ನವದೆಹಲಿ: ಲೋಕಸಭೆ ಚುನಾವಣೆ ವೇಳೆ ರಾಜಕೀಯ ಪಕ್ಷಗಳ ನಾಯಕರು ನೀಡುವ ಪ್ರಚೋದನಾಕಾರಿ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಾನು ಹಲ್ಲು ಇಲ್ಲದ ಮತ್ತು ಅಧಿಕಾರ ಇಲ್ಲದ ಸಂಸ್ಥೆ ಎಂದು ಚುನಾವಣಾ ಆಯೋಗ ಹೇಳಿದ ನಂತರ ಸುಪ್ರೀಂ ಕೋರ್ಟ್, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವ ರಾಜಕೀಯ ನಾಯಕ ಹೇಳಿಕೆಗಳನ್ನು ಪರಿಶೀಲಿಸುವುದಾಗಿ ಸೋಮವಾರ ಹೇಳಿದೆ.
ಚುನಾವಣಾ ಆಯೋಗದ ಅಧಿಕಾರವನ್ನು ಇಂದು ಬೆಳಿಗ್ಗೆ 10.30ಕ್ಕೆ ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ನಾಯಕರು ನೀತಿ ಸಂಹಿತೆ ಉಲ್ಲಂಘಿಸಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದರು.
ಈ ಕುರಿತ ವಿಚಾರಣೆ ವೇಳೆ, ಚುನಾವಣಾ ಆಯೋಗ, ಪ್ರಚೋದನಾಕಾರಿ ಹೇಳಿಕೆ ನೀಡುವವರಿಗೆ ನೋಟಿಸ್ ನೀಡಬಹುದು, ಸಲಹೆ ನೀಡಬಹುದು, ಪದೇಪದೇ ನೀತಿ ಸಂಹಿತೆ ಉಲ್ಲಂಘಿಸಿದರೆ ಅವರ ವಿರುದ್ಧ ಒಂದು ಕ್ರಿಮಿನಲ್ ಕೇಸ್ ದಾಖಲಿಸಬಹುದು. ಇದಕ್ಕೆ ಮೀರಿ ಬೇರೆ ಯಾವುದೇ ಕ್ರಮಕೈಗೊಳ್ಳುವ ಅಧಿಕಾರ ಆಯೋಗಕ್ಕೆ ಇಲ್ಲ ಎಂದು ತನ್ನ ಅಸಹಾಯಕತೆಯನ್ನು ಹೇಳಿಕೊಂಡಿದೆ.
ಪ್ರಚೋದನಾಕಾರಿ ಮತ್ತು ಧಾರ್ಮಿಕ ಭಾಷಣಗಳ ವಿರುದ್ಧ ಚುನಾವಣಾ ಆಯೋಗ ಹಲ್ಲಿಲ್ಲದ ಹಾವು ಎಂದು ಆಯೋಗದ ಪರ ವಕೀಲರು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ.
ಧರ್ಮದ ಆಧಾರದ ಮೇಲೆ ಮತ ಕೇಳುವ ಮಾಯಾವತಿ ಅವರ ಭಾಷಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ಬಿಎಸ್ ಪಿ ಮುಖ್ಯಸ್ಥೆಗೆ ಈಗಾಗಲೇ ನೋಟಿಸ್ ನೀಡಲಾಗಿತ್ತು. ಅಲ್ಲದೆ ಏಪ್ರಿಲ್ 12ರೊಳಗೆ ಉತ್ತರಿಸುವಂತೆ ಸೂಚಿಸಲಾಗಿತ್ತು. ಇದುವರೆಗೂ ಪ್ರತಿಕ್ರಿಯೆ ಸಲ್ಲಿಸಿಲ್ಲ ಎಂದು ಆಯೋಗದ ವಕೀಲರು ಕೋರ್ಟ್ ಗೆ ಮಾಹಿತಿ ನೀಡಿದರು.
ಈ ವೇಳೆ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು, ನೀವು ಮುಂದೆ ಏನು ಕ್ರಮ ಕೈಗೊಳ್ಳುತ್ತಿರಿ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಆಯೋಗದ ವಕೀಲರು, ನಮಗೆ ಅವರನ್ನು ಅನರ್ಹಗೊಳಿಸುವ ಅಧಿಕಾರ ಇಲ್ಲ. ಪದೇ ಪದೆ ನೀತಿ ಸಂಹಿತೆ ಉಲ್ಲಂಘಿಸಿದರೆ ಕೇಸ್ ದಾಖಲಿಸುತ್ತೇವೆ ಎಂದು ತಿಳಿಸಿದ್ದಾರೆ.