ಲೋಕಸಭಾ ಚುನಾವಣೆಯ ಇತಿಹಾಸ ಹಾಗೂ ನಡೆದು ಬಂದ ಹಾದಿ!!-
(ಮುಂದುವರಿದ ಭಾಗ)
ಮತದಾರರು ಮತ್ತು ಚುನಾವಣಾ ಕ್ಷೇತ್ರಗಳು : ನಾಗರಿಕರ ರಾಜಕೀಯ ಸಮಾನತಾ ತತ್ತ್ವದ ಅಭಿವ್ಯಕ್ತಿಗೆ ಸಾರ್ವತ್ರಿಕ ಮತದಾನ ಕೇವಲ ಒಂದು ಸಾಧನ. ಅದು ಅರ್ಥಪೂರ್ಣವಾಗಬೇಕಾದರೆ ಅಷ್ಟೇ ಮಹತ್ತ್ವದ ಇತರ ಮಾರ್ಗಗಳೂ ಇವೆ. ಎಲ್ಲ ವಯಸ್ಕರಿಗೆ ಮತಾಧಿಕಾರ ಕೊಟ್ಟರೆ ಸಾಲದು. ಈ ಮತಕ್ಕೆ ಸಮಾನ ಮೌಲ್ಯ ಇರಬೇಕಾಗುತ್ತದೆ. ಒಬ್ಬ ಮತದಾರನಿಗೆ ಒಂದು ಮತದ ಅಧಿಕಾರ ಇದ್ದರೆ ಮಾತ್ರ ಇದು ಸಾಧ್ಯ. ಯಾವ ಕಾರಣಕ್ಕಾಗಿಯಾದರೂ ಹಲವರಿಗೆ ಅನೇಕ ಮತಾಧಿಕಾರ (19ನೆಯ ಶತಮಾನದಲ್ಲಿ ಹಾಗೆ ಹೇಳುವವರಿದ್ದರು) ಕೊಟ್ಟರೆ ಪ್ರಜಾಸತ್ತಾತ್ಮಕ ಸಮಾನತೆ ಹಾಗೂ ಸಾರ್ವತ್ರಿಕ ಮತದಾನ ತತ್ತ್ವಗಳಿಗೆ ಭಂಗ ಬರುತ್ತದೆ. ಇಂದು ಮುಂದುವರಿದ ರಾಷ್ಟ್ರಗಳಲ್ಲಿ ಎಲ್ಲೂ ಈ ಪದ್ಧತಿ ಉಳಿದಿಲ್ಲ. ಪ್ರಜಾಪ್ರಭುತ್ವ ಶೈಶಾವಸ್ಥೆಯಲ್ಲಿ ಇರುವಂಥ ಕೀನ್ಯದಂಥ ರಾಷ್ಟ್ರದಲ್ಲಿ ಈಗಲೂ ಆಸ್ತಿ, ವರಮಾನ, ಶಿಕ್ಷಣ, ವಯಸ್ಸಿನಲ್ಲಿ ಹಿರಿಯತನ ಮುಂತಾದ ಯೋಗ್ಯತೆಗಳನ್ನು ಗಮನಿಸಿ ಒಬ್ಬೊಬ್ಬನಿಗೂ ಒಂದು, ಎರಡು, ಮೂರು ಅಥವಾ ಇನ್ನೂ ಹೆಚ್ಚು ಮತಗಳ ಅಧಿಕಾರ ಕೊಡುವ ಪದ್ಧತಿ ಇದೆ.
ಭಾರತದಲ್ಲಿ ವಿಧಾನಸಭೆ, ಲೋಕಸಭೆಗಳ ಚುನಾವಣೆಗಳಲ್ಲಿ ಅನೇಕ ಮತದಾನ ಪದ್ಧತಿ ಬಳಕೆಯಲ್ಲಿ ಇಲ್ಲ. ಆದರೆ ರಾಜ್ಯಗಳ ವಿಧಾನಪರಿಷತ್ತುಗಳ ಚುನಾವಣೆಯಲ್ಲಿ ಅನೇಕ ಮತದಾನ ಪದ್ಧತಿ ಕಂಡುಬರುತ್ತದೆ. ಅನೇಕ ಮತಾಧಿಕಾರವಿಲ್ಲದಿದ್ದರೂ ಆಸ್ತಿ. ಶಿಕ್ಷಣ ಇತ್ಯಾದಿಗಳಿರುವ ಜನರು ಚುನಾವಣೆಗಳಲ್ಲಿ ಇತರರಿಗಿಂತ ಹೆಚ್ಚು ಪ್ರಭಾವ ಬೀರುವರೆಂಬುದನ್ನು ಗಮನಿಸಿದಾಗ ಶಾಸನಬದ್ಧವಾಗಿ ಅನೇಕ ಮತಾಧಿಕಾರ ನೀಡುವುದು ಅನಗತ್ಯವಾಗುತ್ತದೆ.
ಮತದಾರರ ಮತಕ್ಕೆ ಸಾಮಾನ್ಯ ಮೌಲ್ಯ ಬರಲು ಇರಬೇಕಾದ ಇನ್ನೊಂದು ಅಗತ್ಯವೆಂದರೆ ಸಮಾನ ವ್ಯಾಪ್ತಿಯ ಚುನಾವಣಾಕ್ಷೇತ್ರ. ಸುಮಾರಾಗಿ ಸಮಾನಸಂಖ್ಯೆಯ ಮತದಾರರಿರುವ ಕ್ಷೇತ್ರಗಳಿದ್ದರೆ ಅವುಗಳಿಂದ ಆಯ್ಕೆಯಾದ ಉಮೇದುವಾರರಿಗೆ ಬೀಳುವ ಮತಗಳ ಬೆಲೆ ಸಮಾನವಾಗಿರುತ್ತದೆ. ಚುನಾವಣಾ ಕ್ಷೇತ್ರಗಳಲ್ಲಿ ಅಸಮಾನತೆಯಿದ್ದರೆ ನೀಡಲಾದ ಮತಗಳ ಶೇಕಡವಾರು ಗಣನೆಯಲ್ಲೂ ಅವುಗಳ ಬೆಲೆಯಲ್ಲೂ ವ್ಯತ್ಯಾಸವುಂಟಾಗುತ್ತದೆ. ಇದು ಮತದಾರ, ಉಮೇದುವಾರ-ಇಬ್ಬರ ದೃಷ್ಟಿಯಿಂದಲೂ ಅಸಾಧುವಾದ್ದು. ಆದ್ದರಿಂದ ಜನಸಂಖ್ಯೆಯ ದೃಷ್ಟಿಯಿಂದ ಚುನಾವಣಾ ಕ್ಷೇತ್ರಗಳು ಸಮಾನವಾಗಿರಬೇಕು. ಭಾರತ ಸಂವಿಧಾನದ 8(2)ನೆಯ ಅನುಚ್ಛೇದದಲ್ಲಿ ಈ ತತ್ತ್ವವನ್ನು ಒಪ್ಪಿಕೊಳ್ಳಲಾಗಿದೆ. ಲೋಕಸಭೆಯ ಸ್ಥಾನಗಳನ್ನು ರಾಜ್ಯಗಳಿಗೆ ಹಂಚುವಾಗ ಸಾಧ್ಯವಾದ ಮಟ್ಟಿಗೆ ಎಲ್ಲ ರಾಜ್ಯಗಳಿಗೂ ಅವುಗಳ ಜನಸಂಖ್ಯೆಗಳಿಗೆ ಅನುಗುಣವಾಗಿ ಸ್ಥಾನಗಳನ್ನು ಹಂಚುವುದಲ್ಲದೆ, ರಾಜ್ಯಗಳಲ್ಲೂ ಪ್ರಾದೇಶಿಕ ಚುನಾವಣಾಕ್ಷೇತ್ರಗಳ ರಚನೆಯಲ್ಲೂ ಜನಸಂಖ್ಯಾ ಸಮಾನತೆಯನ್ನು ಅನುಸರಿಸಲಾಗುತ್ತದೆ. ವಿಧಾನಸಭೆಗಳಿಗೆ ಸಂಬಂಧಿಸಿದಂತೆಯೂ ಸಂವಿಧಾನದ 170(2)ನೆಯ ಅನುಚ್ಛೇದದ ಪ್ರಕಾರ ಇದೇ ತತ್ತ್ವವನ್ನೇ ಅನುಸರಿಸಬೇಕಾಗುತ್ತದೆ.
ಈ ತತ್ತ್ವಪಾಲನೆಗಾಗಿ ಭಾರತದಲ್ಲಿ 1961ರಲ್ಲಿ ದ್ವಿಸದಸ್ಯತ್ವ ರದ್ದು ಮಾಡುವ ಅಧಿನಿಯಮ ಬಂದದ್ದರಿಂದ ಈಗ ಎಲ್ಲ ಚುನಾವಣಾ ಕ್ಷೇತ್ರಗಳೂ ಏಕಸದಸ್ಯ ಕ್ಷೇತ್ರಗಳಾಗಿವೆ. ಆದರೂ ಸಮಾನ ಚುನಾವಣಾಕ್ಷೇತ್ರಗಳೂ ರೂಪಿಸುವುದು ಇನ್ನೂ ಪೂರ್ಣ ಸಾಧಿಸಿಲ್ಲ. ಉದಾಹರಣೆಗೆ ಹಿಮಾಚಲ ಪ್ರದೇಶದ ಒಂದು ಕ್ಷೇತ್ರದಲ್ಲಿ 2 ಲಕ್ಷಕ್ಕೂ ಕಡಿಮೆ ಮತದಾರರು, ಇನ್ನೊಂದರಲ್ಲಿ 5 ಲಕ್ಷಕ್ಕಿಂತ ಹೆಚ್ಚು ಮತದಾರರು ಇರುವುದುಂಟು. ಈ ಪರಿಸ್ಥಿತಿ ಇತರ ದೇಶಗಳಲ್ಲೂ ಕಂಡುಬರುತ್ತದೆ. ಚುನಾವಣಾ ಕ್ಷೇತ್ರದ ಸೀಮಾ ನಿರ್ಧಾರದಲ್ಲಿ (ಡೀಲಿಮಿಟೇಷನ್) ಪರಿಗಣಿಸಬೇಕಾದ ಹಲವಾರು ಅಂಶಗಳಿವೆ: 1 ಆಡಳಿತಾನುಕೂಲ, 2 ಆಡಳಿತ ಘಟಕವಾದಂಥ ತಾಲ್ಲೂಕುಗಳಿಗೆ ಅದನ್ನು ಸೀಮಿತಗೊಳಿಸುವ ಅಗತ್ಯ. 3. ನೈಸರ್ಗಿಕ ಗಡಿಯನ್ನು ಗಮನಿಸಬೇಕಾದ ಅನಿವಾರ್ಯತೆ, 4. ಗ್ರಾಮ ಹಾಗೂ ನಗರವಾಸಿ ಮತದಾರರ ವಿಭಿನ್ನ ಆಸಕ್ತಿಗಳು ಮತ್ತು ಧೋರಣೆಗಳು. ಇಂಥ ಕಾರಣಗಳಿಂದಾಗಿ ಕ್ಷೇತ್ರಗಳಲ್ಲಿ ಸಮಾನತೆ ತರುವುದು ಶಕ್ಯವಾಗುವುದಿಲ್ಲ. ಅಲ್ಪಸಂಖ್ಯಾತರ ಸೌಲಭ್ಯಕ್ಕಾಗಿ ಇಡೀ ಜನಸಂಖ್ಯೆಯ ದೃಷ್ಟಿಯಿಂದ ಸಮರ್ಥನೀಯವಲ್ಲದಿದ್ದರೂ. ಮೀಸಲು ಕ್ಷೇತ್ರಗಳನ್ನು ನಿರ್ಮಿಸಿದಾಗ ಕೂಡ ಚುನಾವಣಾ ಕ್ಷೇತ್ರ ರಚನೆಯಲ್ಲೂ ಈ ಬಗೆಯ ವ್ಯತ್ಯಾಸ ಸಂಭವಿಸುತ್ತದೆ. ಒಟ್ಟಿನಲ್ಲಿ ಅಕ್ಷರಶಃ ಸಮಾನ ವಿಸ್ತೀರ್ಣದ ಕ್ಷೇತ್ರಗಳ ರಚನೆ ಸಾಧ್ಯವೂ ಇಲ್ಲ, ಅಪೇಕ್ಷಣೀಯವೂ ಅಲ್ಲ. ತತ್ತ್ವವನ್ನು ಸಾಮಾನ್ಯವಾಗಿ ಒಪ್ಪಿ ಅದನ್ನು ಕಾರ್ಯರೂಪಕ್ಕೆ ತಂದಾಗ ಸಂಭವಿಸುವ ವ್ಯತ್ಯಾಸ ಸಮರ್ಥನೀಯವಾಗಿರಬೇಕು. ಅಕ್ಕಪಕ್ಕದ ಮತಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳ ಪರ ವಿರೋಧಿ ಮತದಾರರ ಗುಂಪುಗಳಿರುವ ವಿಭಾಗಗಳನ್ನರಿತು ಯಾವುದೋ ಒಂದು ಪಕ್ಷಕ್ಕೆ ಅನುಕೂಲವಾಗುವ ಹಾಗೆ ದುರುದ್ದೇಶದಿಂದ ಆ ವಿಭಾಗಗಳನ್ನು ವಿಚ್ಛೇದಿಸಿಯೋ ಬೇರೆ ರೀತಿಯಲ್ಲಿ ಜೋಡಿಸಿಯೋ ಚುನಾವಣಾಕ್ಷೇತ್ರ ರಚಿಸುವುದು ಅಪ್ರಾಮಾಣಿಕವಾದ ಮತ್ತು ಅಪಾಯಕರವಾದ ಕ್ರಮ. ಆದ್ದರಿಂದ ಚುನಾವಣಾಕ್ಷೇತ್ರ ಸೀಮಾ ನಿರ್ಧಾರಣ ಆಯೋಗ ಪಕ್ಷಾತೀತವಾಗಿರುವುದು ಅಗತ್ಯ. ಜನಸಂಖ್ಯೆಯ ವ್ಯತ್ಯಾಸ ಮತ್ತು ಚಲನೆಗಳಿಗೆ ಅನುಗುಣವಾಗಿ ಆಗಾಗ ಮತಕ್ಷೇತ್ರಗಳ ಪರಿಷ್ಕರಣವಾಗಬೇಕೆಂದೂ ಜನಸಂಖ್ಯೆಗೆ ಅನುಗುಣವಾಗಿ, ಸ್ವೀಕೃತ ತತ್ತ್ವದ ಆಧಾರದ ಮೇಲೆ, ಕ್ಷೇತ್ರಗಳ ಸೀಮಾನಿರ್ಧಾರಣವಾಗಬೇಕೆಂದೂ ಸಂವಿಧಾನದಲ್ಲಿ ವಿಧಿಸಲಾಗಿದೆ.
ಏಕಸದಸ್ಯ ಮತ್ತು ಅನೇಕ ಸದಸ್ಯ ಕ್ಷೇತ್ರಗಳು : ಭಾರತದಲ್ಲಿ ಅನೇಕ ಸದಸ್ಯ ಚುನಾವಣಾ ಕ್ಷೇತ್ರಗಳನ್ನು 1961ರಲ್ಲಿ ರದ್ದು ಪಡಿಸಲಾಯಿತು. ಅನೇಕ ಸದಸ್ಯ ಕ್ಷೇತ್ರ ಬೇಕೆನ್ನುವವರ ವಾದ ಹೀಗಿದೆ; 1. ಅನುಪಾತೀಯ ಪ್ರತಿನಿಧಿತ್ವವನ್ನು ದೊರಕಿಸುವುದು ಅನೇಕ ಸದಸ್ಯ ಕ್ಷೇತ್ರದಲ್ಲಿಯೇ ಶಕ್ಯ. 2. ಅನೇಕ ಸದಸ್ಯ ಕ್ಷೇತ್ರದಲ್ಲಿ ನಿಲ್ಲುವ ಉಮೇದುವಾರ ಹೆಚ್ಚು ಜನಪ್ರಿಯ ಹಾಗೂ ಸಮರ್ಥನಿರಬೇಕಾಗುತ್ತದೆ. ಏಕೆಂದರೆ ಕ್ಷೇತ್ರದ ವಿಸ್ತಾರ ಹೆಚ್ಚಾಗಿರುವುದರಿಂದ ಪೈಪೋಟಿಯೂ ಹೆಚ್ಚಾಗಿರುತ್ತದೆ. ಚಿಕ್ಕ ಕ್ಷೇತ್ರ ಚಿಕ್ಕ ಪ್ರತಿನಿಧಿಯನ್ನೇ ಹುಟ್ಟಿಸುವುದೆಂಬುದು ಫ್ರಾನ್ಸಿನ ಒಂದು ಜನನುಡಿ. 3 ವಿಸ್ತಾರಕ್ಷೇತ್ರದ ಮತದಾರರ ದೃಷ್ಟಿಕೋನವೂ ವಿಶಾಲವಾದ್ದಾಗಿ ಸ್ಥಾನಿಕ, ಸಂಕುಚಿತ ಆಸಕ್ತಿಗಳ ಸೆಳೆತ ಕಡಿಮೆಯಾಗುವ ಸಂಭವವಿದೆ. 4 ಸರ್ಕಾರ ಮತ್ತು ಪಕ್ಷಗಳ ಪ್ರಭಾವವೂ ವ್ಯಾಪಕ ಕ್ಷೇತ್ರದಲ್ಲಿ ಕಡಿಮೆ ಎಂಬುದು ಇನ್ನೊಂದು ವಾದ. ಆದರೆ ಭಾರತದಲ್ಲಿ ಈಗಾಗಲೇ ಇತರ ದೇಶಗಳಿಗಿಂತ ದೊಡ್ಡ ವಿಸ್ತೀರ್ಣದ ಮತಕ್ಷೇತ್ರಗಳಿವೆ. ಇವನ್ನು ಸೇರಿಸಿ ಅನೇಕ ಸದಸ್ಯ ಕ್ಷೇತ್ರಗಳನ್ನು ರಚಿಸದರೆ ಅವು ವ್ಯವಹರಿಸಲು ಅಸಾಧ್ಯವಾಗುವಷ್ಟು ದೊಡ್ಡವಾಗುವುವು. ಅಲ್ಲದೆ ಭಾರತದಲ್ಲಿ ಉಮೇದುವಾರರಾಗಿ ನಿಲ್ಲುವವರಿಗೆ ಸ್ಥಾನಿಕ ಕ್ಷೇತ್ರ ನಿಬರ್ಂಧವಿಲ್ಲದ ಕಾರಣ ಸ್ಥಾನಿಕವಾದ ಸಂಕುಚಿತ ಸೆಳೆತಗಳಿಗೆ ಅವಕಾಶ ಕಡಿಮೆ. ಎಲ್ಲಕ್ಕೂ ಹೆಚ್ಚಾಗಿ ಇಂದು ಉಮೇದುವಾರರನ್ನು ಪಕ್ಷಗಳೇ ಆರಿಸುವುದರಿಂದ ಅವರ ಗುಣಮಟ್ಟದ ಹೊಣೆ ಪಕ್ಷಗಳದು. ಕ್ಷೇತ್ರದ ವ್ಯಾಪ್ತಿಗೆ ಅಲ್ಲಿ ಮಹತ್ತ್ವವೇ ಇಲ್ಲ. ಸರ್ಕಾರ ಮತದಾರರ ಮೇಲೆ ಒತ್ತಡ ತರುವುದಾದರೆ, ಎಲ್ಲ ಕಡೆಗೂ ಅದರ ಅಧಿಕಾರಿಗಳೇ ಇರುವಾಗ ಕ್ಷೇತ್ರದ ವಿಸ್ತಾರ ಸಂಕೋಚಗಳು ಅದಕ್ಕೇನೂ ಅಡ್ಡಿಯಾಗಲಾರವು. ಕ್ಷೇತ್ರ ವಿಸ್ತಾರವಾದರೆ ಪ್ರತಿನಿಧಿಗೆ ತನ್ನ ಮತದಾರರ ಸಂಪರ್ಕ ಇಟ್ಟುಕೊಳ್ಳುವುದು ಕಷ್ಟವಾಗುತ್ತದೆ. ದುರ್ಬಲ ಪಕ್ಷಗಳಿಗೆ ಚುನಾವಣಾ ಪ್ರಚಾರದ ವೆಚ್ಚ ಅಸಾಧ್ಯವಾಗಿ ಪರಿಣಮಿಸುತ್ತದೆ. ಅನುಪಾತೀಯ ಪ್ರತಿನಿಧಿತ್ವ ಅಥವಾ ಐಚ್ಛಿಕ ಮತದಾನ ಇರದಿದ್ದರೆ ಅನೇಕ ಸದಸ್ಯ ಕ್ಷೇತ್ರದಲ್ಲಿ ಎಲ್ಲ ಸ್ಥಾನಗಳೂ ಬಲಿಷ್ಟ ಪಕ್ಷಕ್ಕೇ ಹೋಗುವ ಸಂಭವವುಂಟು. ಈ ಕಾರಣಗಳಿಂದಾಗಿ ಅನೇಕ ಸದಸ್ಯ ಚುನಾವಣಾಕ್ಷೇತ್ರಗಳನ್ನು ಹಲವು ದೇಶಗಳಲ್ಲಿ ತೆಗೆದು ಹಾಕಲಾಯಿತು.
ಏಕಸದಸ್ಯ ಕ್ಷೇತ್ರಗಳಲ್ಲೂ ಹಲವು ದೋಷಗಳುಂಟು. ಏಕಸದಸ್ಯ ಕ್ಷೇತ್ರದಲ್ಲಿ ಸೋತ ಸ್ಪರ್ಧಿಗೆ ಬಿದ್ದ ಮತಗಳಿಗೆ ಏನೂ ಮೌಲ್ಯವಿಲ್ಲ. ಅವೆಲ್ಲ ವ್ಯರ್ಥವಾಗುತ್ತವೆ. ಕೆಲವು ಸಲ ಗೆದ್ದ ಉಮೇದುವಾರನಿಗೆ ಬಿದ್ದ ಮತಗಳಲ್ಲಿ ಗೆಲ್ಲುವುದಕ್ಕೆ ಬೇಕಾಗುವಷ್ಟು ಬಿಟ್ಟು ಉಳಿದ ಮತಗಳೆಲ್ಲ ವ್ಯರ್ಥವಾದಂತೆಯೇ. ಅವಕ್ಕೆ ಯಾವ ಮೌಲ್ಯವೂ ಇಲ್ಲ. ಇದಕ್ಕೂ ಹೆಚ್ಚಿನ ದೋಷವೆಂದರೆ ಒಂದು ಏಕಸದಸ್ಯ ಕ್ಷೇತ್ರದಲ್ಲಿ ನಾಲ್ಕೈದು ಜನ ಉಮೇದುವಾರರಿದ್ದಾಗ ಅವರಲ್ಲಿ ಮತಗಳು ಹಂಚಿಹೋಗಿ ಅಲ್ಪಸಂಖ್ಯೆಯ ಮತಗಳಿಂದ ಒಬ್ಬ ಗೆಲ್ಲುತ್ತಾನೆ. ಈ ರೀತಿ ಗೆದ್ದ ಉಮೇದುವಾರರು ರಚಿಸಿದ ಸರ್ಕಾರ ನ್ಯಾಯವಾಗಿ ನೋಡಿದರೆ ಅಲ್ಪಸಂಖ್ಯಾತ ಮತದಾರರಿಂದ ಆಯ್ಕೆ ಹೊಂದಿದವರ ಸರ್ಕಾರವಾಗುತ್ತದೆ. ಇದು ಇಂಥ ಪ್ರಜಾಪ್ರಭುತ್ವದ ಒಂದು ವಿಪರ್ಯಾಸ ಪರಿಸ್ಥಿತಿ.
ಅನುಪಾತೀಯ ಪ್ರತಿನಿಧಿತ್ವ : ಇಂಥ ದೋಷಗಳನ್ನು ನಿವಾರಿಸುವುದಕ್ಕಾಗಿ ಅನುಪಾತೀಯ ಪ್ರತಿನಿಧಿತ್ವವುಳ್ಳ ಅನೇಕ ಸದಸ್ಯ ಕ್ಷೇತ್ರಗಳೂ ಬೇಕೆಂದು ಹೇಳಲಾಗುತ್ತದೆ. ಉಮೇದುವಾರರಿಗೆ ಹಾಗೂ ಪಕ್ಷಗಳಿಗೆ ಹಾಕಲಾದ ಮತಗಳಿಗೆ ಅನುಪಾತೀಯವಾಗಿ ಸ್ಥಾನಗಳನ್ನು ಕೊಡುವುದೇ ಇದರ ತತ್ತ್ವ. ಇದರ ಪ್ರಕಾರ ಒಂದು ಪಕ್ಷ ಶೇ. 45 ಮತಗಳಿಸಿದರೆ ಅದಕ್ಕೆ ಶೇ. 45 ಸ್ಥಾನಗಳು ದೊರೆಯುವುವೇ ಹೊರತು ಅವಕ್ಕಿಂತ ಹೆಚ್ಚಲ್ಲ. ಅಂತೆಯೇ ಇತರ ಪಕ್ಷಗಳಿಗೂ ಅವು ಪಡೆದ ಮತಗಳಿಗೆ ಅನುಗುಣವಾಗಿ ಸ್ಥಾನಗಳು ಸಿಗುತ್ತವೆ. ಒಂದು ಕ್ಷೇತ್ರದಲ್ಲಿ ಒಂದೇ ಸದಸ್ಯ ಸ್ಥಾನವಿದ್ದಲ್ಲಿ ಅದನ್ನು ಉಮೇದುವಾರರು ಗಳಿಸಿದ ಮತಗಳ ಸಂಖ್ಯೆಗೆ ಅನುಗುಣವಾಗಿ ವಿಭಾಗಿಸಲಾಗುವುದಿಲ್ಲವಾದ್ದರಿಂದ ಈ ವ್ಯವಸ್ಥೆಯಲ್ಲಿ ಅನೇಕ ಸದಸ್ಯ ಕ್ಷೇತ್ರರಚನೆ ಅಗತ್ಯವಾಗುತ್ತದೆ. ಮೂರರಿಂದ ಏಳು ಸದಸ್ಯರಿರುವ ಕ್ಷೇತ್ರ ಹೆಚ್ಚು ಸಮರ್ಪಕವೆಂದು ಹೇಳಲಾಗಿದೆ. ಇದಕ್ಕೆ ಅತ್ಯಂತ ಉಚಿತವಾದ ಮತದಾನ ಪದ್ಧತಿಯೆಂದರೆ ಏಕಲ ವರ್ಗಸಾಧ್ಯ ಮತ (ಸಿಂಗಲ್ ಟ್ರಾಟ್ಸ್ ಫರಬಲ್ ವೋಟ್) ಪದ್ಧತಿ ಎಂದು ವಾದಿಸಲಾಗಿದೆ. ಐಲೆರ್ಂಡ್, ಟಾಸ್ಮೇನಿಯ, ಮಾಲ್ಟ ಮತ್ತು ಆಸ್ಟ್ರೇಲಿಯದ ಮತ್ತು ದಕ್ಷಿಣ ಆಫ್ರಿಕದ ಸೆನೆಟ್ ಚುನಾವಣೆಗಳಲ್ಲಿ ಜಾರಿಯಲ್ಲಿರುವ ಪದ್ಧತಿಯಿದು. ಮತದಾರರು ಮತಚೀಟಿಯ ಮೇಲೆ ಮುದ್ರಿತವಾಗಿರುವ ಉಮೇದುವಾರರ ಹೆಸರುಗಳ ಮುಂದೆ-ಅವರಿಗೆ ತಾವು ನೀಡುವ ಪ್ರಾಶಸ್ತ್ಯಾನು ಗುಣವಾಗಿ-1, 2, 3 ಇತ್ಯಾದಿ ಸಂಖ್ಯೆಗಳನ್ನು ಬರೆಯುತ್ತಾರೆ. ಮತಚೀಟಿಗಳ ಮೇಲೆ ನಮೂದಿಸಲಾದ ಪ್ರಥಮ ಪ್ರಾಶಸ್ತ್ಯ (ಅಧಿಮಾನ) ಮತಗಳಿಗೆ ಅನುಗುಣವಾಗಿ ಮೊದಲು ಅವುಗಳ ಎಣಿಕೆ ಮಾಡಲಾಗುತ್ತದೆ. ಯಾವ ಉಮೇದುವಾರನಿಗೆ ಅಗತ್ಯವಾದ ಡ್ರೂಪ್ ಕೋಟಾ (ಎಚ್. ಆರ್. ಡ್ರೂಪ್ ಎಂಬುವನು ಕಂಡುಹಿಡಿದ ಕೋಟಾ) ಎಂದರೆ-
ಚಲಾಯಿಸಲಾದ ಕ್ರಮಬದ್ಧ (ವ್ಯಾಲಿಡ್) ಮತಗಳು ಸಂಖ್ಯೆ +1 ಸ್ಥಾನಗಳ ಸಂಖ್ಯೆ + 1
ಪ್ರಥಮ ಪ್ರಾಶಸ್ತ್ಯ ಮತಗಳು ಬಂದಿರುತ್ತವೋ ಅವನು ಚುನಾಯಿತನಾದನೆಂದು ಘೋಷಿಸಲಾಗುತ್ತದೆ. ಐದು ಸದಸ್ಯರ ಕ್ಷೇತ್ರದಲ್ಲಿ ಒಬ್ಬ ಗೆಲ್ಲಲು ಒಟ್ಟು ಮತಗಳಲ್ಲಿ ಕನಿಷ್ಠ 1/5 ಮತಗಳನ್ನು ಗಳಿಸಬೇಕಾದ್ದಿಲ್ಲ. ಆರು ಮಂದಿ ಉಮೇದುವಾರರು ಒಟ್ಟು ಮತಗಳಲ್ಲಿ ತಲಾ 1/6 ಮತಗಳನ್ನು ಪಡೆಯಬಹುದು. ಆದರೆ ಐವರು ಮಾತ್ರ ಹೆಚ್ಚು ಗಳಿಸುವುದು ಸಾಧ್ಯ. ಚಲಾಯಿಸಲಾದ ಒಟ್ಟು ಮತಗಳು 1/6ಕ್ಕಿಂತ ಒಂದೇ ಒಂದು ಅಧಿಕ ಮತಗಳು ಬಂದಾಗ, ಆ ವಿಜಯಿ ಉಮೇದುವಾರನ ಎಲ್ಲ ಮತಗಳನ್ನೂ ಅವುಗಳಲ್ಲಿ ನಮೂದಾಗಿರುವ ದ್ವಿತೀಯ ಪ್ರಾಶಸ್ತ್ಯ ಮತಗಳಿಗೆ ಅನುಗುಣವಾಗಿ ವಿಂಗಡಿಸಲಾಗುತ್ತದೆ. ಇತರರಲ್ಲಿ ಪ್ರತಿಯೊಬ್ಬನಿಗೂ ಎಷ್ಟೆಷ್ಟು ಮತಗಳು ಬಂದಿವೆಯೆಂದು ಎಣಿಸಲಾಗುತ್ತದೆ. ವಿಜಯಿ ಉಮೇದುವಾರನಿಗೆ ಅವನ ಕೋಟಾಗಿಂತ ಎಷ್ಟು ಅಧಿಕ ಮತಗಳು ಬಂದಿವೆಯೋ ಅಷ್ಟನ್ನು ಮಾತ್ರ ಇತರರಿಗೆ ಹಂಚಬೇಕು. ಉದಾಹರಣೆಗೆ, ಕೋಟಾಗಿಂತ 1/3 ರಷ್ಟು ಅಧಿಕಮತಗಳು ಅವನಿಗೆ ಬಂದಿದ್ದರೆ ಇತರ ಉಮೇದುವಾರರಲ್ಲಿ ಒಬ್ಬೊಬ್ಬರಿಗೂ ಸೂಚಿಸಲಾಗಿರುವ ಆದ್ಯ ಪ್ರಾಶಸ್ರ್ಯ ಮತಗಳಲ್ಲಿ 1/3 ಭಾಗವನ್ನು ಅವರಲ್ಲಿ ಹಂಚಲಾಗುತ್ತದೆ. ಆನಂತರ ವಿಜಯಗಳಿಸುವ ಉಮೇದುವಾರರ ಅಧಿಕ ಮತಗಳನ್ನೂ ಹೀಗೆಯೇ-ಅಗತ್ಯವಿರುವ ತನಕ ಹಂಚಬೇಕು. ಹಾಗೂ ಯಾವ ಸ್ಥಾನಗಳಾದರೂ ಇನ್ನೂ ಖಾಲಿಯಾಗಿದ್ದ ಪಕ್ಷದಲ್ಲಿ, ಕನಿಷ್ಟ ಮತ ಚೀಟಿಗಳನ್ನು ಪಡೆದ ಉಮೇದುವಾರನನ್ನು ಕೈಬಿಟ್ಟು ಅವನ ಎಲ್ಲ ಮತಗಳನ್ನೂ ಅವುಗಳಲ್ಲಿ ಸೂಚಿತವಾಗಿರುವ ದ್ವಿತೀಯ ಪ್ರಾಶಸ್ತ್ಯಾನುಗುಣವಾಗಿ ಉಳಿದವರಲ್ಲಿ ಹಂಚಲಾಗುವುದು. ಎಲ್ಲ ಸ್ಥಾನಗಳೂ ಭರ್ತಿಯಾಗುವ ತನಕ ಈ ಪ್ರಕ್ರಿಯೆಯನ್ನು ಮುಂದುವರಿಸತಕ್ಕದ್ದು. ಮತದಾರರು ನೀಡುವ ಪ್ರಾಶಸ್ತ್ಯಾನುಗುಣವಾಗಿ ಫಲಿತಾಂಶಗಳಿರುತ್ತವೆ. ಯಾವ ಮತವೂ ವ್ಯರ್ಥವಾಗುವುದಿಲ್ಲ. ಆಯ್ಕೆ ಮಾಡಲು ಮತದಾರನಿಗೆ ಹೆಚ್ಚು ವ್ಯಾಪಕವಾದ ಅವಕಾಶ ದೊರೆತಂತಾಗುತ್ತದೆ. ವ್ಯಕ್ತಿಗಳಿಗೂ ಪಕ್ಷಗಳಿಗೂ ಬೆಂಬಲ ನೀಡಿದಂತಾಗುತ್ತದೆ.
ಭಾರತದಲ್ಲಿ ಲೋಕಸಭೆ, ವಿಧಾನಸಭೆಗಳಿಗೆ ಚುನಾವಣೆಗಳು ಏಕಸದಸ್ಯ ಮತ ಕ್ಷೇತ್ರದಿಂದ ನಡೆಯುವುದಾದರರೂ ರಾಜ್ಯಸಭೆ, ವಿಧಾನಪರಿಷತ್ತು ಮತ್ತು ಕೆಲವು ಸಮಿತಿಗಳಿಗೆ ಅಧಿಮಾನ ಮತದಾನ (ಫ್ರಿಫರೆನ್ಷಿಯಲ್ ಓಟಿಂಗ್) ಪದ್ಧತಿಯನ್ನು ಅನುಸರಿಲಾಗುತ್ತದೆ. ಯೂರೋಪಿನ ಅನೇಕ ಪ್ರಜಾಸತ್ತಾತ್ಮಕ ದೇಶಗಳಲ್ಲಿ ಅನುಪಾತೀ ಪ್ರತಿನಿಧಿತ್ವ ಪದ್ಧತಿ ಇದೆ. ಅಲ್ಲಿ ಸ್ಥಿರವಾದ ಸಮರ್ಥವಾದ ಸರ್ಕಾರಗಳಿವೆ.
ಅನುಪಾತೀ ಪ್ರತಿನಿಧಿತ್ವ ಪದ್ಧತಿಯಲ್ಲಿ ಅನೇಕ ಒಳ್ಳೆಯ ಅಂಶಗಳಿದ್ದರೂ ಈ ಪದ್ಧತಿ ಭಾರತದಂಥ ದೊಡ್ಡ ದೇಶಕ್ಕೆ ಅತ್ಯಂತ ಸಮರ್ಪಕವೆಂದು ಹೇಳಲಾಗದು. ಚುನಾವಣೆ ಅನೇಕ ಅಗತ್ಯಗಳನ್ನು ಪೂರೈಸಬೇಕಾಗುತ್ತದೆ. ಜಾತಿ, ಭಾಷೆ, ಮತ ಮುಂತಾದ ಅನೇಕ ವಿಚ್ಛಿನ್ನಕಾರಿ ಶಕ್ತಿಗಳಿರುವ ಭಾರತದಲ್ಲಿ ಪ್ರತಿಯೊಂದು ಚಿಕ್ಕಗುಂಪಿಗೂ ಸ್ಥಾನ. ಪ್ರಾತಿನಿಧ್ಯಗಳ ಆಶೆ ಹುಟ್ಟಿಸಿ ಅವನ್ನು ಪಡೆಯಲು ಎಲ್ಲ ಬಗೆಯ ಅಸಮರ್ಪಕ ಒಪ್ಪಂದ ಮತ್ತು ಪ್ರಚಾರಗಳಿಗೆ ಈ ಪದ್ಧತಿ ಎಡೆಮಾಡಿಕೊಡುತ್ತದೆ. ರಾಷ್ಟ್ರೀಯ ಏಕತೆಗೆ ಬುನಾದಿಯಂತಿರುವ ಸಂಯುಕ್ತ ಮತಕ್ಷೇತ್ರದ ಅಂತಃಸತ್ತ್ವವನ್ನೇ ಇದು ನಾಶಮಾಡಬಲ್ಲದು. ಅನೇಕ ಪಕ್ಷಗಳ ಉದ್ಭವವಾಗಿ ಶಾಸನ ಸಭೆಗಳಲ್ಲೂ ಕಾಯಾರ್ಂಗದ ಮೇಲೂ ಗೊಂದಲದ ಪರಿಣಾಮ ಉಂಟಾಗಬಹುದು. ಇಂಥ ಸ್ಥಿತಿಯಲ್ಲಿ ಸರ್ಕಾರದ ಅವ್ಯವಸ್ಥೆಯ, ಸೋಲುಗಳ ಹೊಣೆಯನ್ನು ಯಾವ ಒಂದು ಪಕ್ಷದ ಮೇಲೂ ಹೊರಿಸುವುದು ದುಸ್ತರವಾಗುವುದು. ಅನುಪಾತೀ ಪ್ರತಿನಿಧಿತ್ವದಲ್ಲಿರುವಂತೆ ಏಕಸದಸ್ಯ ಮತಕ್ಷೇತ್ರ ಪದ್ಧತಿಯಲ್ಲಿ ವಿವಿಧ ಅಭಿಪ್ರಾಯಗಳ ಯೋಗ್ಯ ಪ್ರಾತಿನಿಧ್ಯ ಸೌಕರ್ಯವಿಲ್ಲವಾದರೂ ಭಾರತದಲ್ಲಿ ಏಕಸದಸ್ಯ ಪದ್ಧತಿ ಸ್ಥಿರವಾದ ಮತ್ತು ಬಲವಾದ ಸರ್ಕಾರವನ್ನು ಈವರೆಗೆ ಒದಗಿಸಿದೆ. ಮತೀಯ ಅಥವಾ ಜಾತೀಯ ಪ್ರಾತಿನಿಧ್ಯ : ಮತಕ್ಷೇತ್ರಗಳು ಪ್ರಾದೇಶಿಕವಾಗಿರಬೇಕೆ? ಅಥವಾ ಜಾತೀಯ ವ್ಯಾಪ್ತಿಗೊಳಪಟ್ಟಿರಬೇಕೆ? ಎಂಬ ಪ್ರಶ್ನೆಗಳಿಂದಾಗಿ ಸೈದ್ಧಾಂತಿಕ ವಿಚಾರದ ಪ್ರಸ್ತಾಪ ಅಗತ್ಯವಾಗುತ್ತದೆ. ವ್ಯಕ್ತಿಗೆ ಆತ ಒಬ್ಬ ವ್ಯಕ್ತಿಯೆಂದೇ ರಾಜಕೀಯ ಹಕ್ಕನ್ನು ಪ್ರಜಾಸತ್ತೆಯ ಸಿದ್ಧಾಂತ ಕೊಡಮಾಡುವುದೇ ಹೊರತು. ಆತ ವಿಶಿಷ್ಟ ಜಾತಿ ಅಥವಾ ಸಮಾಜಕ್ಕೆ ಸೇರಿದವನೆಂಬ ಕಾರಣಕ್ಕಾಗಿ ಅಲ್ಲ. ಅಂಥ ಗುಂಪುಗಳಿಲ್ಲವೆಂದು ಇದರ ಅರ್ಥವಲ್ಲ. ರಾಜಕೀಯ ಹಕ್ಕು ಬಾಧ್ಯತೆಗಳಿಗೂ ಇಂಥ ಗುಂಪುಗಳಿಗೂ ಸಂಬಂಧವಿಲ್ಲವೆಂಬುದು ಮುಖ್ಯ. ರಾಷ್ಟ್ರೀಯ ಪ್ರ???? ಪ್ರಬಲವಾಗಿರುವಂಥ ದೇಶಗಳ ನಾಗರಿಕರಲ್ಲಿ ಗುಂಪುಗಳಿಗೆ ಅನುಗುಣವಾದ ಲಾಭಗಳ ಭಾವನೆ ಬರುವುದು ಶಕ್ಯವಿಲ್ಲ. ಇದನ್ನು ಅನೇಕ ದೇಶಗಳಲ್ಲಿ ಕಾಣಬಹುದು. ಆದರೆ ಏಷ್ಯ ಹಾಗೂ ಆಫ್ರಿಕದ ಕೆಲವು ದೇಶಗಳಲ್ಲಿ ರಾಷ್ಟ್ರೀಯ ಪ್ರಜ್ಞೆ ಪೂರ್ತಿಯಾಗಿ ಇಲ್ಲ ಅಥವಾ ಆಳವಾಗಿ ಬೇರೂರಿಲ್ಲ. ಇಂಥ ಸಮಾಜಗಳಲ್ಲಿ ವ್ಯಕ್ತಿ ರಾಷ್ಟ್ರಕ್ಕಿಂತ ಹೆಚ್ಚಾಗಿ ತನ್ನದೆಂದುಕೊಂಡ ಜಾತಿ, ಗುಂಪು ತಂಡಗಳಿಗೆ ಅಂಟಿಕೊಂಡಿರುತ್ತಾನೆ. ಇಂಥಲ್ಲಿ ಅತೃಪ್ತಿ, ಸಂಶಯ ಉಸಿರಾಡುತ್ತವೆ. ಒಂದು ಗುಂಪನ್ನು ಇನ್ನೊಂದು ಗುಂಪಿನವ ಪ್ರತಿನಿಧಿಬಲ್ಲನೆಂಬ ಬಗ್ಗೆ ವಿಶ್ವಾಸವಿರುವುದಿಲ್ಲ. ಅದಕ್ಕಾಗಿ ಜಾತೀಯ ಪ್ರಾತಿನಿಧ್ಯ, ಮತಕ್ಷೇತ್ರ ಮುಂತಾದವುಗಳ ಬೇಡಿಕೆ ಮುಂದೆ ಬರುತ್ತದೆ. ಇದೊಂದು ಅಪ್ರಬುದ್ಧ ಸ್ಥಿತಿ; ಪ್ರಜಾಸತ್ತೆಗೆ ಪ್ರತಿಕೂಲಕರ. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಜಾತೀಯ ಮತಕ್ಷೇತ್ರಗಳಿದ್ದುವು. ಭಾರತದ ವಿಭಜನೆಗೂ ಈ ಜಾತೀಯ ಮತಕ್ಷೇತ್ರಗಳೇ ಕಾರಣವಾದವು. ಇವುಗಳಿಂದ ಅನೈಕ್ಯ ಹೆಚ್ಚಲು ಅವಕಾಶವಾಯಿತು. ಗಣರಾಜ್ಯ ಭಾರತದಲ್ಲಿ ಜಾತೀಯ ಮತಕ್ಷೇತ್ರಗಳಿಲ್ಲ. ಆದರೂ ಅನುಸೂಚಿತ ವರ್ಗಗಳಿಗೆ ಸ್ಥಾನಗಳನ್ನು ಕಾದಿರಿಸಲಾಗಿದೆ. ಈ ಸೌಲಭ್ಯ ಮೊದಲು ಹತ್ತು ವರ್ಷಗಳಿಗೆ ಸೀಮಿತವಾಗಿತ್ತು. ಈಗ ಇದು ಮುಂದುವರಿದಿದೆ. ಸಾಮಾಜಿಕ ವರ್ಗಗಳ ಆಧಾರದ ಮೇಲೆ ಸ್ಥಾನಗಳನ್ನು ಕಾಯ್ದಿರಿಸಲಾಗಿದೆ. ಈ ಸೌಲಭ್ಯ ಮೊದಲು ಹತ್ತು ವರ್ಷಗಳಿಗೆ ಸೀಮಿತವಾಗಿತ್ತು. ಈಗ ಇದು ಮುಂದುವರಿದಿದೆ. ಸಾಮಾಜಿಕ ವರ್ಗಗಳ ಆಧಾರದ ಮೇಲೆ ಸ್ಥಾನಗಳನ್ನು ಕಾಯ್ದಿರಿಸುವುದೂ ಮತಕ್ಷೇತ್ರ ರಚಿಸುವುದೂ ಜಾತಿ ವೈಷಮ್ಯವನ್ನು ಶಾಶ್ವತಗೊಳಿಸಲು ಸಹಾಯಕವಾಗುವುದೆಂದು ವಾದಿಸಲಾಗಿದೆ. ವರ್ಗೀಯ ಅಥವಾ ಜಾತೀಯ ಪ್ರಾತಿನಿಧ್ಯ ಪದ್ಧತಿ ರಾಷ್ಟ್ರೀಯ ಭಾವನೆಗೆ ಪೋಷಕವಾದುದಲ್ಲವೆನ್ನಬಹುದು.
(ಮುಂದುವರಿಯುವುದು............)