ಕುಂಬಳೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಬಿ.ಸಿ ಟ್ರಸ್ಟ್ ಕಾಸರಗೋಡು, ತಾಲೂಕು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಕುಂಬಳೆ ವಲಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಜ್ಞಾನ ವಿಕಾಸ ಕೇಂದ್ರ ಮತ್ತು ನವಜೀವನ ಸಮಿತಿ ಕುಂಬಳೆ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ 1337ನೇ ಮದ್ಯವರ್ಜನ ಶಿಬಿರ ಕಳತ್ತೂರು ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಆರಂಭಗೊಂಡಿತು.
ಆರಿಕ್ಕಾಡಿಯ ಬ್ರಹ್ಮಶ್ರೀ ಚಕ್ರಪಾಣಿ ದೇವಪೂಜಿತ್ತಾಯ ತಂತ್ರಿವರ್ಯರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.ಅವರು ಈ ಸಂದರ್ಭ ಮಾತನಾಡಿ, ಮದ್ಯದ ದಾಸರಾಗಿ ವಿಶಿಷ್ಟ ಮಾನವ ಜೀವನವನ್ನು ವ್ಯರ್ಥಗೊಳಿಸುವುದರಿಂದ ಅಧಃಪತನಕ್ಕೆ ಇಳಿಯುತ್ತೇವೆ. ಪುಣ್ಯಫಲವಾದ ಮಾನವ ಜೀವನವನ್ನು ಎತ್ತರಕ್ಕೇರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅವರವರ ಕರ್ತವ್ಯಗಳನ್ನು ಧರ್ಮಮಾರ್ಗದಲ್ಲಿ ನಿರ್ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‍ಬಾಘ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ., ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್., ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ.ಕೆ.ಶ್ರೀಕಾಂತ್, ಕುಂಬಳೆ ಗ್ರಾಮ ಪಂಚಾಯತಿ ಸದಸ್ಯ ಸುಖೇಶ್ ಭಂಡಾರಿ, ಜನಜಾಗೃತಿ ವೇದಿಕೆ ಜಿಲ್ಲಾ ಮಾಜಿ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಕುಂಬಳೆ ವಲಯ ಅಧ್ಯಕ್ಷ ಮಂಜುನಾಥ ಆಳ್ವ, ಸದಸ್ಯ ಯೋಗೀಶ್ ಕಡಮಣ್ಣಾಯ ಉಪಸ್ಥಿತರಿದ್ದರು. ಮೇಲ್ವಿಚಾರಕ ಗಂಗಾಧರ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಸ್ವಾಗತಿಸಿ, ನಿಷಾ ವಂದಿಸಿದರು.
ಮೇ 4ರಂದು ಶಿಬಿರ ಸಮಾರೋಪಗೊಳ್ಳಲಿದೆ.