ಏ. 10ರಿಂದ ಮತದಾನ ಜಾಗೃತಿ ಕನ್ನಡ ಬೀದಿ ನಾಟಕ
0
ಏಪ್ರಿಲ್ 07, 2019
ಕಾಸರಗೋಡು: ಮತದಾನ ಜಾಗೃತಿ ಉದ್ದೇಶದಿಂದ ಸ್ವೀಪ್ ಕಾರ್ಯಕ್ರಮಗಳ ಅಂಗವಾಗಿ ಏ.10,11,12 ರಂದು ಜಿಲ್ಲೆಯ ಕನ್ನಡ ಪ್ರದೇಶಗಳಾದ ಮಂಜೇಶ್ವರ, ಕಾಸರಗೋಡು ವಿಧಾನಸಭೆ ಕ್ಷೇತ್ರಗಳಲ್ಲಿ ಕನ್ನಡ ಬೀದಿ ನಾಟಕಗಳು ನಡೆಯಲಿವೆ.
"ನಮ್ಮ ಮತದಾನ ನಮ್ಮ ಹಕ್ಕು" ಎಂಬ ಹೆಸರಲ್ಲಿ ಸ್ವೀಪ್ ನೋಡೆಲ್ ಅಧಿಕಾರಿ ಮಹಮ್ಮದ್ ನೌಷಾದ್ ಅವರು ರಚಿಸಿರುವ ಈ ನಾಟಕದಲ್ಲಿ ಕನ್ನಡಿಗರಾದ 7 ಮಂದಿ ವಿದ್ಯಾರ್ಥಿಗಳು ಅಭಿನಯಿಸಲಿದ್ದಾರೆ. ಇವರೆಲ್ಲರೂ ಪ್ಲಸ್ ಟು, ಪದವಿ ವಿದ್ಯಾರ್ಥಿಗಳಾಗಿದ್ದಾರೆ. 20 ನಿಮಿಷಗಳ ಅವಧಿಯಲ್ಲಿ ಈ ನಾಟಕ ಇರುವುದು. ಯಕ್ಷಗಾನದ ಸಂಗೀತ ಹಿನ್ನೆಲೆಯೊಂದಿಗೆ ಪ್ರಸ್ತುತಗೊಳ್ಳಲಿರುವುದು ಈ ನಾಟಕದ ವಿಶೇಷತೆಗಳಲ್ಲಿ ಒಂದು. ಚುನಾವಣೆ ಜಾಗೃತಿ ನಿಟ್ಟಿನಲ್ಲಿ ಪ್ರಸಿದ್ಧ ಹಿನ್ನೆಲೆ ಗಾಯಕಿ ಕೆ.ಎಸ್.ಚಿತ್ರಾ ಅವರು ಹಾಡಿರುವ ಹಾಡಿನೊಂದಿಗೆ ಈ ನಾಟಕ ಆರಂಭಗೊಳ್ಳಲಿರುವುದೂ ಮತ್ತೊಂದು ವಿಶೇಷತೆಯಾಗಿದೆ.
ಜಿಲ್ಲಾಧಿಕಾರಿ ಕಚೇರಿ, ಪೆರ್ಲ, ಬದಿಯಡ್ಕ, ಕುಂಬಳೆ, ಕೈಕಂಬ, ಹೊಸಂಗಡಿ ಸಹಿತ 8 ಕೇಂದ್ರಗಳಲ್ಲಿ ಈ ನಾಟಕದ ಪ್ರಸ್ತುತಿ ನಡೆಯಲಿದೆ. ಏ.8ರಂದು ಮಧ್ಯಾಹ್ನ 1 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂದಿನ ಕಾರ್ಗಿಲ್ ಸ್ಮಾರಕ ಬಳಿ ನಾಟಕ ನಡೆಯಲಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟನೆ ನಡೆಸುವರು.