ಕಾಸರಗೋಡು: ಲೋಕಸಭೆ ಚುನಾವಣೆ ಸಂಬಂಧ ಏ.11,12,13ರಂದು ನಡೆಯಲಿರುವ ಮತಗಟ್ಟೆ ಕರ್ತವ್ಯ ಸಿಬ್ಬಂದಿಯ ದ್ವಿತೀಯ ಹಂತದ ತರಬೇತಿಯ ಸಿದ್ಧತೆ ಪೂರ್ಣಗೊಂಡಿವೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಈ ಸಂಬಂಧ ತರಬೇತಿ ನೀಡುವವರಿಗಾಗಿ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಲೋಕಸಭೆ ಕ್ಷೇತ್ರ ಚುನಾವಣೆ ಜಿಲ್ಲಾ ಮಟ್ಟದ ನಿರೀಕ್ಷಕ ಎಸ್.ಗಣೇಶ್ ಅವರು ಸಮಾರಂಭದಲ್ಲಿ ಮಾರ್ಗದರ್ಶನ ನೀಡಿದರು. ನೋಡೆಲ್ ಅಧಿಕಾರಿ ಕೆ.ವಿನೋದ್ ಕುಮಾರ್ ತರಗತಿ ನಡೆಸಿದರು.
ಮತಗಟ್ಟೆಗಳಲ್ಲಿ ನಡೆಯುವ ಎಲ್ಲ ಪ್ರಕ್ರಿಯೆಗಳನ್ನೂ ತರಬೇತಿ ಸಭಾಂಗಣದಲ್ಲಿ ನಡೆಸುವ ರೀತಿಯ ತರಗತಿಗಳ ವ್ಯವಸ್ಥೆ ನಡೆಸಲಾಗುವುದು. ಒಂದು ತರಗತಿಯಲ್ಲಿ ಗರಿಷ್ಠ 36 ಮಂದಿ ಭಾಗವಹಿಸಲಿದ್ದಾರೆ. ಪ್ರತಿ ಬೂತ್ ಗಿರುವ ತಂಡದ ಸದಸ್ಯರಿಗೆ ಏಕಪ್ರಕಾರದ ತರಬೇತಿ ನೀಡಲಿರುವ ಹಿನ್ನೆಲೆಯಲ್ಲಿ ಮಂಜೂರು ಮಾಡಿರುವ ವಿಭಾಗದಲ್ಲೇ ಭಾಗವಹಿಸಬೇಕಾಗಿದೆ. ಇದರಲ್ಲಿ ಬದಲಾವಣೆ ನಡೆಸಲು ಸಾಧ್ಯವಿಲ್ಲ.
ಪ್ರಾಯೋಗಿಕ ತರಬೇತಿಯಾಗಿರುವ ಹಿನ್ನೆಲೆಯಲ್ಲಿ ಬೆಳಗ್ಗಿನ ಸೆಷನ್ ಸರಿಯಾಗಿ 9.30ಕ್ಕೇ ಮತ್ತು ಮಧ್ಯಾಹ್ನ 1.30ಕ್ಕೆ ಆರಂಭಗೊಳ್ಳಲಿವೆ. ಕಾಸರಗೋಡು ಚಂದ್ರಗಿರಿ ರಸ್ತೆಯ ಚೆಮ್ನಾಡ್ ಜಮಾಅತ್ ಶಾಲೆಯಲ್ಲಿ ತರಬೇತಿ ಕೇಂದ್ರ ಇರುವುದು. ಚುನಾವಣೆ ಕರ್ತವ್ಯ ಅರ್ಹತಾಪತ್ರ ಗಿರುವ ಅರ್ಜಿ ಕಾನೂನು ಆದೇಶವನ್ನು ತರಬೇತಿ ಕೇಂದ್ರದಲ್ಲಿ ಸಲ್ಲಿಸಬೇಕು. ಇದನ್ನು ಸ್ವೀಕರಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸೌಲಭ್ಯ ಏರ್ಪಡಿಸಲಾಗಿದೆ. ಆದೇಶದಲ್ಲಿ ತಿಳಿಸಲಾದ ತರಗತಿ ಕೊಠಡಿಗಳಲ್ಲಿ ಮತಗಟ್ಟೆ ಸಿಬ್ಬಂದಿ ಹಾಜರಾಗಬೇಕು.
ಹಿಂದಿನ ಚುನಾವಣೆಗಳಿಂದ ಭಿನ್ನವಾಗಿ ವಿವಿಪಾಟ್, ಟೆಸ್ಟ್ ವೋಟ್ ಸಹಿತ ನೂತನ ಚಟುವಟಿಕೆಗಳು ಇರುವ ಕಾರಣ ತರಬೇತಿಯಲ್ಲಿ ಸೂಕ್ತ ಸಮಯಕ್ಕೇ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ವಿಶೇಷಚೇತನರ ಸಹಾಯಕ್ಕಾಗಿ ಜತೆಗೆ ಬರುವವರ ಬಲಗೈ ಹೆಬ್ಬೆರಳಿಗೆ ಶಾಯಿ ಗುರುತು ಹಾಕುವ ಸೌಲಭ್ಯ ಈ ಬಾರಿ ಇರುವುದು ಎಂದವರು ತಿಳಿಸಿದರು.