ಹರಿವ ನೀರನ್ನು ತಡೆದು ನಿಲ್ಲಿಸುವ ಯೋಜನೆ : ಮೊದಲ ಹಂತವಾಗಿ 5 ನದಿಗಳಲ್ಲಿ ಜಾರಿ
0
ಏಪ್ರಿಲ್ 07, 2019
ಕಾಸರಗೋಡು: ಅನೇಕ ಜೀವನದಿಗಳಿದ್ದೂ ಜಿಲ್ಲೆಯಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ತತ್ವಾರ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಹರಿವ ನೀರನ್ನು ತಡೆದು ನಿಲ್ಲಿಸುವ ಯೋಜನೆಗೆ ಜಿಲ್ಲಾಡಳಿತೆ ಮನಮಾಡಿದೆ. ನದಿಗಳ ಮೂಲಕ ಹರಿಯುವ ನೀರು ಶೀಘ್ರದಲ್ಲೇ ಸಮುದ್ರ ಸೇರುತ್ತಿರುವ ವಿಚಾರವನ್ನು ಮನಗಂಡು, ನದಿತಟಗಳಲ್ಲಿ ನೀರು ಸಂಗ್ರಹಾಗಾರ ನಿರ್ಮಿಸಿ ನದಿ ಜಲವನ್ನು ಹಿಡಿದಿಡುವ ಮೂಲಕ ನೂತನ ಯೋಜನೆಗೆ ಸಿದ್ಧತೆ ನಡೆಸಲಗುತ್ತಿದೆ. ಇದರ ಮೊದಲ ಹಂತವಾಗಿ ಜಿಲ್ಲೆಯ 5 ನದಿಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ.
ಲ್ಯಾಟರೈಟ್ ಭೂಮಿಯ ಹಿನ್ನೆಲೆಯಲ್ಲಿ ಬೇಸಗೆಯಲ್ಲಿ ಜಿಲ್ಲೆಯಲ್ಲಿ ನೀರಿಗೆ ತೀವ್ರ ತತ್ವಾರ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ವಿಶೇಷ ಕಾಳಜಿಯ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಯೋಜನೆ ನಿರ್ವಹಣೆ ಕುರಿತು ಜಿಲ್ಲಾಧಿಕರಿ ಕಚೇರಿಯಲ್ಲಿ ಕೋರ್ ಸಮಿತಿ ಸಭೆ ಜರುಗಿತು. ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆವಹಿಸಿದ್ದರು.
ಮಂಜೇಶ್ವರ, ಉಪ್ಪಳ, ಶಿರಿಯ, ಕುಂಬಳೆ, ಮೊಗ್ರಾಲ್ ನದಿಗಳಲ್ಲಿ ಮೊದಲ ಹಂತದ ಯೋಜನೆ ಜಾರಿಯಾಗಲಿದೆ. ಹತ್ತರಿಂದ ಹದಿನೈದು ಡಿಗ್ರಿ ವರೆಗೆ ಹರಿದುಹೋಗುವ ನೀರನ್ನು ಕಾಲುವೆ ಮೂಲಕ ಈ ಜಲಸಂಗ್ರಹಾಗಾರಕ್ಕೆ ತಲಪಿಸಲಾಗುವುದು. ಒಂದೊಂದು ಕಿಮೀ ಅಂತರದಲ್ಲಿ ನದಿಗಳ ಎರಡೂ ಬದಿಗಳಲ್ಲಿ ಜಲಸಂಗ್ರಹಾಗಾರಗಳನ್ನು ನಿರ್ಮಿಸಲಾಗುವುದು. ಜೂನ್ ತಿಂಗಳಿಗೆ ಮುನ್ನ ಈ ಯೋಜನೆ ಪೂರ್ಣಗೊಳಿಸುವ ಉದ್ದೇಶವಿದೆ. ಈ ಸಂಬಂಧ ಶೀಘ್ರವೇ ಚಟುವಟಿಕೆ ಆರಮಭಿಸಲಾಗುವುದು ಎಂದು ತಿಳಿಸಲಾಯಿತು.
ಈ ಸಂಬಂಧ ಮಾತುಕತೆ ನಡೆಸುವ ನಿಟ್ಟಿನಲ್ಲಿ ಏ.11ರಂದು ವಿವಿಧ ಪಂಚಾಯತ್ ಅಧ್ಯಕ್ಷರ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ. ಯೋಜನೆಗೆ ಬೇಕಾದ ಸಮೀಕ್ಷೆ ಚಟುವಟಿಕೆಗಳನ್ನು ನಡೆಸುವಂತೆ ಸೋಯಿಲ್ ಕನ್ಸರ್ ವೇಷನ್ ಇಲಾಖೆಗೆ ಆದೇಶ ನೀಡಲಾಗಿದೆ.
ಸಭೆಯಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಜಿಲ್ಲಾ ಸೋಯಿಲ್ ಕನ್ಸರ್ ವೇಷನ್ ಅಧಿಕಾರಿ ವಿ.ಎಂ.ಅಶೋಕ್ ಕುಮಾರ್, ಪಡನ್ನಕ್ಕಾಡ್ ಕೃಷಿ ಕಾಲೇಜಿನ ಪ್ರೊ.ಡಾ.ಟಿ.ಕೆ.ಬ್ರಜಿಟ್, ಸಹಾಯಕ ಪ್ರೊಫೆಸರ್ ಗಳಾದ ಡಾ.ಪಿ.ಗಾಯತ್ರಿ ಕಾರ್ತಿಕೇಯನ್, ಡಾ.ಪಿ.ಕೆ.ಸಜೀಷ್ ಮೊದಲಾದವರು ಉಪಸ್ಥಿತರಿದ್ದರು.