ಕವಯತ್ರಿ ಪರಿಣಿತ ರವಿ ಅವರ ವಾತ್ಸಲ್ಯ ಸಿಂಧು ,ಸುಪ್ತ ಸಿಂಚನ ಕೃತಿ ನಾಳೆ (ಏ.7) ಬಿಡುಗಡೆ
0
ಏಪ್ರಿಲ್ 05, 2019
ಬದಿಯಡ್ಕ: ಸಿಂಪರ ಪ್ರಕಾಶನ ಕುಂಬಳೆ ಇದರ ಆಶ್ರಯದಲ್ಲಿ ಕವಯತ್ರಿ,ಶಿಕ್ಷಕಿ ಪರಿಣಿತ ರವಿ ಅವರು ರಚಿಸಿದ ವಾತ್ಸಲ್ಯ ಸಿಂಧು ಎಂಬ ಕಥಾ ಸಂಕಲನ ಹಾಗೂ ಸುಪ್ತ ಸಿಂಚನ ಎಂಬ ಕವನ ಸಂಕಲ ಬಿಡುಗಡೆಯು ಎ.7ಕ್ಕೆ ಬದಿಯಡ್ಕದ ನವಜೀವನ ಶಾಲಾ ಸಮೀಪದ ರಾಮಲೀಲಾ ಸಭಾಂಗಣದಲ್ಲಿ ಜರಗಲಿದೆ.
ಬೆಳಿಗ್ಗೆ 10 ಗಂಟೆಗೆ ಜರಗುವ ಸಭಾ ಕಾರ್ಯಕ್ರಮವನ್ನು ಮಂಗಳೂರು ವಿ.ವಿಯ ಆಂಗ್ಲ ಸಾಹಿತ್ಯ ವಿಭಾಗದ ಮುಖ್ಯಸ್ಥೆ ಡಾ.ರಾಜಲಕ್ಷ್ಮಿ ಎನ್.ಕೆ. ಉದ್ಘಾಟಿಸುವರು. ಹಿರಿಯ ಸಾಹಿತಿ ವಿ.ಬಿ.ಕುಳಮರ್ವ ಸಭೆಯ ಅಧ್ಯಕ್ಷತೆವಹಿಸಲಿದ್ದು ನಿವೃತ್ತ ಪ್ರಾಧ್ಯಾಪಕಿ ಡಾ.ಮಹೇಶ್ವರಿ ಯು. ವಾತ್ಸಲ್ಯ ಸಿಂಧು ಎಂಬ ಕಥಾ ಸಂಕಲನವನ್ನು ಬಿಡುಗಡೆಗೊಳಿಸುವರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಕೃತಿ ಪರಿಚಯಿಸುವರು. ನಿವೃತ್ತ ಪ್ರಾಂಶುಪಾಲೆ ಚಂದ್ರಕಲಾ ನಂದಾವರ ಸುಪ್ತ ಸಿಂಚನ ಕವನ ಸಂಕಲನವನ್ನು ಅನಾವರಣಗೊಳಿಸುವರು. ಸಾಹಿತಿ,ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಕೃತಿ ಪರಿಚಯ ನಡೆಸುವರು. ಕೃತಿಗಾರ್ತಿ ಪರಿಣಿತ ರವಿ ಸಭೆಯಲ್ಲಿ ಉಪಸ್ಥಿತರಿರುವರು. ಬಳಿಕ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರ ಅಧ್ಯಕ್ಷತೆಯಲ್ಲಿ ಜರಗುವ ಕವಿಗೋಷ್ಠಿಯನ್ನು ಹಿರಿಯ ಸಾಹಿತಿ ಶ್ರೀಕಷ್ಣಯ್ಯ ಅನಂತಪುರ ಉದ್ಘಾಟಿಸುವರು. ನಾರಾಯಣ ಭಟ್ ಹಿಳ್ಳೆಮನೆ,ಬಿ.ಕೆ.ರಾಜ್ ನಂದಾವರ,ವಿರಾಜ್ ಅಡೂರು,ರಾಘವೇಂದ್ರ ಕಾರಂತ್ ,ಶಾಂತಪ್ಪ ಬಾಬು ಸಜಿಪ,ದಯಾನಂದ ರೈ ಕಳ್ವಾಜೆ,ಸುಭಾಷ್ ಪೆರ್ಲ, ಮಣಿರಾಜ್ ವಾಂತಿಚ್ಚಾಲ್,ಅಶ್ವಿನಿ ಕೋಡಿಬೈಲು,ಪ್ರಭಾವತಿ ಕೆದಿಲಾಯ,ಶ್ಯಾಮಲ ರವಿರಾಜ್ ಕುಂಬಳೆ,ಪ್ರಮೀಳಾ ರಾಜ್ ಸುಳ್ಯ, ಶಶಿಕಲಾ ಕುಂಬಳೆ,ಪ್ರೇಮಾ ಉದಯ್ ಕುಮಾರ್ ಸುಳ್ಯ,ಸುಶೀಲಾ ಪದ್ಯಾಣ,ವಿದ್ಯಾಗಣೇಶ್ ಅಣಂಗೂರು,ಜ್ಯೋತ್ಸ್ನಾ ಕಡಂದೇಲು,ಶ್ವೇತಾ ಕಜೆ,ಲತಾ ಬನಾರಿ ಕವಿಗೋಷ್ಠಿಯಲ್ಲಿ ಭಾಗವಹಿಸಲಿರುವರು.
ಮಲೆಯಾಳಿಗರ ನಾಡಿನಲ್ಲಿ ಕುಳಿತು ಕನ್ನಡದ ಕಂಪನ್ನು ಪಸರಿಸಿದ ಕವಯತ್ರಿ ಪರಿಣಿತ ರವಿ ಪರಿಚಯ:
ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನ ನಂದಾವರ ಬಿ.ಕೆ ರಾಜ್ ಹಾಗೂ ಶ್ಯಾಮಲಾ ದಂಪತಿಗಳ ಹಿರಿ ಮಗಳಾಗಿ ಜನಿಸಿದ ಪರಿಣಿತ ಅವರು ಶ್ರೀ ಶಾರದಾ ಹೈಸ್ಕೂಲ್ ಪಾಣೆಮಂಗಳೂರುನಲ್ಲಿ ಪ್ರೌಢ ಶಿಕ್ಷಣವನ್ನು, ಸರಕಾರಿ ಪದವಿಪೂರ್ವ ಕಾಲೇಜು ಸಜೀಪದಲ್ಲಿ ಪಿ.ಯು.ಸಿಯನ್ನು, ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜುನಲ್ಲಿ ಆಂಗ್ಲ ಸಾಹಿತ್ಯದಲ್ಲಿ ಪದವಿಯನ್ನೂ ಪ್ರಥಮ ಶ್ರೇಣಿಯಲ್ಲಿ ಪೂರೈಸಿದರು.ಶಿಕ್ಷಣ ಸಂದರ್ಭದಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಾದ ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಪ್ರತಿಭಾನ್ವಿತೆಯಾಗಿ ಗುರುತಿಸಿಕೊಂಡಿದ್ದರು. ಪದವಿ ಶಿಕ್ಷಣದ ಬಳಿಕ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಎಡನಾಡು ರವೀಂದ್ರನಾಥ್ ಹೊಳ್ಳ ಎಂಬುವವರನ್ನು ವಿವಾಹಿತರಾಗಿ ಬಳಿಕ ಕಣ್ಣೂರು ವಿಶ್ವ ವಿದ್ಯಾನಿಲಯದಿಂದ ಬಿ. ಎಡ್(ಇಂಗ್ಲೀಷ್) ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ಬಳಿಕ ಪ್ರಥಮ ಪುತ್ರಿ ಸಿಂಧು ವಿನ ಜನನದ ನಂತರ ಪತಿಯ ಉದ್ಯೋಗದ ನಿಮಿತ್ತ ಕೇರಳದ ಎರ್ನಾಕುಳಂನಲ್ಲಿ ನೆಲೆಸಿದರು. ಈ ನಡುವೆ ಮಧುರೈಯ ಕಾಮರಾಜ ವಿಶ್ವ ವಿಧ್ಯಾನಿಲಯದಿಂದ ಖಾಸಗಿಯಾಗಿ ಹಾಗೂ ಕೇರಳದ ಮಹಾತ್ಮ ಗಾಂಧಿ ವಿಶ್ವ ವಿದ್ಯಾನಿಲಯದಿಂದ ರೆಗ್ಯುಲರ್ ಆಗಿ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಕೇರಳ ಸರಕಾರದ ಅರ್ಹತಾ ಪರೀಕ್ಷೆಯಲ್ಲೂ ತೇರ್ಗಡೆಯಾಗಿ ನಿರ್ಮಲಾ ಹೈಯರ್ ಸೆಕೆಂಡರಿ ಸ್ಕೂಲ್ ಆಲುವಾ,ಎರ್ನಾಕುಳಂನಲ್ಲಿ ಆಂಗ್ಲ ಭಾಷಾ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿದರು. ಬಳಿಕ ರಾಜಗಿರಿ ಜೀವಸ್ ಸಿ ಎಂ ಐ ಸೆಂಟ್ರಲ್ ಸ್ಕೂಲ್ ಆಲುವಾ, ಎರ್ನಾಕುಳಂನಲ್ಲಿ ಅಧ್ಯಾಪಕಿಯಾಗಿ ಮತ್ತೆ ಸೇವೆ ಮುಂದುವರಿಸಿದರು. ಇದೀಗ ಉನ್ನತ ವ್ಯಾಸಂಗದ ಸಿದ್ದತೆಯಲ್ಲಿರುವ ಇವರು ಸದಾ ಅಧ್ಯಯನಶೀಲೆಯಾಗಿದ್ದಾರೆ.
ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಚಟುವಟಿಕೆಗಳಲ್ಲಿ ಬಾಲ್ಯದಿಂದಲೇ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡವರಾಗಿದ್ದಾರೆ. ಎಳವೆಯಲ್ಲೇ ಕತೆ, ಕವನಗಳನ್ನು ಬರೆಯುತ್ತಾ ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ ಇವರ ಕವನ,ಕತೆ, ಲೇಖನಗಳು ವಿವಿಧ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ. ಕೇರಳ ರಾಜ್ಯದ ಶಾಲಾ ಕಲೋಲ್ಸವದಲ್ಲಿ ಇವರು ರಚಿಸಿ,ನಿರ್ದೇಶಿಸಿದ ಇಂಗ್ಲೀಷ್ ನಾಟಕಕ್ಕೆ ಸತತ ಮೂರು ಬಾರಿ ಐದನೇ ಸ್ಥಾನದೊಂದಿಗೆ ಪ್ರಥಮ ಗ್ರೇಡ್ ಲಭಿಸಿದೆ. ಕೇರಳದ ಮಲಯಾಳ ಮಕ್ಕಳಿಗೆ ಕನ್ನಡ ಕಂಠಪಾಠ ಸ್ಪರ್ಧೆಗೆ ರಾಘವಾಂಕ,ಲಕ್ಷ್ಮೀಶರ ಮಹಾಕಾವ್ಯಗಳನ್ನು ಕಲಿಸಿ ರಾಜ್ಯಮಟ್ಟದ ಕಲೋತ್ಸವದಲ್ಲಿ ಪ್ರಥಮ ಗ್ರೇಡ್ ನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೂವರು ಸಹೋದರಿಯರು ಹಾಗೂ ಒಬ್ಬ ಸಹೋದರನನ್ನು ಹೊಂದಿದ ಇವರು ಇದೀಗ ಪತಿ ರವೀಂದ್ರನಾಥ್ ಹಾಗೂ ಮಕ್ಕಳು ಸಿಂಧು, ಸಿಂಚನ ಜೊತೆ ಕಳೆದ 16 ವರುಷಗಳಿಂದ ಸಂಸಾರ ಸಹಿತ ಕೇರಳದ ಎರ್ನಾಕುಳಂನಲ್ಲಿ ವಾಸವಾಗಿದ್ದಾರೆ.