ಪೆರ್ಲ: ಕಾರ್ಮಿಕರ ಕೊರತೆ, ಇನ್ನಿತರ ಸವಾಲುಗಳಿಂದ ಕೃಷಿ ಕ್ಷೇತ್ರ ಬಣಗುಡುತ್ತಿದ್ದು ಬೆಳೆ ಬೆಳೆಯಲು, ಕಷ್ಟಪಟ್ಟು ಬೆಳೆದ ಬೆಳೆ ಕೊಯ್ಲು ನಡೆಸಲು ಕೃಷಿಕರು ಹರಸಾಹಸ ಪಡುವಂತಾಗಿದೆ. ಅಡಕೆ ಕೊಯ್ಲು ಕಾರ್ಮಿಕರ ಕೊರತೆ ನೀಗಿಸುವ ಸಲುವಾಗಿ ಅಡಕೆ ಬೆಳೆಗಾರರ ನೆರವಿಗೆ ಬಂದಿರುವ ಕ್ಯಾಂಪ್ಕೊ ಸಂಸ್ಥೆ ಯುವಕರಿಗೆ ಅಡಕೆ ಕೊಯ್ಲು ತರಬೇತಿ, ಜೀವ ರಕ್ಷಣೆಗೆ ಬೇಕಾದ ಪರಿಕರಗಳನ್ನು ಪರಿಚಯಿಸುವ ಮೂಲಕ ಅಡಕೆ ಯುವ ಕೌಶಲ್ಯದ ದೊಡ್ಡ ಪಡೆಯನ್ನು ಸಿದ್ಧಗೊಳಿಸಲು ಅವಿರತ ಪ್ರಯತ್ನ ನಡೆಸುತ್ತಿರುವುದಾಗಿ ಅಡಿಕೆ ಪತ್ರಿಕೆ ಸಂಪಾದಕ, ಅಂತರಾಷ್ಟ್ರೀಯ ಜಲತಜ್ಞ ಶ್ರೀಪಡ್ರೆ ಹೇಳಿದರು.
ಪೆರ್ಲ ಸೇವಾ ಸಹಕಾರಿ ಬ್ಯಾಂಕ್, ಪೆರಡಾಲ ಸೇವಾ ಸಹಕಾರಿ ಬ್ಯಾಂಕ್, ಕಾಸರಗೋಡು ಅಗ್ರಿಕಲ್ಚರಿಸ್ಟ್ ಕೋ-ಓಪರೇಟಿವ್ ಮಾರ್ಕೆಟಿಂಗ್ ಸೊಸೈಟಿ-ನೀರ್ಚಾಲು, ಪೆರ್ಲ ಶ್ರೀ ಶಂಕರ ಸೇವಾ ಸಮಿತಿ, ಕ್ಯಾಂಪ್ಕೊ ಇನ್ ಸೇವಾ, ನಾಲಂದ ಕಾಲೇಜ್ ಓಫ್ ಆಟ್ರ್ಸ್ ಆಂಡ್ ಸಯನ್ಸ್ ಹಾಗೂ ನಾಲಂದ ಚಾರಿಟೇಬಲ್ ಟ್ರಸ್ಟ್ ಪೆರ್ಲ ಆಶ್ರಯದಲ್ಲಿ ಪೆರ್ಲ ಶಂಕರಸದನದಲ್ಲಿ ಸೋಮವಾರ ನಡೆದ ಅಡಿಕೆ ಕೌಶಲ್ಯ ಪಡೆ' ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಅಡಕೆ ಕೊಯ್ಲು ಬಹಳ ನಾಜೂಕಿನ ಕೆಲಸವಾಗಿದ್ದು ಪದವೀಧರ ಸರಕಾರಿ ನೌಕರರು ಗಳಿಸುವ ಅದೇ ಸಂಪಾದನೆಯನ್ನು ಅಡಕೆ ಕೊಯ್ಲು ಕಾರ್ಮಿಕರು ಪಡೆಯುತ್ತಿದ್ದಾರೆ. ತರಬೇತಿ ಪಡೆದ ಶಿಬಿರಾರ್ಥಿಗಳು ಸ್ವ-ಉದ್ಯೋಗದೊಂದಿಗೆ ಸ್ವತಂತ್ರ ಬದುಕಿನ ಸ್ವಾವಲಂಬಿಗಳಾಗಬಹುದಾಗಿದ್ದು, ಅತಿ ಸಾಹಸಕ್ಕೆ ಮುಂದಾಗದೆ ಸುರಕ್ಷಾ ಪರಿಕರಗಳನ್ನು ಸಮರ್ಥ ರೀತಿಯಲ್ಲಿ ಬಳಸಿ ಅಡಕೆ ಕೊಯ್ಲು ನಡೆಸಬೇಕು. ಅಡಕೆ ಮರ ಏರುವ ಕುಶಲಕರ್ಮಿಗಳನ್ನು ತರಬೇತುಗೊಳಿಸುವ ನಿಟ್ಟಿನಲ್ಲಿ ತಡವಾಗಿಯಾದರೂ ಉತ್ತಮ ಪ್ರಯತ್ನ ನಡೆಯುತ್ತಿರುವುದು ಕಾರ್ಮಿಕರ ಕೊರತೆಯಿಂದ ಕಂಗೆಟ್ಟಿದ್ದ ಬೆಳೆಗಾರರ ವಲಯದಲ್ಲಿ ಬಲು ದೊಡ್ಡ ಕ್ರಾಂತಿ ಮೂಡಿಸಿದೆ ಎಂದು ಅವರು ತಿಳಿಸಿದರು.
ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಳ ಮೊಕ್ತೇಸರ, ನಾಲಂದ ಮಹಾವಿದ್ಯಾಲಯ ಅಧ್ಯಕ್ಷ ಆನೆಮಜಲು ವಿಷ್ಣುಭಟ್ ಶಿಬಿರ ಉದ್ಘಾಟಿಸಿದರು. ಶ್ರೀಹರಿ ಭಟ್ ಸಜಂಗದ್ದೆ ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿ, ಖ್ಯಾತ ಅರ್ಥಶಾಸ್ತ್ರಜ್ಞ, ನಾಲಂದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ವಿಘ್ನೇಶ್ವರ ವರ್ಮುಡಿ ಮಾತನಾಡಿ, ಜಾಗತೀಕರಣ ಹಾಗೂ ನಗರೀಕರಣ ಹೆಸರಿನಲ್ಲಿ ಹೊಸ ಹೊಸ ಆವಿಷ್ಕಾರಗಳು ಹಳ್ಳಿಗಳನ್ನು ಆಕ್ರಮಿಸುತ್ತಿರುವಂತೆ ಕೃಷಿ ಕ್ಷೇತ್ರದಲ್ಲೂ ವಿವಿಧ ಪ್ರಯೋಗ ನಡೆಸುವ ಮೂಲಕ ಕೃಷಿ ವೈವಿಧ್ಯತೆಯನ್ನು ಸಂರಕ್ಷಿಸುವ ಕೆಲಸ ನಡೆಯಬೇಕಿದೆ ಎಂದರು.
ಶಂಕರ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ಭಟ್ ಚೋಕೆಮೂಲೆ ಉಪಸ್ಥಿತರಿದ್ದರು. ಶಿಬಿರಾಧಿಕಾರಿ ವೆಂಕಟ್ರಮಣ ಭಟ್ ಎಡಮಲೆ ಸ್ವಾಗತಿಸಿ, ವಿಘ್ನೇಶ್ ಶಿರಂತಡ್ಕ ವಂದಿಸಿದರು. ಶ್ರೀನಿಧಿ ಕೊಲ್ಲೆಂಕಾನ ನಿರೂಪಿಸಿದರು.
ಸಾಂಪ್ರದಾಯಿಕ ಶೈಲಿಯಲ್ಲಿ ನೂತನ ಸುರಕ್ಷಾ ಪರಿಕರಗಳನ್ನು ಬಳಸಿ 5ದಿನಗಳ ಕಾಲ ನಡೆಯುವ ಈ ತರಬೇತಿ ಶಿಬಿರ ಏ.12ರಂದು ಸಂಪನ್ನಗೊಳ್ಳಲಿದೆ.