ಚಿಂತೆ ಬೇಡ.. 45 ದಿನಗಳಲ್ಲಿ 'ಮಿಷನ್ ಶಕ್ತಿ' ಅವಶೇಷಗಳು ನಾಶವಾಗುತ್ತವೆ: ನಾಸಾಗೆ ಡಿಆರ್ ಡಿಒ ತಿರುಗೇಟು!
0
ಏಪ್ರಿಲ್ 07, 2019
ನವದೆಹಲಿ: ಭಾರತದ ಮಿಷನ್ ಶಕ್ತಿ ಯೋಜನೆಯ ಎಸ್ಯಾಟ್ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯಿಂದ ಬಾಹ್ಯಾಕಾಶದಲ್ಲಿ ಉಂಟಾಗಿರುವ ಅವಶೇಷಗಳು ಇನ್ನು 45 ದಿನಗಳಲ್ಲಿ ನಾಶವಾಗಲಿದೆ. ಈ ಬಗ್ಗೆ ಚಿಂತೆ ಬೇಡ ಎಂದು ನಾಸಾಗೆ ಭಾರತದ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ತಿರುಗೇಟು ನೀಡಿದೆ.
ಕಳೆದ ತಿಂಗಳು ಭಾರತ ನಡೆಸಿದ್ದ ಮಿಷನ್ ಶಕ್ತಿ ಯೋಜನೆಯ ಎಸ್ಯಾಟ್ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯಿಂದ ಬಾಹ್ಯಾಕಾಶದಲ್ಲಿ ಸುಮಾರು 400ಕ್ಕೂ ಅಧಿಕ ಅವಶೇಷಗಳು ಉಂಟಾಗಿವೆ. ಇದು ಇತರೆ ಉಪಗ್ರಹಗಳ ಕಾರ್ಯ ನಿರ್ವಹಣೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆತಂಕ ವ್ಯಕ್ತಪಡಿಸಿತ್ತು.
ಈ ಕುರಿತು ನಿನ್ನೆ ತಿರುಗೇಟು ನೀಡಿರುವ ಡಿಆರ್ ಡಿಒ ಅಧ್ಯಕ್ಷ ಸತೀಶ್ ರೆಡ್ಡಿ ಅವರು, ಬಾಹ್ಯಾಕಾಶದಲ್ಲಿ ಭಾರತದ ಮಿಷನ್ ಶಕ್ತಿ ಯೋಜನೆಯಿಂದ ಸೃಷ್ಟಿಯಾಗಿರುವ ಅವಶೇಷಗಳು ಇನ್ನು 45 ದಿನಗಳಲ್ಲಿ ನಾಶವಾಗಲಿದೆ. ಅವಶೇಷಗಳ ಕುರಿತು ನಾಸಾ ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, 'ಭಾರತದ ಎಸ್ಯಾಟ್ ಉಪಗ್ರಹ ನಿಗ್ರಹ ಕ್ಷಿಪಣಿ ಪ್ರಯೋಗದಿಂದಾಗಿ ಬಾಹ್ಯಾಕಾಶದಲ್ಲಿ ಅಪಾರ ಪ್ರಮಾಣದ ಅವಶೇಷ ಸೃಷ್ಟಿಯಾಗಿದೆ ಎಂಬ ಅಮೆರಿಕ ವಾದವನ್ನುತಳ್ಳಿ ಹಾಕಿದರು. 'ಕ್ಷಿಪಣಿ ಪ್ರಯೋಗದಿಂದ ಉಂಟಾಗಿರುವ ಅವಶೇಷಗಳು ಕೆಲವೇ ವಾರದಲ್ಲಿ ಭೂಮಿಯ ವಾತಾವರಣ ತಲುಪುತ್ತವೆ. ಆ ಬಳಿಕ ಅವು ಭೂಮಿಯ ಗುರುತ್ವಾಕರ್ಷಣೆಯ ಒತ್ತಡಕ್ಕೆ ಸಿಲುಕಿ ವಾತಾವರಣದಲ್ಲೇ ಸುಟ್ಟು ಬೂದಿಯಾಗುತ್ತದೆ. ಇದರಿಂದ ಯಾವುದೇ ರೀತಿಯ ಅಪಾಯವಿಲ್ಲ ಎಂದು ಸ್ಪಷ್ಟನೆ ನೀಡಿದರು.
'ಮಿಷನ್ ಶಕ್ತಿ ಯೋಜನೆ ಕೇವಲ ಕ್ಷಿಪಣಿ ಹೇಗೆ ಸಕ್ರಿಯ ಉಪಗ್ರಹವನ್ನು ಹೊಡೆದುರುಳಿಸುತ್ತದೆ ಎಂಬುದು ಮಾತ್ರವಲ್ಲ. ಅದರೊಂದಿಗೆ ಧ್ವಂಸಗೊಂಡ ಉಪಗ್ರಹದ ಅವಶೇಷಗಳು ಹೇಗೆ ನಾಶ ಮಾಡುವುದು ಎಂಬುದಾಗಿತ್ತು. ಇದೇ ಕಾರಣಕ್ಕೆ ಅತ್ಯಂತ ಜಾಗರೂಕತೆಯಿಂದ ಭೂಮಿಯ ಅತ್ಯಂತ ಕೆಳ ಕಕ್ಷೆಯಲ್ಲಿರುವ ಮೈಕ್ರೋ ಉಪಗ್ರಹವನ್ನು ಗುರಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಕ್ಷಿಪಣಿ ಪ್ರಯೋಗದಿಂದ ಉಂಟಾಗಿರುವ ಅವಶೇಷಗಳು ಕೆಲವೇ ವಾರದಲ್ಲಿ ಭೂಮಿಯ ವಾತಾವರಣ ತಲುಪುತ್ತವೆ. ಆ ಬಳಿಕ ಅವು ಭೂಮಿಯ ಗುರುತ್ವಾಕರ್ಷಣೆಯ ಒತ್ತಡಕ್ಕೆ ಸಿಲುಕಿ ವಾತಾವರಣದಲ್ಲೇ ಸುಟ್ಟು ಬೂದಿಯಾಗುತ್ತದೆ.
ಉಪಗ್ರಹ ನಿಗ್ರಹ ಕ್ಷಿಪಣಿ ಎಸ್ಯಾಟ್ ದಾಳಿಯಿಂದಾಗಿ ಬಾಹ್ಯಾಕಾಶದಲ್ಲಿ ಅವಶೇಷಗಳು ಸೃಷ್ಟಿಯಾಗಿವೆ. ಆದರೆ ಇದು ಕೇವಲ 10 ದಿನಗಳ ಅತಂಕವಷ್ಟೇ.. ಆದರೆ ಈಗಾಗಲೇ ಕ್ಷಿಪಣಿ ದಾಳಿಯಾಗಿ 10 ದಿನಗಳು ಕಳೆದಿವೆ. ಇದೀಗ ಮಿಷನ್ ಶಕ್ತಿಯ ಅವಶೇಷಗಳು ಕ್ರಮೇಣ ಭೂವಾತಾವರಣ ತಲುಪುತ್ತಿವೆ. ಅಂತೆಯೇ ಕ್ರಮೇಣ ಈ ಅವಶೇಷಗಳು ಭೂಮಿಯ ಗುರುತ್ವಾಕರ್ಷಣೆಗೆ ಸಿಲುಕಿ ಅತಿಯಾದ ಒತ್ತಡದಿಂದ ಸುಟ್ಟು ಬೂದಿಯಾಗುತ್ತದೆ ಎಂದು ಸತೀಶ್ ರೆಡ್ಡಿ ಹೇಳಿದ್ದಾರೆ.
ಭಾರತದ ಮಿಷನ್ ಶಕ್ತಿ ಯೋಜನೆ ಕುರಿತು ಆತಂಕ ವ್ಯಕ್ತಪಡಿಸಿದ್ದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಭಾರತದ ಎಸ್ಯಾಟ್ ಪರೀಕ್ಷಾರ್ಥ ಉಡಾವಣೆ ಬಳಿಕ ಬಾಹ್ಯಾಕಾಶದಲ್ಲಿ ಅವಶೇಷಗಳ ಪ್ರಮಾಣ ಶೇ.44ರಷ್ಟು ಏರಿಕೆಯಾಗಿದ್ದು, ಭಾರತದ ಎಸ್ಯಾಟ್ ಕ್ಷಿಪಣಿ ದಾಳಿಯಿಂದಾಗಿ ಬಾಹ್ಯಾಕಾಶದಲ್ಲಿ 400ಕ್ಕೂ ಅಧಿಕ ಅವಶೇಷಗಳು ಸೃಷ್ಟಿಯಾಗಿವೆ ಎಂದು ಹೇಳಿತ್ತು. ಇದಕ್ಕೆ ಇದೀಗ ಡಿಆರ್ ಡಿಒ ಅಧ್ಯಕ್ಷ ಸತೀಶ್ ರೆಡ್ಡಿ ತಿರುಗೇಟು ನೀಡಿದ್ದಾರೆ.