HEALTH TIPS

ಸಮರಸ-ಈ ಹೊತ್ತಿಗೆ-ಹೊಸ ಹೊತ್ತಗೆ-6 ಪುಸ್ತಕ: ಅಟ್ಟುಂಬೊಳದ ಪಟ್ಟಾಂಗ

ಪುಸ್ತಕ: ಅಟ್ಟುಂಬೊಳದ ಪಟ್ಟಾಂಗ ಲೇಖಕರು: ಡಾ. ಮಹೇಶ್ವರಿ ಯು ಬರಹ:ಚೇತನಾ ಕುಂಬಳೆ *ಪಟ್ಟಾಂಗಕ್ಕೆ ಕಿವಿಯಾದ ಕ್ಷಣ* ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿಯಾದ ಡಾ. ಯು ಮಹೇಶ್ವರಿಯವರು ಕವಯತ್ರಿಯಾಗಿ, ಲೇಖಕಿಯಾಗಿ ಗುರುತಿಸಿಕೊಂಡವರು. ಹೊಸದಿಗಂತ ಪತ್ರಿಕೆಯ ಉಪ ಸಂಪಾದಕಿಯಾದ ಅ.ನಾ.ಪೂರ್ಣಿಮಾ ಅವರ ಕೋರಿಕೆಯಂತೆ ಮಹೇಶ್ವರಿಯವರು ಪತ್ರಿಕೆಗೆ ಅಂಕಣ ರೂಪದಲ್ಲಿ ಬರಹಗಳನ್ನು ನೀಡುತ್ತಿದ್ದರು. ಆ ಬರಹಗಳ ಸಂಕಲನವೇ ಈ 'ಅಟ್ಟುಂಬೊಳದ ಪಟ್ಟಾಂಗ'. "ಅಟ್ಟುಂಬೊಳದ ಪಟ್ಟಾಂಗವು ಬಹುತೇಕ ಒಂದು ಪ್ರಾದೇಶಿಕ ಸಂಸ್ಕೃತಿಯನ್ನು ಕಟ್ಟಿಕೊಡುತ್ತದೆ. ಅಟ್ಟು-ಉಂಬ-ಒಳ-ಅಟ್ಟುಂಬೊಳ. ಅಂದರೆ, ಅಡುಗೆ ಮಾಡಿ ಊಟ ಮಾಡುವ ಕೋಣೆ. ಅಡುಗೆ ಕೋಣೆಯ ಒಂದು ಪುಟ್ಟ ಮಾತೂ ತನ್ನ ವ್ಯಾಪ್ತಿ, ಭಾವವನ್ನು ಹಿಗ್ಗಿಸಿಕೊಳ್ಳುತ್ತಾ ಜೀವನ ಮೌಲ್ಯವನ್ನು ತೆರೆದಿಡುತ್ತಾ ಹೋಗುತ್ತದೆ" ಎನ್ನುವ ಪೂರ್ಣಿಮಾ ಅವರು ಈ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ. "ಅಡುಗೆ ಮನೆಯೊಳಗೆ ಅಡುಗೆಯೊಂದಿಗೆ ಬೇಯುತ್ತ ತಣಿಯುತ್ತ ಪಾಕವಾಗುವ ಮಾತುಕತೆಗೆ ಲೇಖಕಿ ಕೊಟ್ಟ ರೂಪವೇ ಅಟ್ಟುಂಬೊಳದ ಪಟ್ಟಾಂಗ. ಪಟ್ಟಾಂಗ ಎಂಬ ಪದ ನಿರ್ಲಿಪ್ತ, ಮುಕ್ತ, ನಿರಪೇಕ್ಷ ಪ್ರಾಮಾಣಿಕ ಮಾತುಕತೆಯ ಪ್ರತಿನಿಧಿ. ಊಟ ಮಾಡುವ ಒಳಮನೆಯಲ್ಲಿ ಹಿತ್ತಲಿನಿಂದ ತೊಡಗಿ ಎಲ್ಲೆಲ್ಲಿಂದೆಲ್ಲ ಬಂದ ಮಾತುಗಳು ಪಾಕವಾಗುತ್ತವೆ. ಮನಸ್ಸಿನ ಜೀವಂತಿಕೆಗೆ ಆಹಾರವಾಗುತ್ತವೆ" ಎನ್ನುತ್ತಾ ಕಾಸರಗೋಡು ಪ್ರಕಾಶನ(ರಿ)ದ ಪರವಾಗಿ ಡಾ. ರಾಧಾಕೃಷ್ಣ ಬೆಳ್ಳೂರು ಶುಭ ಹಾರೈಸಿದ್ದಾರೆ. "ಪಾರಂಪರಿಕ ಜೀವನ ಶೈಲಿ ಬಹಳ ಶೀಘ್ರವಾಗಿ ಬದಲಾವಣೆಗಳನ್ನು ಕಾಣುತ್ತಿರುವ ಇಂದಿನ ದಿನಗಳಲ್ಲಿ ನೆನಪುಗಳಿಗೆ ಅಗ್ರಸ್ಥಾನ" ಎನ್ನುವ ಮಹೇಶ್ವರಿಯವರು ತಮ್ಮ ಈ ಲೇಖನಗಳಲ್ಲಿ ಸುಮಾರು 40 ವರ್ಷಗಳ ಹಿಂದಿನ ನೆನಪುಗಳಿಗೆ ಜೀವ ತುಂಬಿದ್ದಾರೆ. ಬಣ್ಣ ಬಳಿದಿದ್ದಾರೆ. ಅಟ್ಟುಂಬೊಳ, ಹವ್ಯಕ ಭಾಷೆಯ ಹಳಬರಲ್ಲಿ ಪ್ರಚಲಿತದಲ್ಲಿದ್ದು, ಈಗ 'ಕಿಚನ್' ಎಂಬ ಶಬ್ದದ ಸೇಲೆಯ ಮುಂದೆ ನಾಚಿ ಮೂಲೆ ಸೇರಿದೆ. ಹಳ್ಳಿಯ ಹಳೇಯ ಮನೆಯೊಳಗಿನ ಸ್ಥಳಗಳಿಗೆ ಒಂದೊಂದು ಹೆಸರಿರುವುದನ್ನು ತಿಳಿಸುತ್ತಾರೆ. "ಅಡುಗೆ ಕೋಣೆಯಲ್ಲಿ ಪಟ್ಟಾಂಗವೆಂದರೆ, ತಿಂಡಿ ತೀರ್ಥದ ಬಗ್ಗೆ ಮಾತ್ರವಲ್ಲ, ಅಥವಾ ಕೇವಲ ಹೆಂಗಸರ ಪಟ್ಟಾಂಗ ಮಾತ್ರವಲ್ಲ. ಸಂಬಂಧಿಕರೆಲ್ಲರೂ ಒಂದಷ್ಟು ಹೊತ್ತು ಲೋಕಾಭಿರಾಮವಾಗಿ ಮಾತಾಡಬಹುದು. ಅಜ್ಜಿಯ ಅನುಭವಗಳ ಮಾತುಗಳನ್ನೂ ಕೇಳಬಹುದು. ಇತ್ತೀಚೆಗೆ ಸಭೆ ಸಮ್ಮೇಳನಗಳು ಮನೆಯಂಗಳಕ್ಕೆ ಬಂದು ಗೌರವವನ್ನೇನೂ ಕಳೆದುಕೊಂಡಿಲ್ಲ, ಹಾಗಿರುವಾಗ ಅಟ್ಟುಂಬೊಳದ ಪಟ್ಟಾಂಗ ಜಗಲಿಗೂ ಕೇಳಿಸಿದರೆ ಕೇಳುವವರ ಗೌರವವೂ ಕಡಿಮೆಯಾಗಲಾರದು" ಎನ್ನುತ್ತಾ ಪಟ್ಟಾಂಗಕ್ಕೆ ತೊಡಗುವುದನ್ನು ಕಾಣಬಹುದು. ಆ ಪುಟ್ಟ ಅಡುಗೆಕೋಣೆಯಲ್ಲಿ ನೆರೆಮನೆಯವರಿಂದ ಹಿಡಿದು ಅಂತಾರಾಷ್ಟ್ರೀಯ ವಿಷಯಗಳವರೆಗೂ ಚರ್ಚೆಗಳಾಗುತ್ತವೆ. ಮಳೆಗಾಲದಲ್ಲಿ ನಡೆಯುವಾಗ ಪ್ರಕೃತಿ ಸೌಂದರ್ಯವನ್ನಾಸ್ವಾದಿಸುವ ಲೇಖಕಿ ದಾರಿ ಬದಿಯಲ್ಲಿ ಅರಳಿ ನಗುವ ಪುಟ್ಟ ಪುಟಾಣಿ ಹೂಗಳನ್ನು ವಿನಮ್ರತೆಯ ಕಿರು ಹಣತೆಗಳು ಎನ್ನುತ್ತಾರೆ. ಪ್ರಶಸ್ತಿ ಗೌರವಗಳು ಬಂದಕೂಡಲೇ ಗರ್ವದಿಂದ ಬೀಗುವ ಜನರು ಒಂದೆಡೆಯಾದರೆ, ಹೆಸರಿನ ಮೋಹವಿಲ್ಲದೆ ದುಡಿವ ಜೀವಗಳು, ಗುಪ್ತವಾಗಿ ಮತ್ತೊಬ್ಬರಿಗೆ ಸಹಾಯ ಮಾಡುವ ಜನರೂ ನಮ್ಮ ಮಧ್ಯೆ ಇದ್ದಾರೆ ಎಂದು ಹೇಳುತ್ತಾ ಜನರ ಸ್ವಭಾವದ ಪರಿಚಯ ಮಾಡಿಸುತ್ತಾರೆ. ಸಮಾಜದಲ್ಲಿ ಯಾವೆಲ್ಲ ರೀತಿಯ ಜನರಿದ್ದಾರೆ ಎಂಬುದನ್ನು ವಿವರಿಸುತ್ತಾರೆ. ಮನೆಗೆ ಅತಿಥಿಗಳು ಬಂದಾಗ ಅವರನ್ನು ಉಪಚರಿಸುವ ಬಗೆಯನ್ನು ತಿಳಿಸುತ್ತಾರೆ. "ಆಪ್ತರು, ಸನ್ಮಿತ್ರರು ಆಡುವ ಚೇತೋಹಾರಿ ನುಡಿಗಳು ಟಾನಿಕ್ ಇದ್ದಂತೆ. ಮಾತಿನ ಗೌರವ, ಮಹತ್ವ ತಿಳಿದು ಆಡುವವರ ಬಳಗ ಹೆಚ್ಚಿದಷ್ಟು ಪರಿಸರ ತಿಳಿಯಾಗಿ ಮಲಿನತೆ ದೂರಾಗುತ್ತದೆ. ಅಂತರಗಂಗೆ ತಿಳಿಯಾಗಿದ್ದರೆ ಸೊಲ್ಲು ನಿರ್ಮಲವಾಗುತ್ತದೆ" ಎಂದು ಮಾತಿನ ಮಹತ್ವವನ್ನು ತಿಳಿಸುತ್ತಾರೆ. ಶಾಲೆಯ ನೆನಪುಗಳನ್ನು ಹೃದ್ಯವಾಗಿಸುವ ಗಿರಿಜಾ ಟೀಚರನ್ನು ಪರಿಚಯಿಸುತ್ತಾರೆ. ಶಾಲೆಯನ್ನು ಮನೆಯೆಂದೇ ತಿಳಿದು ಎಲ್ಲರೂ ಜೊತೆಯಲ್ಲಿ ಕೆಲಸ ಮಾಡುವುದು, ದುಡಿಮೆಯ ಮೇಲಿನ ಗೌರವ, ಸಾಂಘಿಕ ದುಡಿಮೆಯ ಸಂತೋಷವನ್ನು ಸಮೃದ್ಧವಾಗಿ ಪರಿಚಯಿಸುವ ಈ ಪಾಠಗಳು ಪಠ್ಯ ಪುಸ್ತಕಗಳಿಗಿಂತಲೂ ಮಿಗಲಾದದ್ದೆಂದು ಅರಿವಾಗುತ್ತದೆ. ಶಾಲೆಯಲ್ಲೇ ಗಿಡಗಳನ್ನು ನೆಡುವುದು, ನೀರು ಹಾಕುವುದು, ಪ್ರತಿದಿನ ತರಗತಿಗಳನ್ನು ಗುಡಿಸಿ ಸ್ವಚ್ಛಗೊಳಿಸುವುದು, ಶಿಕ್ಷಕರ ಮೇಜು ಕುರ್ಚಿಗಳ ಧೂಳು ಒರೆಸುವುದು, ಎಲ್ಲರೂ ಸೇರಿ ಶಾಲಾ ಪರಿಸರವನ್ನು ಶುಚಿಗೊಳಿಸುವುದು ಇದೆಲ್ಲ ವಿದ್ಯಾರ್ಥಿಗಳ ಕರ್ತವ್ಯವೂ ಆಗಿತ್ತು. ಇವೆಲಾಲದರಿಂದ ಅವರು ಒಂದೊಂದು ಪಾಠವನ್ನೂ ಕಲಿಯುತ್ತಾರೆ. ಆದರೆ ಬದಲಾದ ಈಗಿನ ಶಿಕ್ಷಣದ ವ್ಯವಸ್ಥೆ ಇಂಥದ್ದಕ್ಕೆಲ್ಲ ಅವಕಾಶ ಮಾಡಿಕೊಡುವುದಿಲ್ಲ. ವಿದ್ಯಾರ್ಥಿಗಳಿಗೆ ಹೊಂದಿಕೊಳ್ಳುವ ಗುಣವಿಲ್ಲ ಒಗ್ಗಟ್ಟಿನ ಮಹತ್ವ ತಿಳಿದಿಲ್ಲ. ಆಗಿನ ಶಿಕ್ಷಣಕ್ಕೂ ಈಗಿನ ಶಿಕ್ಷಣ ವ್ಯವಸ್ಥೆಯ ವ್ಯತ್ಯಾಸವನ್ನು ತಿಳಿಸುತ್ತಾರೆ. ಬೆಳಗೆದ್ದು ಮಕ್ಕಳೆಲ್ಲ ಬುಟ್ಟಿ ಹಿಡಿದು ಅಡಿಕೆ, ಹಲಸಿನ ಬೀಜ ಹೆಕ್ಕಲು ಹೋಗುವುದು, ಮಾಳದ ಹತ್ತಿರ ಇಟ್ಟ ಅಗ್ಗಿಷ್ಟಿಕೆಯ ಬೆಂಕಿ ಹೆಚ್ಚಿಸಿ ಅದರ ಬಳಿ ಕುಳಿತು ಮಕ್ಕಳೆಲ್ಲ ಅಡಿಕೆ ಲೆಕ್ಕ ಮಾಡುತ್ತಿದ್ದರು. ಈ ಕೆಲಸ ಮುಗಿಸಿದ ಮೇಲೆ ಎಲ್ಲರೂ ಶಾಲೆಗೆ ಹೋಗುತ್ತಿದ್ದರು. ಬೇಸಗೆ ರಜೆಯ ದಿನಗಳಲ್ಲಿ ಮಕ್ಕಳಿಗೆಲ್ಲ ಒಂದೊಂದು ಕೆಲಸ ಕೊಡುವುದು, ಹಪ್ಫಳ ಮಾಡುವುದೋ ಹಲಸಿನ ತೊಳೆ ಬಿಡಿಸುವುದೋ, ಸ್ವಚ್ಛ ಮಾಡುವುದೋ ಹೀಗೆ ಮಕ್ಕಳೆಲ್ಲರೂ ಒಂದೊಂದು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಹಳ್ಳಿಯ ಜನರು ಪ್ರಾಣಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಸುವುದು, ಅವು ಅನಾರೋಗ್ಯದಿಂದ ಬಳಲುವಾಗ ಪ್ರೀತಿಯಿಂದ ಆರೈಕೆ ಮಾಡುವುದು ಸಹಜವಾಗಿತ್ತು. ಪಶು ವೈದ್ಯರಾದ ಕಾರ್ಮಾರು ಸುಬ್ಬಣ್ಣ ಬಂಟರ ಕೈಗುಣವನ್ನು ಹೊಗಳುತ್ತಾರೆ. ನಾಲ್ಕೂರಿಗೂ ಅವರೇ ವೈದ್ಯರಾಗಿದ್ದರು. "ಪ್ರೀತಿ ಅಕ್ಕರೆಯನ್ನುಂಡ ಪ್ರಾಣಿಗಳು ತೋರುವ ವಿಶ್ವಾಸವನ್ನು ನೆನೆದರೆ ಮನುಷ್ಯನೂ ನಾಚಬೇಕು" ಎಂದು ಪ್ರಾಣಿಗಳು ಮನುಷ್ಯರ ಮೇಲಿಡುವ ನಂಬಿಕೆಯನ್ನು ಕಂಡು ಅಚ್ಚರಿ ಪಡುವರು.ಆದರೆ, ಮನುಷ್ಯ ಮನುಷ್ಯನ ಮೇಲೆ ನಂಬಿಕೆಯಿಡದಿರುವುದೇ ವಿಪರ್ಯಾಸ. ದೂರವಾಣಿ ಬರುವ ಮೊದಲು ತಮ್ಮ ವಿಷಯಗಳ ವಿನಿಮಯಕ್ಕೆ ಬಳಸುತ್ತಿದ್ದ ಪತ್ರ ವ್ಯವಹಾರದ ಬಗ್ಗೆ ಹೇಳುತ್ತಾರೆ. "ಆ ಪತ್ರಗಳನ್ನು ಎಷ್ಟೋ ಕಾಲದ ನಂತರವೂ ಓದಬಹುದು. ಅದರಲ್ಲಿರುವ ವಿಷಯಗಳು 'ಗತ'ಕ್ಕೆ ಸರಿದರೂ ಅದರ ಹಿಂದಿರುವ ಭಾವ ವರ್ತಮಾನಕ್ಕೂ ಮಾರ್ಗದರ್ಶನ ಮಾಡಬಲ್ಲುದು. ಹಳೆಯ ನೆನಪುಗಳ ಸಂಪುಟಗಳನ್ನು ಬಿಚ್ಚಬಹುದು. ಮರೆಗೆ ಸರಿದುಹೋದ ಸಂಬಧಗಳ ಪುನರುಜ್ಜೀವನ ಆಗಬಹುದು. ಯೋಧರ ಪಾಲಿಗಂತೂ ಅಮ್ಮನ ಅಕ್ಕರೆ, ಮಡದಿಯ ಪ್ರೀತಿ, ಮಕ್ಕಳ ಮುದ್ದುಗಳನ್ನು ಹೊತ್ತು ತರುವ ಪತ್ರಗಳ ಬೆಲೆಯನ್ನು ಹೇಳಿ ಮುಗಿಸಲು ಸಾಧ್ಯವಿಲ್ಲ" ಎನ್ನುತ್ತಾರೆ. ಹೌದು ಇಂತಹ ಪತ್ರಗಳಲ್ಲಿ ಪ್ರೀತಿ, ವಾತ್ಸಲ್ಯ ಸ್ನೇಹಗಳಿವೆ. ಸಂಬಂಧಗಳನ್ನು ಪರಸ್ಪರ ಬೆಸೆಯುವ ಕೊಂಡಿಗಳೇ ಈ ಪತ್ರಗಳು. ಹಗಲಿಡೀ ದುಡಿವ ಹಳ್ಳಿಗರಿಗೆ ಒಂದು ಮನರಂಜನೆಯೇ ಯಕ್ಷಗಾನ. ಅಲ್ಲಿ ಬರುವ ಪುರಾಣ ಪಾತ್ರಗಳು, ಕುಣಿತಗಳು, ಬಣ್ಣಗಾರಿಕೆ, ವೇಷಭೂಷಣ ಎಲ್ಲವೂ ಒಂದು ಸೋಜಿಗೆ. ನಮ್ಮನ್ನು ಪುರಾಣ ಲೋಕಕ್ಕೆ ಕೊಂಡೊಯ್ಯುವ ಯಕ್ಷಗಾನವು ಹಲವಾರು ಪುರಾಣ ಕಥೆಗಳನ್ನು ಆ ಕಥೆಗಳ ಮೂಲಕ ಧರ್ಮ ಅಧರ್ಮಗಳನ್ನು, ನ್ಯಾಯ ಅನ್ಯಾಯಗಳನ್ನು, ಜೀವನ ಮೌಲ್ಯಗಳನ್ನು, ನೀತಿಪಾಠಗಳನ್ನು, ಒಳಿತು ಕೆಡುಕುಗಳನ್ನು ಹೇಳಿಕೊಡುತ್ತವೆ. ಯಕ್ಷಗಾನ ನೋಡಿ ಬಂದ ಮೇಲೆ ಪಾತ್ರಗಳ ವಿಮರ್ಶೆ ಮಾಡುವುದು ಕಲಾವಿದರಂತೆ ತಾವೂ ಮನೆಯಂಗಳದಲ್ಲಿ ಅಭಿನಯಿಸುವುದು ಸಾಮಾನ್ಯವಾಗಿ ಹಳ್ಳಿಗಳಲ್ಲಿ ನಡೆಯುತ್ತವೆ. ಗೆಳತಿಯರ ನಡುವೆ ನಡೆಯುವ ಜಗಳಗಳನ್ನು ಕೋಪ ರಾಜಿಗಳನ್ನು ಸ್ವಾರಸ್ಯಕರವಾಗಿ ಹೇಳುತ್ತಾ , ಕೋಪ ಬರುವುದು ಮತ್ತು ಕೋಪು ಮಾಡಿಕೊಳ್ಳುವು ಬೇರೆ ಬೇರೆ ಎಂದು ಸಮರ್ಥಿಸುವರು. "ಕೋಪ ಬರುವುದು ಯಾವುದಾದರೊಂದು ಕಾರಣಕ್ಕೆ, ಕೋಪ ಮಾಡುವುದು ಶಬ್ದವೇ ಸೂಚಿಸುವಂತೆ ಪ್ರ????ಪೂರ್ವಕವಾದದ್ದು" ಎಂದು ವಿವರಿಸತ್ತಾರೆ. "ಮನೆ ತುಂಬುವುದೆಂದರೆ, ಭೂಮಿತಾಯಿಯ ವಾತ್ಸಲ್ಯದ ಕೊಡುಗೆಯನ್ನು ಕೃತ???ತಾ ಪೂರ್ವಕ ವಿನಮ್ರತೆಯಿಂದ ಸ್ವೀಕರಿಸುವುದು" ಎನ್ನುತ್ತಾರೆ. ಹಳ್ಳಿ ಜನರು ಗದ್ದೆಯಲ್ಲಿ ಬೆಳೆದ ಹೊಸ ಫಸಲನ್ನು ಭಾಗ್ಯಲಕ್ಷಿಯೆಂದು ಸಂಭ್ರಮದಿಂದ ಒಳಗೆ ಸ್ವಾಗತಿಸುತ್ತಾರೆ. ರಾತ್ರಿ ಅಜ್ಜಿ ಕತೆ ಹೇಳುವ ಸಂಪ್ರದಾಯವನ್ನು ಕಾಣಬಹುದು. ಮಕ್ಕಳೆಲ್ಲ ಅಜ್ಜಿಯ ಸುತ್ತ ಕುಳಿತು ಕಿವಿ ನಿಮಿರಿಸಿ ಅಜ್ಜಿ ಹೇಳುವ ಕತೆಗಳನ್ನು ಬಹಳ ಆಸಕ್ತಿಯಿಂದ ಕುತೂಹಲದಿಂದ ಆಲಿಸುತ್ತಾರೆ. ಅಜ್ಜಿ ಹೇಳಿದ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾರೆ. ಆದರೆ, ಇಂದಿನ ಕಾಲದಲ್ಲಿ ಇದೆಲ್ಲ ಮರೆಯಾಗಿರುವುದು ಬೇಸರದ ವಿಷಯವೇ. ಮೊಬೈಲ್ ಕಂಪ್ಯುಟರ್ ಟಿವಿಗಳಿಗೆ ಮರುಳಾದ ಮಕ್ಕಳು ಅಜ್ಜಿಯ ಬಳಿಗೆ ಹೋಗುವುದೋ, ಪ್ರೀತಿಯಿಂದ ಮಾತಾಡಿಸುವುದೋ, ಅವಳು ಹೇಳುವ ಕತೆಗಳಿಗೆ ಕಿವಿಯಾಗುವುದು ಯಾವುದೂ ಈಗ ಕಂಡುಬರುವುದಿಲ್ಲ. ಉಂಡಲಕಾಯಿ ಮಾಡುವಾಗ ಮಕ್ಕಳೆಲ್ಲ ಸುತ್ತ ಕುಳಿತು ಉಂಡೆ ಮಾಡುವುದು ಅಂತ್ಯಾಕ್ಷರಿ ಆಡುವುದು ನೋಡಲು ಕಣ್ಣಿಗೊಂದು ಹಬ್ಬ. ಬಿಡುವಿನ ವೇಳೆಯಲ್ಲಿ ಪ್ರತಿದಿನ ಆಡುತ್ತಿದ್ದ ಚೆಂಡಾಟ, ಹುಲಿ ದನ ಆಟ, ಕಾಗೆ ಗಿಳಿ ಆಟ ತಲೇಮು ಹೀಗೆ ಹಲವಾರು ಆಟಗಳನ್ನು ನೆನಪಿಸಿಕೊಳ್ಳುತ್ತಾರೆ. ಅದರಲ್ಲೂ ಕೆಲವೊಂದು ಆಟಗಳು ಈಗ ಕಣ್ಮರೆಯಾಗಿವೆ ಈಗಿನ ಮಕ್ಕಳಿಗೆ ಅವುಗಳ ಪರಿಚಯವೇ ಇಲ್ಲ. ಅಡಗುವಾಟ ಆಡುವಾಗ ಕತ್ತಲ ಕೋಣೆಗಳು ದೊಡ್ಡ ಉಪ್ಪರಿಗೆಗಳು, ಗುಡಾಣಗಳು ಅಡಗು ತಾಣಗಳಾಗುತ್ತವೆ. ಹಿರಿಯರಿಗೆ ಯಾವಾಗಲೂ ಮಾಡುವ ಕೆಲಸ ಅಚ್ಚುಕಟ್ಟಾಗಿರಬೇಕು. ಅದರ್ಂಬರ್ದ ಮಾಡಬಾರದು. ಆಗಾಗ ನಿರ್ದೇಶನವೂ ನೀಡುತ್ತಾರೆ. ನಾವು ಮಾಡುವ ಕೆಲಸ ಸರಿಯಾಗಿಲ್ಲವೆಂದರೆ, "ಮಾಡುವ ಕೆಲಸ 'ನೇರ್ಪಡೆ' (ಸರಿಯಾಗಿ) ಮಾಡು, ಗೋಸ್ಬಾರಿ ತೋರಿಸದೆ ಅಚ್ಚುಕಟ್ಟಾಗಿ ಮಾಡಿ ಮುಗಿಸು" ಎನ್ನುತ್ತಾರೆ ಹಿರಿಯರು. ಈ ಮಾತುಗಳು ತೋರಿಕೆಗೆ ನಾವು ಮಾಡುವ ಕೆಲಸದ ಕುರಿತಾದರೂ ಅವು ನಮ್ಮ ಜೀವನ ಕ್ರಮಕ್ಕೆ ಸಂಬಂಧಿಸಿದ್ದೆಂಬ ಅರಿವೂ ನಮಗಿರಬೇಕು. ಇಂತಹ ಸಂಸ್ಕಾರವನ್ನು ಶಿಸ್ತನ್ನು ಕಲಿಸುವ ಅಮ್ಮ ದೊಡಮ್ಮ ಅಜ್ಜಿ ಇವರೆಲ್ಲ ನಮ್ಮನ್ನು ಸುಂದರ ಶಿಲ್ಪವಾಗಿಸುವ ಶಿಲ್ಪಿಗಳು" ಎಂದು ಪೂರ್ಣಿಮಾ ಹೇಳುತ್ತಾರೆ. ಸಣ್ಣ ಸಣ್ಣ ಸಂಗತಿಗಳಾಗಿ ಕಾಣುವ ವಿಷಯಗಳ ಹಿಂದಿನ ವಾಸ್ತವತೆಯನ್ನು ನಾವು ಅರಿಯಬೇಕು. ಈ ಸಣ್ಣ ವಿಷಯಗಳೇ ಮುಂದೆ ದೊಡ್ಡ ಸಮಸ್ಯೆಯಾಗಿ ಬಿಡುತ್ತವೆ. ಆದ್ದರಿಂದ ಸಣ್ಣ ವಿಷಯಗಳನ್ನು ನಿರ್ಲಕ್ಷಿಸದೆ ಸದಾ ಎಚ್ಚರಿಕೆ ವಹಿಸಬೇಕು. ಸಿಡಿಮದ್ದಿನ ಗೌಜಿ, ತಾಲೀಮ ಪ್ರದರ್ಶನ, ಯಕ್ಷಗಾನ, ಸಂತೆಯಲ್ಲಿ ಖರೀದಿಸುವ ಕಿತ್ತಳೆ, ಖರ್ಜೂರ, ಕಡ್ಲೆ ಮಿಠಾಯಿ, ಪುಕ್ಕಟೆ ಸಂತೋಷಕ್ಕಾಗಿ ನಡೆಸುವ ಪುಕ್ಕಟೆ ಕಾಲ್ನಡಿಗೆಯ ಪಯಣ ಹೀಗೆ ಜಾತ್ರೆಯ ಬಗೆಗಿನ ಮಧುರ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಹೌದು ಜಾತ್ರೆ ಅಂದರೆ ಒಂದು ಸಂಭ್ರಮ, ಸಂತಸ, ಸಡಗರ. ಪರವೂರಲ್ಲಿರುವ ಜನರೂ ತಮ್ಮ ಊರಿನ ಜಾತ್ರೆಗೆ ಬಂದು ಸೇರುತ್ತಾರೆ. ಸಂಬಂಧಿಕರು ಬರುತ್ತಾರೆ. ಮಕ್ಕಳಿಗಂತೂ ತಮ್ಮ ಉದ್ದವಾದ ಸೈನ್ಯ ವನ್ನು ಕಾಣುವಾಗಲೇ ಹಿಗ್ಗು. ಮಕ್ಕಳಲ್ಲಿ ಜಾತ್ರೆಯ ಬಗೆಗಿನ ಬೆಡಗು, ಬೆರಗು ಮೂಡುತ್ತಿದ್ದವು. ಎಲ್ಲದರಲ್ಲೂ ಒಂದು ಹೊಸತನ, ಕುತೂಹಲ, ಒಂದು ಸೋಜಿಗವೆನಿಸುತ್ತಿತ್ತು. ಆದರೆ ಇಂದಿನ ಮಕ್ಕಳಲ್ಲಿ, ಜಾತ್ರೆ, ಸಂತೆಯ ಬಗೆಗಿನ ಯಾವ ಬೆರಗೂ ಕುತೂಹಲ, ಆಸಕ್ತಿಗಳೂ ಉಳಿದಿಲ್ಲ. ಆಹಾರ ವಸ್ತುಗಳನ್ನು ಕೆಡದಂತೆ ಜೋಪಾನ ಮಾಡುವ ಪಾರಂಪರಿಕ ವಿಧಾನಗಳನ್ನು ವಿವರಿಸುತ್ತಾರೆ. ಅವಿಭಜಿತ ಕುಟುಂಬದಲ್ಲಿ ಸಂಬಂಧಗಳ ನಡುವಿನ ಪ್ರೀತಿ ವಿಶ್ವಾಸ ಮಹತ್ವಗಳನ್ನು ತಿಳಿಸುತ್ತಾರೆ. ಪುಸ್ತಕಗಳ ಓದಿನಿಂದ ಸಿಗುವ ಸುಖ ಬೇರೆಯೇ. "ಆ ಓದುವ ಸುಖ ಮತ್ತು ಅದರ ನೆನಪು ಹೇಗಿರುತ್ತದೆಂದರೆ, ನಮಗೆ ಅಷ್ಟೊಂದು ಆನಂದ ನೀಡಿದ ಬರಹಗಳನ್ನು ನಾವು ಅವನ್ನು ಯಾವಾಗ ಓದಿದ್ದು, ಎಲ್ಲಿ ಓದಿದ್ದು, ಆಗ ಅಲ್ಲಿ ಯಾರಿದ್ದರು ಎಲ್ಲ ವಿವರಗಳೊಂದಿಗೆ ಆಪ್ತವಾಗಿ ನಮ್ಮ ಮನದಲ್ಲಿ ಬೆಚ್ಚಗೆ ಕೂತಿರುತ್ತದೆ" ಎನ್ನುತ್ತಾರೆ ಲೇಖಕಿ. ಅಮ್ಮನ ಬಸುರಿಯಾಗಿದ್ದಾಗ ಕೈಗೂಡದ ಬಯಕೆ, ಅಮ್ಮ ಮಾಡುತ್ತಿದ್ದ ನೀರುಂಡೆಯ ಪುರಾಣ,ರೈತರ ಬಗೆಗಿನ ಅನುಕಂಪ, ಮನುಷ್ಯನ ಕೊಳ್ಳುಬಾಕತನದ ಬಗ್ಗೆ, ಈ ಹಳಮೆಯ ಬುವಿ ಜೀವಿಗಳ ಅಕ್ಕರೆಯ ಮಡಿಲು ಎನ್ನುತ್ತಾ ಮನುಷ್ಯನ ಒಂದೊಂದೇ ಬೆಳವಣಿಗೆಯ ಹಂತಗಳನ್ನು ವಿವರಿಸುತ್ತಾರೆ. ಮುಂಜಾನೆ ಕೇಳಿಸುವ ಉದಯರಾಗ, ಸುಪ್ರಭಾತ, ಭಗವಂತ ದೈವಿಕ ಭಕ್ತಿಗಳನ್ನು ವಿವರಿಸುವರು. ಕಿರಿಯರಿಂದ ಹಿಡಿದು ಹಿರಿಯರವರೆಗೂ ಅನುಭವಿಸುವ ಇಷ್ಟಪಡುವ ಕೊನೆಯ ಸಿಪ್ ನ ಸವಿ, ಆರೋಗ್ಯದ ದೃಷ್ಠಿಯಿಂದ ಹಿರಿಯರು ನೀಡುವ ಬಾಯಿಗೆ ರುಚಿಸದ ಆಹಾರ ಪದಾರ್ಥಗಳ ವಿವರ, ಪಾರೆಮುಳ್ಳಿನ ಕುಡಿಗಳ ಗಂಜಿ, ಅವುಗಳನ್ನು ಉಂಡೆ ಮಾಡಿ ನೆತ್ತಿಗೆ ಹಚ್ಚಿ ರೊಟ್ಟಿಯಂತೆ ತಟ್ಟುವ ನೆನಪುಗಳನ್ನು ಬಿಚ್ಚಿಡುವುದನ್ನು ಕಾಣಬಹುದು. ಹೀಗೆ ತಮ್ಮ ನೆನಪಿನಂಗಳದ ಪ್ರತಿಯೊಂದು ವಿಚಾರಗಳನ್ನು ಸೊಗಸಾಗಿ ವಿವರಿಸುವರು. ಅಲ್ಲಲ್ಲಿ ಹವ್ಯಕ ಭಾಷೆಯನ್ನೂ ಕಾಣಬಹುದು. ಗಂಭೀರ ಬರವಣಿಗೆ ಮಧ್ಯೆ ಹಾಸ್ಯದ ಲೇಪನವೂ ಇದೆ. ಇದರಿಂದ ಕಲಿವ ಸಂಗತಿಗಳೂ ಬಹಳಷ್ಟಿವೆ. ನಮಗೆ ಗೊತ್ತಿಲ್ಲದ ಅದೆಷ್ಪೋ ಸಂಗತಿಗಳು ಈ ಪಟ್ಟಾಂಗಕ್ಕೆ ಕಿವಿಯಾದಾಗ ತಿಳಿಯುತ್ತವೆ. ಬರಹ: ಚೇತನಾ ಕುಂಬ್ಳೆ Feed Back: samarasasudhi@gmail.com

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries