(ಮುಂದುವರಿದ ಭಾಗ)
ಚುನಾವಣೆ ಒಂದು ಅಧಿಕಾರ ಸ್ಥಾನಕ್ಕೆ ಅಥವಾ ಒಂದು ಸಂಸ್ಥೆಯ ಸದಸ್ಯತ್ವಕ್ಕೆ ಮತದಾರರು ಒಬ್ಬ ವ್ಯಕ್ತಿಯನ್ನು ಗುಪ್ತಮತದಾನದಿಂದಲೋ ಕೈ ಎತ್ತುವುದರಿಂದಲೋ ಧ್ವನಿಯಿಂದಲೋ ಆರಿಸುವ ಕ್ರಿಯೆ (ಇಲೆಕ್ಷನ್). ಒಂದು ಸಂಘಟನೆಯಲ್ಲಿರುವ ಎಲ್ಲರು ಅಥವಾ ಅವರಲ್ಲಿ ಹಲವರು ತಮ್ಮೊಳಗಿನ ಕೆಲವು ಜನರನ್ನು ಅಥವಾ ಒಬ್ಬನನ್ನು ಆ ಸಂಘಟನೆಯ ಪದಾಧಿಕಾರ ವಹಿಸಲು ಆಯ್ಕೆ ಮಾಡುವಂತೆ ತಾವೇ ರಚಿಸಿಕೊಂಡ ನಿಯಮಗಳಿಂದ ಮನ್ನಣೆ ಪಡೆದ ವಿಧಾನವೇ ಚುನಾವಣಾ ವಿಧಾನ.
ಇತಿಹಾಸ:ಪಾಶ್ಚಾತ್ಯ ದೇಶಗಳಲ್ಲಿ:
ಚುನಾವಣೆಯ ಇತಿಹಾಸ ಪಾಶ್ಚಾತ್ಯ ದೇಶಗಳಲ್ಲಿ ಕ್ರಿ.ಪೂ. 6-5ನೆಯ ಶತಮಾನಗಳಿಂದಲೇ ಆರಂಭವಾಯಿತೆಂದು ಹೇಳಬಹುದು. ಪ್ರಾಚೀನ ಐರೋಪ್ಯ ಸಮಾಜಗಳಲ್ಲಿ ಚುನಾವಣೆ ಒಂದು ಸಾಮಾಜಿಕ ಅಗತ್ಯವಾಗಿ ರೂಪುಗೊಂಡಂತೆ ತೋರುತ್ತದೆ. ಗ್ರೀಕರ ನಗರ ರಾಜ್ಯಗಳಲ್ಲಿ ಚುನಾವಣೆಗೆ ರಾಜಕೀಯ ಮಹತ್ತ್ವವಿತ್ತು. ಈ ಪದ್ಧತಿಯ ಕುರುಹುಗಳನ್ನು ಇತರ ಕಡೆಗಳಲ್ಲೂ ಕಾಣಬಹುದಾದರೂ ಅವುಗಳ ವ್ಯವಸ್ಥಿತ ಅಧ್ಯಯನ ಇನ್ನೂ ಆಗಬೇಕಾಗಿದೆ. ಹೋಮರನ ಕವಿತೆಯಲ್ಲಿ ವರ್ಣಿತರರಾದ ರಾಜರು ನಿರಂಕುಶಾಧಿಪತಿಗಳಾಗಿರಲಿಲ್ಲ. ಈಗ ಆಫ್ರಿಕನ್ ಸಮಾಜಗಳಲ್ಲಿ ಕಾಣುವಂತೆ ಅವರು ರಾಜಮನೆತನದವರಾದರೂ ಒಂದು ವಿಧದಲ್ಲಿ ತಂಡದ ಧುರೀಣರಾಗಿ (ಪೈಪೋಟಿಯಿಂದಾದರೂ ಸರಿ) ರೂಪುಗೊಂಡವರಾಗಿರುತ್ತಿದ್ದರು. ಆಗಮೆಮ್ನಾನ್ ಇತರ ರಾಜರುಗಳಲ್ಲಿ ಹೀಗೆ ಮುಖಂಡತ್ವ ಸಂಪಾದಿಸಿದ್ದ. ಯೂರೋಪಿನ ಇತರ ದೇಶಗಳಲ್ಲೂ ಇಂಥ ನಿದರ್ಶನಗಳು ಸಿಕ್ಕುತ್ತವೆ. ಮಾನವ ನಾಗರಿಕತೆಯ ಇತಿಹಾಸದಲ್ಲಿ ಅಲೆಮಾರಿ ಯುಗದ ಅನಂತರ ಕೃಷಿಯುಗ ಪ್ರಾರಂಭವಾಗಿ, ಸ್ಥಿರ ವಸತಿ, ವ್ಯಾಪಾರ, ವಲಸೆ ಇವು ಬೆಳೆದಾಗ, ಶ್ರೀಮಂತ ಹಾಗೂ ಬಡವರ ನಡುವಣ ಘರ್ಷಣೆ ಪ್ರಾರಂಭವಾಗಿರಬೇಕು. ಆಗ ರಾಜಕೀಯ ಸಂಸ್ಥೆಗಳನ್ನು ಕುರಿತ ಗ್ರೀಕರ ವಿಚಾರ ಹಾಗೂ ರೂಢಿಗಳ ಮೇಲೆ ವಿಶಿಷ್ಟ ಪರಿಣಾಮವಾದ್ದು ಕಂಡುಬರುತ್ತದೆ. ಈ ಘರ್ಷಣೆ ಹೆಚ್ಚಾದಾಗ ಗ್ರೀಕ್ ಚುನಾವಣೆಗೆ ಹೊಸ ರೂಪ ಬಂತು. ಜನಾಭಿಪ್ರಾಯ, ಸಂಧಾನ-ಎರಡೂ ಮಾರ್ಗಗಳ ಬಳಕೆಯಾದ್ದು ಕಂಡುಬರುತ್ತದೆ.
ನಾಗರಿಕರ ಸಭೆ ಆಗ ರೂಪುಗೊಂಡ ಒಂದು ಸಂಸ್ಥೆ. ಅಲ್ಲಿ ವಿಷಯಗಳು ಮತದಾನದ ಮೂಲಕ ತೀರ್ಮಾನವಾಗುತ್ತಿದ್ದುವು. ಕೈಯೆತ್ತಿ ಮತವನ್ನು ಸೂಚಿಸಲಾಗುತ್ತಿತ್ತು ಅಥವಾ ಬೆಣಚುಕಲ್ಲುಗಳೇ ಮತಗಳಂತೆ (ಬ್ಯಾಲೆಟ್) ಬಳಕೆಯಾಗುತ್ತಿದ್ದವು. ಈ ಸಭೆಗೊಬ್ಬ ಅನೌಪಚಾರಿಕ ಅಧಿಕಾರಿ (ಮುಂದಾಳು) ಇರುತ್ತಿದ್ದ. ಪೆರಿಕ್ಲೀಸ್ ( ಕ್ರಿ.ಪೂ. 429) ಕ್ಲೀಯನ್ (.ಕ್ರಿ. ಪೂ. 422) ಡಿಮಾಸ್ತೇನೀಸ್ (ಕ್ರಿ.ಪೂ. 385-322)-ಇವರು ಇಂಥ ಅಧಿಕಾರಿಗಳು. ಈ ವ್ಯವಸ್ಥೆಯಲ್ಲಿ ಜನರ ನಡುವೆ ನಾಗರಿಕರು ಹಾಗೂ ಸಾಮಾನ್ಯರು ಎಂಬ ಭೇದವಿರುತ್ತಿತ್ತೆಂಬುದು ಇಲ್ಲಿ ಗಮನಿಸಬೇಕಾದ ವಿಚಾರ. ಅಧಿಕಾರಿಗಳ (ಸೇನಾಧಿಪತಿ ಮುಂತಾದವರು) ಆಯ್ಕೆ ಸ್ಥಾನಿಕವಲ್ಲದ, ಎಂದರೆ ವಿವಿಧ ತಂಡಗಳ (ಟ್ರೈಬ್ಸ್). ಮತಕ್ಷೇತ್ರದಿಂದ ಆಗುತ್ತಿತ್ತು.
ಅಥೀನಿಯನ್ (ಅಥೆನ್ಸಿನ) ಪ್ರಜಾಸತ್ತಾತ್ಮಕ ಸಿದ್ಧಾಂತದಲ್ಲಿ ಚುನಾವಣಾ ತತ್ತ್ವವನ್ನು ಅರೆಮನಸ್ಸಿನಿಂದ ಒಪ್ಪಿದಂತಿತ್ತು. ಏಕೆಂದರೆ ನಾಗರಿಕರಲ್ಲಿ ಸಮಾನತಾ ಭಾವಕ್ಕೆ ಅಡ್ಡಿಯಾಗಿ ಹಳೆಯ ಪ್ರಭಾವಿ ಮನೆತನಗಳ ಆಕರ್ಷಕ ಹಾಗೂ ಮಹತ್ವಾಕಾಂಕ್ಷಿ ಯುವಕರಿಗೆ ನಿರಂತರ ಅಧಿಕಾರ ಕೊಡುವ ಅಪಾಯ ಈ ವ್ಯವಸ್ಥೆಯಲ್ಲಿ ಇತ್ತೆಂದು ಭಾವಿಸಲಾಗಿತ್ತು. ಅಲ್ಲದೆ ಸಾರ್ವಜನಿಕರಲ್ಲಿ ಧಾಡಸಿ (ಮುನ್ನುಗ್ಗುವ) ಪ್ರವೃತ್ತಿಯವರು ಬಲಪ್ರಯೋಗದಿಂದ ಚುನಾವಣಾ ವಿಜಯವನ್ನು ಖಾಯಂ ಆಗಿ ಉಳಿಸಿಕೊಳ್ಳುವ ಗಂಡಾಂತರವಿತ್ತು-ಇವು ಗ್ರೀಕ್ ದೌರ್ಜನ್ಯದ ಉದಾಹರಣೆಗಳು.
ನಾಗರಿಕರು ಪಾಳಿಯಿಂದ ಅಧಿಕಾರ ವಹಿಸಬೇಕೆಂಬುದು ಆಗಿನ ಮತ್ತೊಂದು ಭಾವುಕ ಸಿದ್ಧಾಂತ. ಈ ಪಾಳಿಯನ್ನು ಚೀಟಿ ಎತ್ತಿ (ಬೈಲಾಟ್) ನಿರ್ಧರಿಸಬೇಕಾಗುತ್ತಿತ್ತು. 500 ಜನರ ಸಭೆ ಚೀಟಿ ಎತ್ತುವ ವಿಧಾನದಿಂದ ಅಧಿಕಾರಿಗಳನ್ನೂ ನ್ಯಾಯದರ್ಶಿಗಳನ್ನೂ (ಜೂರಿ) ಆರಿಸುತ್ತಿತ್ತಲ್ಲದೆ ಸಾರ್ವಜನಿಕ ಕೆಲಸದ ಮೇಲ್ವಿಚಾರಣೆಯನ್ನೂ ನೋಡಿಕೊಳ್ಳುತ್ತಿತ್ತು.
ಅರಿಸ್ಟಾಟಲ್ (ಕ್ರಿ.ಪೂ. 384-322) ಮತದಾನ ಪದ್ಧತಿಯನ್ನು ಬಹಳ ವಿಶದವಾಗಿ ವಿವರಿಸಿದ್ದಾನೆ. ಇಂಗ್ಲಿಷ್ ಮತ್ತು ಅಮೆರಿಕನ್ ಹಳೆಯ ಪದ್ಧತಿಗಳೂ ಹೀಗೆಯೇ ಇದ್ದುವು. ಚಿಕ್ಕವಾದ ಸ್ವಯಂಪ್ರೇರಿತ ಸಮಾಜಗಳಲ್ಲಿ ಪಾಳಿಯಿಂದ ಅಧಿಕಾರವಹಿಸುವ ರೂಢಿ ಈಗಲೂ ಇದೆ. ಅಥೀನಿಯನರು ಪ್ರತಿನಿಧಿಗಳ ಆಯ್ಕೆಗೆ ಚೀಟಿ ಎತ್ತುವ ಪದ್ದತಿಯನ್ನೂ ತಜ್ಞ ಅಧಿಕಾರಿಗಳ ಆಯ್ಕೆಗೆ ಮತದಾನ (ಬ್ಯಾಲಟಿಂಗ್) ಪದ್ಧತಿಯನ್ನೂ ಅನುಸರಿಸಿದರು. ಆಧುನಿಕ ಪದ್ಧತಿಯಲ್ಲಿ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಪ್ರತಿನಿಧಿಗಳ ಆಯ್ಕೆ ಮತದಾನದಿಂದ ನಡೆಯುತ್ತದೆ.
ರೋಮನ್ ಗಣರಾಜ್ಯದಲ್ಲಿ ಸಹ ಒಬ್ಬನಿಗೆ ಒಂದು ಮತ ಎಂಬ ತತ್ತ್ವವನ್ನು ಒಪ್ಪಿರಲಿಲ್ಲ. ಮತಕ್ಷೇತ್ರ ಆಂತರಿಕ ಆಯ್ಕೆ ಒಬ್ಬನಿಗೆ ಒಂದು ಮತದ ಆಧಾರದ ಮೇಲೆ ಆಗುತ್ತಿತ್ತಾದರೂ, ಗಣರಾಜ್ಯದ ತೀರ್ಮಾನಗಳು ಹಾಗೂ ಆಯ್ಕೆಗಳು ಸಮ್ಮಿಶ್ರ ತಂಡಗಳ ಮೂಲಕ ಆಗುತ್ತಿದ್ದುವು. ಮಧ್ಯಯುಗದ ಚರ್ಚಿನವರು ಪ್ರಾಚೀನ ಚುನಾವಣಾ ಪದ್ಧತಿಯನ್ನು ಕಾಯ್ದುಕೊಂಡು ಬಂದರು. ಪೋಪ್, ಬಿಷಪ್ ಮುಂತಾದವರನ್ನು ಇವರಿಗಿಂತ ದರ್ಜೆಯಲ್ಲಿ ಕಿರಿಯರಾದವರನ್ನೊಳಗೊಂಡ ಮತಕ್ಷೇತ್ರದಿಂದ ಚುನಾವಣೆಯ ಮೂಲಕ ಆರಿಸಲಾಗುತ್ತಿತ್ತು. ಆದರೆ ಕೆಲವೇ ಜನರಿಗೆ ಚುನಾವಣಾಧಿಕಾರವಿದ್ದ ಈ ವ್ಯವಸ್ಥೆಯನ್ನು ಎಲ್ಲ ಶ್ರದ್ಧಾವಂತರೂ ಪ್ರತಿಭಟಿಸುತ್ತಿದ್ದರು.
ಮಾಂಡಲಿಕರ ಸಮ್ಮತಿ, ಶಾಸನಗಳ ಮತ್ತು ರೂಢಿಗಳ ಪರಿಧಿ-ಇದಕ್ಕೆ ರಾಜಸತ್ತೆ ಸೀಮಿತವಾಗಿರುತ್ತಿತ್ತು. ಅನಂತರ ಮಾಂಡಲಿಕರು, ಪರಿಷತ್ತು ಮತ್ತು ಸಭೆಗಳ ಸಲಹೆ ಪಡೆಯುವ ಪದ್ಧತಿ ಬಂತು. ಇಲ್ಲಿ ಒಂದು ಬಗೆಯ ಪ್ರಾತಿನಿಧ್ಯ ಪ್ರಾರಂಭವಾಯಿತು. ಈ ಸಭೆಗಳೇ ಮುಂದೆ ಯೂರೋಪಿನಲ್ಲಿ ಸಂಸದೀಯ (ಪಾರ್ಲಿಮೆಂಟರಿ) ಸಂಪ್ರದಾಯಕ್ಕೆ ನಾಂದಿಯಾದುವು. ಪ್ರಾತಿನಿಧ್ಯ ಮೊದಲು ಸೀಮಿತವಾಗಿತ್ತು. ಆಸ್ತಿಗಳ ಆಧಾರದ ಮೆಲೆ ಪ್ರಾತಿನಿಧ್ಯ ನೀಡಲಾಗುತ್ತಿತ್ತು. (ಉದಾ: ಗ್ರೇಟ್ ಲಾಡ್ರ್ಸ್, ಗ್ರೇಟ್ ಕ್ಲರ್ಜಿ, ಕಡಿಮೆ ವರ್ಗದ ಲಾರ್ಡುಗಳು, ಕೃಷಿಕರು ಇತ್ಯಾದಿ). ಇನ್ನೊಂದು ಪ್ರಕಾರದಲ್ಲಿ ಸ್ಥಳೀಯ ಸಮಾಜಗಳಿಗೆ ಪ್ರಾತಿನಿಧ್ಯ ಕೊಡಲಾಯಿತು.
ಕ್ರಿ.ಶ. 7-8ನೆಯ ಶತಮಾನಗಳಲ್ಲಿ ಆಸ್ತಿವಂತರ ಸಭೆಗಳು ಹೋಗಿ ನಿರಂಕುಶ ಆಧುನಿಕ ರಾಜಸತ್ತೆಗಳು ಬಂದವಾದರೂ ಇಂಗ್ಲೆಂಡಿನಲ್ಲಿ ಚುನಾವಣೆಯ ಒಂದಂಶವೂ ಸ್ಕಾಟ್ಲೆಂಡ್, ಸ್ವೀಡನ್ ಗಳಲ್ಲಿ ಸಂಸತ್ತುಗಳೂ ಉಳಿದುವು. ಜನ ಸಮ್ಮತಿ, ಮತಾಧಿಕಾರ, ಪ್ರಾತಿನಿಧ್ಯ ಮುಂತಾದವನ್ನು ತತ್ಕಾಲಕ್ಕೆ ರೂಢಿಯಲ್ಲಿ ತರಲಾಗದಿದ್ದರೂ, ಮೂಲತತ್ತ್ವಗಳು ರೂಪುಗೊಂಡುವು. ಅವು ಆದರ್ಶಗಳೆಂದು ಒಪ್ಪಿಕೊಳ್ಳಲಾಯಿತು. 1640-1650ರ ಇಂಗ್ಲಿಷ್ ಮುಖಂಡರ ಹೇಳಿಕೆಗಳು ಅಥೀನಿಯನ್ ಪ್ರಜಾಸತ್ತೆಯ ಅಸಮ್ಮತ ಜನಸ್ತೋಮದ ಭಾಷೆಯನ್ನು ನೆನಪಿಗೆ ತರುತ್ತವೆ. ಆಳಿಸಿಕೊಳ್ಳುವವರ ಒಪ್ಪಿಗೆಯೇ ಎಲ್ಲ ಸರ್ಕಾರಗಳ ಅಧಿಕಾರದ ಮೂಲ. ಆ ಒಪ್ಪಿಗೆ ಸಾರ್ವತ್ರಿಕ ಮತದಾನದಿಂದ ಸ್ವತಂತ್ರವಾಗಿ ಆಯ್ಕೆಹೊಂದಿದ ಪ್ರತಿನಿಧಿಗಳ ಮೂಲಕವೇ ವ್ಯಕ್ತವಾಗಬೇಕು. ಇದು ಇವರ ವಾದದ ತಿರುಳು.
ಮತದಾರ ಹಾಗೂ ವಿಧಾನಸಭೆಯ ನಡುವೆ ಇರುವ ಸಂಸ್ಥೆಯೇ ಪಕ್ಷ. ಮೊದಲು ಅಮೆರಿಕದ ಅಧ್ಯಕ್ಷರ ಆಯ್ಕೆಯಲ್ಲಿ ಪ್ರಧಾನವಾಗಿ ಕಂಡ ಈ ಪಕ್ಷ ಸಂಸ್ಥೆ 19ನೆಯ ಶತಮಾನದಲ್ಲಿ ಎಲ್ಲ ಕಡಗೂ ಹಬ್ಬಿ ಪಕ್ಷ ಮತ್ತು ಚುನಾವಣೆಗೆ ಪರಸ್ಪರಾವಲಂಬಿಗಳಾದುವು. ಈ ಪಕ್ಷತತ್ತ್ವ ರಾಷ್ಟ್ರೀಯ ವ್ಯಾಪ್ತಿಗೆ ಸೀಮಿತವಾಗಿ ಉಳಿಯಲಿಲ್ಲ. ಕಾರ್ಮಿಕ ಸಂಘಗಳೇ ಮುಂತಾದವುಗಳ ರೂಪದಲ್ಲಿ ಅಂತರರಾಷ್ಟ್ರಿಯ ವ್ಯಾಪ್ತಿ ಪಡೆಯಿತು. ಈಗ ಚುನಾವಣೆ ಕೇವಲ ಪಕ್ಷಗಳಿಗೆ ಸಂಬಂಧಿಸಿದಂತೆಯೇ ಅರ್ಥವಾಗುತ್ತದೆ. ರಾಷ್ಟ್ರೀಯ ಚುನಾವಣೆಯ ವಿವಿಧ ಹಂತಗಳನ್ನು ಪಕ್ಷಗಳೇ ನಿಯಂತ್ರಿಸುತ್ತವೆ. ಹೀಗಾಗಿ ಸ್ವೈಚ್ಛಿಕ ಮತದಾನವೆಂಬುದು ಸಂದಿಗ್ಧವಾದ ಮಾತಿದೆ. ಪಕ್ಷದ ಕಾರ್ಯಕ್ರಮ, ಪಕ್ಷದ ಹಿತ, ಒಡಂಬಡಿಕೆಗಳು, ಆಳುವ ಪಕ್ಷದ ಪ್ರಭಾವ ಇತ್ಯಾದಿಗಳಿಂದ ಮತದಾನ ಪ್ರಭಾವಿತವಾಗುತ್ತ ಬಂದಿದೆ. ಚುನಾವಣೆಯೆನ್ನುವುದು ಒಂದು ಔಪಚಾರಿಕ ವಿಧಿ. ಪಕ್ಷ ಆಗಲೇ ನಿರ್ಧರಿಸಿದಂಥ, ಅಧಿಕಾರ ವಹಿಸಲು ನಿಯೋಜಿಸಿದಂಥ ಒಬ್ಬನ ಆಯ್ಕೆಯನ್ನು ಸಕ್ರಮಗೊಳಿಸುವ ಕ್ರಮವಾಗುತ್ತದೆ-ಮದುವೆ ಮಾಡಿಕೊಳ್ಳಲು ನಿರ್ಧರಿಸಿ ಚರ್ಚಿಗೋ, ನೋಂದಣಿ ಕಚೇರಿಗೋ ಹೋದ ಭಾವೀ ದಂಪತಿಗಳಲ್ಲಿ ಒಬ್ಬೊಬ್ಬರನ್ನೂ, ನೀನು ಇವನ(ಳ)ನ್ನು ನ್ಯಾಯಬದ್ಧ ಗಂಡಹೆಂಡತಿ ಎಂದು ಸ್ವೀಕರಿಸಲು ಸಿದ್ಧಳಿರುವೆಯಾ ಎಂದು ಕೇಳಿದಂತೆ. ಆಗ ಒಲ್ಲೆನೆನ್ನುವ ಪ್ರಶ್ನೆಯೇ ಇಲ್ಲ. ಅದು ಆಯ್ಕೆ ಅಥವಾ ನಿರ್ಧಾರದ ಸಮಯವೇ ಅಲ್ಲ.
ಒಬ್ಬನಿಗೆ ಒಂದು ಮತ ಎನ್ನುವ ತತ್ತ್ವ ರೂಢಿಗೆ ಬರಲು ಇಂಗ್ಲೆಂಡಿನಲ್ಲಿ ಸಹ ಒಂದು ಶತಮಾನವೇ ಕಳೆಯಿತು. ಹೆಂಗಸರಿಗೆ ಮತಾಧಿಕಾರವೂ ತಡವಾಗಿ ಬಂತು. 1832ರ ಸುಧಾರಣಾ ಅಧಿನಿಯಮದಲ್ಲಿದ್ದದ್ದು ಸೀಮಿತ ಮತದಾನ, ಅನೇಕ ಮತದಾನ ರದ್ದಾದ್ದು 1948ರಲ್ಲಿ. 1866ರಲ್ಲಿ ಸ್ವೀಡನಿನಲ್ಲಿ ಸ್ವತ್ತಿನ ಆಧಾರದ ಪ್ರಾತಿನಿಧ್ಯ ಹೋಯಿತು. 1917ರಲ್ಲಿ ಬೆಲ್ಜಿಯಂ ನಲ್ಲಿ 25 ವರ್ಷದವರಿಗೆ ಮತಾಧಿಕಾರ ಕೊಡಲಾಯಿತಾದರೂ ಅದು ಸುಶಿಕ್ಷಿತರಿಗೆ, ಇತರ ವಿಶಿಷ್ಟರಿಗೆ ಸೀಮಿತವಾಗಿತ್ತು. ಫ್ರಾನ್ಸಿನಲ್ಲಿ 1489ರ ವರೆಗೂ ಪರೋಕ್ಷ ಚುನಾವಣೆ ಇತ್ತು. ಸರದಾರರ, ಪಾದರಿಗಳ ಮತಕ್ಷೇತ್ರಗಳಿದ್ದುವು. ಕೊಡುವ ತೆರಿಗೆಯ ಆಧಾರದ ಮೇಲೆ ಮತಾಧಿಕಾರ 1791ರಲ್ಲೂ ವಯಸ್ಕ ಮತದಾನ 1793ರಲ್ಲೂ ಬಂದುವು. ಅದರೆ ಇದು ತಾತ್ಕಾಲಿಕವಾಗಿತ್ತು. ಮುಂದೆ ಕ್ರಾಂತಿಯಾಯಿತು. ಮತ್ತೆ ವ್ಯಾಪಕ ಮತಾಧಿಕಾರ ಬಂದದ್ದು ಅನಂತರವೇ. ಒಂದನೆಯ ಮಹಾಯುದ್ಧದ ಹೊತ್ತಿಗೆ ಯೂರೋಪಿನ ಎಲ್ಲ ರಾಜ್ಯಗಳಲ್ಲೂ ವಯಸ್ಕ ಮತದಾನ ಜಾರಿಗೆ ಬಂತು. ಕೆಲವು ಕಡೆ ಮಹಿಳೆಯರಿಗೂ ಮತಾಧಿಕಾರ ಪ್ರಾಪ್ತವಾಯಿತು.
ಆಸ್ತಿವಾದಿಗಳು ಒಬ್ಬನಿಗೆ ಒಂದು ಮತ ಎಂಬ ತತ್ತ್ವವನ್ನು ವಿರೋಧಿಸಿದರು. ಸಾಂಸ್ಕøತಿಕವಾದ ಮತ್ತು ಆರ್ಥಿಕವಾದ ಒತ್ತಡಗಳನ್ನು ತಡೆಯಲು ಸಮರ್ಥರಾದವರಿಗೆ ಮಾತ್ರ ಮತಾಧಿಕರವಿರಬೇಕು. ದುರ್ಬಲರು ಇಂಥ ಒತ್ತಡಕ್ಕೆ ಒಳಗಾಗಿ ಸ್ವವಿವೇಕವನ್ನು ಬಳಸಲು ಅಸಮರ್ಥರಾಗುತ್ತಾರೆ-ಎಂಬುದು ಇವರ ವಾದ. ಬಹಿರಂಗವಾಗಿ ಮತ್ತು ಬಾಯಿ ಹೇಳಿಕೆಯ ಮೂಲಕ ಮತ ಚಲಾಯಿಸುವ ಪದ್ಧತಿ ಡೆನ್ಮಾರ್ಕಿನಲ್ಲಿ 1901ರವರೆಗೂ ಐ???ಲೆಂಡಿನಲ್ಲಿ 1906ರವರೆಗೂ ಹಂಗರಿಯಲ್ಲಿ 1930ರವರೆಗೂ ಇದ್ದುವು. ಇಂಗ್ಲೆಂಡ್ ಮಾತ್ರ 1867ರ ಅಧಿನಿಯಮವಾದ ಐದು ವರ್ಷಗಳಲ್ಲೇ ಗುಪ್ತಮತದಾನ ಪದ್ದತಿಯನ್ನು ಜಾರಿಗೆ ತಂದಿತು.
ಬಹುಮತ ತತ್ವದ ಅಂಶದ ಇಚ್ಚೆಯೇ ಪೂರ್ಣದ ಇಚ್ಛೆ ಎಂದಂತೆ. ಸರಳ ಬಹುಮತ ತತ್ತ್ವ ಇಂಗ್ಲೆಂಡಿನಲ್ಲಿ ಮಧ್ಯಯುಗದಿಂದಲೇ ಜಾರಿಯಲ್ಲಿ ಬಂತು. ಅಮೆರಿಕದಲ್ಲೂ ಇದು ಪ್ರಮಾಣಿತ ಪದ್ಧತಿಯಾಯಿತು. ಖಚಿತ ಬಹುಮತ. ಪರೋಕ್ಷ ಚುನಾವಣೆ. ಏಕಸದಸ್ಯ ಮತ್ತು ಬಹುಸದಸ್ಯ ಚುನಾವಣಾ ಕ್ಷೇತ್ರಗಳು, ಅನುಪಾತೀಯ ಪ್ರಾತಿನಿಧಿತ್ವ (ಪ್ರಪೋರ್ಷನಲ್ ರೆಪ್ರೆಸೆಂಟೇಷನ್ ಇವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಭಾರತದಲ್ಲಿ : ಭಾರತದಲ್ಲಿ ರಾಜ್ಯಶಾಸ್ತ್ರಾಧ್ಯಯನ ಕ್ರಿ.ಪೂ. 500ರಿಂದಲೇ ವ್ಯವಸ್ಥಿತವಾಗಿ ಪ್ರಾರಂಭವಾಯಿತೆನ್ನಬಹುದು. ಆರಂಭದೆಶೆಯಲ್ಲಿ ರಾಜಕೀಯ ಶಾಸ್ತ್ರಕ್ಕೆ ಮೀಸಲಾದ ಗ್ರಂಥಗಳು ಇರದಿದ್ದರೂ ವೇದ ಹಾಗೂ ಬ್ರಾಹ್ಮಣಗಳಲ್ಲಿ ಅಲ್ಲಲ್ಲಿ ಪಸರಿಸಿರುವ ವಾಕ್ಯವೃಂದಗಳು ತತ್ಕಾಲೀನ ಆಡಳಿತ ವ್ಯವಸ್ಥೆಯನ್ನು ಕುರಿತ ಸಿದ್ಧಾಂತ ಹಾಗೂ ರೂಢಿಗಳ ಮೇಲೆ ಕೆಲವೊಮ್ಮೆ ಅಸ್ಪಷ್ಟವಾಗಿಯೂ ಕೆಲವೊಮ್ಮೆ ಸ್ಫುಟವಾಗಿಯೂ ಬೆಳಕು ಚೆಲ್ಲುತ್ತದೆ. ಋಗ್ವೇದದಲ್ಲಿ ಈ ವಿಷಯ ಸ್ವಲ್ಪ ಬಂದಿದೆ. ಆದರೆ ಅಥರ್ವ ವೇದದಲ್ಲಿ ಸಾಕಷ್ಟು ವಿಪುಲವಾಗಿ ಇದರ ಪ್ರಸ್ತಾಪವುವುಂಟು. ಬ್ರಾಹ್ಮಣಗಳಲ್ಲಿ ಮತ್ತು ಯಜುಸ್ಸಂಹಿತೆಗಳಲ್ಲಿ ರಾಜನ ಪಟ್ಟಾಭಿಷೇಕದ ವಿವರಗಳು ಸಿಗುತ್ತವೆ. ಇವೆಲ್ಲ ರಾಜನ ಸ್ಥಾನಮಾನ, ಇತರ ಜಾತಿಯ-ವಿಶೇಷತಃ ಬ್ರಾಹ್ಮಣ ಕ್ಷತ್ರಿಯ ಪ್ರಜರ - ಹಕ್ಕು ಮತ್ತು ಸ್ಥಾನ ಗೌರವಗಳ ಕುತೂಹಲಕರ ವಿವರಗಳುಂಟು. ಕ್ರಿ.ಪೂ. 7-8ನೆಯ ಶತಮಾನಗಳ ಹೊತ್ತಿಗೆ ರಾಜ್ಯಶಾಸ್ತ್ರಕ್ಕೆ ಮೀಸಲಾದ ಗ್ರಂಥಗಳೇ ರಚಿತವಾಗಿದ್ದಿರಬಹುದು. ಅವು ಈಗ ಉಪಲಬ್ಧವಿಲ್ಲದಿದ್ದರೂ ಮಹಾಭಾರತದ ಶಾಂತಿಪರ್ವದಲ್ಲಿಯ ಭೀಷ್ಮ ಯುಧಿಷ್ಠರ ಸಂವಾದದಿಂದ ಅಂಥ ವ್ಯವಸ್ಥಿತ ಅಧ್ಯಯನ ಆಗಿದ್ದಂತೆ ಭಾವಿಸಬಹುದು. ಅಲ್ಲಿ ಮಂಧಾತ ಮುಂತಾದ ರಾಜರ ಉದಾಹರಣೆ ಹೇಳಿ, ಅವರಿಗೆ ಸಲಹೆಗಾರರಾಗಿದ್ದ ಋಷಿಗಳ ಮತ್ತು ತಜ್ಞ ವಿದ್ವಾಂಸರ ವಿಚಾರವನ್ನೂ ಭೀಷ್ಮ ಪ್ರಸ್ತಾವಿಸುತ್ತಾನೆ. ರಾಜನಿಗೆ ಒಂದು ತಜ್ಞ ಸಲಹಾಮಂಡಲಿಯಿರುತ್ತಿತ್ತೆಂದು ತಿಳಿದುಬರುತ್ತದೆ. ಇಂಥ ಸಲಹಾಮಂಡಳಿ-ರಾಜನ ಆಯ್ಕೆಯದೇ ಆಗಿದ್ದರೂ- ಪ್ರಜಾಸಮೂಹಕ್ಕೆ ಸಮೀಪವರ್ತಿಗಳಾಗಿದ್ದವರನ್ನು ಒಳಗೊಂಡಿರುತ್ತಿತ್ತೆಂದು ಹೇಳಬಹುದು. ಕ್ರಿ.ಪೂ. 4ನೆಯ ಶತಮಾನದಲ್ಲಿ ಬರೆಯಲಾದ ಕೌಟಿಲ್ಯನ ಆರ್ಥಶಾಸ್ತ್ರ ಈ ವಿಚಾರದಲ್ಲಿ ದೊರೆತ ಮಹತ್ತ್ವದ ಗ್ರಂಥ. ಇದರಲ್ಲಿ ರಾಜ್ಯಶಾಸ್ತ್ರ ವಿವಿಧ ವಿಷಯಗಳೂ ವಿವಿಧ ಪ್ರಕಾರಗಳ ರಾಜ್ಯಗಳ ವಿವರಗಳೂ ಸಿಗುತ್ತವೆ. ಮದ್ರ, ಕಾಂಭೋಜ, ಲಿಚ್ಚವಿ ಹಾಗೂ ಮಲ್ಲರ ಗಣರಾಜ್ಯಗಳ ಪ್ರಸ್ತಾಪ ಬರುತ್ತದೆ. ಇವೆಲ್ಲ ಮೌರ್ಯರ ಕಾಲದ ಆರಂಭದಲ್ಲಿ ಅಸ್ತಿತ್ವದಲ್ಲಿ ಇದ್ದುದಾಗಿ ತಿಳಿದುಬರುತ್ತದೆ.
ಭಾರತದಲ್ಲೂ ಪ್ರಭುತ್ವ ಒಂದು ಸಾಮಾಜಿಕ ಅವಶ್ಯಕತೆಯಾಗಿ ಆಸ್ತಿತ್ವದಲ್ಲಿ ಬಂತು. ಅನಾಯಕತ್ವದಿಂದ ಬೇಸತ್ತ ಜನಸಮೂಹ ಮೊದಲು ಸಮಾಜ ವ್ಯವಸ್ಥೆಯ ನಿಯಮಗಳನ್ನು ಸ್ವಸಮ್ಮತಿಯಿಂದ ಮಾಡಿಕೊಂಡಿತು. ಅವು ಸಫಲವಾಗದಿದ್ದಾಗ ರಾಜತ್ವೆಂಬ ಸಂಸ್ಥೆಯ ನಿರ್ಮಾಣಕ್ಕೆ ಅವಕಾಶವಾಯಿತು. ರಾಜನ ಆಳುವ ಹಕ್ಕು ಭಾಗಶಃ ದೈವದತ್ತವೆಂದೂ ಭಾಗಶಃ ಆಳಿಸಿಕೊಳ್ಳುವ ಜನರ ಸಮ್ಮತಿಗೆ ಒಳಪಟ್ಟದ್ದೆಂದೂ ಶಾಂತಿಪರ್ವ ಹೇಳುತ್ತದೆ. ದೀರ್ಘನಿಕಾಯ ಗ್ರಂಥದಲ್ಲಿ ಅನಾಯಕತ್ವದಿಂದ ಬೇಸತ್ತ ಜನರು ಮಹಾಜನಸಮ್ಮತನೊಬ್ಬನನ್ನು ಆರಿಸಿಕೊಂಡು, ಆತ ಮಾಡುವ ಸೇವೆಗೆ-ಶಾಂತಿ, ಸುವ್ಯವಸ್ಥೆಗಳಿಗೆ-ಬದಲಾಗಿ ತಾವು ಬೆಳೆದ ಬತ್ತದ ಭಾಗ ಕೊಡಲು ಒಪ್ಪಿದುದಾಗಿ ಹೇಳಲಾಗಿದೆ. ಮನುವನ್ನು ಸಹ ಜನರೇ ರಾಜನನ್ನಾಗಿ ಮಾಡಿದರೆಂದು ಹೇಳಬಹುದಾಗಿದೆ.
ರಾಜರ ಅಧಿಕಾರಗಳು ಅನಿಯಂತ್ರಿತವಾಗಿರಲಿಲ್ಲ. ಅವು ಧರ್ಮಶಾಸ್ತ್ರಗಳ ನೇಮಗಳಿಂದ ನಿಯಂತ್ರಿತವಾಗಿದ್ದುವು. ವಿರಜ, ಕರ್ದಮ, ಅನಂಗ ಇವರೆಲ್ಲ ಇಂಥ ಸೀಮಿತ ಅಧಿಕಾರದ ರಾಜರಾಗಿದ್ದರು. ವೇನ ರಾಜನ ನಿರಂಕುಶ ಆಳ್ವಿಕೆಯಿಂದ ಬೇಸತ್ತ ಜನ ಅವನನ್ನು ಕೊಂದುಹಾಕಿದರೆನ್ನಲಾಗಿದೆ. ಏಕಾಧಿಪತ್ಯವಿದ್ದರೂ ರಾಜಸತ್ತೆ ಧರ್ಮಶಾಸ್ತ್ರನಿಯಮಗಳನ್ನೂ ಜನಸಮ್ಮತಿಯನ್ನೂ ಆಶ್ರಯಿಸಿದ್ದುದಕ್ಕೆ ಹೀಗೆ ಅಲ್ಲಲ್ಲಿ ನಿದರ್ಶನಗಳು ಸಿಗುತ್ತವೆ. ರಾಜ್ಯಗಳ ವಿಸ್ತಾರ ಹೆಚ್ಚಿದಂತೆಲ್ಲ ರಾಜರು ಮಹಾರಾಜರಾಗಿ, ಸಾಮ್ರಾಟರಾಗಿ, ಚಕ್ರವರ್ತಿಗಳಾಗಿ ಹೆಚ್ಚು ನಿರಂಕುಶರಾದದ್ದು ಕಂಡುಬರುತ್ತದೆ. ಈ ಚಕ್ರವರ್ತಿಗಳು ರಾಜರ ಸಭೆಗಳನ್ನು ಏರ್ಪಡಿಸಿದ್ದ ಪ್ರಸ್ತಾಪ ವೇದಗಳಲ್ಲಿ ಬರುತ್ತದೆ. ಇವು ರಾಜರನ್ನೊಳಗೊಂಡುದೇ ಆದರೂ ಇದಕ್ಕೆ ಪ್ರಾಮುಖ್ಯವಿದ್ದಂತೆ ಕಾಣುತ್ತದೆ.
ಮುಂದುವರಿಯುವುದು.........