ನವದೆಹಲಿ:ರಾಫೆಲ್ ಯುದ್ಧ ವಿಮಾನ ಇದಿದ್ದರೆ ಬಾಲಕೋಟ್ ವಾಯುದಾಳಿಯ ಫಲಿತಾಂಶ ಇನ್ನೂ ಉತ್ತಮವಾಗಿರುತಿತ್ತು ಎಂದು ಏರ್ ಚೀಪ್ ಮಾರ್ಷಲ್ ಬಿಎಸ್ ಧನೋವಾ ಹೇಳಿದ್ದಾರೆ.
ಭವಿಷ್ಯದಲ್ಲಿ ಬಾಹ್ಯಾಕಾಶ ಶಕ್ತಿ ಮತ್ತು ತಂತ್ರಜ್ಞಾನದ ಪರಿಣಾಮ ಕುರಿತ ಸಮ್ಮೇಳನದಲ್ಲಿ ನಿನ್ನೆ ಪಾಲ್ಗೊಂಡು ಮಾತನಾಡಿದ ಅವರು, ಸ್ವದೇಶದ ತಂತ್ರಜ್ಞಾನದಿಂದ ಬಾಲಾಕೋಟ್ ಕಾರ್ಯಾಚರಣೆ ನಡೆಸಲಾಯಿತು.ಮೇಲ್ದರ್ಜೇರಿಸಿದ ಮಿಗ್ -21, ಬಿಸಾನ್ಸ್ ಮತ್ತು ಮಿರಾಜ್ 2000 ಯುದ್ಧ ವಿಮಾನದಿಂದಾಗಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು. ಆ ಸಂದರ್ಭದಲ್ಲಿ ರಾಫೆಲ್ ಯುದ್ಧ ವಿಮಾನ ಬಳಸಿದ್ದರೆ ಮತ್ತಷ್ಟು ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದಿತ್ತು ಎಂದಿದ್ದಾರೆ.
ಫೆಬ್ರವರಿ 14 ರಂದು ನಡೆದಿದ್ದ ಪುಲ್ವಾಮಾ ದಾಳಿಯಾಗಿ ಪ್ರತಿಯಾಗಿ ಫೆಬ್ರವರಿ 26 ರಂದು ಪಾಕಿಸ್ತಾನದ ಬಾಲಾಕೋಟ್ ಪ್ರದೇಶದಲ್ಲಿ ಜೈಷ್- ಇ-ಮೊಹಮ್ಮದ್ ಉಗ್ರರ ಶಿಬಿರಗಳ ಮೇಲೆ ವಾಯುದಾಳಿ ನಡೆಸಲಾಗಿತ್ತು. ಮಾರನೇ ದಿನ ಜಮ್ಮು- ಕಾಶ್ಮೀರದತ್ತ ಗುರಿಯನ್ನಿಟ್ಟು ದಾಳಿ ಮಾಡುವ ಮೂಲಕ ಪ್ರತಿಕಾರ ತೀರಿಸಿಕೊಳ್ಳುವ ಪಾಕಿಸ್ತಾನ ವಾಯುಪಡೆಯ ಯತ್ನ ವಿಫಲವಾಗಿತ್ತು.
ಮುಂದಿನ ಎರಡು ಅಥವಾ ನಾಲ್ಕು ವರ್ಷದೊಳಗೆ ಎಸ್-400 ವಾಯು ಕ್ಷಿಪಣಿ ವ್ಯವಸ್ಥೆ ಮತ್ತು ರಾಫೆಲ್ ಯುದ್ಧವಿಮಾನವನ್ನು ಅಳವಡಿಸಿಕೊಳ್ಳುವ ಮೂಲಕ ತಾಂತ್ರಿಕ ಸಮತೋಲನವನ್ನು ಕಾಯ್ದುಕೊಳ್ಳಲಾಗುವುದು ಎಂದು ಧನೋವಾ ಹೇಳಿದ್ದಾರೆ.
ಸುಮಾರು 58 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 36 ರಾಫೆಲ್ ಯುದ್ಧ ವಿಮಾನಗಳನ್ನು ಖರೀದಿಸುವ ಸಂಬಂಧ ಫ್ರಾನ್ಸ್ ಹಾಗೂ ಭಾರತ ನಡುವೆ 2016ರಲ್ಲಿ ಒಪ್ಪಂದ ಏರ್ಪಟ್ಟಿದ್ದು, ಸೆಪ್ಟೆಂಬರ್ ನಿಂದ ಯುದ್ಧ ವಿಮಾನ ಪೂರೈಕೆ ಮಾಡುವುದಾಗಿ ಫ್ರಾನ್ಸ್ ಹೇಳಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಎಸ್ -400 ಟ್ರಾಯಾಂಪ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಾಗಿ ಭಾರತ ಹಾಗೂ ರಷ್ಯಾ ಸಹಿ ಹಾಕಿವೆ.