ಶ್ರೀನಗರ: ಪುಲ್ವಾಮ ಉಗ್ರ ದಾಳಿ ಬಳಿಕ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆದ್ದಾರಿ ಸಂಚಾರಿ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದ್ದು, ವಾರದಲ್ಲಿ 2 ದಿನ ಹೆದ್ದಾರಿಯಲ್ಲಿ ನಾಗರಿಕ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಜಾರಿಮಾಡಲಾಗಿದ್ದ ನಿಯಮ ಇಂದಿನಿಂದ ಅಧಿಕೃತವಾಗಿ ಜಾರಿಗೆ ಬಂದಿದೆ.
ಉಗ್ರರ ದಾಳಿಗಳಿಂದಾಗಿ ಕುಖ್ಯಾತಿಗೆ ಗುರಿಯಾಗಿರುವ ಜಮ್ಮು ಮತ್ತು ಕಾಶ್ಮೀರದ ಹೆದ್ದಾರಿಯಲ್ಲಿ ವಾರಕ್ಕೆ ಎರಡು ದಿನ ನಾಗರಿಕರ ವಾಹನ ಸಂಚಾರ ನಿಷೇಧಿಸಲಾಗಿದ್ದು, ಈ ಕ್ರಮ ಭಾನುವಾರದಿಂದ ಅಂದರೆ ಇಂದಿನಿಂದಲೇ ಜಾರಿಗೆ ಬಂದಿದೆ. ಹೆದ್ದಾರಿಯಲ್ಲಿ ನಾಗರಿಕ ವಾಹನ ಸಂಚಾರ ನಿಷೇಧ ಜಾರಿಗಾಗಿ ಬಾರಾಮುಲ್ಲಾದಿಂದ ಉಧಮ್ ಪುರವರೆಗಿನ ಸುಮಾರು 270 ಕಿ.ಮೀ. ದೂರದ ಹೆದ್ದಾರಿಯಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.
ಭದ್ರತಾ ಪಡೆಗಳ ವಾಹನ ಸಂಚಾರಕ್ಕಾಗಿ ವಾರದಲ್ಲಿ ಎರಡು ದಿನ ಈ ಕ್ರಮಕೈಗೊಳ್ಳಲಾಗುತ್ತದೆ. ಭಾನುವಾರ ಮತ್ತು ಬುಧವಾರ ಜಮ್ಮು ಮತ್ತು ಕಾಶ್ಮೀರ ಹೆದ್ದಾರಿಯಲ್ಲಿ ಭದ್ರತಾ ಪಡೆ ವಾಹನಗಳು ಮಾತ್ರ ಸಂಚರಿಸಲಿವೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸರ್ಕಾರದ ಈ ನಿರ್ಧಾರಕ್ಕೆ ಕಳೆದ ಫೆ.14ರಂದು ನಡೆದಿದ್ದ ಪುಲ್ವಾಮ ಉಗ್ರ ದಾಳಿಯೇ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಪುಲ್ವಾಮ ಹೆದ್ದಾರಿಯಲ್ಲಿ ಸಿಆರ್‍ಪಿಎಫ್ ಸಿಬ್ಬಂದಿ ಸಾಗುತ್ತಿದ್ದ ವಾಹನಗಳ ಮೇಲೆ ಉಗ್ರ ಸಂಘಟನೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿತ್ತು. ದಾಳಿಯಲ್ಲಿ 40 ಮಂದಿ ಸಿಆರ್‍ಪಿಎಫ್ ಯೋಧರು ಹುತ್ಮಾತ್ಮರಾಗಿದ್ದರು. ಇಂಥಹ ಘಟನೆಗಳು ಮರುಕಳಿಸದಂತೆ ಹಾಗೂ ಭದ್ರತಾ ಪಡೆಗಳ ಮೇಲೆ ಯಾವುದೇ ದಾಳಿ ತಡೆಯಲು ಸಹಕಾರಿಯಾಗುವಂತೆ ನಾಗರಿಕ ವಾಹನಗಳ ಸಂಚಾರ ನಿಷೇಧ ಕ್ರಮ ಜರುಗಿಸಲಾಗಿದೆ.
ತುರ್ತು ಸಂದರ್ಭಗಳಲ್ಲಿ ಮಾತ್ರ ಅನುಮತಿ:
ತುರ್ತು ಸಂದರ್ಭಗಳಲ್ಲಿ ಹೆದ್ದಾರಿಯಲ್ಲಿ ನಾಗರಿಕ ವಾಹನಗಳ ಸಂಚಾರಕ್ಕೆ ಅನುಮತಿ ಕಲ್ಪಿಸಲು ವಿಶೇಷ ಸಂಚಾರ ಪಾಸ್ ಗಳನ್ನು ಪಡೆಯಬೇಕಾಗುತ್ತದೆ. ತುರ್ತು ಸಂದರ್ಭ ಪರಿಶೀಲಿಸಿ ಪಾಸ್ ವಿತರಿಸುವ ಸೇವೆಗಳಿಗಾಗಿ ಡ್ಯೂಟಿ ಮ್ಯಾಜಿಸ್ಟ್ರೇಟ್ ಗಳನ್ನು ಹೆದ್ದಾರಿಯ ಹಲವು ಕಡೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾನುವಾರ ಬೆಳಗಿನಿಂದಲೇ ಹೆದ್ದಾರಿಯ ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿದ್ದವು. ಸಂಚಾರಕ್ಕೆ ಅನುಮತಿ ಕಲ್ಪಿಸಲು ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯ ಬಳಿ ಜನರು ಮೊರೆಯಿಡುತ್ತಿರುವುದು ಸಾಮಾನ್ಯವಾಗಿತ್ತು. ಆದರೆ, ಯಾವುದೇ ನಾಗರಿಕ ವಾಹನಗಳಿಗೆ ಹೆದ್ದಾರಿಯಲ್ಲಿ ಸಂಚಾರಿಸಲು ಅವಕಾಶವಿರಲಿಲ್ಲ.