಬಯಸಿದ್ದೊಂದು ದೇವರು ಕಲ್ಪಿಸಿದ್ದು ಇನ್ನೊಂದು' ಎಂಬ ಮಾತು ನಿಜವಾಗುತ್ತದೆ. ಇತ್ತೀಚೆಗೆ ನಡೆದ ಕೇರಳದ ಜಲ ಪ್ರಳಯವನ್ನು ಕಣ್ಣಾರೆ ಕಂಡು ಅನುಭವಿಸಿದ್ದರಿಂದ ಅದನ್ನೂ ಕಥಾವಸ್ತುವಾಗಿಸುತ್ತಾರೆ.
      *ಕೊನೆಯಾಸೆ*  ಕಥೆಯಲ್ಲಿ ಅಮ್ಮನ ಕೊನೆಯಾಸೆಯಂತೆಯೇ 'ಮಾನವ ಮೆಮರಿ ಕಾರ್ಡ್'ನ್ನು ಕಂಡುಹಿಡಿದು ವಿ????ನಿಯಾದ ಹೆಣ್ಣೊಬ್ಬಳ ಸಾಧನೆಯ ಕಥೆಯಿದೆ.
      ಹೀಗೆ, ಇಲ್ಲಿನ ಕಥೆಗಳ ಕೆಲವು ಪಾತ್ರಗಳಿಗೆ ತೀರಾ ಭಿನ್ನವಾದ ಹೊಸ ಹೊಸ ಹೆಸರುಗಳನ್ನು ಇಟ್ಟಿರುವುದನ್ನು ಗಮನಿಸಬಹುದು.  ಇಲ್ಲಿನ ಎಲ್ಲಾ ಕಥೆಗಳಲ್ಲಿ ಸಮಾಜಕ್ಕೊಂದು ಸಂದೇಶವಿದೆ.  ವಿದ್ಯಾರ್ಥಿಗಳಿಗೊಂದು ನೀತಿಕಥೆಯಿದೆ.  ಇವರ ಕಥೆಗಳಲ್ಲಿ ಹಿಂದಿ, ಇಂಗ್ಲೀಷ್ ಹಾಗೂ ಮಲಯಾಳ ಭಾಷೆಗಳ ಪ್ರಭಾವವನ್ನು ಕಾಣಬಹುದು. ಸಂಭಾಷಣೆಯಲ್ಲಿ  ಆಡುಭಾಷೆಗಳು ಬಳಕೆಯಾಗಿದೆ. ಹೀಗೆ ಭಾಷೆಯಲ್ಲೂ ನಿರೂಪಣೆಯಲ್ಲೂ ವೈವಿಧ್ಯತೆಯನ್ನು ತಂದಿರುವ ಲೇಖಕಿ ಕೆಲವು ಕಥೆಗಳ ಪಾತ್ರಗಳಲ್ಲಿ ಕಾಣಿಸುತ್ತಾರೆ. ಆ ಪಾತ್ರಗಳ ಮೂಲಕ ಓದುಗರಿಗೆ ಲೇಖಕಿಯ ವ್ಯಕ್ತಿತ್ವದ ಸಂಕ್ಷಿಪ್ತ ಪರಿಚಯವಾಗುತ್ತದೆ. ಲೇಖಕಿ ಕಥೆಗಳ ಮೂಲಕ ಸ್ವಸ್ಥ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದತ್ತ ಗಮನ ಹರಿಸಿರುವುದನ್ನು ಕಾಣಬಹುದು. ಅವರು ಆಂಗ್ಲಭಾಷಾ ಶಿಕ್ಷಕಿಯಾಗಿದ್ದರೂ ಕನ್ನಡದಲ್ಲೂ ಸಮರ್ಥವಾಗಿ ಸಾಹಿತ್ಯ ರಚಿಸಬಲ್ಲ ಸಾಮಥ್ರ್ಯವನ್ನು ಹೊಂದಿರುವರು.
                                                   ಚೇತನಾ ಕುಂಬ್ಳೆ
Feed Back: samarasasudhi@gmail.com

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries