ನವದೆಹಲಿ: ಬಾಲಿವುಡ್ ನಿರ್ದೇಶಕ ಉಮೇಶ್ ಶುಕ್ಲಾ ಅವರ 'ಮೋದಿ: ಜರ್ನಿ ಆಫ್ ಎ ಕಾಮನ್ ಮ್ಯಾನ್' ವೆಬ್ ಸರಣಿಯನ್ನು ಚುನಾವಣಾ ಆಯೋಗ ನಿಷೇಧಿಸಿದ್ದು, ಮೋದಿ ವೆಬ್ ಸರಣಿಯ ಆನ್ ಲೈನ್ ಸ್ಟ್ರೀಮಿಂಗ್ ನಿಲ್ಲಿಸುವಂತೆ ಇರೋಸ್ ನೌಗೆ ಸೂಚಿಸಿದೆ.
ಪ್ರಧಾನಿ ಮೋದಿ ಅವರ ಜೀವನ ಆಧಾರಿತ 'ಮೋದಿ: ಜರ್ನಿ ಆಫ್ ಎ ಕಾಮನ್‍ಮ್ಯಾನ್' ಐದು ಕಂತುಗಳನ್ನು ಒಳಗೊಂಡಿದ್ದು, ಅದು ನಿಮ್ಮ ವೆಬ್ ಸೈಟ್ ನಲ್ಲಿ ಲಭ್ಯವಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಮುಂದಿನ ಆದೇಶದವರೆಗೆ ಕೂಡಲೇ ಮೋದಿ ವೆಬ್ ಸರಣಿ ಮತ್ತು ಅದಕ್ಕೆ ಸಂಬಂಧಿಸಿದ ಕಂಟೆಂಟ್ ಅನ್ನು ತೆಗೆದು ಹಾಕುವಂತೆ ಚುನಾವಣಾ ಆಯೋಗ ವೆಬ್ ಸರಣಿ ಪ್ರಸಾರ ಮಾಡುವ ಇರೋಸ್ ನೌಗೆ ಸೂಚಿಸಿದೆ.
ಇದಕ್ಕೂ ಮೊದಲು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮೋದಿ ಅವರ ಜೀವನಾಧರಿತ ಚಿತ್ರ ಪಿಎಂ ನರೇಂದ್ರ ಮೋದಿ ಬಿಡುಗಡೆಗೂ ಚುನಾವಣಾ ಆಯೋಗ ತಡೆ ನೀಡಿತ್ತು. ಇದೀಗ ವೆಬ್ ಸರಣಿಗೂ ತಡೆ ನೀಡಿದೆ.