ನವದೆಹಲಿ: ಭಾರತ ಸರ್ಕಾರ 36 ರಾಫೆಲ್ ಯುದ್ಧ ವಿಮಾನ ಖರೀದಿ ಸಂಬಂಧ ಫ್ರಾನ್ಸ್ ಜತೆ ಒಪ್ಪಂದ ಮಾಡಿಕೊಂಡ ಕೆಲವೇ ತಿಂಗಳಲ್ಲಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ ನ ಫ್ರೆಂಚ್ ನೋಂದಾಯಿತ ಟೆಲಿಕಾಮ್ ಸಂಸ್ಥೆಗೆ ಫ್ರಾನ್ಸ್ 143.7 ದಶಲಕ್ಷ ಯೂರೋ ತೆರಿಗೆ ಮನ್ನಾ ಮಾಡಿದೆ ಎಂದು ಪ್ರಮುಖ ಫ್ರೆಂಚ್ ದೈನಿಕ ಲೀ ಮಾಂಡ್ ಶುಕ್ರವಾರ ವರದಿ ಮಾಡಿದೆ.
ಲೀ ಮಾಂಡ್ ವರದಿಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಕಮ್ಯುನಿಕೇಶನ್ ನಾವೇನೂ ತಪ್ಪು ಮಾಡಿಲ್ಲ. ಕಾನೂನಿನ ಚೌಕಟ್ಟಿನಲ್ಲೇ ನಮ್ಮ ತೆರಿಗೆ ವಿವಾದವನ್ನು ಇತ್ಯರ್ಥ ಪಡಿಸಲಾಗಿದೆ ಮತ್ತು ಫ್ರಾನ್ಸ್‍ನಲ್ಲಿ ಕಾರ್ಯಚರಿಸುತ್ತಿರುವ ಎಲ್ಲ ಕಂಪನಿಗಳಿಗೂ ಈ ಸವಲತ್ತು ಸಿಗುತ್ತಿದೆ ಎಂದು ಹೇಳಿದೆ.
ಫ್ರೆಂಚ್ ತೆರಿಗೆ ಸಂಸ್ಥೆ, ರಿಲಯನ್ಸ್ ಫ್ಲ್ಯಾಗ್ ಅಟ್ಲಾಂಟಿಕ್ ಫ್ರಾನ್ಸ್ ಕಂಪನಿಯಿಂದ 151 ದಶಲಕ್ತ ಯೂರೋ ಪಾವತಿಯನ್ನು ಕೇಳಿತ್ತು. ಅಂತಿಮವಾಗಿ ಈ ತೆರಿಗೆ ವಿವಾದ ಇತ್ಯರ್ಥಗೊಳ್ಳುವಲ್ಲಿ ಅದು 7.3 ದಶಲಕ್ಷ ಯೂರೋ ಸ್ವೀಕರಿಸಿತು. ರಿಲಯನ್ಸ್ ಫ್ಯಾಗ್ ಸಂಸ್ಥೆ ಫ್ರಾನ್ಸ್‍ನಲ್ಲಿ ಟೆರೆಸ್ಟ್ರಿಯಲ್ ಕೇಬಲ್ ನೆಟ್ ವರ್ಕ್ ಮತ್ತು ಇತರ ಟೆಲಿಕಾಂ ಮೂಲ ಸೌಕರ್ಯಗಳ ಒಡೆತನವನ್ನು ಹೊಂದಿದೆ.
2015ರ ಅಕ್ಟೋಬರ್‍ನಲ್ಲಿ ಭಾರತ ಮತ್ತು ಫ್ರಾನ್ಸ್ ಕಂಪೆನಿ ಡಸಾಲ್ಟ್ ಏವಿಯೇಷನ್ ಮಾತುಕತೆ ವ್ಯವಹಾರ ನಡೆಸುವ ಸಂದರ್ಭದಲ್ಲಿ ಅಂಬಾನಿಗೆ ಸೇರಿದ ಕಂಪನಿಯ ತೆರಿಗೆ ವಿವಾದವನ್ನು ಬಗೆಹರಿಸಲಾಗಿತ್ತು ಎಂದು ಲೀ ಮಾಂಡ್ ವರದಿ ಮಾಡಿದೆ.
ಇದಕ್ಕೂ ಕೆಲವು ತಿಂಗಳ ಮೊದಲು 2015ರ ಏಪ್ರಿಲ್‍ನಲ್ಲಿ ನರೇಂದ್ರ ಮೋದಿ ಫ್ರಾನ್ಸ್‍ಗೆ ಅಧಿಕೃತ ಭೇಟಿ ನೀಡಿದ ವೇಳೆ ಡಸಾಲ್ಟ್ ಏವಿಯೇಷನ್‍ನಿಂದ 36 ಯುದ್ಧ ಮಾನಗಳ ಖರೀದಿ ಒಪ್ಪಂದವನ್ನು ಪ್ರಕಟಿಸಿದ್ದರು.