ಬೆಂಗಳೂರು: ಭಾರತೀಯ ಚಿತ್ರರಂಗಕ್ಕೆ ಕನ್ನಡ ಚಿತ್ರೋದ್ಯಮದ ತಾಕತ್ತಿನ ಪರಿಚಯ ಮಾಡಿಸಿದ್ದ ಕೆಜಿಎಫ್ ಚಿತ್ರದ ಚಾಪ್ಟರ್ 2ಗಾಗಿ ನಡೆಯುತ್ತಿರುವ ಆಡಿಷನ್ ಗೆ ಜನಸಾಗರವೇ ಹರಿದು ಬರುತ್ತಿರುವುದಾಗಿ ತಿಳಿದುಬಂದಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ನಗರದ ಮಲ್ಲೇಶ್ವರಂನಲ್ಲಿ ಆಡಿಷನ್ ನಡೆಯುತ್ತಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಆಡಿಷನ್ ಗೆ ಜನಸಾಗರವೇ ಹರಿದು ಬರುತ್ತಿದೆ. ಶುಕ್ರವಾರ ನಡೆದ ಆಡಿಷನ್ ಗೆ ಸಾವಿರಾರು ಮಂದಿ ಆಗಮಿಸಿದ್ದು, ಕೆಜಿಎಫ್ 2 ಚಿತ್ರಕ್ಕಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಜಿಎಂ ರಿಜಾಯ್ಸ್ ಸ್ಟುಡಿಯೋದಲ್ಲಿ ಆಡಿಷನ್ ಗಳು ನಡೆಯುತ್ತಿದ್ದು, ಸುಮಾರು 7 ಸಾವಿರಕ್ಕೂ ಅಧಿಕ ಮಂದಿ ಆಡಿಷನ್ ನಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗಷ್ಟೇ ಕೆಜಿಎಫ್ ಚಿತ್ರವನ್ನು ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ್ ಸಂಸ್ಥೆ ತನ್ನ ಟ್ವಿಟರ್ ಖಾತೆಯಲ್ಲಿ ಆಡಿಷನ್ ಕುರಿತು ಜಾಹಿರಾತು ನೀಡಿತ್ತು. 8 ರಿಂದ 12 ವರ್ಷ ವಯಸ್ಸಿನ ಮಕ್ಕಳು, 25 ವರ್ಷ ಮೇಲ್ಪಟ್ಟ ಯುವಕರು ಹಾಗೂ ಮಧ್ಯ ವಯಸ್ಕರನ್ನು ಆಡಿಷನ್ ಗೆ ಆಹ್ವಾನಿಸಿತ್ತು. ಅದರಂತೆ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೂ ಆಡಿಷನ್ ನಡೆಯಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹೊಂಬಾಳೆ ಫಿಲಂಸ್ ನ ಕಾರ್ತಿಕ್ ಗೌಡ ಅವರು, ಚಿತ್ರದ 15 ಪಾತ್ರಗಳಿಗೆ ಆಡಿಷನ್ ನಡೆಸಲಾಗುತ್ತಿದೆ. ಆದರೆ ಇಲ್ಲಿ ಸೇರಿರುವ ಜನರನ್ನು ನೋಡಿದರೆ ಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಬೆಂಬಲ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಬೆಳಗ್ಗೆ 5 ಗಂಟೆಯಿಂದಲೇ ಕ್ಯೂ!:
ಆಡಿಷನ್ ಆರಂಭವಾಗುವುದು ಬೆಳಗ್ಗೆ 10ಗಂಟೆಗೇ ಆದರೂ, ಬೆಳಗ್ಗೆ5 ಗಂಟೆಯಿಂದಲೇ ಸ್ಟುಡಿಯೋ ಮುಂದೆ ಜನರ ಜಮಾವಣೆ ಆರಂಭವಾಗಿತ್ತು. ಈ ಪೈಕಿ ಹಲವರು ಬೆಳಗಿನ ತಿಂಡಿ ಕೂಡ ಮಾಡದೇ ತಮ್ಮ ಸರದಿಗಾಗಿ ಕಾಯುತ್ತಿದ್ದರು. ಹೊರಗಡೆ ಅಂಗಡಿಗಳಿಂದ ತಂದಿದ್ದ ಹಣ್ಣುಗಳನ್ನೇ ತಿಂದು ಆಡಿಷನ್ ಗೆ ಸಿದ್ಧರಾಗಿದ್ದರು. ಅಚ್ಚರಿ ಎಂದರೆ ದೊಡ್ಡವರು ಮಾತ್ರವಲ್ಲದೇ ಮಕ್ಕಳೂ ಕೂಡ ಆಡಿಷನ್ ಗಾಗಿ ಕ್ಯೂನಲ್ಲಿ ನಿಂತಿದ್ದರು. ಇನ್ನು ನಾಗರಾಜ್ ಎಂಬುವವರು ಆಡಿಷನ್ ನಲ್ಲಿ ಪಾಲ್ಗೊಂಡಿದ್ದು, ಈ ಬಗ್ಗೆ ಮಾತನಾಡಿರುವ ಅವರು, 'ನಾನು ಪಕ್ಕಾ ರಾಜ್ ಕುಮಾರ್ ಅವರ ಅಭಿಮಾನಿ. ನಾನು ಎಂದಿಗೂ ನಟನೆ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ನಟನೆಯಲ್ಲಿ ನನ್ನ ಅದೃಷ್ಟ ಪರೀಕ್ಷೆಗೆ ಬಂದಿದ್ದೇನೆ. ಒಂದು ವೇಳೆ ನಗೆ ಅವಕಾಶ ಸಿಕ್ಕರೆ ನನ್ನ ಕೆಲಸ ಬಿಟ್ಟು, ನಟನೆಯನ್ನೇ ವೃತ್ತಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಗಡ್ಡ ಕೂದಲು ಬಿಟ್ಟವರಿಗೆ ಪ್ರವೇಶ ಸುಲಭ ಕೆಜಿಎಫ್ ಚಿತ್ರದ ನಟರು ತಮ್ಮ ಗಡ್ಡ ಮತ್ತು ಕೂದಲಿನಿಂದಲೇ ಖ್ಯಾತಿ ಗಳಿಸಿದವರು. ಚಾಪ್ಟರ್ 2ನಲ್ಲೂ ಕೂಡ ಗಡ್ಡ ಮೀಸೆಗೆ ಅದರದೇ ಆದ ಪ್ರಧಾನ್ಯತೆ ಇದೆ ಎಂದು ಈ ಹಿಂದೆ ನಿರ್ದೇಶಕ ಪ್ರಶಾಂತ್ ನೀಲ್ ತಿಳಿಸಿದ್ದರು. ಇದೇ ಕಾರಣಕ್ಕೆ ಆಡಿಷನ್ ಗೆ ಬಂದಿದ್ದವರ ಪೈಕಿ ಬಹುತೇಕ ಮಂದಿ ಗಡ್ಡ ಮೀಸೆ ಬಿಟ್ಟಿದ್ದರು. ಅಂತೆಯೇ ಈ ರೀತಿ ಗಡ್ಡ ಮೀಸೆ ಬಿಟ್ಟಿದ್ದವರಿಗೆ ಪ್ರವೇಶ ಕೂಡ ಸುಲಭವಾಗಿತ್ತು. ಆಡಿಷನ್ ಗೆ ಬಂದಿದ್ದವರ ಪೈಕಿ ಕೋಲಾರದ ಬಂಗಾರಪೇಟೆ ಮೂಲಕ ಮೋಹನ್ ರಾಜ್ ಅವರು ತಮ್ಮ ಗಡ್ಡ ಮತ್ತು ಮೀಸೆ ನಿರ್ವಹಣೆಗಾಗಿಯೇ ತಿಂಗಳಿಗೆ ಐದು ಸಾವಿರ ಖರ್ಚು ಮಾಡುತ್ತಿದ್ದಾರಂತೆ. ಕಳೆದ 2 ವರ್ಷಗಳಿಂದ ಅವರು ಗಡ್ಡ ಮೀಸೆ ಬಿಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಆಟೋ ಚಾಲನೆ ಬಿಟ್ಟು, ಮಜ್ಜಿಗೆ ಮಾರಿ ಹಣ ಸಂಪಾದಿಸಿದ ಆಟೋ ಚಾಲಕ!:
ಒಂದೆಡೆ ಆಡಿಷನ್ ಗಾಗಿ ಜನ ಮುಗಿಬಿದ್ದಿದ್ದರೆ ಮತ್ತೊಂದೆಡೆ ಇಲ್ಲಿ ಓರ್ವ ಆಟೋ ಚಾಲಕ ಇದೇ ಜಾಗದಲ್ಲಿ ಮಜ್ಜಿಗೆ ಮಾರಿ ಹಣ ಸಂಪಾದಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಆಟೋ ಚಾಲಕ ನಾರಾಯಣ, 'ಬೆಳಗ್ಗೆ ಇಲ್ಲಿ ಆಡಿ|ನ್ ನಡೆಯುವ ಕುರಿತು ಮಾಹಿತಿ ತಿಳಿಯಿತು. ಕೂಡಲೇ 20 ಲೀಟರ್ ಮಜ್ಜಿಗೆ ತಯಾರಿಸಿ ಬಕೆಟ್ ನಲ್ಲಿ ಹಾಕಿಕೊಂಡು ಮಾರಾಟ ಮಾಡಿದೆ. ಕೆಲವೇ ಮೀಟರ್ ದೂರ ಆಟೋ ಓಡಿಸಿ ನನ್ನ ಇಡೀ ಒಂದು ದಿನದ ಸಂಪಾದನೆಗಿಂತ ಹೆಚ್ಚಿನ ಹಣವನ್ನೇ ಸಂಪಾದಿಸಿಕೊಂಡೆ ಎಂದು ಖುಷಿಯಿಂದ ಹೇಳಿದ್ದಾರೆ.