ಲೋಕಸಭಾ ಚುನಾವಣೆಯ ಇತಿಹಾಸ ಹಾಗೂ ನಡೆದು ಬಂದ ಹಾದಿ!!-
(ಮುಂದುವರಿದ ಭಾಗ)
ಪ್ರತ್ಯಕ್ಷ ಹಾಗೂ ಪರೋಕ್ಷ ಚುನಾವಣೆ : ಭಾರತದಲ್ಲಿ ಲೋಕಸಭೆ, ವಿಧಾನಸಭೆಗಳಿಗೆ ಮತದಾರರಿಂದ ನೇರವಾಗಿ ಸದಸ್ಯರ ಚುನಾವಣೆ ಆಗುತ್ತದೆ. ಇತರ ಅನೇಕ ದೇಶಗಳಲ್ಲಿ ಇದೇ ಪದ್ಧತಿ ಉಂಟು. ಪರೋಕ್ಷ ಚುನಾವಣೆಯಲ್ಲಿ ನಿಶ್ಚಿತ ಸಂಖ್ಯೆಯ ಮತದಾರರಿಂದ ಮತ ಪಡೆದು ಆಯ್ಕೆಯಾದವರನ್ನೊಳಗೊಂಡ ಪ್ರತಿನಿಧಿಗಳದೇ ಒಂದು ಮತಕ್ಷೇತ್ರ ರಚಿತವಾಗುತ್ತದೆ. ಅಲ್ಲಿಂದ ಅವರು ಪ್ರತಿನಿಧಿಗಳನ್ನು ಆರಿಸುತ್ತಾರೆ. ಕೊನೆಗೆ ಪ್ರತಿನಿಧಿಯಾಗಿ ಅಧಿಕಾರ ಪಡೆದು ನಿಲ್ಲುವಾತ ಮತದಾರರ ಪ್ರತಿನಿಧಿಗಳ ಮತಗಳಿಂದ ಆಯ್ಕೆ ಹೊಂದುತ್ತಾನೆ. ಇದು ಪರೋಕ್ಷ ಚುನಾವಣೆ. ಪ್ರತ್ಯಕ್ಷ ಚುನಾವಣೆಯಲ್ಲಿ ಸರ್ಕಾರದ ಮೇಲೆ ಮತದಾರನ ನೇರ ಹತೋಟಿ ಇರುವುದು ಸಾಧ್ಯ. ಅಲ್ಲದೆ ಮತದಾರರ ಸಂಖ್ಯೆ ಹಾಗೂ ಕ್ಷೇತ್ರ ಸಂಕುಚಿತವಾದಷ್ಟೂ ಲಂಚ, ಅಲ್ಪವಾಗಿರುವುದೇ ಎಲ್ಲ ದುರ್ನಡತೆಗಳಿಗೆ ಕಾರಣವಾಗಿದೆಯೆಂದು ಪಂಚಾಯಿತಿ ರಾಜ್ಯ ಚುನಾವಣೆಗಳನ್ನು ಕುರಿತು ವರದಿ ಮಾಡಲು ನೇಮಕವಾದ ಸಂತಾನಂ ಸಮಿತಿ (1964) ವರದಿ ನೀಡಿದೆ.
ಆದರೂ ಭಾರತದಲ್ಲಿ ಪರೋಕ್ಷ ಚುನಾವಣೆಗಳ ಪ್ರತಿಪಾದಕರೂ ಇದ್ದಾರೆ. ಭಾರತದಲ್ಲಿ ಪಂಚಾಯಿತಿಯಿಂದಾರಂಭಿಸಿ ವಿಧಾನ ಮಂಡಲದವರೆಗೆ ಐದು ಹಂತಗಳಲ್ಲಿ ಸರ್ಕಾರವಿದೆ. ಒಂದು ಸಂಸ್ಥೆಯ ಪ್ರತಿನಿಧಿಗಳು ತಮ್ಮ ಮೇಲಿನ ಹಂತದ ಸಂಸ್ಥೆಗೆ ಪ್ರತಿನಿಧಿಗಳನ್ನು ಆರಿಸುವಂತೆ ಮಾಡಿ ಅವುಗಳಲ್ಲಿ ಪರಸ್ಪರ ಸಂಬಂಧ ಕಲ್ಪಿಸಬೇಕೆಂದು ವಾದಿಸಲಾಗಿದೆ. ಮತದಾರರು ಗ್ರಾಮ ಪಂಚಾಯಿತಿಯನ್ನು, ಪಂಚಾಯಿತಿ ಸದಸ್ಯರು ಪಂಚಾಯಿತಿ ಸಮಿತಿಯ ಸದಸ್ಯರನ್ನು (ತಾಲ್ಲೂಕು ಅಭಿವೃದ್ಧಿ ಮಂಡಲ), ಆ ಸಮಿತಿಯ ಸದಸ್ಯರು ಜಿಲ್ಲಾ ಪರಿಷತ್ತಿನ ಸದಸ್ಯರನ್ನು, ಪರಿಷತ್ ಸದಸ್ಯರು ವಿಧಾನಸಭಾ ಸದಸ್ಯರನ್ನು, ಅವರು ಸರ್ಕಾರದ ಮಂತ್ರಿಮಂಡಲವನ್ನು-ಹೀಗೆ ಆಯ್ಕೆಮಾಡುತ್ತ ಹೋಗಬೇಕೆಂಬುದು ಇವರ ಮತ.
ಮತದಾರನಿಗಿಂತ ಚುನಾಯಿತ ಸದಸ್ಯ ಹೆಚ್ಚು ಬುದ್ಧಿವಂತನಿರುತ್ತಾನೆ ಮತ್ತು ವಿವಿಧ ಹಂತಗಳ ಸಂಸ್ಥೆಗಳಲ್ಲಿ ಪರಸ್ಪರ ಸಂಬಂಧ ಉಳಿದು ಬರುತ್ತದೆ-ಎಂಬುದು ಈ ವ್ಯವಸ್ಥೆಯ ಪ್ರತಿಪಾದಕರು ನೀಡುವ ಕಾರಣ. ಇದು ಸಂದಿಗ್ಧವಾದ ವಿಚಾರ. ಈ ಪದ್ಧತಿಯಿಂದ ಮತದಾರನ ಸ್ವಾತಂತ್ರ್ಯ ಸೀಮಿತವಾಗುತ್ತದೆ. ಚುನಾವಣೆಯ ಅಧಿಕಾರ ಕ್ರಮೇಣ ಕೆಲಕೆಲವೇ ಜನರಲ್ಲಿ ಕೇಂದ್ರಿಕೃತವಾಗುತ್ತ ಹೋಗಿ, ಅದು ದುವ್ರ್ಯಹಾರಕ್ಕೆ ಹೆಚ್ಚು ಆಸ್ಪದ ನೀಡುತ್ತದೆ. ಆಡಳಿತದ ವಿವಿಧ ಹಂತಗಳ ಸಂಬಂಧಗಳ ಬಿಗಿ ಹೆಚ್ಚಿದಂತೆ ಮೇಲಣ ಹಂತದ ರಾಜಕೀಯ ಕೆಳಗಿನ ಹಂತಕ್ಕೂ ಹಬ್ಬುತ್ತದೆ. ಆದ್ದರಿಂದ ಪ್ರಜಾಪ್ರಭುತ್ವವೂ ಪರೋಕ್ಷ ಚುನಾವಣೆಯೂ ಜೊತೆಜೊತೆಯಾಗಿ ಹೋಗಲಾರವು ಎಂಬುದು ಪರೋಕ್ಷ ಚುನಾವಣೆಯ ವಿರೋಧಿಗಳ ವಾದ. ಉಮೇದುವಾರ ಮತ್ತು ರಾಜಕೀಯ ಪಕ್ಷಗಳು
ಚುನಾವಣೆಯಲ್ಲಿ ಭಾಗವಹಿಸುವವರು ಇಬ್ಬರು; ಮತದಾರ ಮತ್ತು ಉಮೇದುವಾರ. ಒಂದು ಸ್ಥಾನಕ್ಕೆ ಒಬ್ಬನೇ ಉಮೇದುವಾರನಿದ್ದರೆ ಚುನಾವಣೆ ಅಗತ್ಯವಿಲ್ಲ. ಒಂದು ಸ್ಥಾನಕ್ಕೆ ಚುನಾವಣೆ ನಡೆಯಬೇಕಾದರೆ ಕನಿಷ್ಠ ಇಬ್ಬರು ಉಮೇದುವಾರರಿರಬೇಕು. ಚುನಾವಣೆಯಲ್ಲಿ ಉಮೇದುವಾರನಾಗಿ ನಿಲ್ಲುವವನಿಗೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕೆಂಬುದು ಆದರ್ಶ. ಅರ್ಹತೆ : ಭಾರತದಲ್ಲಿ ಮತದಾರನಿಗೆ ಅರ್ಹತಾ ವಯಸ್ಸು 21 ವರ್ಷಗಳಾದರೆ ಲೋಕಸಭೆ, ವಿಧಾನಸಭೆಗಳ ಪ್ರತಿನಿಧಿಯಾಗಬಯಸುವ ಉಮೇದುವಾರನಿಗೆ 25 ವರ್ಷಗಳಿರಬೇಕೆಂಬುದು ಸಂವಿಧಾನದ ವಿಧಿ. ಮತದಾರನಿಗಿಂತ ಅಭ್ಯರ್ಥಿ ತಿಳಿವಳಿಕೆಯಲ್ಲಿ ಹೆಚ್ಚು ಸಮರ್ಥನಾಗಿರಬೇಕೆಂಬುದು ಇದರ ಹಿಂದಿನ ಆಶಯ. 1951ರ ಜನತಾ ಪ್ರಾತಿನಿಧ್ಯ ಅಧಿನಿಯಮದ (ರೆಪ್ರೆಸೆಂಟೇಷನ್ ಆಫ್ ಪೀಪಲ್ಸ್ ಆಕ್ಟ್) ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆದಾಗ ವಯಸ್ಸಿನೊಂದಿಗೆ ಶಿಕ್ಷಣವೇ ಮುಂತಾದ ಅರ್ಹತೆಗಳನ್ನೂ ವಿಧಿಸುವ ಬಗ್ಗೆ ಚರ್ಚೆಯಾಯಿತು. ಆದರೆ ಸಮರ್ಪಕವಾದ ಅರ್ಹತಾ ಸೂತ್ರ ಕಂಡುಹಿಡಿಯುವುದು ಅಸಾಧ್ಯವೆಂದು ತೋರಿ, ರಾಜಕೀಯ ಪಕ್ಷಗಳೇ ತಮ್ಮ ಉಮೇದುವಾರರನ್ನು ಆರಿಸುವಾಗ ಆ ಬಗ್ಗೆ ಗಮನ ಕೊಡಬೇಕೆಂದು ಆ ವಿಚಾರ ಕೈಬಿಡಲಾಯಿತು. ಒಟ್ಟಿನಲ್ಲಿ ಅಧಿನಿಯಮವಿಲ್ಲದೆಯೇ ಈ ಕರಾರು ಪೂರ್ತಿಯಾದಂತಾಗಿದೆ. 1952ರಲ್ಲಿ ಚುನಾಯಿತರಾದ 499 ಮಂದಿ ಲೋಕಸಭಾ ಸದಸ್ಯರಲ್ಲಿ 301 ಜನ ಪದವೀಧರರು, 66 ಜನ ಇಂಟರ್ಮೀಡಿಯೆಟ್ ಓದಿದವರು, 60 ಜನ ಪ್ರೌಢಶಾಲೆ ತಲುಪಿದವರು. 7 ಜನ ಮಾಧ್ಯಮಿಕ ಶಾಲೆಯವರೆಗೆ ಬಂದವರು ಇದ್ದರು. ಉಳಿದವರಲ್ಲಿ 24 ಜನ ಬೇರೆ ಬಗೆಯ ಶಿಕ್ಷಣ ಪಡೆದವರಿದ್ದರು. 127 ಜನ ವಕೀಲರು, 38 ಜನ ಪತ್ರಕರ್ತರು, 34 ಜನ ಶಿಕ್ಷಣತ???ರು, 34 ಜನ ಇತರ ವೃತ್ತಿನಿರತರು, 70 ಜನ ವ್ಯಾಪಾರಿಗಳು, 122 ಜನ ಭೂಮಿಗೆ ಸಂಬಂಧಿಸಿದವರು. ಬೇರಾವ ದೇಶದಲ್ಲೂ ಈ ಬಗೆಯ ಅರ್ಹತೆಯನ್ನು ಕುರಿತ ಪ್ರತ್ಯೇಕ ಅಧಿನಿಯಮಗಳಿಲ್ಲ. ಉಮೇದುವಾರ ನಿಲ್ಲುವ ಕ್ಷೇತ್ರದಲ್ಲಿ ಅವನು ಮತದಾರನಾಗಿರಬೇಕೆಂಬ ನಿಬರ್ಂಧ ಕೆಲವು ದೇಶಗಳಲ್ಲಿವೆ. ಭಾರತದಲ್ಲಿ ಈ ನಿಬರ್ಂಧವೂ ಇಲ್ಲ. ಇತರ ದೃಷ್ಟಿಗಳಿಂದ ಅರ್ಹತೆಯುಳ್ಳ ನಾಗರಿಕ ಯಾವ ಕ್ಷೇತ್ರದಲ್ಲಾದರೂ ಚುನಾವಣೆಗೆ ಸ್ಪರ್ಧಿಸಬಹುದು.
ಇನ್ನೊಂದು ನಿಬಂಧನೆ ಠೇವಣಿಯನ್ನು ಕುರಿತದ್ದು. ಲೋಕಸಭೆ ವಿಧಾನಸಭೆಗಳಿಗೆ ಉಮೇದುವಾರರು ಠೇವಣಿಯನ್ನು ನಾಮನಿರ್ದೇಶ ಪತ್ರದೊಂದಿಗೆ ಕೊಡಬೇಕಾಗುತ್ತದೆ. ಠೇವಣಿಯ ಮೊಬಲಗನ್ನು ಆಗಿಂದಾಗ್ಗೆ ಹೆಚ್ಚಿಸಲಾಗುತ್ತದೆ. ಅನುಸೂಚಿತ ವರ್ಗದ ಉಮೇದುವಾರರಿಗೆ ರಿಯಾಯಿತಿ ನೀಡಲಾಗಿದೆ. ಬೇರೆ ಬೇರೆ ಸಂಸ್ಥೆಗಳ ಚುನಾವಣೆಗಳಿಗೆ ಠೇವಣಿಯ ಮೊತ್ತ ಬೇರೆಬೇರೆ. ಉಮೇದುವಾರರು ಹೊಣೆಗೇಡಿಗಳಾಗದಂತೆ ತಡೆಯಲು ಠೇವಣಿ ಅಗತ್ಯವೆಂದು ವಾದಿಸಲಾಗಿದೆ. ಒಂದು ಕ್ಷೇತ್ರದಿಂದ ಚಲಾಯಿಸಲಾದ ಒಟ್ಟು ಮತಗಳ 1/8ಕ್ಕಿಂತ ಕಡಿಮೆ ಮತ ಗಳಿಸಿದ ಉಮೇದುವಾರನ ಠೇವಣಿ ಹಣ ಸರ್ಕಾರಕ್ಕೆ ಮುಟ್ಟುಗೋಲಾಗುತ್ತದೆ. ಯೋಗ್ಯ ಹಾಗೂ ಬಡವನಾದ ಉಮೇದುವಾರನ ಹಿತದೃಷ್ಟಿಯಿಂದ ಠೇವಣಿಯ ಮೊಬಲಗಿಗೆ ಸಂಬಂಧಿಸಿದಂತೆ ಮತ್ತು ಅದನ್ನು ಮರಳಿಸುವ ಬಗ್ಗೆ ನಿಯಮಗಳನ್ನು ಸಡಿಲಗೊಳಿಸಬೇಕೆಂದು ಅನೇಕ ಸೂಚನೆಗಳು ಬರುತ್ತಿವೆ. ಉಮೇದುವಾರರ ಅನರ್ಹತೆಗಳು : ಭಾರತದ ಮತ್ತು ಇತರ ಕಾಮನ್ ವೆಲ್ತ್ ರಾಷ್ಟ್ರಗಳ ಚುನಾವಣಾ ಅಧಿನಿಯಮಗಳ ಪ್ರಕಾರ, ಆಯಾ ದೇಶಗಳ ನಾಗರಿಕರಲ್ಲದವರು, ಮತಿವಿಕಲರು, ದಿವಾಳಿಗಳು, ಸರ್ಕಾರಿ ಸ್ಥಾನದಲ್ಲಿರುವವರು, ಸರ್ಕಾರದಿಂದ ಕಾಂಟ್ರಾಕ್ಟ್ ಪಡೆದವರು-ಇವರು ವಿಧಾನ ಹಾಗೂ ಲೋಕಸಭೆಗಳ ಸದಸ್ಯರಾಗಲು ಅನರ್ಹರು. ಆದ್ದರಿಂದ ಇಂಥವರು ಉಮೇದುವಾರರಾಗಿ ಸ್ಪರ್ಧಿಸಲಾರರು. ಈ ಅನರ್ಹತೆಗಳ ಬಗ್ಗೆ ಭಿನ್ನಾಭಿಪ್ರಾಯಗಳೇ ಇಲ್ಲ. ಆಫ್ರಿಕದ ಅನೇಕ ದೇಶಗಳಲ್ಲಿ ಬಹುತೇಕ ಸುಶಿಕ್ಷಿತರೆಲ್ಲ ಸರ್ಕಾರಿ ಕೆಲಸಗಳಲ್ಲಿರುವ ಕಾರಣ ಇಂಥ ನಿಬರ್ಂಧದಿಂದಾಗಿ ಅನಕ್ಷರಸ್ಥರಿಗೇ ಸರ್ಕಾರದಲ್ಲಿ ಅವಕಾಶ ಉಂಟಾಗಿದೆ. ಈ ಪರಿಸ್ಥಿತಿಯನ್ನು ನಿವಾರಿಸಲು ಪ್ರಯತ್ನ ನಡೆದಿದೆ. ಯೂರೋಪಿನ ಕೆಲವು ದೇಶಗಳಲ್ಲಿ ಲೋಕಸೇವಾ ಅಧಿಕಾರಿಗಳಿಗೂ ವಿಧಾನಸಭೆಗಳ ಸದಸ್ಯರಾಗಲು ಕೆಲವು ಷರತ್ತುಗಳ ಮೇಲೆ ಅವಕಾಶ ನೀಡಲಾಗಿದೆ. ಆದರೆ ವಿಧಾನ ಸಭಾಸದಸ್ಯನಾದ ಅಧಿಕಾರಿ ಸರ್ಕಾರವನ್ನು ಟೀಕಿಸುವ, ಯಾವುದಾದರೊಂದು ಪಕ್ಷಕ್ಕೆ ಹೊಂದಿಕೊಂಡು ಕೆಲಸ ಮಾಡುವ ಸಂದರ್ಭ ಬರುವುದರಿಂದ, ಆತನ ಸದಸ್ಯತ್ವದ ಅವಧಿ ಮುಗಿದ ಮೇಲೆ ಸರ್ಕಾರಿ ಕೆಲಸಕ್ಕೆ ಅವನು ಮರಳಿದಾಗ ಮಂತ್ರಿಗಳಿಗೆ ವಿಶ್ವಾಸ ಮೂಡುವುದು ಕಷ್ಟವಾಗುವುದೆಂಬುದು ಒಂದು ವಾದ. ಆದ್ದರಿಂದಲೆ ಇವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇಲ್ಲದಿರುವುದು ಆರೋಗ್ಯಕರವಾದ ಸ್ಥಿತಿಯೆಂದು ಭಾವಿಸಲಾಗಿದೆ. ಆದರೆ ಸರ್ಕಾರದ ಕಾರ್ಯ ವ್ಯಾಪಕವಾದಂತೆ ಸರ್ಕಾರಿ ನೌಕರರ ಸಂಖ್ಯೆ ಕೋಟಿಗಟ್ಟಲೆ ಆದಾಗ ವಿದ್ಯಾವಂತ ಪ್ರೌಢರ ಇಷ್ಟು ದೊಡ್ಡ ಭಾಗವನ್ನು ರಾಜಕೀಯ ಹಕ್ಕುಗಳಿಂದ ವಂಚಿತರನ್ನಾಗಿ ಇಡುವುದು ಸಾಧುವಾದ್ದೆ? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಇದಕ್ಕೆ ಭವಿಷ್ಯವೇ ಉತ್ತರಿಸಬೇಕು. ಸಾಮಾನ್ಯವಾಗಿ ಹೇಳುವುದಾದರೆ, ಇಂದು ಚುನಾವಣೆಯಲ್ಲಿ ಉಮೇದುವಾರನಾಗುವ ನಾಗರಿಕನ ಮೇಲೆ ಹೆಚ್ಚು ಸ್ವಾತಂತ್ರ್ಯವಿದೆಯೆಂದು ಹೇಳಲಾಗಿದೆ. ಆದರೆ ಈ ಸ್ವಾತಂತ್ರ್ಯ ವಾಸ್ತವವಾಗಿ ಎಷ್ಟರಮಟ್ಟಿಗೆ ಲಭಿಸಿದೆ? ಇಂದಿನ ಚುನಾವಣಾ ಕ್ಷೇತ್ರಗಳ ವ್ಯಾಪ್ತಿ, ಚುನಾವಣೆಗೆ ತಗಲುವ ವೆಚ್ಚ ಇವನ್ನು ನೋಡಿದರೆ ಕಾನೂನಿನಿಂದ ಲಭ್ಯವಾದ ಸ್ವಾತಂತ್ರ್ಯ, ನೂರಾರು ಜನ ಕಾರ್ಯಕರ್ತರನ್ನು ಲಕ್ಷಾನುಗಟ್ಟಲೆ ಹಣದ ವೆಚ್ಚದಲ್ಲಿ ಸಂಘಟಿಸಬಲ್ಲ ಶ್ರೀಮಂತನಿಗೆ ಮಾತ್ರ ಸಿಗುವಂತಿದೆ. ಲೋಕಸತ್ತೆಯ ಹಿತಕ್ಕಾಗಿ ಈ ಸ್ಥಿತಿ ಬದಲಾಗಬೇಕೆಂದು ವಾದಿಸಲಾಗಿದೆ. ಚುನಾವಣೆಯ ಖರ್ಚುಗಳ ಅಧಿನಿಯಮದ ಪ್ರಕಾರ ಲೋಕಸಭೆಗೆ ರೂ. 25,000, ವಿಧಾನಸಭೆಗೆ ರೂ. 7,000 ವರೆಗೆ ಖರ್ಚುಮಾಡಬಹುದೆಂದು ಮೊದಲು ನಿಗಧಿಯಾಗಿದ್ದರೂ ಆ ಗರಿಷ್ಠ ಮಿತಿಗಳು ಏರುತ್ತಾ ಹೋಗಿ, ಸಾಮಾನ್ಯ ಉಮೇದುವಾರ ಸಾಮಥ್ರ್ಯವನ್ನು ಮೀರಿ, ಅವನನ್ನು ಒಂದು ರೀತಿಯಲ್ಲಿ ಸ್ಪರ್ಧೆಗೆ ಅನರ್ಹನನ್ನಾಗಿ ಮಾಡಿವೆ. ಕಾನೂನುಬದ್ಧ ಖರ್ಚುಗಳೇ ಇಷ್ಟು ಹೆಚ್ಚಿದಾಗ, ಚುನಾವಣಾ ಕ್ಷೇತ್ರದಲ್ಲಿ ಮತದಾರರನನ್ನು ಸಂತೋಷವಾಗಿಡಲು, ಅವರ ಸ್ಥಾನಿಕ ಮುಂದಾಳುಗಳನ್ನು ಸಂತೃಪ್ತಿಯಿಂದ ಇಡಲು ಮಾಡಬೇಕಾದ ಖರ್ಚುಗಳು ಸರ್ಕಾರದ ಗಮನಕ್ಕೆ ಬರುವುದಿಲ್ಲ. ಹಣವಂತರು ಇದಕ್ಕೆಲ್ಲ ಸಾಕಷ್ಟು ಖರ್ಚುಮಾಡಬಲ್ಲರು. ಕಾನೂನಿಗೆ ಅನುಗುಣವಾದ ಖರ್ಚಿನ ಪರಿಮಿತ ಸಹ ಧನವಂತ ಹಾಗೂ ಧನಹೀನರ ನಡುವಣ ಅಂತರವನ್ನು ಕಡಿಮೆ ಮಾಡುವಲ್ಲಿ ಸಫಲವಾಗಿಲ್ಲವೆನ್ನಬಹುದು. ಚುನಾವಣೆಯ ಎಲ್ಲ ಖರ್ಚುಗಳನ್ನೂ ಸರ್ಕಾರವೇ ವಹಿಸಬೇಕೆಂಬ ಸಲಹೆಗಳು ಬಂದಿವೆ. ಆದರೆ ಇದು ರಾಜಕೀಯ ಮತ್ತು ಆಡಳಿತ ಕಾರಣಗಳಿಂದಾಗಿ ಗ್ರಾಹ್ಯವಾಗಿಲ್ಲ. ಈ ಸಂಬಂಧವಾಗಿ ಯೋಚಿಸುವಾಗ ರಾಜಕೀಯ ಪಕ್ಷಗಳ ಪತ್ರವನ್ನೂ ಪರಿಗಣಿಸಬೇಕಾಗುತ್ತದೆ. ಈ ಪಕ್ಷಗಳು ದುರ್ಬಲರಾದ ಆದರೆ ಅರ್ಹರಾದ ಉಮೇದುವಾರರ ಬೆಂಬಲಕ್ಕೆ ನಿಂತು ಧನಸಹಾಯ, ಜನಸಹಾಯ ಮಾಡಿ ಚುನಾವಣೆಯಲ್ಲಿ ಅವರನ್ನು ದಾಟಿಸಲು ಸಮರ್ಥವಾಗಬಹುದು. ರಾಜಕೀಯ ಪಕ್ಷಗಳ ಪಾತ್ರ : ಪ್ರಜಾಸತ್ತಾತ್ಮಕ ಸಂವಿಧಾನಗಳಲ್ಲಿ ಸಂಘ ಸ್ವಾತಂತ್ರ್ಯವೂ ಒಂದು ಮೂಲಭೂತ ಹಕ್ಕು. ಕ್ರಿಯಾಶೀಲರೂ, ಚಟುವಟಿಕೆಯವರೂ ಆದ ನಾಗರಿಕರು ಪ್ರತಿಯೊಂದು ಪ್ರಜಾಸತ್ತಾತ್ಮಕ ದೇಶದಲ್ಲಿ ಈ ಸ್ವಾತಂತ್ರ್ಯವನ್ನು ಬಳಸಿಕೊಂಡು ರಾಜಕೀಯ ಪಕ್ಷಗಳನ್ನು ಕಟ್ಟಿಕೊಂಡಿದ್ದಾರೆ. ಪಕ್ಷ ಎಂಬ ಶಬ್ದಕ್ಕೆ ಅನೇಕ ಅರ್ಥಗಳನ್ನು ಹೇಳಬಹುದಾದರೂ, ಸರ್ಕಾರದ ಮೇಲೆ ನಿಯಂತ್ರಣ ಸಾಧಸಬೇಕೆನ್ನುವ ಮುಖಂಡರ ಸಂಸ್ಥೆಯೇ ಪಕ್ಷವೆಂಬುದು ಪ್ರಕೃತಕ್ಕೆ ಒಪ್ಪುವ ವ್ಯಾಖ್ಯೆ. ಮತದಾರರಿಗೆ ಮುಖಂಡರ ಒಂದು ಗುಂಪಿನಿಂದ ಬೇಸರ ಬಂದರೆ ಇನ್ನೊಂದು ಗುಂಪನ್ನು ಅಧಿಕಾರದಲ್ಲಿ ತರುವುದು ಈ ರಾಜಕೀಯ ಪಕ್ಷಗಳಿರುವುದರಿಂದ ಸಾಧ್ಯವಾಗುತ್ತದೆ. ಈ ಪಕ್ಷಗಳಿಂದಾಗುವ ಇನ್ನೊಂದು ಲಾಭವೆಂದರೆ, ಬಡವರೂ ಬುದ್ಧಿವಂತರೂ ಸದ್ಗುಣಿಗಳೂ ಸಮರ್ಥರೂ ಆದ ಜನರು ಅಗಾಧ ಹಣ ಖರ್ಚುಮಾಡಿ ಚುನಾವಣೆಯಲ್ಲಿ ಶ್ರೀಮಂತರೊಂದಿಗೆ ಸ್ಪರ್ಧಿಸುವುದು ಅಸಾಧ್ಯವಾದಾಗ, ಪಕ್ಷಗಳು ಅಂಥ ಯೋಗ್ಯರನ್ನು ತನ್ನ ಉಮೇದುವಾರರೆಂದು ಆರಿಸಿ, ಧನ ಜನ ಬೆಂಬಲದಿಂದ ವಿಧಾನಸಭೆ ಸಂಸತ್ತುಗಳಿಗೆ ಆರಿಸಿ ತರಬಹುದು. ಬಂಡವಾಳ ವ್ಯವಸ್ಥೆ ಮತ್ತು ಅಸಮಾನ ಸಂಪತ್ತಿನ ಹಂಚಿಕೆ ಇರುವಾಗಲೂ ಅನೇಕ ದೇಶಗಳಲ್ಲಿ ಶ್ರಮಿಕವರ್ಗದ ಪ್ರತಿನಿಧಿಗಳು ವಿಧಾನಸಭೆಗಳಿಗೆ ಆರಿಸಿ ಬಂದು ಸರ್ಕಾರ ರಚಿಸುವ ಸಾಮಥ್ರ್ಯ ಸಂಪಾದಿಸಿದ್ದು ಇಂಥ ರಾಜಕೀಯ ಪಕ್ಷಗಳ ಉದಯ, ಪ್ರಚಾರ ಹಾಗೂ ಬೆಂಬಲದಿಂದ ಸಾಧ್ಯವಾಗಿದೆ. ಇಂದಿನ ವಿಶಾಲವಾದ ಪ್ರಜಾಸತ್ತಾತ್ಮಕ ದೇಶಗಳಲ್ಲಿ ಚುನಾವಣೆಗಳಲ್ಲಿ ಪ್ರಧಾನವಾದ ಅಂಶವೆಂದರೆ ಮತದಾರರ ಅ????ನ ಹಾಗೂ ಅನಾಸಕ್ತಿ ಎಂಬುದು ಅನೇಕ ಅಧ್ಯಯನಶೀಲರಿಗೆ ಕಂಡುಬಂದಿದೆ. ಅನೇಕ ಬುದ್ಧಿಜೀವಿಗಳಿಗೂ ಚುನಾವಣೆ ಒಂದು ತಮಾಷೆಯಂತೆ ಹಗುರಾಗಿ ಕಾಣುತ್ತದೆ. ಇಂಥ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಚುರುಕಿನ ಪ್ರಚಾರವೇ ಮತದಾರರಲ್ಲಿ ತಮ್ಮ ಹೊಣೆಗಾರಿಕೆಯ ಕಲ್ಪನೆಯನ್ನು ಜಾಗೃತಗೊಳಿಸಿ ಹೆಚ್ಚು ಹೆಚ್ಚು ಭಾಗವಹಿಸುವಂತೆ ಪ್ರೇರೇಪಿಸಿದೆ. ಪಂಚಾಯಿತಿ ಚುನಾವಣೆಗಳಲ್ಲಿ ಮತದಾರರಿಗೆ ಉಮೇದುವಾರನ ನೇರ ಪರಿಚಯವಿರುತ್ತದೆ. ಆದರೆ ವಿಧಾನಸಭೆ ಹಾಗೂ ಲೋಕಸಭೆಗಳ ಚುನಾವಣೆಗಳಲ್ಲಿ ಉಮೇದುವಾರನ ಬಗ್ಗೆ ಯೋಗ್ಯ ಕಲ್ಪನೆಯನ್ನು ಮತದಾರರ ಮನಸ್ಸಿನಲ್ಲಿ ಉಂಟುಮಾಡುವುದು ಎಲ್ಲರ ದೃಷ್ಟಿಯಿಂದಲೂ ಅಗತ್ಯವಾಗುತ್ತದೆ. ಏಕೆಂದರೆ ಮತದಾರರಿಗೆ ಅವರ ಪ್ರತ್ಯಕ್ಷ ಪರಿಚಯವಿರುವುದು ವಿರಳ. ಈ ಕೆಲಸವನ್ನು ಪಕ್ಷಗಳು ಪ್ರಚಾರದ ಮೂಲಕ ಮಾಡುತ್ತವೆ. ಜನಾಭಿಪ್ರಾಯವನ್ನು ರೂಪಿಸುತ್ತವೆ. ವಿರೋಧಪಕ್ಷ, ಆಳುವಪಕ್ಷ-ಇವೆರಡರ ರಚನೆಗೂ ಇದು ಅಗತ್ಯ. ಪ್ರಜಾರಾಜ್ಯದಲ್ಲಿ ಪಕ್ಷಗಳು ಕೇವಲ ಚುನಾವಣೆಗಾಗಿ ಮಾತ್ರ ಇರುವುದಿಲ್ಲ. ಅವು ರಾಜ್ಯ, ರಾಷ್ಟ್ರಗಳಂತೆ ನಿರಂತರ ಉಳಿಯುವುವು. ಏಕೆಂದರೆ ಸಾರ್ವತ್ರಿಕ ಚುನಾವಣೆಗಳ ನಡುವೆ ಅನೇಕ ಕಾರಣಗಳಿಗಾಗಿ ತೆರವಾದ ಸ್ಥಳಗಳಿಗಾಗಿಯೂ ವಿವಿಧ ಹಂತದ ಸಂಸ್ಥೆಗಳಿಗಾಗಿಯೂ ಚುನಾವಣೆ ಉಪಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಚುನಾವಣೆಗಳು ಬೇರೆಬೇರೆಯಾದರೂ ಮತದಾರರು ಅವರೇ ಆದ ಕಾರಣ, ಪರಸ್ಪರ ವಿರುದ್ಧವಾದ ವಿಚಾರಗಳ ನಡುವೆ ಒಂದು ಅಭಿಪ್ರಾಯ ರೂಪಿಸುವ ಹಾಗೂ ಮತದಾರರ ಮೆಚ್ಚಿಕೆ ಕಾಪಾಡಿಕೊಳ್ಳುವ ಕೆಲಸ ನಿರಂತರ ಇದ್ದೇ ಇರುತ್ತದೆ. ಹೀಗೆ ಲೋಕಸತ್ತೆಯ ಚಲನಶೀಲತೆಗೆ ರಾಜಕೀಯ ಪಕ್ಷಗಳು ಒಂದು ಬಗೆಯ ಶಕ್ತಿಮೂಲವಿದ್ದಂತೆ, ಭಾರತದಲ್ಲಿ ಪಕ್ಷರಹಿತ ಪ್ರಜಾಪ್ರಭುತ್ವ ಬೇಕೆನ್ನುವವರೂ ಇದ್ದಾರೆ. ಆದರೆ ಮತದಾರರಿಗೆ ಪ್ರಚಾರದ ಮೂಲಕ ಅಭಿಪ್ರಾಯ ರೂಪಿಸಲು ನೆರವಾಗುವಂಥ ಹಾಗೂ ದುರ್ಬಲ ಉಮೇದುವಾರರಿಗೆ ಧನ, ಜನ ಬೆಂಬಲ ನೀಡುವಂಥ ಪರ್ಯಾಯ ಸಂಸ್ಥೆ ಯಾವುದೆಂಬುದನ್ನು ಅವರು ಹೇಳುವುದಿಲ್ಲ. ಸರ್ಕಾರದ ಶಾಂತಿಯುತ ಬದಲಾವಣೆಗೆ ಪಕ್ಷಗಳಿಂದಾಗುವ ಲಾಭವನ್ನು ಮರೆಯುವಂತಿಲ್ಲ. ಹೀಗೆಂದರೆ ಪಕ್ಷ ವ್ಯವಸ್ಥೆಯಲ್ಲಿ ದೋಷಗಳಿಲ್ಲವೆಂದಲ್ಲ. ಅಲ್ಲಿ ಕಂಡುಬಂದ ದೋಷಗಳೇ ಪಕ್ಷಗಳ ಬಗ್ಗೆ ಸಂಶಯ ಹುಟ್ಟಿಸಲು ಕಾರಣವಾಗಿದೆ.
ಉಮೇದುವಾರರ ನಾಮನಿರ್ದೇಶನ : ಚುನಾವಣೆಯಲ್ಲಿ ಎರಡು ಹಂತಗಳುಂಟು : 1 ಉಮೇದುವಾರನ ನಾಮನಿರ್ದೇಶ ಅಥವಾ ನಾಮಕರಣ, 2 ವಾಸ್ತವ ಮತದಾನ, ನಾಮನಿರ್ದೇಶಿತವಾದ ಉಮೇದುವಾರನ ಪರವಾಗಿ ಮತ ಹಾಕುವ ಅಥವಾ ಹಾಕದಿರುವ ಸ್ವಾತಂತ್ರ್ಯ ಮತದಾರನಿಗಿದೆ. ಎಲ್ಲ ಉಮೇದುವಾರರೂ ಅಯೋಗ್ಯರೆಂದು ಕಂಡರೆ ಮತದಾರ ಬೇರೆಯವರನ್ನು ತರಲಾರ. ಆದಕಾರಣ ನಾಮನಿರ್ದೇಶದ ಹಂತ ಚುನಾವಣೆಯಲ್ಲಿ ಬಹು ಮುಖ್ಯವಾದ್ದು. ದೊಡ್ಡ ಪ್ರಜಾಸತ್ತಾತ್ಮಕ ದೇಶಗಳಲ್ಲೆಲ್ಲ ಪಕ್ಷಗಳೇ ಉಮೇದುವಾರರನ್ನು ಆರಿಸುತ್ತವೆ. ಸ್ವತಂತ್ರವಾಗಿ ಕೆಲವರು ನಿಂತರೂ ಹಾಗೆ ನಿಲ್ಲುವವರಿಗೆ ಧನ ಜನ ಬಲ ಕಡಿಮೆ. ಅಂಥವರು ಆರಿಸಿ ಬರುವುದೂ ಕಡಿಮೆ. ಆದಕಾರಣ ಪಕ್ಷಗಳು ಬುದ್ಧಿವಂತ, ಪ್ರಾಮಾಣಿಕ ಹಾಗೂ ದಕ್ಷರಾದ ಉಮೇದುವಾರರನ್ನು ನಾಮನಿರ್ದೇಶ ಮಾಡಿದರೆ ಒಳ್ಳೆಯ ಸರ್ಕಾರದ ರಚನೆ ಸಾಧ್ಯವಾಗುತ್ತದೆ. ಉಮೇದುವಾರರು ಕೆಟ್ಟವರಿದ್ದರೆ ಸರ್ಕಾರ ಕೆಟ್ಟದಾಗುವುದು ಅನಿವಾರ್ಯ. ರಾಜಕೀಯ ತ???ರೊಬ್ಬರು ಹೇಳುವಂತೆ, ಪ್ರಜಾರಾಜ್ಯದಲ್ಲಿ ಪಕ್ಷವೆಂಬುದು ರಾಜನೂ ಹೌದು, ರಾಜ ನಿರ್ಮಾಪಕನೂ ಹೌದು. ಎಲ್ಲ ರಾಜಕೀಯ ಪಕ್ಷಗಳಲ್ಲಿ (ಕೆಲವೇ ಅಪವಾದಗಳ ಹೊರತು), ವಿಶೇಷವಾಗಿ ದೊಡ್ಡ ದೊಡ್ಡ ಪಕ್ಷಗಳಲ್ಲಿ, ಮೇಲ್ಮಟ್ಟದ ಕೆಲವೇ ಮುಖಂಡರು ಪಕ್ಷದ ಮೇಲೆ ಹಿಡಿತವಿಟ್ಟುಕೊಳ್ಳುವ ಪ್ರವೃತ್ತಿ ಕಂಡುಬರುತ್ತದೆ. ಇಂಥ ಪಕ್ಷಗಳು ಬಹುಕಾಲದವು. ಬಹುಕಾಲದವರೆಗೆ ಆಳ್ವಿಕೆ ಮಾಡಿದವು ಮತ್ತು ಭವಿಷ್ಯದಲ್ಲೂ ಆಳುವ ಅವಕಾಶ ಪಡೆದು ಮುಂದುವರಿಯುವಂಥವು ಆಗಿದ್ದರಂತೂ ತೀರಿತು. ಒಂದು ಚಿಕ್ಕ ಗುಂಪೇ ಪ್ರಬಲ ಪ್ರಭಾವಿಯಾಗಿರುತ್ತದಲ್ಲದೆ ಅಂಥ ಪ್ರಭಾವವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನೇ ಮಾಡುತ್ತಿರುತ್ತದೆ. ಇಂಥ ಪಕ್ಷದ ಆಂತರಿಕ ವ್ಯವಹಾರದಲ್ಲಿ ಪ್ರಜಾಸತ್ತಾತ್ಮಕ ರೂಢಿಗಳಿಗೆ ಹೆಚ್ಚು ಬೆಲೆ ಇರುವುದಿಲ್ಲ. ಉಮೇದುವಾರರನ್ನು ನಿರ್ಧರಿಸುವುದರಲ್ಲಿ, ಸರ್ಕಾರದ ರಚನೆಯಲ್ಲಿ ಈ ಪ್ರಭಾವಿ ಗುಂಪಿನದೇ ಕೊನೆಯ ನಿರ್ಣಯ. ಅದನ್ನು ಪ್ರತಿಭಟಿಸುವ ಸಾಮಥ್ರ್ಯವಿರುವವರು ಬಹು ವಿರಳ. ಹೀಗಾಗಿ ಒಂದು ಚಿಕ್ಕ ಗುಂಪಿನ ಹತ್ತೋ ಹನ್ನೆರಡೋ ಜನರದೇ ಸರ್ವಾಧಿಕಾರ ಬೆಳೆಯುತ್ತದೆ. ಮತದಾರರು ಯಾರಿಗೆ ಮತ ಹಾಕಬೇಕೆಂಬುದನ್ನು ಸಹ ಈ ಗುಂಪು ನಿರ್ಧರಿಸುತ್ತದೆ. ಯಾರು ದೇಶವನ್ನಾಳಬೇಕು ಎಂಬುದನ್ನು ಕೂಡ ಈ ಗುಂಪಿನವರೇ ಹೇಳುವ ಪರಿಸ್ಥಿತಿ ಬರುತ್ತದೆ. ರಾಷ್ಟ್ರದ ಭವಿಷ್ಯವೇ ಕೆಲವರ ಕೈಯಲ್ಲಿರುತ್ತದೆ. ಇದೊಂದು ವಿಪರ್ಯಸ್ತ ಅವಸ್ಥೆ.
ಇಂಥ ವಿಪರ್ಯಾಸ 19ನೆಯ ಶತಮಾನದಲ್ಲಿ ಅಮೆರಿಕದಲ್ಲಿ ಬಹಳ ಹಾನಿಯನ್ನುಂಟುಮಾಡಿತು. ಉಮೇದುವಾರರ ನಾಮನಿರ್ದೇಶದಲ್ಲಿ ಹಲವು ಬಗೆಯ ದುವ್ರ್ಯವಹಾರಗಳು ನಡೆದುವು. ಕೆಲವೇ ಜನರು ನಾಮನಿರ್ದೇಶದ ಅಧಿಕಾರದ ಬಲದಿಂದ ಪ್ರಜಾಸತ್ತೆಯ ಹೆಸರಿನಲ್ಲಿ ಅಧಿಕಾರ ಮತ್ತು ಲಾಭಕರಸ್ಥಾನಗಳನ್ನು ಸ್ನೇಹಿತರಲ್ಲಿ, ಬಳಗದವರಲ್ಲಿ ಹಂಚಿಕೊಳ್ಳುತ್ತಿದ್ದರು. ಇದನ್ನು ಪ್ರತಿಭಟಿಸಿದ ಜನರು ಪಕ್ಷದ ಆಂತರಿಕ ವ್ಯವಸ್ಥೆಯಲ್ಲೂ ಪ್ರಜಾಸತ್ತಾತ್ಮಕ ರೂಢಿಗಳನ್ನು ತರಲು ಪ್ರಯತ್ನಿಸಿದರು. ನಾಮನಿರ್ದೇಶನದ ಅಧಿಕಾರವನ್ನು ಪ್ರಾಥಮಿಕ ಘಟ್ಟದ ಸಂಸ್ಥೆಗಳ ಸದಸ್ಯರಿಗೆ ಕೊಡಲಾಯಿತು. ಪಕ್ಷಗಳ ವ್ಯವಹಾರ ಖಾಸಗಿಯಾದುದಲ್ಲವೆಂದು, ಅದರ ವ್ಯವಹಾರಗಳನ್ನು ಬಹಿರಂಗಪಡಿಸುವ ವ್ಯವಸ್ಥೆಯಾಯಿತು. ಆದರೆ ಒಳಗೇ ಕೈವಾಡ ಮಾಡುವಂಥ ಪ್ರವೃತ್ತಿಯನ್ನು ಇದು ಎಷ್ಟು ಮಟ್ಟಿಗೆ ತಡೆದಿದೆಯೆಂಬುದು ವಿಚಾರಣೀಯವಾದ ಅಂಶ. ನಾಮನಿರ್ದೇಶದಲ್ಲಿ ಆದ್ಯ ಗಮನವನ್ನು ಉಮೇದುವಾರನ ಗೆಲ್ಲುವ ಸಾಧ್ಯತೇ ಕೊಡಲಾಗುತ್ತದೆ. ಉಮೇದುವಾರನ ನೈಜವಾದ ಯೋಗ್ಯತೆಯನ್ನರಿತು, ಅವನಿಗೆ ಗೆಲ್ಲುವ ಅವಕಾಶಗಳು ಕಡಿಮೆಯಿದ್ದರೂ ಪ್ರಚಾರಬಲದಿಂದ ಜನಾಭಿಪ್ರಾಯವನ್ನೂ ರೂಪಿಸಿ ಗೆಲ್ಲಿಸುವ ಪ್ರಯತ್ನ ಮಾಡಲು ಪಕ್ಷದಲ್ಲಿ ನೈತಿಕ ಸ್ಥೈರ್ಯ ಇರಬೇಕಾಗುತ್ತದೆ. ಅದಿಲ್ಲದಿದ್ದರೆ, ಕಡಿಮೆ ಯೋಗ್ಯತೆಯ ಉಮೇದುವಾರರಾದರೆ, ಆಯಾ ಕ್ಷೇತ್ರಗಳಲ್ಲಿ ಪ್ರಧಾನವಾಗಿರುವ ಮತದಾರರ ಜಾತಿಯವರ ಅಥವಾ ಅಲ್ಪಸಂಖ್ಯಾತರ ಪ್ರಾತಿನಿಧ್ಯದ ಅಗತ್ಯಕ್ಕನುಗುಣವಾಗಿ ಆ ವರ್ಗಗಳಿಗೆ ಸೇರಿದವರು ಉಮೇದುವಾರರಾಗಿ ಆರಿಸಲ್ಪಡುತ್ತದೆ. ಇದಕ್ಕಿಂತ ಹೆಚ್ಚಾಗಿ, ಪಕ್ಷ ಪ್ರಮುಖರಿಗೆ ಅನುಕೂಲವಾಗಿರುವವರೇ ಹೆಚ್ಚಾಗಿ ನಿರ್ದೇಶಿತರಾಗುತ್ತಾರೆಯೇ ಹೊರತು, ಯೋಗ್ಯರಿದ್ದರೂ ಪ್ರತಿಭಟನೆಯ ಪ್ರವೃತ್ತಿ ಇರುವವರಿಗೆ ಅವಕಾಶ ಸಿಗುವುದಿಲ್ಲ. ಹೀಗಾಗಿ ಅತ್ಯುತ್ತಮರಿಗೆ ಅಧಿಕಾರ ಬರುವ ಬದಲು ಎರಡನೆಯ, ಮೂರನೆಯ ದರ್ಜೆಯವರಿಗೆ ಅವಕಾಶ ದೊರೆಯುತ್ತದೆ. ಜಾತಿಸಮಾಜಗಳ ಭಾವನೆಗಳಿಗಾಗಿ ಮತದಾರರನ್ನು ದೂಷಿಸುವ ಮೊದಲು, ಪಕ್ಷಪ್ರಮುಖರಲ್ಲಿ ಅನೇಕರು ಇಂಥ ರೋಗಗ್ರಸ್ತರಿರುವುದುನ್ನು ಗಮನಿಸಬೇಕು. ನಾಮನಿರ್ದೇಶಕ್ಕಾಗಿ ಅರ್ಜಿ ಕೊಟ್ಟವರೆಲ್ಲರ ಯೋಗ್ಯತೆ, ಶಿಕ್ಷಣ, ಸೇವೆ ಮುಂತಾದ ವಿವರಗಳನ್ನು ಪಕ್ಷಗಳು ಮೊದಲೇ ಪ್ರಕಟಿಸಿ ಜನಾಭಿಪ್ರಾಯ ಸಂಗ್ರಹಿಸುವುದು ಒಂದು ಅಪೇಕ್ಷಣೀಯ ಪ್ರಯತ್ನವೆನಿಸಬಹುದು. ಏಕೆಂದರೆ ಸರಿಯಾದ ಉಮೇದುವಾರರನ್ನು ನಿರ್ಣಯಿಸುವುದು ಪಕ್ಷಗಳು ಮಾಡುವ ಒಂದು ಸಾರ್ವಜನಿಕ ಕರ್ತವ್ಯ. ಇಂಥ ಕರ್ತವ್ಯ ನಿರ್ವಹಿಸುವಲ್ಲಿ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಯೋಗ್ಯ.
ಪಕ್ಷನಿಧಿಗಳು : ರಾಜಕೀಯ ಪಕ್ಷಗಳಲ್ಲಿ ಕೆಲವು ಶ್ರೀಮಂತವಾದವು. ಇನ್ನು ಕೆಲವಕ್ಕೆ ಅಷ್ಟು ಹಣಬಲವಿರುವುದಿಲ್ಲ. ವ್ಯಕ್ತಿಗಳಿಂದಲೂ ಕಾರ್ಖಾನೆ, ವ್ಯಾಪಾರ ಮತ್ತು ಇತರ ಹಿತಾಸಕ್ತಿ ಸಂಸ್ಥೆಗಳಿಂದಲೂ ಹೆಚ್ಚು ಹಣ ಸಂಗ್ರಹಿಸಬಲ್ಲ ಪಕ್ಷ ಸ್ವಾಭಾವಿಕವಾಗಿ ಪ್ರಚಾರದಲ್ಲೂ ಇತರ ಚಟುವಟಿಕೆಗಳಲ್ಲೂ ಹೆಚ್ಚು ಹಣ ವಿನಿಯೋಗಿಸಿ, ಎಲ್ಲ ಸಾಧನಗಳನ್ನೂ ತನ್ನ ಪಕ್ಷದ ಹಾಗೂ ಪಕ್ಷದ ಉಮೇದುವಾರರ ಯಶಸ್ವಿಯಾಗಿ ಸಮರ್ಥವಾಗಿ ಬಳಸಿಕೊಳ್ಳುತ್ತದೆ. ಈ ಅವಕಾಶ ಧನಬಲವಿಲ್ಲದ ಪಕ್ಷಕ್ಕೆ ಹಾಗೂ ಅಂಥ ಪಕ್ಷದ ಉಮೇದುವಾರರಿಗೆ ಲಭಿಸುವುದಿಲ್ಲ. ಹೀಗಾಗಿ ಪ್ರಜಾಪ್ರಭುತ್ವಕ್ಕೆ ಬುನಾದಿಯಂತಿರುವ ಸಮಾನ ಅವಕಾಶ ತತ್ತ್ವಕ್ಕೆ ಧನ ಸೌಲಭ್ಯ ಧಕ್ಕೆಯುಂಟುಮಾಡುತ್ತದೆ. ಇದಲ್ಲದೆ ದೊಡ್ಡ ಮೊತ್ತದಲ್ಲಿ ಹಣವನ್ನು ದೇಣಿಗೆಯಾಗಿ ಕೊಡುವವರು ಸಹ ಪ್ರತಿಫಲಾಪೇಕ್ಷೆಯಿಲ್ಲದೆ ಕೊಡಲಾರರು. ಜಯವಾದ ಅನಂತರ ರಾಯಭಾರಿ ಪದವಿಯೋ ಕಾರ್ಪೋರೇಷನ್ ಅಧ್ಯಕ್ಷತೆಯೋ ಮುಂತಾದ ಸ್ಥಾನಗಳೋ ತಮ್ಮ ಹಿತಾಸಕ್ತಿಗೆ ಅನುಕೂಲವಾದಂಥ ಅಧಿನಿಯಮ ಸೌಲಭ್ಯಗಳೋ ಇಂಥಾ ದಾನಿಗಳಿಗೆ ದೊರೆಯುತ್ತವೆ. ಹೀಗೆ ವಿಶಿಷ್ಟ ಹಿತಾಸಕ್ತ ಗುಂಪು ಹಿತ್ತಲ ಬಾಗಿಲಿನಿಂದ ಸರ್ಕಾರವನ್ನು ನಿಯಂತ್ರಿಸುವ ಸ್ಥಿತಿ ಏರ್ಪಡುತ್ತದೆ. ಪ್ರಜಾಸತ್ತಾತ್ಮಕ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸಮಾಡಲು ಪಕ್ಷಗಳೂ ಬೇಕು. ಚಟುವಟಿಕೆಗಳೂ ಬೇಕು. ಅದಕ್ಕಾಗಿ ಹಣವೂ ಬೇಕು. ಆದರೆ ವಿವಿಧ ಪಕ್ಷಗಳ ಧನಾನುಕೂಲದ ಅಸಮಾನತೆಯನ್ನು ಕಡಿಮೆಮಾಡಿ ಚುನಾವಣೆ ನ್ಯಾಯ ಸಮ್ಮತವಾಗುವಂತೆ ಮಾಡಲು ಪ್ರಯತ್ನ ನಡೆಸಬೇಕಾದ್ದು ಅಗತ್ಯ. ಪಕ್ಷಗಳು ಶೇಖರಿಸುವ ಧನದ ಮೂಲವನ್ನು ಬಹಿರಂಗಪಡಿಸಬೇಕು. ಅಂದರೆ ಯಾವ ಪಕ್ಷ ಎಂಥ ಹಣದಿಂದ ಪೋಷಿತವಾಗಿದೆಯೆಂಬುದು ಮತದಾರರಿಗೆ ತಿಳಿಯಬೇಕು. ಇಂಥ ಹಣದ ಬಳಕೆಯ ಮೇಲೆ ಹತೋಟಿ, ಲೆಕ್ಕಪತ್ರಗಳ ಪ್ರಕಟಣೆ ಕಡ್ಡಾಯವಾಗಬೇಕು. ದೇಣಿಗೆಗಳ ಮೊತ್ತಕ್ಕೆ ಒಂದು ಗರಿಷ್ಠ ಮಿತಿ ಏರ್ಪಡಬೇಕು. ಇವೆಲ್ಲ ಸ್ವಲ್ಪಮಟ್ಟಿಗೆ ಭಾರತದ ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿ ಬಂದಿವೆಯಾದರೂ ಇವುಗಳ ಪರಿಣಾಮಕತೆ ಇನ್ನೂ ಹೆಚ್ಚಬೇಕಾಗಿದೆ. ಉಮೇದುವಾರನಾಗುವ ಸ್ವಾತಂತ್ರ್ಯ, ಸಮಾನ ಅವಕಾಶ (ಧನದ ದೃಷ್ಟಿಯಿಂದ), ಪಕ್ಷಗಳು ಉಮೇದುವಾರನಿಗಾಗಿಯೂ ಪಕ್ಷಕ್ಕಾಗಿಯೂ ವೆಚ್ಚ ಮಾಡುವ ಸ್ವಾತಂತ್ರ್ಯ, ಉಮೇದುವಾರರನ್ನು ನಾಮನಿರ್ದೇಶ ಮಾಡುವ ಸ್ವಾತಂತ್ರ್ಯ, ಪಕ್ಷಗಳ ಚಟುವಟಿಕೆಗಳಿಗಾಗಿ ಧನ ಸಂಗ್ರಹಿಸುವ ಸ್ವಾತಂತ್ರ್ಯಗಳೂ ಈಗ ಯೋಗ್ಯ ಪ್ರಮಾಣದಲ್ಲಿ ದೊರೆತಿವೆ. ಆದರೆ ಇಂಥ ಸ್ವಾತಂತ್ರ್ಯವೇ ಕೆಲವು ಸಮಸ್ಯೆಗಳಿಗೆ ಕಾರಣವಾಗಿದೆ. ಅವಕ್ಕೆ ಪರಿಹಾರ ಇನ್ನೂ ಸಿಗಬೇಕಾಗಿದೆ. ಅಸ್ವತಂತ್ರ, ನ್ಯಾಯಸಮ್ಮತವಲ್ಲದ ಚುನಾವಣೆ
ಚುನಾವಣೆಯೂ ಒಂದು ಕ್ರೀಡೆ. ಕ್ರಿಡೆಗಳಲ್ಲಿ ಕೆಲವು ಸರ್ವಸಮ್ಮತ ನಿಯಮಗಳನ್ನು ಪಾಲಿಸಬೇಕಾಗುವಂತೆ ಚುನಾವಣೆಯಲ್ಲೂ ಪಾಲಿಸಬೇಕಾಗುತ್ತದೆ. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದರಿಂದ ಹಿಡಿದು ಚುನಾವಣೆಯ ಫಲಿತಾಂಶ ಪ್ರಕಟಣೆ, ಅದರ ವಿವಾದಗಳೆಲ್ಲದರ ಇತ್ಯರ್ಥ-ಇವುಗಳವರೆಗೂ ಮತದಾರ, ಉಮೇದುವಾರ, ಅಧಿಕಾರಿಗಳು, ಪಕ್ಷಗಳು, ಅಧಿಕಾರದಲ್ಲಿ ಇರುವ ಸರ್ಕಾರ-ಎಲ್ಲರೂ ಪಾಲಿಸಬೇಕಾದ ನಿಯಮಗಳಿವೆ. ಇವರಲ್ಲಿ ಯಾರೇ ಅತಿಕ್ರಮಿಸಿದರೂ ಚುನಾವಣೆ ನ್ಯಾಯಸಮ್ಮತವಾಗಿರುವುದಕ್ಕೆ ಭಂಗ ಉಂಟಾಗುತ್ತದೆ. ಲಂಚ, ಬೆದರಿಕೆ, ಅಧಿಕಾರದ ದುರುಪಯೋಗ ಇವು ಚುನಾವಣೆಗೆ ಅನ್ಯಾಯ ಮಾಡುವ ಮೂರು ಪ್ರಧಾನ ದೋಷಗಳು, ಮತದಾರರಿಗೆ, ಉಮೇದುವಾರರಿಗೆ, ಅಧಿಕಾರಿಗಳಿಗೆ, ಸ್ಥಾನಿಕ ಮುಖಂಡರಿಗೆ ಲಂಚ ಕೊಡಬಹುದು, ಕೊಡಿಸಬಹುದು, ಲಂಚದ ಆಸೆ ಹುಟ್ಟಿಸಬಹುದು. ಪಕ್ಷದ ಧನ ಮತ್ತು ಜನಬಲದಿಂದ ಆಳುವ ಸರ್ಕಾರಿ ಶಕ್ತಿಯಿಂದ ಬೆದರಿಕೆ ಹಾಕಬಹುದು. ಆಳುವ ಸರ್ಕಾರದ ಮಂತ್ರಿಗಳು ಚುನಾವಣೆ ಹತ್ತಿರವಿರುವಾಗ ವಿಶಿಷ್ಟ ಕ್ಷೇತ್ರಗಳಲ್ಲಿ ಸರ್ಕಾರಿ ವೆಚ್ಚದ ವಿಶೇಷ ಸೌಲಭ್ಯಗಳನ್ನು ಏರ್ಪಡಿಸಬಹುದು. ಕಾಮಗಾರಿಗಳನ್ನು ಮಾಡಿಸಬಹುದು. ಇವು ಲಂಚ ಅಥವಾ ಅಕ್ರಮವರ್ತನೆಯನ್ನು ವಿರೋಧಿಸುವ ಕಾನೂನಿನ ಪರಿಮಿತಿಯಲ್ಲಿ ಬರದಿದ್ದರೂ, ಅಧಿಕಾರದ ದುರುಪಯೋಗದಿಂದ ಮತದಾರರನ್ನು ಪ್ರಭಾವಿಸುವ ಪ್ರಯತ್ನವಂತೂ ಆಗುತ್ತದೆ. ಜಾತೀಯ ಉಚ್ಚನೀಚ ಭಾವಗಳನ್ನು ಉದ್ರೇಕಿಸುವ ಅಥವಾ ಪೋಷಿಸುವ ಮೂಲಕ ಮತ್ತು ಧರ್ಮಗುರುಗಳನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವ ಮೂಲಕ ಮತದಾರರ ಮೇಲೆ ಒತ್ತಡ ತರಬಹುದು. ಮತದಾರರಿಗೆ ಭೋಜನ, ಮಾದಕ ಪಾನೀಯ, ವಾಹನಸೌಕರ್ಯಗಳ ಏರ್ಪಾಟು ಮುಂತಾದುವುಗಳ ಮೂಲಕ ಅವರ ಅಭಿಪ್ರಾಯವನ್ನು ಕೊಂಡುಕೊಳ್ಳಬಹುದು. ಸಾಹುಕಾರರ ಪ್ರಭಾವವನ್ನು ಸಾಲಗಾರರ ಮೇಲೆ, ಜಮೀನುದಾರರ ಪ್ರಭಾವವನ್ನು ಗೇಣಿದಾರರ ಮೇಲೆ, ಕಾರ್ಖಾನೆ ಮಾಲೀಕರ ಪ್ರಭಾವವನ್ನು ಕೂಲಿಗಾರರ ಮೇಲೆ ಪ್ರಯೋಗಿಸಬಹುದು. ಇಂಥ ದುವ್ರ್ಯವಹಾರಗಳನ್ನು ಅನೇಕ ದೇಶಗಳಲ್ಲಿ-ಭಾರತದಲ್ಲಿ ಸಹ-ಹೆಚ್ಚು ಕಡಿಮೆ ಪ್ರಮಾಣಗಳಲ್ಲಿ ಇರುವುದು ಕಂಡುಬಂದಿದೆ. ಇವೆಲ್ಲವೂ ಚುನಾವಣೆಗಳ ಪಾವಿತ್ರ್ಯವನ್ನು ಹಾಳುಮಾಡುತ್ತವೆ. ಇವುಗಳ ವಿರುದ್ಧ ಪ್ರಬಲವಾದ ಜನಾಭಿಪ್ರಾಯ ನಿರ್ಮಾಣವಾಗಬೇಕಾಗಿದೆ. ಮತದಾನದ ಕಾಲದಲ್ಲಿ ಅಂಗವಿಕಲರ ಜೊತೆಗೆ ಅವರಿಗೆ ಸಹಾಯಕರಾಗಿ ಬರುವವರು ಅನೇಕ ಸಲ ಮತದಾರರ ಇಚ್ಛೆಯ ವಿರುದ್ಧ ಮತ ಹಾಕಬಹುದು. ಒಬ್ಬನ ಮತವನ್ನು ಮತ್ತೊಬ್ಬ ಬಂದು ಹಾಕಿ ಹೋಗಿಬಿಡಬಹುದು. ಕೆಲವು ಸಲ ಒಂದು ಪಕ್ಷದವರು ತಮ್ಮ ಬೆಂಬಲಿಗರನ್ನೇ ಮೊದಲು ಮತಗಟ್ಟೆಗೆ ತಂದು ನಿಲ್ಲಿಸಿ, ಇತರ ಮತದಾರರು ಮತಕೊಡಲು ಸಮಯ ಸಿಗದಂತೆ ಮಾಡಬಹುದು. ಮತಪೆಟ್ಟಿಗೆಗಳನ್ನು ಸಾಗಿಸುವಾಗ-ವಿವಿಧ ಹಂತಗಳಲ್ಲಿ-ಅವನ್ನು ಬದಲಾಯಿಸಬಹುದು. ಮತಗಣನೆಯಾಗುವಾಗಲೂ ಅಕ್ರಮವಾಗಬಹುದು. ಇವೆಲ್ಲಕ್ಕೂ ಸಂಬಂಧಿಸಿದ ಕಾನೂನುಗಳಿವೆ; ವಿಚಾರಣಾಕ್ರಮವಿದೆ. ಆದರೆ ವಿಚಾರಣೆಯ ವಿಳಂಬದಿಂದ ಚುನಾವಣೆಯ ಅನ್ಯಾಯಗಳಿಗೆ ಬೆಂಬಲ ದೊರಕುತ್ತದೆ. ಕಾನೂನುಗಳಿದ್ದರೂ ಈ ದುವ್ರ್ಯವಹಾರಗಳನ್ನು ಸಂಪೂರ್ಣ ನಿರ್ಮೂಲ ಮಾಡುವುದಾಗಿಲ್ಲ. ಶಾಸನಗಳ ಹಿಡಿತಕ್ಕೆ ಸಿಕ್ಕದ ಎಷ್ಟೋ ಅಕ್ರಮಗಳು ನಡೆಯಬಹುದು. ಈ ದುವ್ರ್ಯವಹಾರಗಳು ಮತ್ತು ಅಕ್ರಮಗಳು ವ್ಯಕ್ತಿಗಳಿಂದ, ಗುಂಪುಗಳಿಂದ ಆದಾಗ ಅವನ್ನು ಹೇಗೋ ತಡೆಯಲು ಪ್ರಯತ್ನಿಸಬಹುದು. ಅದರೆ ಆಳುವ ಸರ್ಕಾರದಿಂದಲೇ ಅಕ್ರಮವಾಗುವುದಾದರೆ ಅದನ್ನು ತಡೆಯುವುದು ಕಷ್ಟಸಾಧ್ಯ. ಆಳುವ ಪಕ್ಷ ಸ್ವಾಭಾವಿಕವಾಗಿ ತಾನು ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿರುತ್ತದೆ. ಆದ್ದರಿಂದ ಚುನಾವಣೆಯ ಕಾರ್ಯನಿರ್ವಹಣೆಯೆಲ್ಲ ಸರ್ಕಾರದ ನಿಯಂತ್ರಣದಲ್ಲಿ ಇರುವುದು ಅಪಾಯಕರವೆಂದು ಭಾವಿಸಲಾಗಿದೆ.
ಭಾರತದ ಚುನಾವಣಾ ಆಯೋಗ : ಚುನಾವಣೆ ಹಾಗೂ ಅದರ ಅಂಗಸಂಸ್ಥೆಗಳು ಆಳುವ ಸರ್ಕಾರದ ಹತೋಟಿಯಲ್ಲಿ ಇರಕೂಡದೆಂಬ ವಿಚಾರವನ್ನು ಅನುಸರಿಸಿಯೇ ಭಾರತದ ಸಂವಿಧಾನದಲ್ಲಿ ಪ್ರತ್ಯೇಕ ಚುನಾವಣಾ ಆಯೋಗದ ನೇಮಕಕ್ಕೆ ಅವಕಾಶ ಮಾಡಿಕೊಡಲಾಗಿದೆ. ಚುನಾವಣೆಗಳ ಮೇಲ್ವಿಚಾರಣೆ ನಿರ್ದೇಶನ ಹಾಗೂ ನಿಯಂತ್ರಣವೆಲ್ಲ ಈ ಆಯೋಗದ ಅಧಿಕಾರದಲ್ಲಿದೆ. ರಾಷ್ಟ್ರಾಧ್ಯಕ್ಷರೇ ನೇಮಿಸುವ ಈ ಆಯೋಗದಲ್ಲಿ ಮುಖ್ಯ ಚುನಾವಣಾ ಕಮಿಷನರೂ ಸದಸ್ಯ ಕಮಿಷನರೂ ಇರುತ್ತಾರೆ. ಪ್ರಾದೇಶಿಕ ಚುನಾವಣಾ ಕಮಿಷನರುಗಳನ್ನೂ ಹೀಗೇ ನೇಮಿಸಲಾಗುತ್ತದೆ. ಸಂವಿಧಾನದ ನಿಯಮಗಳ ಪ್ರಕಾರ ಮುಖ್ಯ ಚುನಾವಣಾ ಕಮಿಷನರನ ನೇಮಕವನ್ನು ಪರಮೋಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನು ವಜಾ ಮಾಡುವ ರೀತಿಯಲ್ಲಿ ಮಾತ್ರ ವಜಾ ಮಾಡಲು ಶಕ್ಯವಿದೆ. ಹೀಗೆ ಕಾಯಾರ್ಂಗದಿಂದ ಈ ಆಯೋಗ ಸಂಪೂರ್ಣ ಸ್ವತಂತ್ರವಾಗಿರಲು ಅವಕಾಶ ಒದಗಿಸಲಾಗಿದೆ. ಭಾರತ ಒಕ್ಕೂಟಕ್ಕೆ ಸಂಬಂಧಿಸಿದ ರಾಷ್ಟ್ರಪತಿಗಳೂ ರಾಜ್ಯಗಳಲ್ಲಿ ರಾಜ್ಯಪಾಲರೂ ಈ ಆಯೋಗಕ್ಕೆ, ಇದರ ಅಂಗಸಂಸ್ಥೆಗಳಿಗೆ ಸಿಬ್ಬಂದಿ ಒದಗಿಸುವ ಹೊಣೆ ಹೊತ್ತಿದ್ದಾರೆ.
ಇಷ್ಟೆಲ್ಲ ಇದ್ದರೂ ಚುನಾವಣಾ ಆಯೋಗ ಹಾಗೂ ಸಿಬ್ಬಂದಿ ಸರ್ಕಾರದ ಹಿಡಿತದಿಂದ, ಪ್ರಭಾವದಿಂದ ಮುಕ್ತವಾಗಿದೆಯೆ? - ಎಂದು ಪ್ರಶ್ನಿಸಲಾಗುತ್ತಿದೆ. ಏಕೆಂದರೆ ಚುನಾವಣಾ ಆಯೋಗಕ್ಕೆ ಪ್ರತ್ಯೇಕವಾದ ಸಿಬ್ಬಂದಿಯಿಲ್ಲ. ಪ್ರತ್ಯೇಕ ಸಿಬ್ಬಂದಿ ವ್ಯವಸ್ಥೆ ಅಸಾಧಾರಣ ವೆಚ್ಚದ್ದಾಗುವುದೇನೋ ನಿಜ. ಮತದಾರರ ಪಟ್ಟಿ ಮತ್ತು ಮತಕ್ಷೇತ್ರಗಳನ್ನು ತಯಾರಿಸುವವರು, ಚುನಾವಣೆ ನಡೆಸುವವರು-ಇವರೆಲ್ಲ ಸದ್ಯಕ್ಕಂತೂ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮಮಟ್ಟಗಳ ರೆವೆನ್ಯೂ ಇಲಾಖೆಯ ಮತ್ತು ಇತರ ಇಲಾಖೆಗಳ ಅಧಿಕಾರಿಗಳು. ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು ಸಹ ಆಡಳಿತಸೇವೆಗೆ ಸಂಬಂಧಿಸಿದವರು. ಇವರೆಲ್ಲ ಅಂತಿಮವಾಗಿ ರಾಜ್ಯ ಸರ್ಕಾರಗಳ ಮಂತ್ರಿಗಳಿಗೆ ವಿಧೇಯರೆಂಬುದನ್ನು ಮರೆಯಲಾಗುವುದಿಲ್ಲ. ಈ ಸ್ಥಿತಿಯಲ್ಲಿ ಚುನಾವಣೆಗಳನ್ನು ತತ್ಕಾಲೀನ ಸರ್ಕಾರದ ಹತೋಟಿಯಿಂದ ಬೇರ್ಪಡಿಸುವುದು ದುಸ್ಸಾಧ್ಯವಾಗಬಹುದು. ಮಂತ್ರಿಗಳು ಅಧಿಕಾರಿಗಳ ಮೇಲೆ ಪ್ರಭಾವ ಬೀರದಿರುವ, ಚುನಾವಣಾ ಅಧಿಕಾರಿಗಳು ಅಂಥ ಪ್ರಭಾವವನ್ನು ವಿರೋಧಿಸುವ, ಅದರಿಂದ ದೂರವಿರುವ ಆರೋಗ್ಯಕರ ಸಂಪ್ರದಾಯ ಬೆಳೆದರೆ ಮಾತ್ರ ಈ ವಿಚಾರದಲ್ಲಿ ಒಳ್ಳೆಯ ಫಲಿತಾಂಶವನ್ನು ನಿರೀಕ್ಷಿಸಬಹುದು.
ಚುನಾವಣಾ ಆಯೋಗಕ್ಕೆ ಪ್ರತ್ಯೇಕವಾದ ಸಿಬ್ಬಂದಿಯಿದ್ದು, ಅದು ಸ್ವತಂತ್ರವಾಗಿದ್ದರೂ ತತ್ಕಾಲೀನ ಸರ್ಕಾರ ಪರೋಕ್ಷವಾಗಿ ಚುನಾವಣೆಯನ್ನು ನಿಯಂತ್ರಿಸುವುದು ಶಕ್ಯವಿದೆ. ಪ್ರಜಾಪ್ರಭುತ್ವಕ್ಕೆ ವಾ???ಸ್ವಾತಂತ್ರ್ಯ, ಪತ್ರಿಕಾಸ್ವಾತಂತ್ರ್ಯ, ಸಂಘ ಸ್ವಾತಂತ್ರ್ಯ. ಚಲವಲನ ಸ್ವಾತಂತ್ರ್ಯ, ಸಭೆ ಸಮ್ಮೇಳನ ಸ್ವಾತಂತ್ರ್ಯ ಇವೆಲ್ಲ ಅಗತ್ಯ. ಇವೆಲ್ಲಕ್ಕೂ ಸಂವಿಧಾನದಲ್ಲಿ ಪ್ರಾಶಸ್ತ್ಯ ಕೊಡಲಾಗಿದೆ. ಇವಕ್ಕೆ ಸರ್ಕಾರ ಸಮಯಾನುಸಾರ ತಡೆಯುಂಟುಮಾಡಿದರೆ ಪರಿಹಾರಕ್ಕಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ದೂರೊಯ್ಯಬಹುದು. ಜನರೂ ಪಕ್ಷಗಳೂ ಇಂಥ ಸ್ವಾತಂತ್ರ್ಯಗಳ ದುರುಪಯೋಗವನ್ನು ಹೇಗೆ ಮಾಡಿಕೊಳ್ಳಬಹುದೋ ಹಾಗೆ ಸರ್ಕಾರವೂ ತನ್ನಲ್ಲಿರುವ ಅಸಾಧಾರಣ ಅಧಿಕಾರಗಳನ್ನು ದುರುಪಯೋಗಿಸಿಕೊಳ್ಳಬಹುದು. ಎಲ್ಲ ಪ್ರಜಾಪ್ರಭುತ್ವಗಳೂ ಎದುರಿಸಬೇಕಾಗಿರುವ ದೊಡ್ಡ ದ್ವಂದ್ವ ಇದು.
ಮತದಾರನ ಕರ್ತವ್ಯ : ಚುನಾವಣೆಯಲ್ಲಿ ಮತದಾನ ಅತ್ಯಂತ ಮಹತ್ತ್ವದ ಹಾಗೂ ಅಂತಿಮ ಘಟ್ಟ. ಮತದಾರ ಪಟ್ಟಿ ತಯಾರಿಕೆ, ಕ್ಷೇತ್ರ ನಿರ್ಧಾರ, ಉಮೇದುವಾರನ ನಾಮಕರಣ, ಆತನ ನಾಮನಿರ್ದೇಶ ಪತ್ರದ ಪರಿಶೀಲನೆ, ಮತದಾನದ ವ್ಯವಸ್ಥೆ ಪಕ್ಷಗಳಿಂದ ತಮ್ಮ ನೀತಿ ಮತ್ತು ಕಾರ್ಯಕ್ರಮಗಳ ಘೋಷಣೆ, ಉಮೇದುವಾರರ ಬಗ್ಗೆ ಪ್ರಚಾರ, ಇದೆಲ್ಲ ನಡೆಯುವುದು ಮತದಾನ ಅನುಕೂಲಕರವಾಗಿಯೂ ಅರ್ಥಪೂರ್ಣವಾಗಿಯೂ ಆಗಬೇಕೆಂದೇ. ನಾಗರಿಕನ ಮತ ಅಮೂಲ್ಯವಾದ್ದು; ಅದರ ಮಹತ್ತ್ವವನ್ನರಿತು ಆತ ತನ್ನ ಹಕ್ಕನ್ನು ಚಲಾಯಿಸುತ್ತಾನೆ ಎಂಬ ನಂಬಿಕೆಯಿಂದಲೇ ಇದೆಲ್ಲ ಜರುಗುತ್ತದೆ. ಭಾರತದಲ್ಲಿ ಇದುವರೆಗೆ ನಡೆದ ಚುನಾವಣೆಗಳಲ್ಲಿ ಮತದಾರರಲ್ಲಿ ಬಹಳ ಜನ ತಮ್ಮ ಮತಗಳನ್ನು ಚಲಾಯಿಸದಿರುವುದು ಕಂಡುಬಂದಿದೆ. ಇತರ ದೇಶಗಳಲ್ಲಿ ಕೂಡ ಹಲವಾರು ಮತ ನೀಡದಿರುವುದು ಅಧ್ಯಯನದಿಂದ ತಿಳಿದುಬಂದಿದೆ. ಹೆಂಗಸರಿಗಿಂತ ಗಂಡಸರು, ಕಡಿಮೆ ಓದಿದವರಿಗಿಂತಲೂ ಹೆಚ್ಚು ವಿದ್ಯಾವಂತರು, ಗ್ರಾಮೀಣ ಜನತೆಗಿಂತ ನಗರವಾಸಿಗಳು, 33-35ರ ನಡುವಣ ವರ್ಷ ವಯಸ್ಸುಗಳವರು, ಕಿರಿಯರಿಗಿಂತ ಹಿರಿಯರು, ಅವಿವಾಹಿತರಿಗಿಂತ ವಿವಾಹಿತರು, ಬಿಡಿಜನರಿಗಿಂತ ಹೆಚ್ಚಾಗಿ ಸಂಸ್ಥೆಗಳ ಸದಸ್ಯರು ಮತದಾನಗಳಲ್ಲಿ ಭಾಗವಹಿಸುವುದು ಅಮೆರಿಕ, ಆಸ್ಟ್ರೇಲಿಯ ಮತ್ತು ಐರೋಪ್ಯ ದೇಶಗಳಲ್ಲಿ ಕಂಡುಬಂದಿದೆ.
ಭಾರತದಲ್ಲಿ ಮತದಾನದಲ್ಲಿ ಭಾಗವಹಿಸದೆ ಇರುವವರ ಅಧಿಕ ಸಂಖ್ಯೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. ಮತದಾರರಲ್ಲಿ ಅನೇಕರಿಗೆ ಮತದಾನದಲ್ಲಿ ಆಸಕ್ತಿಯಿಲ್ಲವೆಂಬುದು ಇದರಿಂದ ವ್ಯಕ್ತವಾಗುತ್ತದೆ. ಇದರ ಪರಿಣಾಮವಾಗಿ ಅಲ್ಪಸಂಖ್ಯಾತ ಮತಗಳಿಸಿದ ಪಕ್ಷಗಳು ಸರ್ಕಾರ ರಚಿಸುವಂಥ, ಪ್ರಜಾಪ್ರಭುತ್ವ ತತ್ತ್ವಕ್ಕೆ ಸಲ್ಲದ ಪರಿಸ್ಥಿತಿ ಬರಬಹುದು. ಸಮಾಜದ ಎಷ್ಟೋ ಅಂಗಗಳಿಗೆ ಪ್ರಾತಿನಿಧ್ಯ ಸಿಗದೆ ಹೋಗುತ್ತದೆ.
ಮತದಾರರ ಅನಾಸಕ್ತಿಯೂ ಒಂದು ಬಗೆಯ ಪ್ರತಿಭಟನೆ; ಸರ್ಕಾರದ ನೀತಿಯ ಬಗ್ಗೆ ಜನ ತೋರಿಸುವ ಅಸಮ್ಮತಿ; ಪಕ್ಷಗಳು ನಿಲ್ಲಿಸಿದ ಉಮೇದುವಾರರಲ್ಲಿ ತಮಗೆ ನಂಬಿಕೆಯಿಲ್ಲವೆಂದು ಜನ ಘೋಷಿಸಿದ ಹಾಗೆ, ಮಹಾತ್ಮ ಗಾಂಧಿಯವರು ಸಹ 1920ರ ಚುನಾವಣೆಗಳನ್ನು ಬಹಿಷ್ಕರಿಸಲಿಲ್ಲವೆ?-ಎಂದು ವಾದಿಸುವವರೂ ಇದ್ದಾರೆ. ಆದರೆ ಆಗ ಪ್ರಜಾಪ್ರಭುತ್ವ ಇರಲಿಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವ ಸ್ಥಿರವಾಗಬೇಕಾಗಿದೆ. ಸರ್ಕಾರದ ನೀತಿಯ ಮೇಲೆ ಹತೋಟಿ ಸಂಪಾದಿಸಲು ಬೇರೆ ಉಪಾಯಗಳಿರಬಹುದಾದರೂ ಮತದಾನ ಅತ್ಯಂತ ಮಹತ್ತ್ವದ ವಿಧಾನ. ಸಂತಾನಂ ಸಮಿತಿಯವರು ಕಡ್ಡಾಯ ಮತದಾನವನ್ನು ವಿಧಿಸುವ ಸೂಚನೆ ಮಾಡಿದರು. ಈ ಸೂಚನೆಗೆ ಬಹಳ ವಿರೋಧವಿದೆಯಾದರೂ ಭಾರತದಂಥ ದೇಶದಲ್ಲಿ ಇರುವ ವಿಶಿಷ್ಟ ಸನ್ನಿವೇಶಗಳ ದೃಷ್ಟಿಯಿಂದ ಇದನ್ನು ಪರಿಶೀಲಿಸಬೇಕಾಗಿದೆ. ಪ್ರಜಾಪ್ರಭುತ್ವ ಪದ್ಧತಿಯನ್ನು ಒಪ್ಪಿಕೊಂಡ ನಾಗರಿಕನ ಮೇಲೆ ಇರುವ ಮುಖ್ಯ ಕರ್ತವ್ಯಗಳು ಮೂರು; ಮತದಾನ ಮಾಡುವುದು, ಪ್ರಾಮಾಣಿಕವಾಗಿ ಮತದಾನ ಮಾಡುವುದು ಮತ್ತು ಜಾಣತನದಿಂದ ಮತದಾನ ಮಾಡುವುದು. ಈ ಕರ್ತವ್ಯಗಳ ನಿರ್ವಹಣೆ ಆಗದಾಗ ಚುನಾವಣೆ ಸ್ವತಂತ್ರ ಹಾಗೂ ನ್ಯಾಯ ಎನಿಸಲಾರದು.
(ಮುಂದುವರಿಯುವುದು.........)