ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಸಂಸ್ಕರಣಾ ಕೇಂದ್ರಕ್ಕೆ ಕೊಂಡೊಯ್ದು ಮಾದರಿಯಾದ ಶಾಲಾ ವಿದ್ಯಾರ್ಥಿಗಳು
0
ಏಪ್ರಿಲ್ 01, 2019
ಉಪ್ಪಳ: ನಮ್ಮಲ್ಲಿ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಅದೆಷ್ಟು ಜಾಗೃತಿ ಮೂಡಿಸಿದರೂ ಸಾರ್ವಜನಿಕರ ಮೇಲೆ ಹೆಚ್ಚೇನೂ ಪರಿಣಾಮ ಬೀರಿದಂತೆ ಕಾಣಿಸುವುದಿಲ್ಲ. ಆದ್ದರಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡುವುದರ ವಿರುದ್ದ ಉಪ್ಪಳ ಮಣಿಮುಂಡ ಶಾಲೆಯ ವಿದ್ಯಾರ್ಥಿಗಳು ತ್ಯಾಜ್ಯಗಳನ್ನು ಸ್ವತಃ ಸಂಗ್ರಹಿಸಿ ಕುಬಣೂರಿನಲ್ಲಿರುವ ತ್ಯಾಜ್ಯ ಸಂಸ್ಕರಣಾ ಕೇಂದ್ರಕ್ಕೆ ಕೊಂಡೊಯ್ದು ಊರವರ ಪ್ರಶಂಶೆಗೆ ಪಾತ್ರವಾಗಿ ಇತರರಿಗೆ ಮಾದರಿಯಾದರು.
ವಿದ್ಯಾರ್ಥಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಒಂದು ಉತ್ತಮ ಬೆಳವಣಿಗೆ. ಪರಿಸರವನ್ನು ನಿತ್ಯ ಹಾನಿ ಮಾಡುತ್ತಿರುವ ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳುವ ಮೂಲಕ ಪ್ರತೀ ಮನೆಯಲ್ಲಿ ಜಾಗೃತಿ ಮೂಡಿಸುತ್ತಿರುವುದರಿಂದ ಮುಂದೆ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗಿರುವುದಾಗಿ ಹಿರಿಯ ನಾಗರಿಕರೊಬ್ಬರು ಪತ್ರಿಕೆಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ಮಣಿಮುಂಡ ಶಾಲಾ ವಿದ್ಯಾರ್ಥಿಗಳು ತಿಂಗಳಿಗೊಮ್ಮೆ ಸ್ವಚ್ಚತಾ ಅಭಿಯಾನದಲ್ಲಿ ಕೈಜೋಡಿಸಿಕೊಂಡು ಪರಿಸರದ ಜನರಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಲೇ ಬಂದಿರುವುದು ಗಮನಾರ್ಹವಾಗಿದೆ. ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಬೇಕು ಎನ್ನುವ ಸಂಕಲ್ಪದೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಈ ಶಾಲಾ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದಾರೆ. ಮಣಿಮುಂಡ ಶಾಲಾ ಮಕ್ಕಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಶಾಲಾ ಅಧ್ಯಾಪಕರುಗಳು ಹಾಗೂ ಆಡಳಿತ ಮಂಡಳಿ ಕೈ ಜೋಡಿಸಿ ಅತ್ಯಂತ ಯಶಸ್ವಿಯಾಗಿ ನೇರವೇರಿಸಿರುವುದು ಊರವರ ಶ್ಲಾಘನೆಗೆ ಪಾತ್ರವಾಯಿತು.
ಶುಕ್ರವಾರ ಬೆಳಿಗ್ಗೆ ಶಾಲಾ ಪರಿಸರದಲ್ಲಿರುವ ಮನೆ, ಅಂಗಡಿಗಳಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಅಲ್ಲಿ ತುಂಬಿದ್ದ ತ್ಯಾಜ್ಯಗಳನ್ನು ಸಂಗ್ರಹಿಸಿ ಮುಂದಿನ ದಿನಗಳಲಿ ಸಂಗ್ರಹ ಮಾಡಲು ಬೇರೆಯೇ ಚೀಲಗಳನ್ನು ನೀಡಿ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯದಂತೆ ಕೈ ಮುಗಿದು ವಿನಂತಿಸಿಕೊಂಡದ್ದು ಪರಿಸರವಾಸಿಗಳಲ್ಲಿ ಜಾಗ್ರತಿಯನ್ನು ಮೂಡಿಸುವಲ್ಲಿ ಸಫಲತೆಯನ್ನು ಕಂಡಿದೆ.