ಮಧೂರು: ಶೋಕಿ ಬದುಕಿನ ಬೆನ್ನತ್ತಿ ಹೋಗುವುದರಿಂದ ನಮ್ಮ ಭಾಷೆ, ಕಲೆ, ಸಂಸ್ಕøತಿ ನಾಶವಾಗುತ್ತಿದೆ. ನಮ್ಮತನದ ಮಹತ್ವವನ್ನು ಅರಿತವರು ಅವರ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕøತಿಯ ಮಹತ್ವವನ್ನು ತಿಳಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಕಾಸರಗೋಡು ಸಿರಿಚಂದನ ಕನ್ನಡ ಯುವಬಳಗ ಇದರ ಉದ್ಯೋಗ ಮಾಹಿತಿ ಸರಣಿ ಸಮಿತಿ ಸಂಚಾಲಕ ಹಾಗೂ ಅಧ್ಯಾಪಕ ಮಹೇಶ ಏತಡ್ಕ ಅಭಿಪ್ರಾಯಪಟ್ಟರು.
ಉಳಿಯತಡ್ಕ ಪರಕ್ಕಿಲ ಸಮೀಪದ ಸುಂದರಿ ಯು. ಅವರ ನಿವೇದಿತಾ ನಿವಾಸದಲ್ಲಿ ಇತ್ತೀಚೆಗೆ ನಡೆದ ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು ಸಂಸ್ಥೆಯ ಹದಿನಾಲ್ಕನೇ ಯಕ್ಷನುಡಿಸರಣಿ ಮನೆಮನೆ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾವಂತರಾದವರಲ್ಲಿ ಆಂಗ್ಲವ್ಯಾಮೋಹ ಮತ್ತು ಶೋಕಿ ಬದುಕು ಹೆಚ್ಚಾಗುತ್ತಿದೆ. ಇದರಿಂದ ಮುಂದಿನ ಪೀಳಿಗೆಯು ಹಲವಾರು ಹೊಣೆಗಾರಿಕೆಗಳಿಂದ ನುಣುಚಿಕೊಳ್ಳುವಂತಾಗುತ್ತಿದೆ. ಪ್ರಾದೇಶಿಕ ಭಾಷೆ, ಕಲೆ, ಸಾಹಿತ್ಯ ಮತ್ತು ಸಂಸ್ಕøತಿಗಳಿಗೆ ಬಲವಾದ ಹೊಡೆತ ಬೀಳಲಿದೆ ಎಂದು ಮಹೇಶ ಏತಡ್ಕ ನುಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಜಾಗೃತಿ ಉಪನ್ಯಾಸ ನೀಡಿದ ಬಳಗದ ಸದಸ್ಯೆ ಹಾಗೂ ಬಿ. ಎಡ್. ವಿದ್ಯಾರ್ಥಿನಿ ಅಮೃತಾ ಜೆ. ಎಸ್. ಮಾತನಾಡಿ, ಕಾಸರಗೋಡಿನ ಹಲವು ಕನ್ನಡ ಸಮಸ್ಯೆಗಳಿಗೆ ಕನ್ನಡಿಗರ ನಿರುತ್ಸಾಹವೇ ಕಾರಣವಾಗುತ್ತಿದೆ. ಮೊದಲಿಗೆ ಕನ್ನಡಿಗರಲ್ಲಿ ಅಥವಾ ಕನ್ನಡದಿಂದಾಗಿ ಉದ್ಯೋಗ ಪಡೆದವರಲ್ಲಿ ಪ್ರಜ್ಞಾವಂತಿಕೆ ಉಂಟಾಗಬೇಕು ಎಂದರು.
ದೈವಾರಾಧಕರಾದ ಸಂಕ್ರಾಂತಿ ಕೈಲಂಕಜೆ ಅವರು ದೀಪಜ್ವಲನೆ ನಡೆಸಿದರು. ಡಾ. ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉಪಸ್ಥಿತರಿದ್ದರು. ಸುಂದರಿ ಯು. ಸ್ವಾಗತಿಸಿ, ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಗೋಪಾಲ ಯು. ವಂದಿಸಿದರು. ಕಾರ್ತಿಕ್ ಪಡ್ರೆ ಕಲಾವಿದರನ್ನು ಪರಿಚಯಿಸಿದರು. ವೈಷ್ಣವಿ ಆರ್. ಪ್ರಾರ್ಥನೆ ಹಾಡಿದರು. ಬಳಗದ ಉಪಾಧ್ಯಕ್ಷ ಪ್ರಶಾಂತ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಯುವಬಳಗದ ಕಲಾವಿದರಿಂದ ವೀರಮಣಿ ಕಾಳಗ ಕಥಾಭಾಗದ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ರವಿಶಂಕರ ಮಧೂರು, ಸಚಿನ್ ಶೆಟ್ಟಿ ಕುದ್ರೆಪ್ಪಾಡಿ, ಚೆಂಡೆಮದ್ದಳೆಯಲ್ಲಿ ಮುರಳಿ ಮಾಧವ ಮಧೂರು, ಸುದರ್ಶನ್ ಕಲ್ಲೂರಾಯ ಮಧೂರು ಸಹಕರಿಸಿದರು. ಮುಮ್ಮೇಳದಲ್ಲಿ ನವೀನ ಕುಂಟಾರು(ವೀರಮಣಿ), ದಿವಾಕರ ಬಲ್ಲಾಳ್ ಎ. ಬಿ. (ಹನುಮಂತ), ಶಶಿಧರ ಕುದಿಂಗಿಲ(ಶಿವ), ಕಾರ್ತಿಕ್ ಪಡ್ರೆ(ಶತ್ರುಘ್ನ), ಶ್ರದ್ಧಾ ಭಟ್ ನಾಯರ್ಪಳ್ಳ(ರುಕ್ಮಾಂಗ ಮತ್ತು ರಾಮ) ಸಹಕರಿಸಿದರು. ದಿವಾಣ ಶಿವಶಂಕರ ಭಟ್ ಹಾಗೂ ಡಾ. ರತ್ನಾಕರ ಮಲ್ಲಮೂಲೆ ಮಾರ್ಗದರ್ಶನ ನೀಡಿದರು.