ಲೋಕಸಭಾ ಚುನಾವಣೆಯ ಇತಿಹಾಸ ಹಾಗೂ ನಡೆದು ಬಂದ ಹಾದಿ!!-
(ಮುಂದುವರಿದ ಭಾಗ)
1957ರಿಂದೀಚೆ ನಡೆದ ಲೋಕಸಭೆ ಚುನಾವಣೆಗಳಲ್ಲಿ ಪಕ್ಷೇತರರು ಗೆಲ್ಲುವ ಪ್ರಮಾಣ ತೀರಾ ಕಡಿಮೆಯಾಗುತ್ತಿದೆ. ಒಟ್ಟಾರೆ ಮತ ಗಳಿಕೆ ಕೂಡ ಗಣನೀಯವಾಗಿ ಕುಸಿಯುತ್ತಿದೆ.
ಭಾರತದಲ್ಲಿ ಯಾವುದೇ ಚುನಾವಣೆಯನ್ನು ನೋಡಿದರೂ ಒಂದೊಂದು ಕ್ಷೇತ್ರದಲ್ಲೂ ಹತ್ತಾರು ಪಕ್ಷೇತರ ಅಭ್ಯರ್ಥಿಗಳು ಕಣಕ್ಕಿಳಿಯುವುದನ್ನು ನೋಡಿದ್ದೇವೆ. ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಮತದಾನ ಹಕ್ಕು ಇರುವಂತೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವೂ ಇದೆ. ಅಂತೆಯೇ ಸಾಕಷ್ಟು ಜನರು ಪಕ್ಷಗಳ ಟಿಕೆಟ್ ಇಲ್ಲದೇ ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆ. ಆದರೆ, ಅವರಲ್ಲಿ ಗೆಲ್ಲುವರೆಷ್ಟು? ಇತ್ತೀಚೆಗಂಗೂ ಪಕ್ಷೇತರರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿದೆ. ಲೋಕಸಭೆ ಚುನಾವಣೆ ಇತಿಹಾಸದಲ್ಲಿ 1957ರಿಂದೀಚೆ ಒಟ್ಟು 44,962 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಆದರೆ ಅವರ ಪೈಕಿ ಗೆದ್ದವರ ಸಂಖ್ಯೆ ಕೇವಲ 222 ಮಾತ್ರ. ಶೇ. 0.49ರಷ್ಟು ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ. ಅಂದರೆ, ಗೆಲುವಿನ ಪ್ರಮಾಣ ಅರ್ಧಪ್ರತಿಶತವೂ ಇಲ್ಲ.
1952ರಲ್ಲಿ ಮೊದಲ ಲೋಕಸಭಾ ಚುನಾವಣೆಯಾಗಿದ್ದು. ಆಗ ಬರೋಬ್ಬರಿ 37 ಪಕ್ಷೇತರರು ಗೆಲುವು ಕಾಣುವಲ್ಲಿ ಸಫಲರಾಗಿದ್ದರು. ಅವರು ಪಡೆದ ಮತ ಪ್ರಮಾಣ ಶೇ. 15.9 ಇತ್ತು. ಮುಂದಿನ 1957ರ ಚುನಾವಣೆಯಲ್ಲಿ 42 ಪಕ್ಷೇತರರು ಗೆದ್ದರಾದರೂ ಒಟ್ಟಾರೆ ದಕ್ಕಿದ್ದು ಕೇವಲ 8.73ರಷ್ಟು ಮತ ಮಾತ್ರ. ಆ ನಂತರ ಮತ್ಯಾವ ಚುನಾವಣೆಯಲ್ಲೂ ಪಕ್ಷೇತರರು ಶೇಕಡವಾರು ಮತಗಳಿಕೆಯಲ್ಲಿ ಶೇ. 8ರ ಗಡಿ ದಾಟಲಿಲ್ಲ. 1991ರ ಚುನಾವಣೆಯಲ್ಲಂತೂ ಕೇವಲ ಒಬ್ಬ ಪಕ್ಷೇತರ ಮಾತ್ರ ಗೆಲುವಿನ ನಗೆ ಬೀರಿದ್ದು. ಆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ ಪಕ್ಷೇತರರಿಗೆ ಸಿಕ್ಕ ಒಟ್ಟು ಮತ ಪ್ರಮಾಣ ಶೇ. 0.02 ಮಾತ್ರ. ಕಳೆದ ಬಾರಿ, ಅಂದರೆ 2014ರ ಲೋಕಸಭೆ ಚುನಾವಣೆಯಲ್ಲಿ ಮೂವರು ಪಕ್ಷೇತರರು ಚುನಾಯಿತರಾಗಿದ್ದರು.
ಈವರೆಗಿನ ಚುನಾವಣೆಗಳ ಪೈಕಿ ಕೇವಲ 6 ಬಾರಿ ಮಾತ್ರ ಪಕ್ಷೇತರರು ಎರಡಂಕಿ ಮೊತ್ತದ ಗಡಿ ದಾಟಿರುವುದು.
ವಿವಿಧ ಚುನಾವಣೆಗಳಲ್ಲಿ ಪಕ್ಷೇತರರ ಗೆಲುವಿನ ಪ್ರಮಾಣ:
1952: 37
1957: 42
1962: 20
1967: 35
1971: 14
1977: 9
1980: 9
1984: 5
1989: 12
1991: 1
1996: 9
1998: 6
1999: 6
2004: 5
2009: 9
2014: 3
ಪಕ್ಷೇತರರು ಗೆಲ್ಲುವ ಪ್ರಮಾಣ ಹಾಗೂ ಅವರು ಗಳಿಸುವ ಮತ ಪ್ರಮಾಣ ಕಡಿಮೆಯಾಗಲು ಕೆಲವಾರು ಕಾರಣಗಳಿವೆ. ಗೆಲುವಿನ ಸಾಮಥ್ರ್ಯವಿರುವ ಸ್ವತಂತ್ರ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇದೆ. ಗೆಲುವಿನ ಸಾಧ್ಯತೆ ಇಲ್ಲವಾದರೂ ಚುನಾವಣೆಯಲ್ಲಿ ಸ್ಪರ್ಧಿಸುವವರ ಸಂಖ್ಯೆ ಬಹಳಷ್ಟಿದೆ. ಹೀಗಾಗಿ, ಅವರ ಗೆಲುವಿನ ಅನುಪಾತ ತೀರಾ ಕಡಿಮೆ ಇದೆ ಎನ್ನಲಾಗುತ್ತಿದೆ.