HEALTH TIPS

ಸಮರಸ-ಮಹಾ ಭಾರತದ ಜನತಂತ್ರದ ಹೆಜ್ಜೆಗಳು-7- ಚುನಾವಣೆಯ ಪೂರ್ವಾಪರ ಲೋಕಸಭಾ ಚುನಾವಣೆಯ ಇತಿಹಾಸ ಹಾಗೂ ನಡೆದು ಬಂದ ಹಾದಿ!!-


      (ಮುಂದುವರಿದ ಭಾಗ)
       ಉತ್ತರ ಕುರು ಹಾಗೂ ಉತ್ತರ ಮುದ್ರ ರಾಜ್ಯಗಳಲ್ಲಿ ವೈರಾಜ್ಯ (ರಾಜನಿಲ್ಲದ ಪ್ರಭುತ್ವ) ಇತ್ತೆಂದು ಐತ್ತರೇಯ ಬ್ರಾಹ್ಮಣದಲ್ಲಿ ಹೇಳಿದೆ. ವಿರಾಟ್ ಎಂಬುದು ರಾಜವಾಚಕವಲ್ಲ. ಜನವಾಚಕ ಎಂದು ಇದರಿಂದ ಹೇಳಬಹುದು. ಅಲೆಗ್ಸಾಂಡರ್ ಭಾರತಕ್ಕೆ ಬಂದಾಗ ಇಂಥ ಗಣರಾಜ್ಯಗಳಿದ್ದುದನ್ನು ಆಗಿನ ಗ್ರೀಕ್ ಲೇಖಕರು ಪ್ರಸ್ತಾವಿಸಿದ್ದಾರೆ. ನ್ಯಾಸ ಮತ್ತು ಸಿಬಿ ಎಂಬುವು ನಗರರಾಜ್ಯಗಳಾಗಿದ್ದುವೆಂದೂ ನಾಗರಿಕರಿಗೆ ಸ್ವಾತಂತ್ರ್ಯವಿತ್ತೆಂದೂ ಗ್ರೀಕ್ ಇತಿಹಾಸದಿಂದ ತಿಳಿದುಬರುತ್ತದೆ. ಇಂಥ ಅನೇಕ ನಗರರಾಜ್ಯಗಳ ಸಂಯುಕ್ತ ವ್ಯವಸ್ಥೆ ರೂಪುಗೊಂಡು ಅದಕ್ಕೊಬ್ಬ ಮುಖಂಡರಾಜನನ್ನು ಆರಿಸಿಕೊಳ್ಳುವ ಪರಿಪಾಟಿಯಿತ್ತೆಂಬುದಕ್ಕೆ ಕುರುಪಾಂಚಾಲ, ಶೂದ್ರಕ, ಮಾಳವ ಮತ್ತು ಲಿಚ್ಛವಿ ಮಲ್ಲರ ಸಂಯುಕ್ತ ವ್ಯವಸ್ಥೆಗಳೇ ನಿದರ್ಶನ. ಲಿಚ್ಚವಿ ಮಲ್ಲರ ಸಂಯುಕ್ತ ಸಭೆಯಲ್ಲಿ 18 ಸದಸ್ಯರು-ಅವರಲ್ಲಿ 9 ಜನ ಸಂಯುಕ್ತ ವ್ಯವಸ್ಥೆಗೊಳಪಟ್ಟ ರಾಜ್ಯಗಳಿಂದ ಚುನಾಯಿತರಾದವರು-ಇರುತ್ತಿದ್ದರು. ಹೀಗೆ ಅಲ್ಲಿ ಒಂದು ವಿಧದ ಚುನಾವಣೆ ರೂಪುಗೊಳ್ಳುತ್ತ ಬಂದಿತ್ತು.
     ಸಮಿತಿ ಎಂಬ ಸಂಸ್ಥೆಗೆ ವೇದಕಾಲದಿಂದಲೂ ಪ್ರಾಧಾನ್ಯವಿದ್ದಂತೆ ಕಾಣುತ್ತದೆ. ಇದು ವಿಶಃ ಎಂದು ಆಗ ಹೆಸರಾದ ಜನಾಂಗದ ಜನರ ಸಭೆಯಾಗಿತ್ತೆಂದು ತೋರುತ್ತದೆ. ವಿದಥ ಎಂಬ ಮೂಲ ಜನಸಂಸ್ಥೆಯ ವಿವಿಧ ರೂಪಗಳೇ ಸಮಿತಿ, ಸಭೆ, ಸೇನಾ ಮುಂತಾದವು. ಕಾರ್ಯವ್ಯಾಪ್ತಿಯಲ್ಲಿ ಇವುಗಳಲ್ಲಿ ವ್ಯತ್ಯಾಸವಿದ್ದಿತು. ಸಮಿತಿ ಸಭೆಗಳ ಪರಸ್ಪರ ಸಂಬಂಧದ ವಿವರ ಸಿಗುವುದಿಲ್ಲ. ಸಹಧರ್ಮಿಗಳಾದ ಸಜ್ಜನರಿಂದ ಕೂಡಿದ್ದು ಸಭಾ-ಎಂದು ಪಾರಸ್ಕರ ಗೃಹ್ಯಸೂತ್ರ ಹೇಳುತ್ತದೆ. ಇಲ್ಲಿ ಆಯ್ಕೆ ಸೀಮಿತ ಪರಿಧಿಯಲ್ಲಿತ್ತೆಂದು ಸಹಜವಾಗಿ ತಿಳಿಯಬಹುದು. ಸಮಿತಿ ಹೆಚ್ಚು ಪ್ರಭಾವಶಾಲಿಯಾಗಿದ್ದಂತೆ ತೋರುತ್ತದೆ. ಸಮಿತಿಗಳಲ್ಲಿ ಸದಸ್ಯರು ಮನಂಬುವಂತೆ ಮಾತನಾಡಬೇಕಿತ್ತು. ಶ್ವೇತಕೇತನು ಪಾಂಚಾಲರ ಸಮಿತಿಗೆ ಬಂದು ಭಾಗವಹಿಸಿದನಂತೆ, ಚರ್ಚೆ, ವಾಕ್ ಸ್ವಾತಂತ್ರ್ಯ ಒಂದು ಮಟ್ಟ ತಲುಪಿದುದನ್ನು ಇದು ಸೂಚಿಸುತ್ತದೆ. ಸಮಿತಿಯ ಮುಖಂಡನಿಗೆ ಈಶಾನ ಎಂದು ಕರೆಯಲಾಗುತ್ತಿತ್ತು. ಸಮಿತಿಯ ಸದಸ್ಯರು ಪ್ರತಿನಿಧಿಗಳಾಗಿರುತ್ತಿದ್ದರು. ಗ್ರಾಮ ಎಂಬುದು ಸಹ ಕುಟುಂಬದ ಅನಂತರ ರೂಪುಗೊಂಡ ಜನಸಂಸ್ಥೆ. ಗ್ರಾಮದ ಮುಖ್ಯನಿಗೆ ಗ್ರಾಮಣಿ ಎಂದು ಕರೆಯಲಾಗುತ್ತಿತ್ತು. ಗ್ರಾಮಗಳೇ ಸಮಿತಿಗೆ ಆಧಾರವಾಗಿದ್ದುವು. ಇವೆಲ್ಲವುಗಳಲ್ಲಿ ಚುನಾವಣೆಯ ಒಂದು ಅಂಶ ಹಾಸುಹೊಕ್ಕಾಗಿ ಇದ್ದುದು ನಿಸ್ಸಂದೇಹವಾಗಿದ್ದರೂ ಚುನಾವಣೆಯ ಪದ್ಧತಿ ಸ್ಪಷ್ಟವಾಗಿ ತಿಳಿಯುವುದಿಲ್ಲ. ಸಾಮ್ರಾಜ್ಯ ಪದ್ಧತಿಗಳು ಪ್ರಬಲವಾದ ಅನಂತರ ಈ ಸಮಿತಿಗಳು ಕಾಣುವುದಿಲ್ಲ.
     ಭಾರತೀಯ ಗಣರಾಜ್ಯಗಳು ವೇದಾನಂತರದ ಕಾಲದಲ್ಲಿ ಇದ್ದುವು. ರಾಜರಹಿತ ಹಿಂದೂ ಆಡಳಿತಪದ್ಧತಿಯು ವಿವರಣೆ ಭಾರತೀಯ ವೈಧಾನಿಕ ಇತಿಹಾಸದಲ್ಲೇ ಮಹತ್ತ್ವಪೂರ್ಣವಾದದ್ದು. ಸಂಘ, ಜನಪದ, ಗಣ ಇವು ಈ ರಾಜರಹಿತ ರಾಜ್ಯ ಘಟಕಗಳಿಗಿದ್ದ ಹೆಸರುಗಳು. ಮೆಗಾಸ್ತನೀಸ್ ಇಂಥ ರಾಜ್ಯಗಳ ಅಸ್ತಿತ್ವವನ್ನು ಪ್ರಸ್ತಾವಿಸುತ್ತಾನೆ. ಬುದ್ಧನ ಪ್ರದೇಶದ ಸುತ್ತ ಗಣರಾಜ್ಯಗಳಿದ್ದುವು. ಜನಚಿತ್ತ ಎಂಬುದನ್ನು ಪಬ್ಲಿಕ್ ಮೈಂಡ್ ಎಂಬ ಅರ್ಥದಲ್ಲಿ ಬಳಸಲಾಗಿದೆ. ಒಳ್ಳೆಯ ಮನಸ್ಸುಗಳು ಸಮೂಹವುಳ್ಳ ಜನತೆಯೇ ಗಣ-ಎಂಬುದು ಅಭಿದಾನ ರಾಜೇಂದ್ರದ ಮಾತು. ಗಣರಾಜ್ಯ ಎಂಬುದನ್ನು ಸಂಖ್ಯೆಯ ಆಡಳಿತ, ಸಮೂಹದ ಆಡಳಿತ ಎಂಬಂತೆ ಬೌದ್ಧ ಸಾಹಿತ್ಯದಲ್ಲಿ, ಮಹಾಭಾರತದಲ್ಲಿ ಬಳಸಲಾಗಿದೆ. ಸಂಘವನ್ನು ಗಣ ಎಂಬ ಅರ್ಥದಲ್ಲಿ ಕೌಟಿಲ್ಯ ಬಳಸಿದ್ದಾನೆ.
      ಮುಂಚಿನ ಸಮಿತಿಗಳಿಗಿಂತ ಹೆಚ್ಚಾಗಿ ಚುನಾವಣೆ ಈ ಗಣರಾಜ್ಯಗಳಲ್ಲಿ ಹೆಚ್ಚು ಸ್ಪಷ್ಟರೂಪ ತಳೆದಂತೆ ಕಂಡುಬರುತ್ತದೆ. ಸಂಘದ ಆಡಳಿತಪದ್ಧತಿಯ ವಿಚಾರವಾಗಿ ಬುದ್ಧನನ್ನು ಕೇಳಿದಾಗ, ಗಣರಾಜ್ಯಪದ್ಧತಿಯನ್ನು ಹೋಲುವ ಮತಗಣನೆ, ಬಹುಮತ, ಕೋರಂ ಮುಂತಾದವುಗಳ ಬಗ್ಗೆ ಭಿಕ್ಷುಗಳಿಗೆ ಆತ ವಿವರಿಸುತ್ತಾನೆ. ಮತ ಹಾಕುವ ಸಾಧನಕ್ಕೆ (ಬ್ಯಾಲಟ್) ಶಾಲಕಾ ಎಂದು ಹೆಸರಿತ್ತಂತೆ. ಕನಿಷ್ಠ ಪೂರಕ ಸದಸ್ಯಸಂಸ್ಥೆಯನ್ನು ಪರಿಶೀಲಿಸುವಾಗ ಗಣಪೂರಕ ಎಂಬ ಅಧಿಕಾರಿ. ಬೌದ್ಧ ಸಂಘಗಳಲ್ಲಿ ಮತದಾನ ಗುಪ್ತವಾಗಿಯೂ (ಗೂಲ್ಹಕ) ಕೆಲವು ಸಲ ಮೆಲ್ಲಗೆ ಉಸುರುವುದರಿಂದಲೂ (ಸಕರ್ಣಜಾಪಕಮ್) ಕೆಲವು ಸಲ ಬಹಿರಂಗವಾಗಿಯೂ (ವಿವಾಟಕಮ್) ನಡೆಯುತ್ತಿತ್ತು. ಮತ ಸಂಚಯಿಸುವವನಿಗೆ ಶಾಲಾಕಾಗ್ರಾಹಕನೆನ್ನಲಾಗುತ್ತಿತ್ತು. ಹೀಗೆ ಇಂಥ ಚುನಾವಣೆಯನ್ನು ಅನುಸರಿಸುವ ಸಂಘ ಅಥವಾ ಗಣಗಳು ಧಾರ್ಮಿಕಸಂಸ್ಥೆಗಳೂ ಆಗಿದ್ದವು. ರಾಜಕೀಯ ಸಂಸ್ಥೆಗಳೂ ಆಗಿದ್ದವು. ಮನುಷ್ಯ ನಾಗರಿಕ ಮಾರ್ಗದಲ್ಲಿ ನಿರ್ಮಿಸಿಕೊಂಡ ಒಂದು ಸಂಸ್ಥೆಯೇ ಗಣವಾಗಿತ್ತು. ಯೌಧೇಯ, ಶಾಕ್ಯ, ಮಾಳವ, ಲಿಚ್ಚವಿಗಳು ಇಂಥ ಗಣಗಳಾಗಿದ್ದವು. ಇವು ಇಂದು ನಾವು ತಿಳಿದ ಅರ್ಥದಲ್ಲಿ ಪ್ರಜಾಸತ್ತಾತ್ಮಕ ಗಣರಾಜ್ಯಗಳಾಗಿದ್ದುವೆಂದು ಹೇಳುವದು ಕಷ್ಟವಾದರೂ ಒಂದು ಅರ್ಥದಲ್ಲಿ ಇವು ಗಣರಾಜ್ಯಗಳಾಗಿದ್ದುವು. ಸಾರ್ವಭೌಮಾಧಿಕಾರ ಎಲ್ಲ ಜನರಲ್ಲಿ ಅಲ್ಲವಾದರೂ ಕೆಲವು ಜನರ ಸಮೂಹದಲ್ಲಿ ಅಧಿಷ್ಟಿತವಾಗಿರುತ್ತಿತ್ತು. ಏಕಾಧಿಪತ್ಯವಿರುತ್ತಿದ್ದಿಲ್ಲ. ಅನೇಕ ಸಲ ವಿಶಿಷ್ಟ ಪ್ರದೇಶದಲ್ಲಿ ನೆಲಸಿದ ಅಥವಾ ಜನ ನೆಲಸುವಂತೆ ನೆರವಾದ ಕ್ಷತ್ರಿಯಕುಲಸಮೂಹವೇ ಗಣವಾಗುತ್ತಿತ್ತು. ಈ ಗಣರಾಜ್ಯಗಳು ಅಥೆನ್ಸ್, ಸ್ಪಾರ್ಟ ಮತ್ತು ವೆನಿಸ್ಸಿನ ರಿಪಬ್ಲಿಕ್ ಮಾದರಿಯವಾಗಿದ್ದುವೆಂದು ಹೇಳಬಹುದು. ಆಳುವ ವರ್ಗದ ಆಯ್ಕೆಯಾದ ಕ್ಷತ್ರಿಯರಲ್ಲದವರನ್ನು ಹೊರಗಿಟ್ಟ ನಿದರ್ಶನಗಳು ಬೇಕಾದಷ್ಟು ಸಿಗುತ್ತವೆ.
     ಈ ಗಣರಾಜ್ಯಗಳಲ್ಲಿ ಕೇಂದ್ರಸಭೆಗಳ ಪಾತ್ರ ಮಹತ್ತ್ವದ್ದಾಗಿತ್ತು. ಸಾರ್ವಭೌಮ ಅಧಿಕಾರ ಈ ಸಭೆಯಲ್ಲಿ ನಿಷ್ಠವಾಗಿರುತ್ತಿತ್ತು. ಯೌಧೇಯ ಗಣದ ಸಭಾಸದರ ಸಂಖ್ಯೆ 5.000, ಲಿಚ್ಚವಿಗಳ ಗಣದ ಸಭಾಸದರ ಸಂಖ್ಯೆ 7,707. ಶೂದ್ರಕರು ತಮ್ಮ ಗಣದ 150 ಮುಖಂಡರನ್ನು ಅಲೆಗ್ಸಾಂಡರನ ಹತ್ತಿರ ಸಂಧಾನಕ್ಕಾಗಿ ಕಳಿಸಿದ್ದರು. ಈ ವ್ಯವಸ್ಥೆಯಲ್ಲಿ ಕ್ಷತ್ರಿಯರಿಗೆ ಸಮಾನರಾದ ಗೌರವ ಬ್ರಾಹ್ಮಣರಿಗೆ ಇದ್ದಂತೆ ತೋರುತ್ತದೆ. ಇನ್ನೊಂದು ಪ್ರಭಾವಿ ವರ್ಗವಾದ ವೈಶ್ಯರಿಗೂ ಇತರ ಪ್ರತಿಷ್ಠಿತರಿಗೂ ಒಂದು ಬಗೆಯ ಪ್ರಾತಿನಿಧ್ಯವಿದ್ದಿರಲು ಶಕ್ಯವಿದೆ. ಹಲವಾರು ಸದಸ್ಯರು ಬಹುಶಃ ಶ್ರೀಮಂತ ಕ್ಷತ್ರಿಯ ವಂಶದವರಾಗಿದ್ದು, ರಾಜ್ಯದಲ್ಲಿ ವಿವಿಧ ಪದಾಧಿಕಾರಿಗಳಾಗಿದ್ದಿರಬಹುದು. ಜನಸಾಮಾನ್ಯರ ಪ್ರಾತಿನಿಧ್ಯ ದೊರಕಿಸಲು ನಿಯತಕಾಲಿಕ ಚುನಾವಣೆಗಳು ನಡೆಯುತ್ತಿದ್ದುವೆನ್ನಲು ಸಾಕ್ಷ್ಯ ಸಿಗುವುದಿಲ್ಲ. ಆದರೆ ಆಡಳಿತಾಂಗ ಸಂಪೂರ್ಣವಾಗಿ ಈ ಕೇಂದ್ರ ಸಭೆಗೆ ಅಧೀನವಾಗಿರುತ್ತಿದ್ದುದ್ದು ಮಾತ್ರ ಸ್ಪಷ್ಟವಿದೆ. ಈ ಸಭೆಯಲ್ಲಿ ಗುಂಪುಗಾರಿಕೆ. ಅಧಿಕಾರ, ಪ್ರಭಾವಗಳ ಸೆಳೆತಗಳಿದ್ದ ನಿದರ್ಶನಗಳೂ ಕಾಣಬರುತ್ತವೆ. (ಮಹಾಭಾರತ, ಅರ್ಥಶಾಸ್ತ್ರ ಹಾಗೂ ಬೌದ್ಧಸಾಹಿತ್ಯ).
     ಈ ಗಣರಾಜ್ಯ ಪದ್ಧತಿಯಲ್ಲಿ ರಾಜಕೀಯ ಪಕ್ಷಗಳಿದ್ದುವೆಂಬುದು ಗಮನಾರ್ಹವಾದ ವಿಚಾರ. ದ್ವಂದ್ವ, ವ್ಯುತ್ಕ್ರಮ್ಯ, ವಗ್ರ್ಯ, ಗೃಹ್ಯ, ಪಕ್ಷ ಇತ್ಯಾದಿ ಶಬ್ದಗಳನ್ನು ಗಮನಿಸಬೇಕು. ಆಯಾ ಮುಖಂಡರ ಹೆಸರಿನಲ್ಲೇ ಸಾಮಾನ್ಯವಾಗಿ ಪಕ್ಷಗಳು ಇರುತ್ತಿದ್ದುವು (ಉದಾ: ವಾಸುದೇವ ವಗ್ರ್ಯ, ಅಕ್ರೂರ ಪಕ್ಷ್ಯ). ಈ ಪಕ್ಷಗಳ ಮತ್ತು ಸಭೆಗಳ ಪರಸ್ಪರ ಸಂಬಂಧ ಮತ್ತು ವ್ಯವಹಾರ ನಿಯಮಗಳ ವ್ಯವಸ್ಥಿತ ವಿವರ ಸಿಗುವುದಿಲ್ಲವಾದರೂ ಈ ಬೆಳೆವಣಿಗೆಗೆ ಪುಷ್ಟವಾದ ಹಿನ್ನೆಲೆ ಇರುವುದನ್ನು ಒಪ್ಪಲೇಬೇಕಾಗುತ್ತದೆ. ಏಕಾಧಿಪತ್ಯವುಳ್ಳ ರಾಜ್ಯಗಳು ವಿಸ್ತಾರಗೊಂಡಂತೆ ಈ ಗಣರಾಜ್ಯಗಳು ಮಾಯವಾಗುತ್ತ ಬಂದುವು. ಅಂತೂ ಭಾರತದಲ್ಲಿ ಚುನಾವಣೆಯ ಪದ್ಧತಿ ಕ್ರಿಸ್ತಪೂರ್ವದ ಶತಮಾನಗಳಲ್ಲಿಯೇ ಸಮಿತಿ, ಸಭೆ, ಆಮೇಲೆ ಸಂಘ, ಜನಪದ, ಗ್ರಾಮ, ಗಣ ಮುಂತಾದ ರಾಷ್ಟ್ರೀಯ ಘಟಕಗಳಲ್ಲಿ ಕಂಡುಬರುತ್ತವೆ. ಆದರೆ ಸಮಾಜದ ಪ್ರತಿಯೊಬ್ಬನಿಗೂ ಮತಾಧಿಕಾರ ದೊರೆತು, ಇಂದಿನ ವ್ಯಾಪಕ ಅರ್ಥದಲ್ಲಿ ಪ್ರಾತಿನಿಧ್ಯತತ್ತ್ವ ಕಾರ್ಯರೂಪದಲ್ಲಿ ಬಂದದ್ದು ಇತ್ತೀಚಿನ ಕಾಲದಲ್ಲೇ ಎಂದು ಹೇಳಬೇಕಾಗುತ್ತದೆ.
      ಆಧುನಿಕ ಯುಗ : ಆಧುನಿಕ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಚುನಾವಣೆಗಳಿಗೆ ಮೂಲಭೂತ ಮಹತ್ತ್ವ ಬಂದಿದೆ. ಪ್ರಾಚೀನ ಗ್ರೀಕ್ ಮತ್ತು ಭಾರತೀಯ ಜನರು ತಿಳಿದಿದ್ದ ಲೋಕಸತ್ತೆಯ ಕಲ್ಪನೆಗೂ ಇಂದು ನಾವು ತಿಳಿದುಕೊಂಡಿರುವ ಲೋಕಸತ್ತೆಯ ಕಲ್ಪನೆಗೂ ಮಹದಂತರವಿದೆ. ಪ್ರಾಚೀನ ನಗರ ರಾಜ್ಯ ಹಾಗೂ ಸಂಘ, ಗಣಗಳಲ್ಲಿ ಪ್ರಜಾಸತ್ತೆಯೆಂದರೆ ಪ್ರಜೆಗಳು ನೇರವಾಗಿ ಭಾಗವಹಿಸುವ ಸರ್ಕಾರ ಎಂಬಂತೆ ಅನೇಕ ಸಲ ತಿಳಿಯಲಾಗುತ್ತಿತ್ತು. ಆಗ ಗ್ರಾಮ, ನಗರ, ಮುಂತಾದ ಘಟಕಗಳು ಚಿಕ್ಕವಿದ್ದು ಸೀಮಿತ ಜನಸಂಖ್ಯೆಯುಳ್ಳವಾಗಿರುತ್ತಿದ್ದುದರಿಂದ, ಆಗಿನ ಸಮಸ್ಯೆಗಳೂ ಕೆಲವೇ ಇರುತ್ತಿದ್ದುದರಿಂದ ವಯಸ್ಕ ನಾಗರಿಕರು ಪ್ರತ್ಯಕ್ಷವಾಗಿ ಸಭೆ, ಸರ್ಕಾರಗಳಲ್ಲಿ ಸೇರಿ ನಿರ್ಣಯ ತೆಗೆದುಕೊಳ್ಳುವುದು ಸಾಧ್ಯವಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಸಹಜವಾಗಿ ಚುನಾವಣೆಗೆ ಅನುಷಂಗಿಕ ಮಹತ್ತ್ವವಿರುತ್ತಿತ್ತು. ಇಂದಿನ ಪರಿಸ್ಥಿತಿ ಬೇರೆ. ಇಂದು ವಿಶಾಲ ಕ್ಷೇತ್ರ. ದೊಡ್ಡ ಜನಸಂಖ್ಯೆ. ವಿಪುಲ ಮತ್ತು ಜಟಿಲ ಸಮಸ್ಯೆಗಳುಳ್ಳ ದೇಶ ರಾಜ್ಯಗಳು (ಕಂಟ್ರಿ ಸ್ಟೇಟ್ಸ್) ಇರುವುದರಿಂದ ನಿರ್ಣಯಗಳಿಗಾಗಿ ಜನರೆಲ್ಲ ಒಂದೆಡೆ ಸೇರುವುದಾಗಲಿ, ಜಟಿಲ ಸಮಸ್ಯೆಗಳ ವಿಚಾರಕ್ಕೆ ಅಗತ್ಯವಾದ ಶಿಕ್ಷಣವನ್ನೂ ವಿಶಿಷ್ಟ????ನವನ್ನು ಅನುಭವಗಳನ್ನೂ ಜನಸಾಮಾನ್ಯರಲ್ಲಿ ನಿರೀಕ್ಷಿಸುವುದಾಗಲಿ ವ್ಯವಹಾರ್ಯವಾಗುವುದಿಲ್ಲ. ಇದಕ್ಕೆಂದೇ ಪ್ರಜಾ ನಿರ್ಧಾರ (ರಿಫರೆಂಡಮ್) ಮುಂತಾದ ಉಪಾಯಗಳನ್ನು ಅನೇಕ ಆಧುನಿಕ ಪ್ರಜಾರಾಜ್ಯಗಳಲ್ಲಿ ಸಹ ಕೈಬಿಡಲಾಗಿದೆ.
    ಆಧುನಿಕ ಅರ್ಥದಲ್ಲಿ ಲೋಕಸತ್ತೆಯೆಂದರೆ ಜನರು ತಾವೇ ಆಡಳಿತದಲ್ಲಿ ಭಾಗವಹಿಸುವುದಿಲ್ಲ. ಆಡಳಿತವನ್ನು ಪರಿಣಾಮಕಾರಿಯಾಗಿ ಹತೋಟಿಯಲ್ಲಿ ಇಟ್ಟುಕೊಳ್ಳುವುದು. ಸಾರ್ವಭೌಮಾಧಿಕಾರ ಪ್ರಜಾನಿಷ್ಟವಾದ್ದೆಂಬ ತತ್ತ್ವವನ್ನು ಒಪ್ಪಿಕೊಂಡಿರುವ ಕಾರಣ ಪ್ರಜರು ಈ ತಮ್ಮ ಅಧಿಕಾರವನ್ನು ಬಳಸುವುದು ಹೇಗೆಂಬುದು ಮುಂದಿನ ವಿಚಾರವಾಗುತ್ತದೆ. ಪ್ರತ್ಯಕ್ಷವಾಗಿ ತಾವೇ ಸರ್ಕಾರದಲ್ಲಿ ಪಾಲುಗೊಳ್ಳುವುದು ಸಾಧ್ಯವಿಲ್ಲವಾದ ಕಾರಣ ತಮ್ಮ ಹತೋಟಿಯಲ್ಲಿ ಇರುವಂಥ ಒಂದು ಸರ್ಕಾರದ ರಚನೆಗಾಗಿ ಜನರು ತಮ್ಮ ಅಧಿಕಾರವನ್ನು ಬಳಸಬೇಕಾಗುತ್ತದೆ. ಅದಕ್ಕಾಗಿ ತಮ್ಮೊಳಗಿನ ಕೆಲವರನ್ನು ನಿರ್ದಿಷ್ಟ ಅವಧಿಗಾಗಿ ಚುನಾಯಿಸಿ ತಮ್ಮ ಮೇಲೆಯೇ ಅಧಿಕಾರ ನಡೆಸುವುದಕ್ಕಾಗಿ, ತಮಗೆ ಅನುಕೂಲವಾಗುವಂತ ನಿರ್ಣಯಗಳನ್ನು ಮಾಡುವುದಕ್ಕಾಗಿ ನೇಮಿಸಿಕೊಳ್ಳಬೇಕಾಗುತ್ತದೆ. ಈ ವ್ಯವಸ್ಥೆಯೇ ಪ್ರಜಾಸತ್ತಾತ್ಮಕ ವ್ಯವಸ್ಥೆ. ಚುನಾವಣೆಗಳ ಮೂಲಕ ಜನ ತಮ್ಮ ಅಭಿಪ್ರಾಯಗಳನ್ನು ಆಯ್ಕೆಯನ್ನೂ ವ್ಯಕ್ತಪಡಿಸುತ್ತಾರೆ. ಈ ಸ್ವಾತಂತ್ರ್ಯ ಜನಸಾಮಾನ್ಯರಲ್ಲಿ ನಿಷ್ಠವಾಗಿರುವುದೆಂಬ ಪ್ರ????ಯೇ ಚುನಾಯಿತ ಪ್ರತಿನಿಧಿಗಳನ್ನು ಜನಾಭಿಪ್ರಯಾದತ್ತ ಎಚ್ಚರಿಕೆಯಿಟ್ಟು ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ. ಅದಕ್ಕೆಂದೇ ಚುನಾವಣೆಗಳಿಗೆ ಅಷ್ಟೊಂದು ಮಹತ್ತ್ವ. ಚುನಾವಣೆಯೆಂದರೆ ಜನ ತಮಗಾಗಿ ತಾವೇ ಮಾತನಾಡುವ ಒಂದು ಮಹಾಘಟನೆ. ಚುನಾವಣೆಗಳು ಆಯತಪ್ಪಿಯಾದರೆ ಪ್ರಜಾಸತ್ತೆ ಸತ್ತುಹೋಗುವುದೆಂದು ಹೇಳುವುದರಲ್ಲಿ ಮಹತ್ತ್ವವಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries