ಕಾಸರಗೋಡು: ಶ್ರೀಲಂಕಾದಲ್ಲಿ ಏ.21 ರಂದು ನಡೆದ ಸರಣಿ ಬಾಂಬ್ ಸ್ಪೋಟ ಮತ್ತು ಐಸಿಸ್‍ಗೆ ಸೇರ್ಪಡೆಗೊಳ್ಳಲು ಕೇರಳದ ಕೆಲವರು ವಿದೇಶಕ್ಕೆ ತೆರಳಿರುವ ಪ್ರಕರಣಕ್ಕೆ ಸಂಬಂಧಿಸಿ 60 ರಷ್ಟು ಕೇರಳೀಯರ ಮೇಲೆ ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ) ನಿಗಾಯಿರಿಸಿದೆ.
ಈ ಪೈಕಿ ಹಲವರ ಮನೆಗಳಿಗೆ ಎನ್‍ಐಎ ದಾಳಿ ನಡೆಸಿ, ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವ ಬಗ್ಗೆ ಮಾಹಿತಿ ಇದೆ. ಮಾತ್ರವಲ್ಲ ಎನ್‍ಐಎ ಯ ದಾಳಿ ಇನ್ನೂ ಮುಂದುವರಿಯುವ ಸಾಧ್ಯತೆಯಿದೆ. ಶ್ರೀಲಂಕಾ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ ಮತ್ತು ಪಾಲ್ಘಾಟ್ ಜಿಲ್ಲೆಗಳಲ್ಲಿ ಎನ್‍ಐಎ ತನಿಖೆ ನಡೆಸುತ್ತಿದೆ.
ಶ್ರೀಲಂಕಾ ಸ್ಪೋಟದ ಸೂತ್ರಧಾರ ಝಹ್ರಾನ್ ಹಶೀಮ್ ಕೇರಳ ಮತ್ತು ತಮಿಳುನಾಡಿಗೆ ಪದೇ ಪದೇ ಬಂದಿದ್ದನೆಂದೂ ಮಾಹಿತಿ ಲಭಿಸಿರುವ ಎನ್‍ಐಎ ಈತ ಯಾರನ್ನು ಭೇಟಿಯಾಗಿದ್ದ ಮತ್ತು ಯಾಕಾಗಿ ಬಂದಿದ್ದ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಈತ ಪ್ರಚೋದನಕಾರಿಯಾಗಿ ಧಾರ್ಮಿಕ ಪ್ರವಚನ ನೀಡಿದ್ದನೆಂಬ ಮಾಹಿತಿ ಲಭಿಸಿದೆ. ಅಲ್ಲದೆ ಆತ ಕೇರಳದ ಹಲವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದ.
ಮಲಪ್ಪುರಂ ವಂಡೂರಿನಲ್ಲಿ ಕೆಲವು ದಿನಗಳ ಹಿಂದೆ ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್(ಐಎಸ್) ನೊಂದಿಗೆ ನಂಟು ಹೊಂದಿರುವುದಾಗಿ ಶಂಕಿಸಲಾಗುತ್ತಿರುವ ತಂಡವೊಂದು ರಹಸ್ಯ ಸಭೆ ನಡೆಸಿತ್ತು. ಈ ಸಂಬಂಧ ಕಲ್ಲಿಕೋಟೆ ತಾಮರಶ್ಶೇರಿ ನಿವಾಸಿ ಶೈಬು ನಿಹಾರ್‍ನನ್ನು ವಶಕ್ಕೆ ತೆಗೆದುಕೊಂಡು ಎನ್‍ಐಎ ವಿಚಾರಣೆ ನಡೆಸಿತ್ತು. ಆತ ತಾವು ಕಾಸರಗೋಡಿನ ಹಲವರೊಂದಿಗೆ ನಂಟು ಹೊಂದಿರುವ ಬಗ್ಗೆ ಆತ ಬಾಯಿಬಿಟ್ಟಿದ್ದ. ಈ ಆಧಾರದಲ್ಲಿ ಕಾಸರಗೋಡಿನ ಎರಡು ಮನೆಗಳಿಗೆ ಎನ್‍ಐಎ ಭಾನುವಾರ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿತ್ತು. ಆದರೆ ಈ ವ್ಯಕ್ತಿಗಳು ಲಂಕಾ ಸ್ಪೋಟದೊಂದಿಗೆ ನೇರವಾಗಿ ಯಾವುದೇ ರೀತಿಯ ಸಂಬಂಧ ಹೊಂದಿಲ್ಲವೆಂದೂ, ಆದರೆ ಅವರು ಎನ್‍ಟಿಜೆ ಉಗ್ರ ಸಂಘಟನೆಯ ಆಶಯವನ್ನು ಹೊಂದಿರುವರು ಎಂಬುದಾಗಿ ಎನ್‍ಐಎ ತಿಳಿಸಿದೆ.