ಶಡ್ರಂಪಾಡಿ ದೇವಾಲಯದ ಪುನ:ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಇಂದಿನಿಂದ ಆರಂಭ
0
ಏಪ್ರಿಲ್ 01, 2019
ಕುಂಬಳೆ: ಕುಂಬಳೆಗೆ ಸಮೀಪದ ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮತ್ತು ಉಳ್ಳಾಕ್ಲು, ಧೂಮಾವತಿ, ರಕ್ತೇಶ್ವರಿ ದೈವಸಾನ್ನಿಧ್ಯಗಳ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಎಪ್ರಿಲ್ 2, ಮಂಗಳವಾರದಂದು(ಇಂದು) ಆರಂಭವಾಗಲಿದೆ. ಬೆಳಿಗ್ಗೆ ಶ್ರೀ ಕ್ಷೇತ್ರದಲ್ಲಿ ಗಣಪತಿ ಹೋಮ, ಉಗ್ರಾಣ ಭರಣ, ದೀಪಸ್ಥಾಪನೆ ಕಾರ್ಯಕ್ರಮಗಳು ಜರಗಲಿದೆ. ಬಳಿಕ ಮುಜುಂಗಾವು ಶ್ರೀ ಪಾರ್ಥಸಾರಥಿ ಕೃಷ್ಣ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆಯ ಶೋಭಾಯಾತ್ರೆಯು ನಾಯ್ಕಾಪು, ಸೂರಂಬೈಲಿನ ಮೂಲಕ ಶ್ರೀಕ್ಷೇತ್ರಕ್ಕೆ ಆಗಮಿಸಲಿದೆ. ಮಧ್ಯಾಹ್ನ ಮಹಾಪೂಜೆಯ ನಂತರ ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ.
ಸಂಜೆ 6ಕ್ಕೆ ಶ್ರೀಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳನ್ನು ಪೂರ್ಣಕುಂಭಗಳೊಂದಿಗೆ ಸ್ವಾಗತಿಸಲಾಗುವುದು. ನಂತರ ಜರಗುವ ಸಭಾ ಕಾರ್ಯಕ್ರಮದಲ್ಲಿ ವಿದ್ವಾನ್.ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಉಪನ್ಯಾಸ ನೀಡುವರು. ಶ್ರೀಕ್ಷೇತ್ರ ಮಲ್ಲದ ಧರ್ಮದರ್ಶಿ ಆನೆಮಜಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸುವರು. ಪ್ರದೀಪ್ ಕುಮಾರ್ ಕಲ್ಕೂರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಭಗವದ್ಗೀತೆಯಲ್ಲಿ ವಿಶ್ವಮಾನವತಾ ವಾದದ ಕುರಿತಾಗಿ ಸುಗುಣಾ ಬಾಲಕೃಷ್ಣ ತಂತ್ರಿಯವರು ಬರೆದ ಅಶೋಚ್ಯಾನ್ ಅನ್ವಶೋಚಸ್ತ್ವಮ್ ಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಗುವುದು. ದೇಲಂಪಾಡಿ ಬಾಲಕೃಷ್ಣ ತಂತ್ರಿ, ಬಿ.ವಸಂತ ಪೈ ಬದಿಯಡ್ಕ, ಡಿ.ಕೃಷ್ಣ ಭಟ್ ದೊಡ್ಡಮಾಣಿ, ಡಿ.ಮಹಾಬಲ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಜಿಲ್ಲಾ ಪಂಚಾಯತು ಸದಸ್ಯೆ ಪುಷ್ಪಾ ಅಮೆಕ್ಕಳ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಪ್ರದೀಪ್ ಕುಮಾರ್, ಪುತ್ತಿಗೆ ಗ್ರಾಮ ಪಂಚಾಯತು ಸದಸ್ಯರಾದ ವರಪ್ರಸಾದ್, ಚಂದ್ರ.ಯಂ, ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಯಚ್. ಶಿವರಾಮ ಭಟ್ ಶುಭಾಶಂಸನೆಗೈಯ್ಯುವರು.
ವೈದಿಕ ಕಾರ್ಯಕ್ರಮಗಳ ಅಂಗವಾಗಿ ರಾತ್ರಿ ಆಚಾರ್ಯವರಣ, ಋತ್ವಿಕವರಣ, ಪುಣ್ಯಾಹ, ಅಂಕುರಾರೋಪಣ, ಸ್ಥಳಶುದ್ಧಿ, ಪ್ರಾಸಾದಶುದ್ಧಿ, ವಾಸ್ತುಹೋಮ, ರಕ್ಷೋಘ್ನ ಹೋಮಗಳ ನಂತರ ರಾತ್ರಿಪೂಜೆ ಜರಗಲಿರುವುದು.
ಬೆಳಗ್ಗೆ 8 ಗಂಟೆಯಿಂದ ಹನುಮಭಕ್ತ ಮಹಿಳಾ ವೃಂದ ಭಜನಾ ಸಂಘ ಸೂರಂಬೈಲು, ವೀರಕೇಸರಿ ಮಹಿಳಾ ಭಜನಾ ಸಂಘ ಕಂಚಿಕಟ್ಟೆ, ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಇವರು ಮತ್ತು ಅಪರಾಹ್ನ ಸೀತಾಂಗೋಳಿ ಶ್ರೀ ದೇವಿ ಭಜನಾ ಮಂಡಳಿಯವರು ಭಜನಾ ಕಾರ್ಯಕ್ರಮ ನೀಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಪರಪ್ಪ ದಿ. ಉಣ್ಣಿಕೃಷ್ಣನ್ ಮತ್ತು ಉಷಾ ಈಶ್ವರ ಭಟ್ ಇವರ ಶಿಷ್ಯ ಅಮಲ್‍ರಾಜ್ ಜಿ.ಕೆ.ನಗರ ಇವರ ಸಂಗೀತ ಕಛೇರಿಯು ಬೆಳಗ್ಗೆ 10.30 ಗೆ ಮತ್ತು ರಾತ್ರಿ 8 ಗಂಟೆಗೆ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆ ಇವರಿಂದ ನರಕಾಸುರ ಮೋಕ್ಷ - ಸುದರ್ಶನ ವಿಜಯ ಯಕ್ಷಗಾನ ಬಯಲಾಟ ನಡೆಯಲಿದೆ.