HEALTH TIPS

ಸಮರಸ-ಈ ಹೊತ್ತಿಗೆ ಹೊಸ ಹೊತ್ತಗೆ-09- ಕಾಫಿ ವಿದ್ ಕವಿತೆ

 
      ಕೃತಿ: ಕಾಫಿ ವಿದ್ ಕವಿತೆ
     ಕವಿ:ಕೆ.ನಲ್ಲತಂಬಿ
     ಬರಹ: ಚೇತನಾ ಕುಂಬಳೆ
      ಸಾಹಿತ್ಯ ರಂಗದಲ್ಲಿ ಕವಿ, ಕತೆಗಾರರಾಗಿ ಗುರುತಿಸಿಕೊಂಡಿರುವ ಕೆ. ನಲ್ಲತಂಬಿ ಅವರು ಕನ್ನಡ ಹಾಗೂ ತಮಿಳು ಎರಡು ಭಾಷೆಗಳಲ್ಲೂ ಸಮರ್ಥವಾಗಿ ಬರೆಯಬಲ್ಲವರು. ಅನುವಾದವನ್ನೂ ಮಾಡುವ ಇವರು ಇತ್ತೀಚೆಗೆ ಪ್ರಕಟಿಸಿದ ಕವನ ಸಂಕಲನವೇ *ಕೋಶಿ'ಸ್ ಕವಿತೆಗಳು*. ಈ ಕವನ ಸಂಕಲನದಲ್ಲಿ ಕೋಶಿ'ಸ್ ಕವಿತೆಗಳ ಬಗ್ಗೆ ಸಂಧ್ಯಾರಾಣಿಯವರ ಮಾತುಗಳು ಹೃದಯ ಸ್ಪರ್ಶಿಯಾಗಿವೆ. ಅವರು ಕಾಫಿ ಮಾಡುವ ವಿಧಾನವನ್ನು ವಿಸ್ತಾರವಾಗಿ ಹೇಳುತ್ತಾ ಕಾಫಿಯ ಮೇಲಿನ ಪ್ರೀತಿಯನ್ನು ಹೆಚ್ಚಿಸುತ್ತಾರೆ. ಕಾಫಿಯನ್ನು ಇಷ್ಟಪಡದವರೂ, ಕುಡಿಯದವರೂ ಕಾಫಿಯನ್ನು ಇಷ್ಟಪಡುವಂತೆ, ಪ್ರೀತಿಸುವಂತೆ ಅವರ ಮಾತುಗಳು ಮೂಡಿ ಬಂದಿವೆ. "ಈ ಕವಿತೆಗಳು ಮಿಂಚೂ ಹೌದು, ಬೆಳಕೂ ಹೌದು. ಇವಕ್ಕೆ ಮಿಂಚಿನ 'ಹೊಳೆಯುವ' ಗುಣವೂ ಬೆಳಕಿನ 'ಕಾಣಿಸುವ' ಗುಣವೂ ಪ್ರಾಪ್ತವಾಗಿದೆ" ಎಂದು ಸಂಧ್ಯಾರಾಣಿ ಹೇಳುತ್ತಾರೆ. ಕವಯತ್ರಿ ಶೀಲಾ ಭಂಡಾರ್ಕರ್ ಅವರು ಈ ಸಂಕಲನಕ್ಕೆ ಬೆನ್ನುಡಿ ಬರೆದಿದ್ದಾರೆ. ಕೋಶಿ'ಸ್ ಕವಿತೆಗಳನ್ನು ನಲ್ಲತಂಬಿ ಅವರು ಫೇಸ್ ಬುಕ್ಕಲ್ಲಿ ಪೋಸ್ಟ್ ಮಾಡುತ್ತಿದ್ದರು. ಅವುಗಳನ್ನು ಬಹಳಷ್ಟು ಜನರು ಇಷ್ಟಪಡುತ್ತಿದ್ದರು. ಲೇಖಕರ ಕಲ್ಪನೆಯಲ್ಲಿ ಮೂಡಿದ ವ್ಯಕ್ತಿಯೊಬ್ಬನ ಪಾತ್ರಕ್ಕೆ ಹೆಸರು ನೀಡಿ, ಅವನ ಮೂಲಕ ಅದ್ಭುತ ಮಾತುಗಳಿಗೆ ಜೀವ ತುಂಬುವುದರ ಮೂಲಕ ಲೇಖಕರು ನಮ್ಮ ಮನ ಸೆಳೆದಿರುವರು. ಈ ಕವಿತೆಗಳಲ್ಲಿ ಬರುವ ಕೋಶಿ'ಸ್ ಎಂಬ ಕಾಫಿ ಹೌಸ್, ಸೇವಕ ವಿನ್ಸೆಂಟ್, ಆತ ತಂದು ಕೊಡುವ ಕಾಫಿ, ಜೊತೆಗೆ ಅವನು ಹೇಳುವ ಒಂದೊಂದು ಮಾತುಗಳೂ ಅರ್ಥವತ್ತಾಗಿದ್ದು, ಮನವನ್ನು ಮುಟ್ಟುತ್ತವೆ, ತಟ್ಟುತ್ತವೆ, ಮತ್ತೆ ಮತ್ತೆ ಕಾಡುತ್ತವೆ. 'ಕೋಶಿ'ಸ್ ಕವಿತೆಗಳು' ಶೀರ್ಷಿಕೆಯೇ ಆಕರ್ಷಕವಾಗಿದ್ದು ವಿಶಿಷ್ಟವಾಗಿದೆ. ಇಲ್ಲಿನ ಕವಿತೆಗಳೆಲ್ಲವೂ ಒಂದಕ್ಕಿಂತ ಒಂದು ಚೆನ್ನಾಗಿವೆ. ಹನಿಗವನದಂಥ ಈ ಕವನಗಳಲ್ಲಿ  ಸಮಾಜಕ್ಕೊಂದು ಸಂದೇಶವಿದೆ. ವಾಸ್ತವದ ಸತ್ಯಗಳಿವೆ. ಅನುಭವದ ಮಾತುಗಳಿವೆ. ಕೆಲವೊಂದು ಕವಿತೆಗಳನ್ನು ಓದುವಾಗ ನಮಗರಿವಿಲ್ಲದೆ ವಾವ್ ಎನ್ನುವಂತಿವೆ.
ಉದಾ:
"ನಮ್ಮವರ ಮೇಲಿನ ಕೋಪವೂ
ಅನುರಾಗದಿಂದ ತುಂಬಿರಬೇಕಲ್ಲವೇ ಸಾರ್"

"ಹಾರೆಯ ಪೆಟ್ಟಿಗೆ ಬೀಳದ ಬಂಡೆ
ಬೀಜದ ಮೊಳಕೆಗೆ ಬಿರಿಯುತ್ತದೆ"

"ಮುಚ್ಚಿದ ಮುಷ್ಟಿ ಪಡೆಯುವುದೂ ಇಲ್ಲ ಕೊಡುವುದೂ ಇಲ್ಲ"

ಸಂಭಾಷಣೆಯ ರೂಪದಲ್ಲಿ ಈ ಕವಿತೆಗಳು ಮೂಡಿ ಬಂದಿದ್ದು, ತನ್ನದೇ ಆದ ಭಿನ್ನ ಶೈಲಿಯನ್ನು ಹೊಂದಿವೆ.
     ಜೀವನದಲ್ಲಿ ನಾವು ಬಯಸಿದ್ದೆಲ್ಲವೂ ಸಿಗುತ್ತಿದ್ದರೆ ಜೀವನ ಇಷ್ಟೊಂದು ಸುಂದರವಾಗುತ್ತಿರಲಿಲ್ಲ. ಒಂದನ್ನು ಪಡೆಯಬೇಕಾದಾರೆ ಇನ್ನೊಂದನ್ನು ಕಳೆದುಕೊಳ್ಭಬೇಕಾಗುತ್ತವೆ. ಜೀವನವೆಂಬುದು ಸುಖ ದುಃಖಗಳ ಆಗರ.  "ಕಳೆದುಕೊಳ್ಳದೆ  ಪಡೆಯುವವರಿಲ್ಲ ಸಾರ್" ಎಂಬುದನ್ನು ವಿನ್ಸೆಂಟ್ ನ ಮೂಲಕ ಲೇಖಕರು ತಿಳಿಸುತ್ತಾರೆ. ಕೊಡುವವರು ಮತ್ತು ಸ್ವೀಕರಿಸುವವರ ಮನಸ್ಸು ಖುಷಿಯಾಗಿರಬೇಕು. ನಿಷ್ಕಲ್ಮಶವಾಗಿರಬೇಕು. ಕೊಡುವ ನಮಗೂ ಪಡೆವ ಅವರಿಗೂ ತೃಪ್ತಿ ಇರಬೇಕು. ಎಂಬುದನ್ನು, "ಕೊಡುವ ಧನ್ಯತೆ  ಪಡೆವವರ ಸಂತಸದಲ್ಲಿ ಸಾರ್" ಎಂದು ವಿನ್ಸಂಟ್ ಹೇಳುತ್ತಾನೆ. ಪಡೆದುಕೊಂಡವರು ಸಂತೋಷಗೊಂಡಾಗಲೇ ಕೊಟ್ಟವರಿಗೂ ಒಂದು ಧನ್ಯತಾ ಭಾವ. "ಕಾಫಿ ಉತ್ಸಾಹವನ್ನು ತುಂಬುವುದು ಮಾತ್ರವಲ್ಲ.
     ಒಮ್ಮೊಮ್ಮೆ ನಾಲಗೆಯನ್ನು ಸುಡುತ್ತದೆ ಸರ್"ಎಂದು ಕಾಫಿಯ ವಿಶಿಷ್ಟ ಗುಣಗಳನ್ನು ಹೇಳುತ್ತಾರೆ. ಕಾಫಿಯನ್ನು ನಿಧಾನವಾಗಿ, ಆಸ್ವಾದಿಸಿ ಸವಿಯಬೇಕು. ಆಗ ಮನಸ್ಸು ಹಗುರವಾಗುತ್ತದೆ. ಉತ್ಸಾಹಗೊಳ್ಳುತ್ತದೆ. ಅವಸರದಿಂದ ಕುಡಿದರೆ ನಾಲಗೆ ಸುಡುವಂತೆ ಯಾವುದೇ ಕೆಲಸಗಳನ್ನೂ ಅವಸರದಿಂದ ಮಾಡಬಾರದು. ಮಾಡಿದರೆ ಎಡವಟ್ಟಾಗುವುದೇ ಹೆಚ್ಚು. ಆದ್ದರಿಂದ ಯಾವುದೇ ಕೆಲಸವನ್ನು ಆಲೋಚಿಸಿ ಸರಿಯಾಗಿ ಮಾಡಬೇಕು.
" ಮತ್ತೆ ತೆರಳಿದರೆ ತೆಕ್ಕೆ ತೆರೆದಿರಬೇಕು ಸಾರ್" ಎಂದು ಸಂಬಂಧಗಳ ಬಗ್ಗೆ ಹೇಳುತ್ತಾರೆ. ಸಂಬಂಧಗಳು ನಿಂತಿರುವುದೇ ನಂಬಿಕೆ ಪ್ರೀತಿಯ ಮೇಲೆ. ನಂಬಿಕೆಯನ್ನು ಒಮ್ಮೆ ಕಳೆದುಕೊಂಡರೆ ಸಂಬಂಧಗಳಲ್ಲಿ ಬಿರುಕು ಮೂಡುತ್ತವೆ. ದೂರಾದ ಸಂಬಂಧಗಳು ಹತ್ತಿರವಾಗುವಾಗ ಅದನ್ನು ಸ್ವೀಕರಿಸುವ ಮನಸ್ಸು ನಮ್ಮಲ್ಲಿರಬೇಕು. ಬಿರುಕು ಬಿಟ್ಟ ಬಂಧಗಳು ಒಂದಲ್ಲಾ ಒಂದು ದಿನ ಕೂಡುವ ಗಳಿಗೆ ಬಂದಾಗ ಅದನ್ನು ಸ್ವೀಕರಿಸುವ ದೊಡ್ಡ ಗುಣವಿರಬೇಕು. ಲೇಖಕರು "ಮನುಷ್ಯ, ಪ್ರೀತಿ, ಮತ್ತು ಸಾವು ಎಂದಿಗೂ ನಿಗೂಢ" ಎನ್ನುತ್ತಾರೆ. ಅವುಗಳನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಸಂಬಂಧಗಳು ನೆಲೆ ನಿಂತಿರುವುದೇ ಈ ಪ್ರಿತಿ ವಿಶ್ವಾಸದ ಮೇಲೆ. "ಪ್ರೀತಿ ಎಂದರೆ, ಮುಷ್ಟಿ ತೆರೆದಾಗಲೂ ಚಿಟ್ಟೆ ಜೀವಂತ ಕುಳಿತಿರಬೇಕು" ಎನ್ನುತ್ತಾರೆ. ಜೀವನವೆಂದರೆ ನೋವು ನಲಿವು ತುಂಬಿರುವುದು ಸಹಜ. ನಮ್ಮ ಬದುಕಿನಲ್ಲಿ ಸುಂದರ ಕ್ಷಣಗಳನ್ನು ಬಂದಾಗ ಖುಷಿಯಿಂದಲೇ ಸವಿಯಬೇಕು. ಬೇಕು ಬೇಡಗಳ ತೊಳಲಾಟದಲ್ಲಿ ಬದುಕನ್ನು ಸವಿಯದಿರುವುದು ನಮಗೆಯೇ ನಷ್ಟ.  ನಮಗೆ ಇಷ್ಟವಾದೊಡನೆ ಕೆಲವೊಂದು ಬೇಕು ಅನಿಸುತ್ತವೆ. ಖರೀದಿಸುತ್ತೇವೆ. ಕೆಲವೊಂದು ಕಾರಣಗಳೇ ಇಲ್ಲದೆ ಕೆಲವೊಂದು ಇಷ್ಟವಾಗುತ್ತವೆ. ನಮಗೆ ಬೇಡಾಂತನಿಸಿದರೆ ಅವನ್ನು ಯಾವುದಾದರೊಂದು ನೆಪಕ್ಕೆ ದೂರವಿಡುವ ಪ್ರಯತ್ನ ಮಾಡುತ್ತೇವೆ.
"ಕವಿತೆಯನ್ನು ಮುಗಿಸುವುದು
ಪ್ರೇಮವನ್ನು ಪ್ರಾರಂಭಿಸುವುದು ಕಷ್ಟ" ಎನ್ನುವಲ್ಲಿ ಕವಿತೆ ಶುರು ಮಾಡಲು ಸುಲಭ. ಆದರೆ,ಮುಗಿಸುವುದು ಕಷ್ಟ. ಕೆಲವೊಮ್ಮೆ ಯಾರಾದರೂ ಅಥವಾ ಯಾವುದನ್ನಾದರೂ ಇಷ್ಟ ಪಡುವುದು ತುಂಬಾ ನಿಧಾನ. ನಿಧಾನವಾಗಿ ಹುಟ್ಟಿದ ಪ್ರೀತಿ ಶಾಶ್ವತವಾಗಿರುತ್ತದೆ.
      ಹೀಗೆ ಹೇಳಬೇಕಾದ ವಿಷಯಗಳನ್ನು  ನೇರವಾಗಿ ವಿನ್ಸೆಂಟ್ ನ ಮೂಲಕ ಲೇಖಕರು ಹೇಳುತ್ತಾರೆ. ಇಲ್ಲಿನ ಕವಿತೆಗಳು ಕಹಿ ಸತ್ಯಗಳನ್ನು ತೆರೆದಿಡುತ್ತವೆ. ಬದುಕನ್ನು ಪ್ರೀತಿಸಬೇಕು, ಖುಷಿಯಿಂದ ಇನ್ನಷ್ಟು ಸವಿಯಬೇಕೆಂದೆನಿಸುತ್ತದೆ. "ಭೂಮಿ ಒಂದೇ ಆದರೂ ಎಲ್ಲರ ಜಗತ್ತು ಬೇರೆ ಬೇರೆ ಅಲ್ಲವೇ ಸರ್ " ಎನ್ನುವಲ್ಲಿ ಜನರಲ್ಲಿ ಜೀವನ ಕ್ರಮಗಳಲ್ಲಿ ಸಂಸ್ಕೃತಿಯಲ್ಲಿ ಭಿನ್ನತೆಗಳಿರುವುದನ್ನು ತಿಳಿಸುತ್ತದೆ. ಸ್ನೇಹ, ಪ್ರೇಮ ಮತ್ತು ಬದುಕನ್ನು ಸೂಜಿ ದಾರಕ್ಕೆ ಹೋಲಿಸುತ್ತಾರೆ. ಅವು ಒಂದೆಡೆ ಚುಚ್ಚಿ ನೋಯಿಸಿದರೂ ಮತ್ತೊಂದೆಡೆ ಸಂಬಂಧಗಳನ್ನು ಬೆಸೆಯುತ್ತವೆ. ಬದುಕು ಎಲ್ಲವನ್ನು ಕೊಡುತ್ತವೆ. ಪಡೆದುಕೊಳ್ಳುವ ನಮಗೆ ಕೃತ???ತಾ ಭಾವವಿರಬೇಕು. ಇಲ್ಲದಿದ್ಧರೆ ಕೃತಘ್ನರಾಗಿ ಬಿಡುತ್ತೇವೆ.  ಹೀಗೆ.ತಮ್ಮ ಕವಿತೆಗಳಲ್ಲಿ ಜೀವನದ ಮೌಲ್ಯಗಳನ್ನು ಬಿಚ್ಚಿಡುತ್ತಾರೆ. ಸರಳ ಭಾಷಾ ಶೈಲಿ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ಪ್ರತಿಯೊಂದು ಕವಿತೆಯಲ್ಲೂ ಒಂದೊಂದು ಕಲಿಯುವ ಅಂಶಗಳಿವೆ. ಒಟ್ಟಾರೆಯಾಗಿ ಇಲ್ಲಿನ ಕವಿತೆಗಳು ಎಲ್ಲಿರಿಗೂ ಇಷ್ಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
                                                               ಲೇಖಕಿ: ಚೇತನಾ ಕುಂಬ್ಳೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries