HEALTH TIPS

ಬಿರು ಬಿಸಿಲಿನ ಮಧ್ಯೆ ನೀರಿಗಾಗಿ ಪರದಾಟ - ಬಹುನಿರೀಕ್ಷಿತ ಯೋಜನೆಗಳು ಹಳ್ಳಕ್ಕೆ

ಕುಂಬಳೆ: ಬಿಸಿಲಿನ ಝಲ ದಿನೇದಿನೇ ಕಳವಳಕಾರಿಯಾಗಿ ಏರುಗತಿಯಲ್ಲಿ ಮುಂದುವರಿಯುತ್ತಿರುವಂತೆ ಹಲವೆಡೆಗಳಲ್ಲಿ ಜೀವಜಲದ ತೀವ್ರ ಪ್ರಮಾಣದ ಕುಸಿತ ಕಂಡುಬಂದು ಜನರು ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಈ ಮಧ್ಯೆ ಲೋಕಸಭಾಚುನಾವಣೆಯಲ್ಲಿ ವ್ಯಸ್ತರಾಗಿರುವ ರಾಜಕೀಯ ನಾಯಕರು, ಜನಪ್ರತಿನಿಧಿಗಳು ಜನಸಾಮಾನ್ಯರ ಯಾವ ಅಗತ್ಯಗಳನ್ನೂ ಕಂಡೂ ಕಾಣದಂತೆ ನಟಿಸುತ್ತ ಹಾಯಾಗಿದ್ದಾರೆ. ಅರ್ಧಕೋಟಿ ರೂ.ವ್ಯಯಿಸಿ 2001 ರಿಂದ 1016 ರ ವರೆಗೆ ಸುಧೀರ್ಘ 16 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕುಡಿಯುವ ಶುದ್ದ ಜಲ ವಿತರಣಾ ಯೋಜನೆ ಹಳ್ಳಹಿಡಿದಿರುವುದರಿಂದ ಕುಂಬಳೆ ಗ್ರಾ.ಪಂ. ವ್ಯಾಪ್ತಿಯ ವಿವಿಧೆಡೆಗಳಲ್ಲಿ ಇದೀಗ ತೀವ್ರ ಜಲಕ್ಷಾಮ ತಲೆದೋರಿದೆ. ಗ್ರಾ.ಪಂ. ನ ಎರಡು ಪ.ಜಾತಿ ಕಾಲನಿ ಸಹಿತ 4 ಶುದ್ದಜಲ ವಿತರಣಾ ಯೋಜನೆ ಅರ್ಧದಲ್ಲೇ ಮೊಟಕುಗೊಂಡಿರುವುದು ಈ ಮೂಲಕ ಗಮನಕ್ಕೆ ಬಂದಿದೆ. ಕುಂಬಳೆ ಗ್ರಾ.ಪಂ. ವ್ಯಾಪ್ತಿಯ ಮೊಗ್ರಾಲ್ ಪರಿಸರದ 17, 18,19 ವಾರ್ಡ್ ಗಳನ್ನೊಳಗೊಂಡಿರುವ ಮೊಗ್ರಾಲ್ ಕಾಟ್ಟಿಯಂಕುಳ, ರಹ್ಮತ್ ನಗರ, ಖುತ್‍ಬಿ ನಗರ, ಗಾಂಧಿ ನಗರ ಮೊದಲಾದ ಪ್ರದೇಶಗಳಲ್ಲಿ ಹಲವಾರು ಶುದ್ದಜಲ ವಿತರಣೆಯ ಟ್ಯಾಂಕ್ ಗಳನ್ನು ನಿರ್ಮಿಸಿ ಅರ್ಧದಲ್ಲೇ ಕಾಮಗಾರಿ ಮೊಟಕುಗೊಂಡಿರುವುದು ವ್ಯಾಪಕ ಸಮಸ್ಯೆಗಳಿಗೆ ಎಡೆಮಾಡಿದೆ. ಪೂರ್ವ ಯೋಜನೆ(ಎಸ್ಟಿಮೇಟ್)ಗಿಂತ ಹೆಚ್ಚು ಮೊತ್ತ ಖರ್ಚಾಗುತ್ತಿದೆ ಎಂಬ ಕಾರಣದಿಂದ 2003ರಲ್ಲಿ ಕಟ್ಟಿಯಂಕುಳ ಜಲ ವಿತರಣಾ ಯೋಜನೆ ಅರ್ಧದಲ್ಲಿ ಕೈಬಿಡಲಾಯಿತು. ಈ ಯೋಜನೆಗೆ ಸಾಕಷ್ಟು ಜಲ ಮೂಲಗಳಿದ್ದರೂ ಅಧಿಕಾರಿ ವರ್ಗದ ಅನಾಸ್ಥೆಯಿಂದ ಯೋಜನೆಯನ್ನು ಪೂತೀಗೊಳಿಸಲು ಈವರೆಗೆಸಾಧ್ಯವಾಗಿಲ್ಲ. ಇದೇ ಯೋಜನೆಗೆ ಬ್ಲಾಕ್ ಪಂಚಾಯತಿ ನಿಧಿ ಬಳಸಿ ರಹ್ಮತ್ ನಗರದಲ್ಲಿ ನಿರ್ಮಿಸಿದ ಟ್ಯಾಂಕ್ ನ್ನು ಬೇರೊಂದು ಯೋಜನೆಯ ಜಲ ವಿತರಣೆಗಾಗಿ ಬಳಸಲು ಯೋಚಿಸಿದ್ದರೂ ಆ ಯೋಜನೆಯೂ ಕಾರ್ಯಗತವಾಗದ್ದರಿಂದ ಟ್ಯಾಂಕ್ ಮಳೆ ಬಿಸಿಲಿಗೆ ಮೈಯೊಡ್ಡಿ ದಶಕಗಳೇ ಸಂದಿವೆ. ಮೊಗ್ರಾಲ್ ಪರಿಸರದ ಕೊಪ್ಪಳ ಗಾಂಧೀನಗರದ ಪ.ಜಾತಿ ಕಾಲನಿಯ ಶುದ್ದಜಲ ವಿತರಣಾ ಯೋಜನೆಗೆ ಬ್ಲಾಕ್ ಪಂಚಾಯತಿ ನಿಧಿ ಬಳಸಿ ಟ್ಯಾಂಕ್ ನಿರ್ಮಿಸಲಾಗಿತ್ತಾದರೂ ಅದು ನೀರು ಲಭಿಸದಿರುವುದರಿಂದ ಬಳಿಕ ಟ್ಯಾಂಕ್ ವ್ಯರ್ಥವಾಯಿತೆಂದು ತಿಳಿದುಬಂದಿದೆ. ಈ ಪ್ರದೇಶಕ್ಕಿಂತ ಅಲ್ಪ ದೂರದ ಬಣ್ಣತ್ತಾಂ ಕಡವು ಎಂಬಲ್ಲಿಯ ಪ.ಜಾತಿ ಕಾಲನಿಗೆ ಕಳೆದ 2015-16ನೇ ವರ್ಷದ ಯೋಜನೆಯಲ್ಲಿ ಅಳವಡಿಸಿ ಖಾಸಗೀ ವ್ಯಕ್ತಿಯೊಬ್ಬರ ನಿವೇಶನದಲ್ಲಿ ಟ್ಯಾಂಕ್ ನಿರ್ಮಿಸಿ, ಪೈಪ್ ಲೈನಗಳನ್ನು ಅಳವಡಿಸಿ ವ್ಯವಸ್ಥೆಗೊಳಿಸಿದ್ದರೂ ಈ ವರೆಗೆ ಶುದ್ದ ಜಲ ವಿತರಣೆಗೆ ಚಾಲನೆ ನೀಡಿಲ್ಲ. ಶುದ್ದಜಲ ಪೂರೈಕೆಯ ಅವ್ಯವಸ್ಥೆಯ ಕಾರಣ 2014ರಲ್ಲಿ ಜನರು ತೀವ್ರ ಪ್ರತಿಭಟನೆ ತೋರಿಸಿದ್ದರಿಂದ ಶಾಸಕರ ನಿಧಿ ಬಳಸಿ ನಿರ್ಮಿಸಲಾದ ಕೆರೆಯೂ ಕಾಮಗಾರಿ ಪೂರ್ತಿಯಾಗದೆ ಅರ್ಧದಲ್ಲೇ ಮೊಟಕುಗೊಂಡಿರುವುದು ಕಾಟ್ಟಿಯಂಕುಳದಲ್ಲಿ ಕಂಡುಬಂದಿದೆ. ನಿರಂತರವಾಗಿ ಯೋಜನೆಗಳ ಸೋಲಿನಿಂದಾಗಿ ಜಲ ಸೇಚನಕ್ಕೆ ಯಾವುದೇ ಪರಿಹಾರವೂ ಇಲ್ಲದೆ ಈ ಪ್ರದೇಶಗಳ ನೂರಕ್ಕಿಂತಲೂ ಮಿಕ್ಕಿದ ಕುಟುಂಬಗಳ ಸುಮಾರು 600 ಮಂದಿ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಇದೀಗ ದುಬಾರಿ ಬೆಲೆತೆತ್ತು ಖಾಸಗಿಯಾಗಿ ಟ್ಯಾಂಕರ್ ಗಳ ಮೂಲಕ ಅಗತ್ಯ ನೀರನ್ನು ಪಡೆಯಲಾಗುತ್ತಿದೆ. ಕೈತೋಟಗಳು, ತೆಂಗು ಹಾಗೂ ಬಾಳೆ ತೋಟಗಳು ನೀರಿಲ್ಲದೆ ಒಣಗತೊಡಗಿದ್ದು ಜನಸಾಮಾನ್ಯರು ಕಂಗೆಟ್ಟಿದ್ದಾರೆ. ಶುದ್ದಜಲ ವಿತರಣೆಯ ಕಾಮಗಾರಿಗಳ ಮೊಟಕಿಗೆ ಕಾರಣಗಳನ್ನು ಕಂಡುಹಿಡಿಯಬೇಕು ಮತ್ತು ನಡೆದಿರಬಹುದಾದ ಭ್ರಷ್ಟಾಚಾರವನ್ನು ಬಯಲಿಗೆಳೆಯಬೇಕು ಎಂದು ನಾಗರಿಕರು ಕಳೆದ ವರ್ಷ ವಿಜಿಲೆನ್ಸ್ ಇಲಾಖೆಗೆ ದೂರು ನೀಡಿದ್ದರ ಪರಿಣಾಮ ಆಗಮಿಸಿದ ವಿಜಿಲೆನ್ಸ್ ಅಧಿಕೃತರು ಕಾಮಗಾರಿಯ ಲೋಪಗಳು ಮತ್ತು ಭ್ರಷ್ಟಾಚಾರ ನಡೆದಿರುವ ಬಗ್ಗೆ ವರದಿ ನೀಡಿದ್ದರು. ಬಳಿಕದ ಕ್ರಮಗಳ ಬಗ್ಗೆ ಏನಾಯಿತೆಂದು ಅಧಿಕೃತರು ತಿಳಿಸುತ್ತಿಲ್ಲ. ಅಸಮಂಜಸ ರೀತಿಯಲ್ಲಿ ವರದಿಗಳನ್ನು ಯೋಜನೆಗಳನ್ನು ತಯಾರಿಸಿ, ಮುಂದಾಲೋಚನೆ ಇಲ್ಲದೆ ಅನಗತ್ಯ ಟ್ಯಾಂಕ್ ಗಳನ್ನು ನಿರ್ಮಿಸಿ ಹಲವರು ತಮ್ಮ ಜೇಬು ತುಂಬಿಸಿರುವುದಾಗಿ ನಾಗರಿಕರು ಆರೋಪಿಸಿದ್ದಾರೆ. ಈ ಮಧ್ಯೆ ಇದೀಗ ಒದಗಿಬಂದಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತ ಯಾಚನೆಗೆ ಆಗಮಿಸುವ ಪಕ್ಷಗಳ ನೇತಾರರಿಗೆ ಈ ಬಗ್ಗೆ ತಕ್ಕ ರೀತಿಯಲ್ಲಿ ಪ್ರಶ್ನಿಸಿ ವಸ್ತುಸ್ಥಿತಿಯ ಗಂಭೀರತೆಗೆ ಉತ್ತರ ಕಂಡುಕೊಳ್ಳುವುದಾಗಿ ನಾಗರಿಕರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries