ಬದಿಯಡ್ಕ: ನೀರ್ಚಾಲು ಮಹಾಜನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಶ್ವ ಆರೋಗ್ಯ ದಿನದ ಅಂಗವಾಗಿ ನಿವೇದಿತಾ ಸೇವಾ ಮಿಶನ್ ನಿರ್ಚಾಲು ಹಾಗು ಮುಗು ವಾಟರ್‍ಶೆಡ್ ನೀರ್ಚಾಲು ಇದರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಜರಗಿತು.
ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದರು. ಖ್ಯಾತ ದಂತ ವೈದ್ಯ ಡಾ.ಮುರಲೀಮೋಹನ ಚೂಂತಾರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು.ಈ ಸಂದರ್ಭ ಅವರು ಮಾತನಾಡಿ, ರಕ್ತದಾನ ಶ್ರೇಷ್ಠದಾನ. ರಕ್ತದಾನ ಮಾಡಿ ಒಂದು ರೋಗಿಯ ಜೀವ ಉಳಿಸುವ ಕೆಲಸಕ್ಕಿಂತ ದೊಡ್ಡ ಕೆಲಸ ಬೇರೊಂದಿಲ್ಲ. ಸಮಾಜದಲ್ಲಿ ಇಂತಹ ಶಿಬಿರಗಳು ಇನ್ನಷ್ಟು ಹೆಚ್ಚಲಿ. ಈ ನಿಟ್ಟಿನಲ್ಲಿ ನಿವೇದಿತ ಮಿಶನ್ ಹಾಗು ಮುಗು ವಾಟರ್‍ಶೆಡ್ ಸಾಧನೆ ಶ್ಲಾಘನೀಯ ಎಂದರು.
ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ.ಸ್ಮಿತಾ ರಕ್ತದಾನದ ಬಗೆಗಿನ ಸಮಗ್ರ ಮಾಹಿತಿ ನೀಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಪುದುಕೋಳಿ ಕೃಷ್ಣ ಭಟ್, ವಾಟರ್‍ಶೆಡ್‍ನ ಉಪಾಧ್ಯಕ್ಷ ಅಪ್ಪಣ್ಣ ಮಾಸ್ತರ್ ಶುಭಹಾರೈಸಿದರು. ಗೋಪಾಲಕೃಷ್ಣ ಭಟ್ ಮಲ್ಲಡ್ಕ ಸ್ವಾಗತಿಸಿ, ಹರಿಪ್ರಸಾದ್ ಪೆರ್ವ ವಂದಿಸಿದರು. ವಿ.ಬಿ.ಕುಂಟಿಕಾನ ಕಾರ್ಯಕ್ರಮ ನಿರೂಪಿಸಿದರು. ಕಾಸರಗೋಡು ಜನರಲ್ ಆಸ್ಪತ್ರೆಯ ಸಹಕಾರದೊಂದಿಗೆ ನಡೆದ ಶಿಬಿರ ಮಧ್ಯಾಹ್ನ ಮುಕ್ತಾಯಗೊಂಡಿತು.