ಕಾಸರಗೋಡು: ಅವೈಜ್ಞಾನಿಕವಾಗಿ ನಾವು ಹೊರಗೆ ಎಸೆಯುವ ಘನ ತ್ಯಾಜ್ಯಗಳಲ್ಲಿ ಅಡಕವಾಗಿರುವ ವಿಷ ಪದಾರ್ಥಗಳು ಮಕ್ಕಳ ಮೇಲೆ ಮೆದುಳಿಗೆ ಬಾಧಿಸುವ ಮಾರಕ ರೋಗಗಳನ್ನು ಉಂಟುಮಾಡುತ್ತವೆ ಎಂದು ಅಧ್ಯಯನಗಳು ತಿಳಿಸಿವೆ.
ಆಟಿಕೆಗಳ ತಾಮ್ರದ ತಂತಿಗಳು, ಟ್ಯೂಬ್‍ಗಳು, ಬಲ್ಬ್ ಗಳು, ಬ್ಯಾಟರಿ, ಎಲೆಕ್ಟ್ರಿಕ್ ಆಟಿಕೆ ಮೊದಲಾದವುಗಳಲ್ಲಿ ಅಡಕವಾಗಿರುವ ರಾಸಾಯನಿಕ ಪದಾರ್ಥಗಳು ಮಕ್ಕಳ ಮೇಲೆ ಅತ್ಯಂತ ಪ್ರತಿಕೂಲಕರವಾಗಿ ಬಾಧಿಸುತ್ತವೆ ಎಂದು ಅಧ್ಯಯನಗಳು ಹೇಳಿವೆ.
ರಾಜ್ಯ ಶುಚಿತ್ವ ಮಿಶನ್ ಹೊರಡಿಸಿದ ವರದಿಯಲ್ಲಿ ಇದು ವ್ಯಕ್ತವಾಗಿದೆ. ಘನ ತ್ಯಾಜ್ಯಗಳಲ್ಲಿ ಅಡಕವಾಗಿರುವ ಮೇಣ, ಕಾಸ್ಡಿಯಂ, ಆರ್‍ಸೆನಿಕ್ ಮೊದಲಾದ ವಿಷ ಪದಾರ್ಥಗಳು ರೋಗಗಳಿಗೆ ಪ್ರಧಾನ ಕಾರಣಗಳಾಗಿವೆ. ಇವು ಮಕ್ಕಳ ಮೆದುಳಿಗಿರುವ ರಕ್ತಪ್ರವಾಹವನ್ನು ಕಡಿಮೆ ಮಾಡುತ್ತವೆ. ಜೊತೆಗೆ ಮಾನಸಿಕ ಬೆಳವಣಿಗೆ ಮಂದ ಗತಿಗೆ ತಲುಪುವುದು, ಕಲಿಕಾ ವೈಕಲ್ಯತೆ, ಬೆಳವಣಿಗೆಯಲ್ಲಿ ಹಿನ್ನಡೆ, ಸಂಧಿ ಸಂಬಂಧಿತ ವೈಕಲ್ಯಗಳಿಗೆ ಇವು ಕಾರಣವಾಗಲಿವೆ.
ಇವು ಮಕ್ಕಳ ಬುದ್ಧಿಗೆ ಪ್ರತಿಕೂಲವಾಗಿ ಬಾಧಿಸಲಿದೆ. ಇವು ಹಿರಿಯರಿಗೂ ರೋಗಿಗಳಾಗಿಸುವಲ್ಲಿ ಸಂಶಯವಿಲ್ಲ. ಪುರುಷರ ಸಂತಾನಹೀನತೆಗೆ ದಾರಿಯಾಗಲಿದೆ. ವೀರ್ಯದ ಪ್ರಮಾಣ ಕಡಿಮೆ ಮಾಡಲು ಘನ ತ್ಯಾಜ್ಯದಲ್ಲಿ ಅಡಕವಾಗಿರುವ ವಿಷ ಪದಾರ್ಥಗಳು ಕಾರಣವಾಗಲಿವೆ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಅಭಿಪ್ರಾಯಪಡುತ್ತಾರೆ. ಕಿಡ್ನಿರೋಗಗಳು, ಗರ್ಭಪಾತ, ಅಕಾಲ ಹೆರಿಗೆ ಮೊದಲಾದುವುಗಳಿಗೆ ಇಂತಹ ರಾಸಾಯನಿಕ ಪದಾರ್ಥಗಳು ಕಾರಣವಾಗುತ್ತವೆ. ನಾವು ಹೊರಗೆಸೆಯುವ ಪತ್ರಿಕೆಗಳು, ಪ್ಲಾಸ್ಟಿಕ್, ಪೈಂಟ್ ಮೊದಲಾದುವುಗಳಲ್ಲಿ ವಿಷ ಪದಾರ್ಥಗಳಿರುತ್ತವೆ.
ಅದೇ ರೀತಿ ಬ್ಯಾಟರಿ, ವಿದ್ಯುತ್ ಉಪಕರಣ ಮೊದಲಾದುವುಗಳಲ್ಲಿ ಅಡಕವಾಗಿರುವ ಇನ್ನೊಂದು ವಿಷ ಪದಾರ್ಥವಾದ ಮೇಣ, ಮೆದುಳಿನ ಕಾರ್ಯಾಚರಣೆಗೆ ಬಾಧಕವಾಗುವ ಅಂಶ ಒಳಗೊಂಡಿದೆ. ಶ್ಯಾಂಪು, ಟೂತ್‍ಪೇಸ್ಟ್, ಕಾಸ್ಮೆಟಿಕ್ ಉತ್ಪನ್ನಗಳಲ್ಲಿ ಒಳಗೊಂಡ ಆರ್‍ಸೆನಿಕ್ ಆರೋಗ್ಯಕ್ಕೆ ಪ್ರತಿಕೂಲಕರವಾಗಿ ಬಾಧಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಬ್ಯಾಟರಿ ಮತ್ತಿತರ ವಸ್ತುಗಳಲ್ಲಿ ಅಡಕವಾಗಿರುವ ಕಾಸ್ಡಿಯಂ ಇನ್ನೊಂದು ವಿಷಪದಾರ್ಥವಾಗಿದೆ, ಕ್ಯಾನ್ಸರ್‍ನಂತಹ ಮಾರಕ ರೋಗಕ್ಕೆ ಕಾಸ್ಡಿಯಂ ಕಾರಣವಾಗುತ್ತದೆ. ಇದಲ್ಲದೆ ಅನುವಂಶಿಕ ರೋಗಗಳು, ಸಂತಾನಹೀನತೆ, ಹೃದ್ರೋಗ, ಗರ್ಭಪಾತ, ನಿದ್ದೆ ಇಲ್ಲದಿರುವುದು, ಬೆವರುವಿಕೆ ಮೊದಲಾದುವುಗಳಿಗೆ ಕಾಸ್ಡಿಯಂ ಕಾರಣವಾಗುತ್ತದೆ, ಪೆರಿಫೆರಲ್ ವಾಸ್ಕ್ಯುಲರ್ ರೋಗ, ಬೋನ್ ಮಾರೋಡಿಪ್ರೆಶನ್, ಮೆಲಾನೊಸಿಸ್ ಮೊದಲಾದುವುಗಳ ಸಾಧ್ಯತೆ ಹೆಚ್ಚಿದೆ.
ಅವೈಜ್ಞಾನಿಕ ರೀತಿಯಲ್ಲಿ ಘನ ತ್ಯಾಜ್ಯಗಳನ್ನು ಹೊರಗೆಸೆಯುವುದರಿಂದ ವಿಷ ಪದಾರ್ಥಗಳು ಮಣ್ಣಿನಲ್ಲಿ ಹಾಗೂ ನೀರಿನಲ್ಲಿ ಬೆರೆಯುತ್ತವೆ. ಇವುಗಳನ್ನು ಸಸ್ಯಗಳು ಹೀರಿಕೊಳ್ಳುತ್ತವೆ. ಅಲ್ಲದೆ ನೀರಿನಲ್ಲಿರುವ ಮೀನುಗಳಲ್ಲೂ ಕಾಣಿಸಿಕೊಳ್ಳುತ್ತದೆ. ಇವುಗಳನ್ನು ಆಹಾರವಾಗಿ ಸೇವಿಸುವುದರಿಂದ ಇಂತಹ ರಾಸಾಯನಿಕ ಪದಾರ್ಥಗಳು ಮಾನವ ಶರೀರದೊಳಗೆ ಪ್ರವೇಶಿಸುತ್ತವೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಡುತ್ತಾರೆ.