ಮಂಜೇಶ್ವರ: 1919 ರಲ್ಲಿ ಸ್ಥಾಪನೆಗೊಂಡ ಮಂಗಳೂರು ಧರ್ಮ ಪ್ರಾಂತ್ಯದಲ್ಲಿ 124 ಧರ್ಮ ಕೇಂದ್ರಗಳ ಪೈಕಿಯಲ್ಲೊಂದಾಗಿರುವ ಮಂಗಳೂರು ಧರ್ಮ ಪ್ರಾಂತ್ಯದ ಅಧೀನದಲ್ಲಿರುವ ಮಂಜೇಶ್ವರ ಮರ್ಸಿ ಅಮ್ಮನವರ ದೇವಾಲಯದಲ್ಲಿ ಸ್ವತಂತ್ರ ಚರ್ಚ್ ನಲ್ಲಿ 2018 ರ ಮೇ 22 ರಂದು ಅಂದಿನ ಬಿಷಪ್ ಅತಿ ವಂದನೀಯ ಗುರು ಡಾಕ್ಟರ್ ಅಲೋಶಿಯಸ್ ಪಾವ್ಲ್ ಡಿ ಸೋಜ ಅವರಿಂದ ಉದ್ಘಾಟನೆಗೊಂಡ ಶತಮಾನೋತ್ಸವದ ಸಮಾರೋಪ ಸಮಾರಂಭ ವಿವಿಧ ಕಾರ್ಯಕ್ರಮಗಳೊಂದಿಗೆ ಮೇ 1 ರಂದು ಸಮಾರೋಪಗೊಳ್ಳಲಿರುವುದಾಗಿ ಮಂಜೇಶ್ವರ ಮರ್ಸಿ ಅಮ್ಮನವರ ದೇವಾಲಯದ ಧರ್ಮಗುರು ಅತಿ ವಂದನೀಯ ವೆಲೇರಿಯನ್ ಲೂಯಿಸ್ ರವರು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶತಮಾನೋತ್ಸ ಸ್ಮಾರಕ ಕಟ್ಟಡವಾಗಿ ಮರ್ಸಿ ಅಮ್ಮನವರ ನೂತನ ಇಗರ್ಜಿಯನ್ನು ಉದ್ಘಾಟಿಸಿ ಅಶೀರ್ವದಿಸಿ ಒಂದು ವರ್ಷಗಳ ಮಧ್ಯೆ ಕಾಸರಗೋಡು ವಲಯ ಯುವ ಸಮಾವೇಷ, ರಕ್ತದಾನ ಶಿಬಿರ, ವಿವಾಹಿತರ ದಿನ, ಕಾರ್ಮಿಕರ ದಿನ, ಕುಟುಂಬದ ದಿನ ಮಕ್ಕಳ ರಜಾ ಶಿಬಿರ ಸಹಿತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಇದೀಗ ಸಮಾರೋಪ ಸಮಾರಂಭ ವಂದನೀಯ ಗುರು ಡಾ. ಪೀಟರ್ ಪೌಲ್ ಸಾಲ್ಡಾನ ರವರ ಅಧ್ಯಕ್ಷತೆಯಲ್ಲಿ ಮೇ 1 ರಂದು ಸಂಜೆ 4.30 ಕ್ಕೆ ಬಲಿ ಪೂಜೆ, 5.45 ಕ್ಕೆ ಸಭಾ ಕಾರ್ಯಕ್ರಮ ಬಳಿಕ ವೇದಿಕೆಯಲ್ಲಿ ಭಿನ್ನ ಚೇತನ ಏಳು ಮಂದಿಗೆ ಪ್ರತಿ ತಿಂಗಳಿನಲ್ಲೂ 1000 ರೂ. ಜೀವನ ಪರ್ಯಂತ ಸಹಾಯ ಧನಕ್ಕೆ ಚಾಲನೆ, ಸಮುದಾಯದಲ್ಲಿರುವ ನಿರ್ಗತಿಕ ಕುಟುಂಬಗಳನ್ನು ಗುರುತಿಸಿ ಶಿಕ್ಷಣ ಹಾಗೂ ಆರೋಗ್ಯ ನಿಧಿಗೆ ಚಾಲನೆ, ಕಳೆದ ನೂರು ವರ್ಷಗಳಲ್ಲಿ ಇಗರ್ಜಿಯಲ್ಲಿ ಸೇವೆ ಸಲ್ಲಿಸಿರುವ ವಿವಿಧ ಧರ್ಮಗುರುಗಳಿಗೆ ಸನ್ಮಾನ, ಮೂರು ಬಡ ಕುಟುಂಬಗಳ ಮನೆಗಳ ದುರಸ್ಥಿಗೆ ಸಹಾಯ, ``ಝೈತ್" ಸ್ಮರಣ ಸಂಚಿಕೆ ಬಿಡುಗಡೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಸಂದರ್ಭ ವಿವಿಧ ಚರ್ಚ್‍ಗಳ ಧರ್ಮಗುರುಗಳು, ಜನ ಪ್ರತಿನಿಧಿಗಳು ಸೇರಿದಂತೆ ಹಲವು ಗಣ್ಯರುಗಳು ಉಪಸ್ಥರಿರುವರು. ಬಳಿಕ ಸರ್ವ ಜನತೆಗೂ ಅನ್ನ ವಿತರಣೆ ನಡೆಯಲಿರುವುದಾಗಿ ತಿಳಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ಪಾಲನಾ ಪರಿಷತ್ ಉಪಾಧ್ಯಕ್ಷೆ ಜೀನ್ ಲವಿನಾ ಮೊಂತೇರೋ, ರೆಮಿ ಡಿ ಸೋಜ, ರೀನಾ ಮೊಂತೇರೋ, ವಿಜಿತ್ ಡಿ ಸೋಜ, ಡೆರಕ್ ಮೊಂತೇರೋ ಮೊದಲಾದವರು ಉಪಸ್ಥಿತರಿದ್ದರು.