ರಾಜ್ಯದಲ್ಲಿ 400ರಷ್ಟು ಅನಾಥಾಲಯಗಳು ಮುಚ್ಚುವ ಭೀತಿಯಲ್ಲಿ!
0
ಏಪ್ರಿಲ್ 01, 2019
ಕುಂಬಳೆ: ರಾಜ್ಯದಲ್ಲಿ ನಾನೂರರಷ್ಟು ಅನಾಥಾಲಯಗಳು ಮುಚ್ಚುವ ಭೀತಿಯಲ್ಲಿರುವುದಾಗಿ ತಿಳಿದುಬಂದಿದೆ. ರಾಜ್ಯದಲ್ಲಿ ಮಕ್ಕಳ ಸಂರಕ್ಷಣಾ ಹಕ್ಕು ಕಾನೂನು ಜಾರಿಗೊಳಿಸುವುದರ ಅಂಗವಾಗಿ ವ್ಯವಸ್ಥೆಗಳನ್ನು ಕಟ್ಟುನಿಟ್ಟುಗೊಳಿಸಿದ ಹಿನ್ನೆಲೆಯಲ್ಲಿ ಅನಾಥಾಶ್ರಮಗಳನ್ನು ನಡೆಸಲು ಸಾಧ್ಯವಾಗದ ಕಾರಣ ಮುಚ್ಚಲು ತೀರ್ಮಾಸಲಾಗಿದೆ.
ಮಾರ್ಚ್ ಕೊನೆಯಲ್ಲಿ ಈ ವರ್ಷದ ಶೈಕ್ಷಣಿಕ ಅಧ್ಯಯನ ಮುಕ್ತಾಯಗೊಳ್ಳುವಾಗ ಅನೇಕ ಅನಾಥಾಶ್ರಮಗಳು ಈಗಾಗಲೇ ಆರ್ಫನೇಜ್ ಕಂಟ್ರೊಲ್ ಬೋರ್ಡ್ ಹಾಗೂ ಸರಕಾರಕ್ಕೆ ಲಿಖಿತವಾಗಿ ಮುಚ್ಚುವ ಬಗ್ಗೆ ತಿಳಿಸಿವೆ. ಬೇಸಿಗೆ ರಜೆಯಲ್ಲಿ ತೆರಳುವ ವಿದ್ಯಾರ್ಥಿಗಳು ತಿರುಗಿ ಅನಾಥಾಶ್ರಮಕ್ಕೆ ಬರುವುದು ಬೇಡ ಎಂದು ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
ಮಕ್ಕಳ ಹಕ್ಕು ಕಾನೂನು ಅನುಷ್ಠಾನಗೊಳಿಸುವ ಸಲುವಾಗಿ ಉಂಟಾಗುವ ಪ್ರಾಯೋಗಿಕ ಸಮಸ್ಯೆಗಳನ್ನು ಪರಿಹರಿಸಲು ನಿಯಮಗಳನ್ನು ರಚಿಸಲು ಸಾಮಾಜಿಕ ನ್ಯಾಯ ಇಲಾಖೆ ಈ ಮೊದಲೇ ಭರವಸೆ ನೀಡಿದರೂ ಈ ತನಕ ಅದನ್ನು ಪಾಲಿಸಿಲ್ಲ. ಮಕ್ಕಳ ಹಕ್ಕು ಕಾನೂನು ಪ್ರಕಾರ ನೋಂದಾಯಿಸಿದ ಸಂಸ್ಥೆಗಳಿಗೆ ಭರವಸೆ ನೀಡಿದ ಆರ್ಥಿಕ ಸಹಾಯವನ್ನೂ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅನಾಥಾಶ್ರಮ ನಡೆಸುವ ಸಂಸ್ಥೆಗಳು ಇನ್ನು ಮುಚ್ಚುವುದಲ್ಲದೆ ಬೇರೆ ದಾರಿ ಕಾಣದೆ ಮುಂದಿನ ಶೈಕ್ಷಣಿಕ ವರ್ಷದಿಂದ ಇಲ್ಲಿಗೆ ಬಾರದಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿವ ಕ್ರಮಕ್ಕೆ ಮುಂದಾಯಿತು.
ಸಮಸ್ತ ಸಂಘಟನೆ(ಮುಸ್ಲಿಂ ಸಂಘಟನೆ) ನೀಡಿದ ಮನವಿಯಂತೆ ಸರ್ವೋಚ್ಚ ನ್ಯಾಯಾಲಯವು ಯಥಾ ಸ್ಥಿತಿಯನ್ನು ಮುಂದುವರಿಸುವಂತೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮುಸ್ಲಿಂ ಯತೀಂಖಾನಗಳಿಗೆ(ಮುಸ್ಲಿಂ ದರ್ಗಾಗಳು ನಡೆಸುವ ಅನಾಥಾಶ್ರಮಕ್ಕೆ ಯತೀಂ ಖಾನಗಳೆನ್ನುವರು) ತಾತ್ಕಾಲಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಆದರೆ ಉಳಿದ ಸುಮಾರು ನಾನೂರರಷ್ಟು ಅನಾಥಾಶ್ರಮಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ಕಳೆದ ಒಂದು ವರ್ಷದಲ್ಲಿ ಸುಮಾರು 334 ಅನಾಥಾಶ್ರಮಗಳು ಮುಚ್ಚಿವೆ. ಆ ಮೂಲಕ ಸಾವಿರಾರು ವಿದ್ಯಾರ್ಥಿಗಳು ಸಮಸ್ಯೆಗೊಳಗಾಗಿದ್ದಾರೆ. ಆದರೆ ಸರಕಾರ ಈ ತನಕ ಈ ವಿಷಯವನ್ನು ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲವೆಂಬ ಮಾತುಗಳೂ ಕೇಳಿಬಂದಿದೆ.