(ನಿನ್ನೆಯಿಂದ ಮುಂದುವರಿದ ಭಾಗ:
ಏಳನೇ ಲೋಕಸಭೆ (1980-84)
ಅಧಿಕಾರದ ಮೇಲೆ ಒಂದು ಬಲವಾದ ಹಿಡಿತವನ್ನು ಹೊಂದಿರದ ಜನತಾಪಕ್ಷ ಅಧಿಕಾರವನ್ನು ಕಳೆದುಕೊಂಡ ನಂತರ 353 ಲೋಕಸಭಾ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತು. ಜನತಾಪಕ್ಷ ಅಥವಾ ಒಕ್ಕೂಟದ ಪೈಕಿ ಏನು ಉಳಿದುಕೊಂಡಿತ್ತೋ ಆ ಭಾಗವು 32 ಸ್ಥಾನಗಳನ್ನು ಗೆದ್ದುಕೊಂಡಿತು. ವರ್ಷಗಳಾಗುತ್ತಿದ್ದಂತೆ ಜನತಾಪಕ್ಷವು ಒಡೆಯುತ್ತಲೇ ಹೋಯಿತಾದರೂ, ದೇಶದ ರಾಜಕೀಯ ಇತಿಹಾಸದಲ್ಲಿ ಅದು ಒಂದು ಪ್ರಮುಖ ಹೆಗ್ಗುರುತನ್ನು ಅದು ದಾಖಲಿಸಿತ್ತು. ಅದೊಂದು ಪಕ್ಷಗಳ ಒಕ್ಕೂಟವಾಗಿದ್ದು, ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಸಾಧ್ಯವಿದೆ ಎಂಬುವುದನ್ನು ಅದು ಸಾಬೀತು ಮಾಡಿತ್ತು.
ಎಂಟನೇ ಲೋಕಸಭೆ (1984-89)
1984ರ ಅಕ್ಟೋಬರ್ 31ರಂದು ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಹತ್ಯೆಯಾದ ನಂತರ, ಸಿಖ್ ವಿರೋಧೀ ದಂಗೆಗಳು ಆರಂಭವಾದವು. ಇದೇ ಸಂದರ್ಭದಲ್ಲಿ ಲೋಕಸಭೆಯು ವಿಸರ್ಜಿಸಲ್ಪಟ್ಟಿತಲ್ಲದೇ ಮಧ್ಯಂತರ ಪ್ರಧಾನಮಂತ್ರಿಯಾಗಿ ರಾಜೀವ್ ಗಾಂಧಿಯವರು ಪ್ರಮಾಣವಚನ ಸ್ವೀಕರಿಸಿದರು. ತದನಂತರ 1984ರ ನವೆಂಬರ್ ನಲ್ಲಿ ಚುನಾವಣೆಗಳು ನಡೆಯುತ್ತವೆಯೆಂದು ಪ್ರಕಟಿಸಲಾಯಿತು. ಆದರೆ ಚುನಾವಣಾ ಪ್ರಚಾರದ ಸಮಯದಲ್ಲಿ ತಮ್ಮ ಕುಟುಂಬವು ನೀಡಿದ ಕೊಡುಗೆಯನ್ನು ರಾಜೀವ್ ಜನರಿಗೆ ನೆನಪಿಸಿದರಲ್ಲದೇ ಓರ್ವ ಸುಧಾರಕನ ರೀತಿಯಲ್ಲಿ ತಮ್ಮನ್ನು ಬಿಂಬಿಸಿಕೊಂಡರು. ಸಹಾನುಭೂತಿಯ ಅಲೆಯ ಮೇಲೆ ಸವಾರಿ ಮಾಡಿದ ಕಾಂಗ್ರೆಸ್ ನ ರಾಜೀವ್ ಗಾಂಧಿ ಅಧಿಕಾರದ ಚುಕ್ಕಾಣಿಯನ್ನೇರಿದರು.
ಕಾಂಗ್ರೆಸ್ 514 ಸ್ಥಾನಗಳಲ್ಲಿ 404 ಸ್ಥಾನಗಳನ್ನು ಗೆದ್ದುಕೊಂಡು ಪ್ರಚಂಡ ಬಹುಮತದ ವಿಜಯವೊಂದನ್ನು ದಾಖಲಿಸಿತು. ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಚೊಚ್ಚಲ ಚುನಾವಣೆಯಲ್ಲಿ 2 ಸೀಟುಗಳನ್ನು ಗೆದ್ದುಕೊಂಡಿತು. ಒಂದು ಗುಜರಾತ್ ನಲ್ಲಿ, ಇನ್ನೊಂದು ಆಂಧ್ರಪ್ರದೇಶ (ಈಗಿನ ತೆಲಂಗಾಣ)ದಲ್ಲಿ.
ಒಂಭತ್ತನೇ ಲೋಕಸಭೆ (1989-91)
1989ರ ಸಾರ್ವತ್ರಿಕ ಚುನಾವಣೆಗಳಲ್ಲಿ ಹೋರಾಡುವ ಹೊತ್ತಿಗೆ ರಾಜೀವ್ ಗಾಂಧಿ ರವರು ಒಳಗಿನ ಮತ್ತು ಹೊರಗಿನ ಹಲವಾರು ಬಿಕ್ಕಟ್ಟುಗಳಲ್ಲಿ ಸಿಲುಕಿಕೊಂಡಿದ್ದರು, ಮತ್ತು ಕಾಂಗ್ರೆಸ್ ಸರ್ಕಾರವು ವಿಶ್ವಾಸಾರ್ಹತೆ ಮತ್ತು ಜನಪ್ರಿಯತೆಯನ್ನು ಕಳೆದುಕೊಳ್ಳತೊಡಗಿತ್ತು. ಬೋಫೆÇರ್ಸ್ ಹಗರಣ, ಪಂಜಾಬಿನಲ್ಲಿ ಹೆಚ್ಚುತ್ತಿದ್ದ ಭಯೋತ್ಪಾದನೆ, ಎಲ್.ಟಿ.ಟಿ.ಇ ಮತ್ತು ಶ್ರೀಲಂಕಾದ ಸರಕಾರದ ನಡುವೆ ನಡೆಯುತ್ತಿದ್ದ ನಾಗರಿಕ ಯುದ್ಧ ಇವುಗಳೆಲ್ಲವೂ ರಾಜೀವ್ ರವರ ಸರ್ಕಾರದೆಡೆಗೆ ಕೆಂಗಣ್ಣು ಬೀರಿದ ಕೆಲವೊಂದು ಸಮಸ್ಯೆಗಳಾಗಿದ್ದವು.
ರಾಜೀವ್ ಗಾಂಧಿ ಸರಕಾರಕ್ಕೆ ವಿರುದ್ಧವಾಗಿ ನಿಂತಿದ್ದ ಎಲ್ಲಾ ಪಕ್ಷಗಳನ್ನು ಒಟ್ಟುಗೂಡಿಸುವ ದೃಷ್ಟಿಯಿಂದ, ಜನಮೋರ್ಚಾ, ಜನತಾಪಕ್ಷ, ಲೋಕದಳ ಮತ್ತು ಕಾಂಗ್ರೆಸ್ (ಎಸ್) ಪಕ್ಷಗಳನ್ನು ವಿಲೀನಗೊಳಿಸಿ, 1988ರ ಅಕ್ಟೋಬರ್ 11ರಂದು ಜನತಾದಳವನ್ನು ರೂಪಿಸಲಾಯಿತು. ಕೆಲವೇ ದಿನಗಳಲ್ಲಿ ಡಿ.ಎಮ್.ಕೆ, ಟಿ.ಡಿ.ಪಿ ಮತ್ತು ಎ.ಜಿ.ಪಿಗಳನ್ನು ಒಳಗೊಂಡಂತೆ ಜನತಾದಳದ ಸುತ್ತ ಅನೇಕ ಪ್ರಾದೇಶಿಕ ಪಕ್ಷಗಳು ಒಟ್ಟುಗೂಡಿಸಲ್ಪಟ್ಟವು ಹಾಗೂ ಈ ರೀತಿಯಲ್ಲಿ ರಾಷ್ಟ್ರೀಯರಂಗವು ರೂಪುಗೊಂಡಿತು. ಎರಡು ಕಮ್ಯುನಿಸ್ಟ್ ಪಕ್ಷಗಳಾದ ಭಾರತದ ಕಮ್ಯುನಿಸ್ಟ್ ಪಕ್ಷ-ಮಾಕ್ರ್ಸ್ ವಾದಿ (ಸಿಪಿಐ-ಎಮ್) ಹಾಗೂ ಭಾರತದ ಕಮ್ಯುನಿಸ್ಟ್ ಪಕ್ಷ (ಸಿಪಿಐ), ಮತ್ತು ಭಾರತೀಯ ಜನತಾಪಕ್ಷ (ಬಿಜೆಪಿ) ಇವುಗಳೊಂದಿಗೆ ಕೈಜೋಡಿಸಿದ ನಂತರ, 1989ರಲ್ಲಿ ನಡೆದ ಚುನಾವಣಾ ಕಣಕ್ಕೆ ಇಳಿಯಿತು.
ರಾಷ್ಟ್ರೀಯರಂಗದ ಅತಿದೊಡ್ಡ ಘಟಕವಾಗಿದ್ದ ಜನತಾದಳವು 143 ಸ್ಥಾನಗಳನ್ನು ಗೆದ್ದರೆ, ಸಿಪಿಐ-ಎಮ್ ಮತ್ತು ಸಿಪಿಐಗಳು ಕ್ರಮವಾಗಿ 33 ಮತ್ತು 12 ಸ್ಥಾನಗಳನ್ನು ಗಳಿಸಿದವು. ಸ್ವತಂತ್ರ ಅಭ್ಯರ್ಥಿಗಳು ಮತ್ತು ಇತರ ಸಣ್ಣದಾದ ಪಕ್ಷಗಳಿಗೆ ಸೇರಿದವರು 59 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ವಿಶ್ವನಾಥ್ ಪ್ರತಾಪ್ ಸಿಂಗ್ (ವಿ.ಪಿ. ಸಿಂಗ್) ಪ್ರಧಾನಿಯಾದರು. ಜನತಾ ದಳದ ಅವರ ಪ್ರತಿಸ್ಪರ್ಧಿ ಚಂದ್ರಶೇಖರ್ ಅವರು 1990 ರಲ್ಲಿ ಸಮಾಜವಾದಿ ಜನತಾ ಪಕ್ಷವನ್ನು ರಚಿಸಿದ ಸಂದರ್ಭದಲ್ಲಿ ವಿ.ಪಿ.ಸಿಂಗ್ ಅವರು ಕೆಳಗಿಳಿಯಬೇಕಾಯಿತು. 1990 ರಲ್ಲಿ ಕಾಂಗ್ರೆಸ್ ನ ಬಾಹ್ಯ ಬೆಂಬಲದೊಂದಿಗೆ ಚಂದ್ರಶೇಖರ್ ಪ್ರಧಾನಿಯಾದರು. ಜನತಾ ದಳದ ಅವರ ಪ್ರತಿಸ್ಪರ್ಧಿ ಚಂದ್ರಶೇಖರ್ ಅವರು 1990 ರಲ್ಲಿ ಮುರಿದು ಸಮಾಜವಾದಿ ಜನತಾ ಪಕ್ಷವನ್ನು ರಚಿಸಿದರು. ಇದರ ಪರಿಣಾಮವಾಗಿ, ವಿ.ಪಿ.ಸಿಂಗ್ ಅವರು ಕೆಳಗಿಳಿಯಬೇಕಾಯಿತು. 1990 ರಲ್ಲಿ ಕಾಂಗ್ರೆಸ್ ನ ಬಾಹ್ಯ ಬೆಂಬಲದೊಂದಿಗೆ ಚಂದ್ರಶೇಖರ್ ಪ್ರಧಾನಿಯಾಗಿದ್ದರು. ಆದರೆ ಅವರ ಸರಕಾರವು ರಾಜೀವ್ ಗಾಂಧಿಯವರ ಮೇಲೆ ಗೂಢಚಾರಿಕೆ ನಡೆಸುತ್ತಿದೆ ಎಂಬುದಾಗಿ ಕಾಂಗ್ರೆಸ್ ಆಪಾದಿಸಿದ ನಂತರ, 1991ರ ಮಾರ್ಚ್ 6ರಂದು ಅವರು ಅಂತಿಮವಾಗಿ ರಾಜೀನಾಮೆ ನೀಡಿದರು.
ಹತ್ತನೇ ಲೋಕಸಭೆ (1991-96)
ಮಂಡಲ್ ಆಯೋಗದ ಉಪ-ಪರಿಣಾಮಗಳು ಮತ್ತು ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದಂಥ ವಿಚಾರಗಳು ಚುನಾವಣೆಯಲ್ಲಿ ಪ್ರಸ್ತಾವಿಸಲ್ಪಡಬಹುದಾದ ಎರಡು ಅತ್ಯಂತ ಪ್ರಮುಖ ವಿವಾದಗಳಾಗಿತ್ತು. ಆದರೆ ಮೇ 20ರಂದು ನಡೆದ ಮೊದಲ ಸುತ್ತಿನ ಮತದಾನದ ಒಂದು ದಿನದ ನಂತರ, ಹಿಂದಿನ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರು ಶ್ರೀಪೆರಂಬುದೂರ್ ಎಂಬಲ್ಲಿ ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದ ಸಂದರ್ಭದಲ್ಲಿ, ಲಿಬರೇಷನ್ ಟೈಗರ್ ಆಫ್ ತಮಿಳ್ ಈಳಂ ಗುಂಪಿಗೆ ಸೇರಿದವರಿಂದ ಹತರಾದರು. ಹಾಗಾಗಿ ಜೂನ್-ಮಧ್ಯಭಾಗದವರೆಗೆ ಉಳಿದ ಚುನಾವಣಾ ದಿನಗಳು ಮುಂದೂಡಲ್ಪಟ್ಟವು.
ಜೂನ್ 12 ಮತ್ತು ಜೂನ್ 15ರಂದು ಅಂತಿಮವಾಗಿ ಮತದಾನವು ನಡೆಯಿತು. ಸಂಸತ್ತಿನ ಚುನಾವಣೆಗಳ ಇತಿಹಾಸದಲ್ಲಿಯೇ ಅತಿ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆಯಿತು. ಕೇವಲ 53 ಪ್ರತಿಶತದಷ್ಟು ಮತದಾರರು ತಮ್ಮ ವಿಶೇಷಾಧಿಕಾರವನ್ನು ಚಲಾಯಿಸಿದರು. ವಿಪಿಸಿಂಗ್ ಸರಕಾರದ ವತಿಯಿಂದ ಅನುಷ್ಠಾನಗೊಳಿಸಲ್ಪಟ್ಟ ಮಂಡಲ್ ಆಯೋಗದ ವರದಿಯು ಸರಕಾರಿ ಉದ್ಯೋಗಗಳಲ್ಲಿ ಇತರ ಹಿಂದುಳಿದ ಜಾತಿಗಳಿಗೆ (ಒಬಿಸಿ) 27 ಪ್ರತಿಶತದಷ್ಟು ಮೀಸಲಾತಿಯನ್ನು ನೀಡಿ, ಮುಂದುವರಿದ ಜಾತಿಗಳಿಂದ ದೇಶಾದ್ಯಂತ ವ್ಯಾಪಕವಾಗಿ ಹಬ್ಬಿದ ಹಿಂಸಾಚಾರ ಮತ್ತು ಪ್ರತಿಭಟನೆಗಳಿಗೆ ಕಾರಣವಾಯಿತು. ಜಾತಿ ಮತ್ತು ಧಾರ್ಮಿಕ ಧೋರಣೆಗಳ ಮೇಲೆ ಮತದಾರ ಸಮುದಾಯವು ಧ್ರುವೀಕರಣಗೊಂಡಿತು.
ಕಾಂಗ್ರೆಸ್ 232 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಬಿಜೆಪಿ 521 ಸ್ಥಾನಗಳಲ್ಲಿ 120 ಸ್ಥಾನಗಳನ್ನು ಗೆದ್ದಿತು. ಕೇವಲ 59 ಸ್ಥಾನಗಳನ್ನು ಗಳಿಸಿದ ಜನತಾದಳ ದೂರದ ಒಂದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಜೂನ್ 21ರಂದು, ಕಾಂಗ್ರೆಸ್ಸಿ ನ ಪಿ.ವಿ ನರಸಿಂಹ ರಾವ್ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನೆಹರೂ-ಗಾಂಧಿ ಕುಟುಂಬಕ್ಕೆ ಸೇರಿದವರಾಗಿರದೆ ಪ್ರಧಾನಮಂತ್ರಿಯಾದ ಕಾಂಗ್ರೆಸ್ಸಿಗರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಮೊದಲಿಗರಾಗಿದ್ದರೆ ರಾವ್ ಎರಡನೆಯವರಾಗಿದ್ದರು.
ನಾಳೆಗೆ ಮುಂದುವರಿಯುವುದು.................