HEALTH TIPS

ಸಮರಸ-ಈ ಹೊತ್ತಿಗೆ ಹೊಸ ಹೊತ್ತಗೆ-ಸಂಚಿಕೆ 10-ಪುಸ್ತಕ- ಮುಂಜಾವದ ಹನಿಗಳು

       
 ಪುಸ್ತಕ: ಮುಂಜಾವದ ಹನಿಗಳು   
  ಲೇಖಕರು: ಗಾಯತ್ರೀ ರಾಘವೇಂದ್ರ
   ಬರಹ: ಚೇತನಾ ಕುಂಬಳೆ
   *ಭಾವದ ಹನಿಗಳ ಹೊಳಪಿನಲ್ಲಿ*

          ಮುಂಜಾನೆ ಎಂದರೆ ಉಲ್ಲಾಸ, ಉತ್ಸಾಹ, ಹೊಸ ನಿರೀಕ್ಷೆಗಳನ್ನು ಹೊತ್ತು ತರುವ ಹೊಸ ದಿನಕ್ಕೊಂದು ಮುನ್ನುಡಿ. ಬೆರಗಿನ ಮುಂಜಾವದ ಅದೆಷ್ಟೋ ವರ್ಣನೆಗಳು ಬರಹಗಾರರ ಲೇಖನಿಯಿಂದ ಚಿತ್ತಾಕರ್ಷಕವಾಗಿ ಮೂಡಿಬಂದಿವೆ. ಬರುತ್ತಿವೆ. ಮುಂಜಾನೆ ಭುವಿಯೆದೆಗೆ ಬೀಳುವ ಹನಿಗಳು ಮುತ್ತಾಗಿ ಹೊಳೆಯುತ್ತ ಕಣ್ಮನಗಳನ್ನು ತಣಿಸುತ್ತವೆ; ಸೆಳೆಯುತ್ತವೆ. ಆನಂದವನ್ನು ನೀಡುತ್ತವೆ. ಬೆರಗಾಗಿಸುತ್ತವೆ. ಮನದೊಳಗೆ ಹುಟ್ಟಿದ ಇಂತಹ ಭಾವಹನಿಗಳನ್ನು ಪದಗಳಲ್ಲಿ ಸುಂದರವಾಗಿ ಪೋಣಿಸಿ 'ಮುಂಜಾವದ ಹನಿಗಳು' ಎಂಬ ಹನಿಗವಿತೆಗಳ ಸಂಕಲನವನ್ನು ಪ್ರಕಟಿಸಿದ್ದಾರೆ ಶಿರಸಿಯ ಗಾಯತ್ರೀ ರಾಘವೇಂದ್ರ.
         'ಕಾವ್ಯ ವಲ್ಲರಿ' ಎಂಬ ವಾಟ್ಸಪ್ ಬಳಗದಲ್ಲಿ ಕವಿತೆಗಳ ಮೂಲಕ ಪರಿಚಿತರಾದ ಇವರು ಈಗಾಗಲೇ  ಮಣ್ಣ ನೆನಪು, ಕನವರಿಕೆ, ಕಡಲಮಾತು, ಗೆಜ್ಜೆದನಿಗಳೆಂಬ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಇದಕ್ಕೂ ಮೊದಲು ಅವರ ಭಾವದಲೆಗಳ ಮೊರೆತ 'ಕಡಲಮಾತು' ಕವನ ಸಂಕಲನವನ್ನು ಓದಿದ್ಧೆ ಇಷ್ಟಪಟ್ಟಿದ್ದೆ. ಅದರಲ್ಲಿರುವ ಒಂದೆರಡು ಕವಿತೆಗಳನ್ನು ಮಲಯಾಳಕ್ಕೆ ಅನುವಾದಿಸಿದ್ದೆ. ಈಗ ಅವರ ಮುಂಜಾವದ ಹನಿಗಳು ಕೈಸೇರಿ ನಾಲ್ಕು ತಿಂಗಳುಗಳೇ ಕಳೆದಿವೆ. ಅವತ್ತು ಒಳಗಿಟ್ಟ ಪುಸ್ತಕವನ್ನು ಹೊರತೆಗೆದದ್ದು ಓದಿದ್ದು ಇವತ್ತೇ.
  •         ಅಕ್ಷಯ ಪ್ರಕಾಶನದಿಂದ ಹೊರಬಂದ  'ಮುಂಜಾವದ ಹನಿಗಳು'  ಹನಿಗವಿತೆಗಳ ಸಂಕಲನ. ಆರಂಭದಲ್ಲಿಯೇ  ಲೇಖಕಿಯ ಒಡಲಾಳದ ಮಾತುಗಳಿವೆ. "ಪ್ರತೀ ದಿನದ ಕತ್ತಲನ್ನು ಕಳೆದು ಬೆಳಕಿಗೆ ಮುನ್ನುಡಿ ಬರೆಯುವುದು ಇದೇ ಮುಂಜಾವು. ಅದು ಇಡೀ ದಿನದ ಆರಂಭದ ಸೂಚಕ. ಕತ್ತಲಲಿ ಕಂಡ ಕನಸುಗಳು, ಸಾಕಾರವಾಗಿಸುವ ಕ್ಷಣ , ಸಂಜೆಯ ಜೊತೆಗೆ ಆವರಿಸುವ ಬೇಸರಗಳು, ರಾತ್ರಿಯಲಿ ಉಂಡ ವಿಷಾದದ ನೋವುಗಳು, ನೆನಪುಗಳ ಮರೆಸುತ್ತಾ ಹೊಸ ಆಸೆಯ ಕಿರಣಗಳ ಚಾಚುತ್ತಾ ಭರವಸೆಯ ಬೆಳಕ ಹೊತ್ತಿಸುವ ಹಣತೆ ಈ ಮುಂಜಾವು" ಎಂದು ಮುಂಜಾವಿಗೆ ತಮ್ಮದೇ ವ್ಯಾಖ್ಯಾನವನ್ನು ನೀಡುತ್ತಾರೆ.  ಇದಕ್ಕೆ ಮುನ್ನುಡಿಯನ್ನು ಬರೆದವರು ನಮ್ಮ ಬಳಗದವರೇ ಆದ ಸಾಹಿತಿ ವಾಸುದೇವ ನಾಡಿಗ್. ಅವರು, ಮುಂಜಾನೆ, ಹನಿಗಳ ಬಗ್ಗೆ ಇತರ ಕವಿಗಳು ಹೇಳಿದ ಮಾತುಗಳನ್ನು ಉಲ್ಲೇಖಿಸುತ್ತಾ ಇಲ್ಲಿನ ಹನಿಗಳ ವಿಮರ್ಶೆಗೆ ತೊಡಗುತ್ತಾರೆ. ಒಂದು ಕಡೆ ಅವರು Hans Hofmann  ನ ಮಾತನ್ನು ಈ ರೀತಿ ಉಲ್ಲೇಖಿಸುತ್ತಾರೆ.  "In nature light creates the color, in the picture color creates light,,    ಬಣ್ಣಗಳಿಂದ ಆವೃತವಾದ ನಿಸರ್ಗವನ್ನು ಗುರುತಿಸಲು ಬೆಳಕು ಬೇಕು. ಮತ್ತು ಬಣ್ಣಗಳನ್ನು ಕಾಣಲು ಅಕ್ಕರೆಯ ಕಣ್ಣುಗಳು ಬೇಕು"   ಮುನ್ನುಡಿಯನ್ನು ಓದುತ್ತಾ ಹೋದಂತೆ  ಅವರ ಬರಹ ಆಪ್ತವಾಗುತ್ತದೆ.

       ಈ ಮುಂಜಾವದಲ್ಲಿ ಒಟ್ಟು.365 ಮುತ್ತಿನ ಹನಿಗಳಿವೆ. ಲೇಖಕಿ ಒಂದು ವರ್ಷದಲ್ಲಿ ಪ್ರತಿದಿನ ಕಂಡ ಬೆರಗಿನ ಮುಂಜಾವು ಒಂದೊಂದಾಗಿ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ. ಅವುಗಳು ಹಾಗೆ ಸುಮ್ಮನೆ ಹೋಗುವುದಿಲ್ಲ. ಒಂದಷ್ಟು ಮನವನ್ನು ತಟ್ಟುತ್ತವೆ.. ಒಂದಷ್ಟು ಹೃದಯಕ್ಕಿಳಿದು ಬಿಡುತ್ತವೆ. ಇವುಗಳನ್ನು ಓದುತ್ತಾದ್ದರೆ, ಮುಂಜಾವಿನ ಸೌಂದರ್ಯವನ್ನು ಕಣ್ತುಂಬಿಕೊಂಡಂತೆ, ಸವಿದಷ್ಟು ಖುಷಿಯಾಗುತ್ತದೆ. ಇವರಲ್ಲಿ ಅಪಾರ ಶಬ್ಧ ಸಂಪತ್ತುಗಳಿವೆ. ಇವರಲ್ಲಿ ಭಾವಗಳಿಗೆ ಬಡತನವೇ ಇಲ್ಲ. ಕವಿತೆ ಕಟ್ಟುವ ರೀತಿಯೂ ಚೆನ್ನಾಗಿದೆ. ಇಲ್ಲಿನ ಮುಂಜಾವುಗಳಿಗೆ ರೂಪಕಗಳಿವೆ.. ಒಂದೊಂದು ಸುಂದರವಾದ ಹೆಸರುಗಳಿವೆ. ಇಲ್ಲಿಯ ಹನಿಗಳಲ್ಲಿ ಕರುಣೆ ವಾತ್ಸಲ್ಯ ಪ್ರೀತಿ ಮಮತೆ, ಭಕ್ತಿ ಮೋದಲಾದ ಭಾವಗಳಿವೆ. ಒಂದಷ್ಟು ಬಾಲ್ಯದ ನೆನಪುಗಳಿವೆ, ನಿಸರ್ಗದ ವಿಸ್ಮಯಗಳಿವೆ,ಬೆಳಕಿನ ತೇರನೇರಿ ಬರುವ ಸೂರ್ಯನಿದ್ದಾನೆ, ಚಿಲಿಪಿಲಿಗುಟ್ಟುವ ಬೆಳ್ಳಕ್ಕಿಗಳ ಸಾಲಿದೆ. ಕೃಷ್ಣನಿದ್ದಾನೆ, ಕೊಳಲಿದೆ ಜೊತೆಗೆ ರಾಧೆ ಇದ್ದಾಳೆ, ಕಾಮನಬಿಲ್ಲಿದೆ, ಕಂಪು ಸೂಸುವ ಬಣ್ಣದ ಹೂಗಳಿವೆ. ಹೂವಲ್ಲಿನ ಜೇನು ಸವಿಯಲು ಬರುವ ಬಣ್ಣದ ಚಿಟ್ಟೆಗಳಿವೆ, ಪಾರಿಜಾತದ ಪರಿಮಳವಿದೆ, ಒಂದಷ್ಟು ಕಾಯುವಿಕೆ, ಕನಸುಗಳು ,ನಿರೀಕ್ಷೆಗಳು ಭರವಸೆಗಳಿವೆ ಇಲ್ಲಿ ಹಬ್ಬದ ಸಂಭ್ರಮವಿದೆ, ಅಮ್ಮನ ವಾತ್ಸಲ್ಯವಿದೆ
ಅಪ್ಪನ ಪ್ರೀತಿಯಿದೆ,ಹೀಗೆ ಹಲವಾರು ವಿಷಯಗಳನ್ನು ಹೊತ್ತ ಹನಿಗಳು ಇಲ್ಲವೆ.
     
ಒಂದಷ್ಟು ಕಾಡಿದ ಸಾಲುಗಳು ಮತ್ತು ಹನಿಗಳು

* ಡೇರೆ ಹೂವಿನ ನಗೆ ಈ ಮುಂಜಾವು
* ಜಾಜಿ ಮಲ್ಲಿಗೆಯ ಗಂಧ ಈ ಮುಂಜಾವು
* ಮನವನ್ನು ತನ್ಮಯಗೊಳಿಸುವ ನಾದ ಈ ಮುಂಜಾವು
* ಜಿಗಿ ಜಿಗಿದೋಡುವ ನಿರಿಗೆ ಲಂಗದ ಬೆಡಗಿ ಈ ಮುಂಜಾವು
* ಹೊಸಬೆಳಕಿನ ಹರಿಕಾರ ಈ ಮುಂಜಾವು

* ನಸುಗತ್ತಲ ಜಾವದಲಿ
ಕನಸುಗಳು ಕಾಡಿ
ಢವಗುಟ್ಟಿದೆದೆ ಕಂಗಾಲಾದಾಗ
ಬೆಳಕ ಕಿರಣ ತೂರಿ ಅಭಯ ನೀಡಿದ
ಕರುಣಾಳುವೀ ಮುಂಜಾವು

* ಕಾಲಚಕ್ರದ ಹೊತ್ತಗೆಯ
   'ದಿನ'ವೆಂಬ ಕವಿತೆಯ
   ಅದ್ಭುತಾರಂಭದ
   ಮುನ್ನುಡಿಯೀ ಮುಂಜಾವು

* ಆಗಸದಷ್ಟು ವಿಶಾಲದೆದೆಯೊಳಗೆ
ಅಪಾರ ಪ್ರೀತಿ ಬಚ್ಚಿಟ್ಟು
ಮೌನವಾಗಿದ್ದೂ ಅಪ್ಯಾಯಮಾನವಾಗುವ
ಅಪ್ಪನಂತಹ ಮುಂಜಾವು

* ಹಗಲು ಇರುಳೆಂಬ
ಮಹಾಕಾವ್ಯದ
ಭಾವಾರ್ಥ ಈ ಮುಂಜಾವು

                                              ಬರಹ:ಚೇತನಾ ಕುಂಬ್ಳೆ
    Feebback:samarasasudhi@gmail.com 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries