ಮುಂದುವರಿದ ಭಾಗ...............
ಹನ್ನೊಂದನೇ ಲೋಕಸಭೆ (1996- 98)
ಎರಡು ವರ್ಷಗಳ ಅವಧಿಯ ರಾಜಕೀಯ ಅಸ್ಥಿರತೆಗೂ ಇವು ಕಾರಣವಾಯಿತಲ್ಲದೇ ಅಸ್ಥಿರ-ಅವಧಿಯಲ್ಲೇ ದೇಶವು ಮೂವರು ಪ್ರಧಾನಮಂತ್ರಿಗಳನ್ನು ಕಾಣಬೇಕಾಗಿ ಬಂತು. 1995ರ ಮೇ ತಿಂಗಳಿನಲ್ಲಿ, ಹಿರಿಯ ನಾಯಕರಾದ ಅರ್ಜುನ್ ಸಿಂಗ್ ಮತ್ತು ನಾರಾಯಣ್ ದತ್ ತಿವಾರಿಯವರು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ, ತಮ್ಮದೇ ಆದ ಪಕ್ಷವನ್ನು ರಚಿಸಿದರು. ಹರ್ಷದ್ ಮೆಹ್ತಾ ಹಗರಣ, ರಾಜಕಾರಣದ ಅಪರಾಧೀಕರಣದ ಕುರಿತಾದ ವೋರಾ ವರದಿ, ಜೈನ್ ಹವಾಲಾ ಹಗರಣ ಮತ್ತು 'ತಂದೂರ್ ಕೊಲೆ' ಪ್ರಕರಣ ಇವೇ ಮೊದಲಾದವುಗಳು ರಾವ್ ಸರಕಾರದ ವಿಶ್ವಾಸಾರ್ಹತೆಗೆ ಹಾನಿಯುಂಟುಮಾಡಿದ್ದವು. ಈ ಸಂದರ್ಭದಲ್ಲಿ ಬಿಜೆಪಿ 161, ಕಾಂಗ್ರೆಸ್ 140 ಮತ್ತು ಜನತಾ ದಳ 46 ಅನ್ನು ಗೆದ್ದುಕೊಂಡಿತು.
ಬಿಜೆಪಿ ನಾಯಕ ವಾಜಪೇಯಿಯವರು ಸಂಸತ್ತಿನಲ್ಲಿನ ಏಕೈಕ ಅತಿದೊಡ್ಡ ಪಕ್ಷದ ಮುಖ್ಯಸ್ಥರಾಗಿದ್ದರಿಂದ, ಸರಕಾರವನ್ನು ರಚಿಸಲು ಅವರನ್ನು ರಾಷ್ಟ್ರಪತಿಯವರು ಆಹ್ವಾನಿಸಿದರು. ಮೇ 16ರಂದು ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ವಾಜಪೇಯಿಯವರು, ಸಂಸತ್ತಿನಲ್ಲಿರುವ ಪ್ರಾದೇಶಿಕ ಪಕ್ಷಗಳಿಂದ ಬೆಂಬಲವನ್ನು ಪಡೆಯಲು ಪ್ರಯತ್ನಿಸಿದರು. ಆದರೆ ತಮ್ಮ ಪ್ರಯತ್ನದಲ್ಲಿ ಅವರು ವಿಫಲಗೊಂಡು 13 ದಿನಗಳ ನಂತರ ರಾಜೀನಾಮೆ ನೀಡಿದರು. ಜನತಾದಳದ ನಾಯಕರಾದ ದೇವೇಗೌಡರು ಜೂನ್ 1ರಂದು ಸಂಯುಕ್ತರಂಗದ ಒಕ್ಕೂಟ ಸರಕಾರವೊಂದನ್ನು ರಚಿಸಿ 18 ತಿಂಗಳುಗಳವರೆಗೆ ಅಧಿಕಾರವನ್ನು ನಡೆಸಿದರು. ತದನಂತರ ಗುಜ್ರಾಲ್ 1997ರ ಏಪ್ರಿಲ್ ನಲ್ಲಿ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರಾದರೂ ಕೆ ಕೆ ಗುಜ್ರಾಲ್ ರ ಅಧಿಕಾರ ಸ್ವೀಕಾರವು ಒಂದು ಹಂಗಾಮಿ ವ್ಯವಸ್ಥೆಯಾಗಿತ್ತು.
ಹನ್ನೆರಡನೇ ಲೋಕಸಭೆ (1998-99)
543 ಸ್ಥಾನಗಳಲ್ಲಿ 182 ಸ್ಥಾನಗಳನ್ನು ಪಡೆದುಕೊಂಡಿರುವ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ 141 ಸ್ಥಾನಗಳನ್ನು ಪಡೆದಿದ್ದರೆ, ಇತರ ಪ್ರಾದೇಶಿಕ ಪಕ್ಷಗಳು 101 ಸ್ಥಾನಗಳನ್ನು ಪಡೆದವು. ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದ ಒಕ್ಕೂಟವು ಅಧಿಕಾರದ ಗದ್ದುಗೆಯನ್ನೇರಿತು. ಆದರೆ ಈ 12ನೇ ಲೋಕಸಭೆಯು 413 ದಿನಗಳ ಒಂದು ಜೀವನಾವಧಿಯನ್ನು ಹೊಂದಿತ್ತು ಮತ್ತು ಇದು ಇದುವರೆಗಿನ ಅತಿ ಮೊಟಕಾದ ಅವಧಿಯಾಗಿದೆ. ಹೌದು, ಎಐಎಡಿಎಂಕೆ ಬೆಂಬಲ ಹಿಂತೆಗೆದುಕೊಂಡ ನಂತರ 13 ತಿಂಗಳಲ್ಲಿಯೇ ವಾಜಪೇಯಿಯವರು ರಾಜೀನಾಮೆ ನೀಡಬೇಕಾಯಿತು. ಈ ಅವಧಿಯಲ್ಲಿ ಪೆÇ?ಖ್ರಾನ್ ಪರಮಾಣು ಪರೀಕ್ಷೆಗಳು, ಕಾರ್ಗಿಲ್ ಯುದ್ಧ ಸೇರಿದಂತೆ ಕೆಲವು ಪ್ರಮುಖ ಘಟನೆಗಳು ಇವರ ಅವಧಿಯಲ್ಲಿ ನಡೆದವು.
ಹದಿಮೂರನೇ ಲೋಕಸಭೆ (1999-2004):
ಕಾರ್ಗಿಲ್ ಯುದ್ಧದ ಹಿನ್ನಲೆಯಲ್ಲಿ ಈ ಚುನಾವಣೆಯನ್ನು ನಡೆಸಲಾಯಿತು. ಬಿಜೆಪಿ ಮತ್ತೊಮ್ಮೆ 182 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಕೇವಲ 114 ಸ್ಥಾನಗಳನ್ನು ಪಡೆದುಕೊಂಡರೆ, ಪ್ರಾದೇಶಿಕ ಪಕ್ಷಗಳು 158 ಸ್ಥಾನಗಳನ್ನು ಪಡೆದುಕೊಂಡಿದ್ದವು. ಹಾಗಾಗಿ ಬಿಜೆಪಿ ಹೆಚ್ಚು ಸ್ಥಿರವಾದ ಪಕ್ಷವನ್ನು ರೂಪಿಸಲು ಸಾಧ್ಯವಾಯಿತು. ಅಟಲ್ ಬಿಹಾರಿ ವಾಜಪೇಯಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.
ಹದಿನಾಲ್ಕನೇ ಲೋಕಸಭೆ (2004-09):
ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರವು 2004ರಲ್ಲಿ ತನ್ನ ಐದು ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸಿತು ಹಾಗೂ 2004ರ ಏಪ್ರಿಲ್ 20 ಮತ್ತು ಮೇ 10ರ ನಡುವೆ ನಾಲ್ಕು ಹಂತಗಳಲ್ಲಿ ಚುನಾವಣೆಗಳು ನಡೆದವು. ಆಡಳಿತಾರೂಢ ಬಿಜೆಪಿ ವತಿಯಿಂದ "ಹಳೆಯ-ಶೈಲಿಯ" ಪಕ್ಷ ಎಂಬುದಾಗಿ ಪರಿಗಣಿಸಲ್ಪಟ್ಟಿದ್ದ ಕಾಂಗ್ರೆಸ್ ಗೆ ಬಡಜನರು, ಗ್ರಾಮೀಣ ಪ್ರದೇಶ, ಕೆಳ-ಜಾತಿಯ ಮತ್ತು ಅಲ್ಪಸಂಖ್ಯಾತ ಮತದಾರರು ಬಹುತೇಕವಾಗಿ ಬೆಂಬಲ ನೀಡಿದರು. ಈ ಎಲ್ಲ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಪ್ರಚಂಡ ವಿಜಯವನ್ನು ದಾಖಲಿಸಿತು. ರಾಷ್ಟ್ರೀಯ ವಿವಾದಾಂಶಗಳು ಅಥವಾ ಚರ್ಚಾವಿಷಯಗಳಿಗಿಂತ ಹೆಚ್ಚಾಗಿ ನೀರಿನೂರತೆ, ಬರಗಾಲ ಇತ್ಯಾದಿಗಳಂತಹ ತಮ್ಮ ತಕ್ಷಣ ಪರಿಸರದ ಚರ್ಚಾವಿಷಯಗಳ ಕುರಿತಾಗಿ ಜನರು ಹೆಚ್ಚು ಕಾಳಜಿ-ಕಳವಳಗಳನ್ನು ಹೊಂದಿದ್ದರು ಮತ್ತು ಅಧಿಕಾರಸ್ಥ-ವಿರೋಧಿ ಅಂಶಗಳು ಬಿಜೆಪಿ ಮಿತ್ರಪಕ್ಷಗಳ ಪರವಾಗಿ ಕೆಲಸಮಾಡಿದವು. ಮೇ 13ರಂದು ಬಿಜೆಪಿ ಸೋಲನ್ನು ಒಪ್ಪಿಕೊಂಡಿತು. 543 ಸದಸ್ಯರ ಪೈಕಿ 335ಕ್ಕೂ ಹೆಚ್ಚಿನ ಸದಸ್ಯರನ್ನೊಳಗೊಂಡ (ಬಿ.ಎಸ್.ಪಿ. ಎಸ್.ಪಿ, ಎಮ್.ಡಿ.ಎಮ್.ಕೆ, ಮತ್ತು ಎಡರಂಗ ಇವೇ ಮೊದಲಾದವುಗಳಿಂದ ಸಿಕ್ಕ ಬಾಹ್ಯ ಬೆಂಬಲವನ್ನು ಒಳಗೊಂಡಂತೆ) ಅನುಕೂಲಕರ ಬಹುಮತವನ್ನು ಒಗ್ಗೂಡಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು. ಈ ನಿಟ್ಟಿನಲ್ಲಿ ಪಕ್ಷಕ್ಕೆ ಅದರ ಮಿತ್ರಪಕ್ಷಗಳ ನೆರವು ಹಾಗೂ ಸೋನಿಯಾ ಗಾಂಧಿಯವರ ನಿರ್ದೇಶನ ದೊರೆಯಿತು. ಪ್ರಧಾನ ಮಂತ್ರಿಯಾಗಿ ಮನಮೋಹನ್ ಸಿಂಗ್ ಆಯ್ಕೆಯಾದರು.
ಹದಿನೈದನೇ ಲೋಕಸಭೆ (2009-14):
2009ರ ಮೇ ತಿಂಗಳಿನಲ್ಲಿ, 15ನೇ ಲೋಕಸಭಾ ಚುನಾವಣೆಗಳ ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಇದರಲ್ಲಿ ಕಾಂಗ್ರೆಸ್-ನೇತೃತ್ವದ ಸಂಯುಕ್ತ ಪ್ರಗತಿಪರ ಒಕ್ಕೂಟವು ಲೋಕಸಭೆಯನ್ನು ನಡೆಸಿಕೊಂಡು ಹೋಗಲು ಅಗತ್ಯವಾಗಿದ್ದ ಜನಾದೇಶವನ್ನು ಗೆದ್ದುಕೊಂಡಿತ್ತು. ಹೌದು, ಕಾಂಗ್ರೆಸ್ ನೇತೃತ್ವದ ಯುಪಿಎ ಮಾಹಿತಿ ಹಕ್ಕು (ಆರ್ಟಿಐ) ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತರುವ ಹಲವಾರು ಭರವಸೆಗಳನ್ನು ನೀಡಿತಲ್ಲದೇ, 2008 ರಲ್ಲಿ ಕೃಷಿ ಸಾಲಗಳನ್ನು ಮನ್ನಾ ಮಾಡಿತು. ಎಲ್.ಕೆ.ಅಡ್ವಾಣಿ ನೇತೃತ್ವದಲ್ಲಿ ಎನ್.ಡಿ.ಎ ಚುನಾವಣೆಯಲ್ಲಿ ಕಾಂಗ್ರೆಸ್ ನೊಂದಿಗೆ ಪ್ರಬಲವಾದ ಪೈಪೋಟಿಯನ್ನು ನೀಡಿತು. ಆದರೆ ಕಾಂಗ್ರೆಸ್ 206 ಸ್ಥಾನಗಳನ್ನು ಪಡೆದುಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬಿಜೆಪಿ 116 ಸ್ಥಾನಗಳನ್ನು, ಪ್ರಾದೇಶಿಕ ಪಕ್ಷಗಳು 146 ಸ್ಥಾನಗಳನ್ನು ಪಡೆದುಕೊಂಡಿತು. ಸತತ ಎರಡನೇ ಬಾರಿಗೆ ಯುಪಿಎ ಅಧಿಕಾರಕ್ಕೆ ಬಂದ ನಂತರ ಡಾ. ಮನಮೋಹನ್ ಸಿಂಗ್ ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಹದಿನಾರನೇ ಲೋಕಸಭಾ (2014-19):
ಭ್ರಷ್ಟಾಚಾರ ಮತ್ತು ಹಗರಣಗಳ ಹಲವಾರು ಆರೋಪಗಳೊಂದಿಗೆ ಮಾತ್ರವಲ್ಲದೇ ಪ್ರಧಾನ ಮಂತ್ರಿಯ ಮೌನ ಹಾಗೂ ಅವರಲ್ಲಿ ನಿಜವಾದ ಅಧಿಕಾರವಿಲ್ಲ ಎಂಬೀ ವಿಚಾರಗಳು ಯುಪಿಎ ಸರಕಾರವನ್ನು ಬುಡಮೇಲು ಮಾಡುವಲ್ಲಿ ಎನ್.ಡಿ.ಎ ಸರಕಾರ ಸಫಲವಾಯಿತು. ಅಷ್ಟೇ ಅಲ್ಲದೇ, ಕಾಂಗ್ರೆಸ್ ಕೇವಲ 44 ಸ್ಥಾನಗಳನ್ನು ಗಳಿಸಿಕೊಂಡು ಸೋಲನ್ನನುಭವಿಸಿತು. ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಯ ಅಭ್ಯರ್ಥಿಯಾಗಿ ಸೂಚಿಸುವಲ್ಲಿ ಯಶಸ್ವಿಯನ್ನು ಸಾಧಿಸಿದ ಬಿಜೆಪಿ 282 ಸ್ಥಾನಗಳೊಂದಿಗೆ ಬಹುಮತವನ್ನು ಸಾಧಿಸಿತಲ್ಲದೇ 1984 ರಿಂದೀಚೆಗೆ ಬಿಜೆಪಿ ಮೊದಲ ಬಾರಿಗೆ ಬಹುಮತವನ್ನು ತನ್ನದಾಗಿಸಿಕೊಂಡು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈವರೆಗೆ ಅಧಿಕಾರ ನಡೆಸಿ ಇದೀಗ 17ನೇ ಲೋಕಸಭಾಚುನಾವಣೆಗೆ ಭೂಮಿಕೆ ಸಿದ್ದಗೊಂಡಿದೆ.