ಕುಂಬಳೆ: ಎಡರಂಗ ನೇತೃತ್ವದ ರಾಜ್ಯ ಸರಕಾರವು ಇತ್ತೀಚೆಗೆ ತನ್ನ ಅಧಿಕಾರಾವಧಿಯ ಸಾವಿರ ದಿನವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಿತು. ಈ ಸವಿ ನೆನಪಿಗೆ ಸರಕಾರವು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ವಿವಿಧ ಕಾರ್ಯಕ್ರಮಗಳನ್ನು ಈ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಆಚರಿಸಿತು. ಪ್ರತಿಜಿಲ್ಲೆಗೂ ಕನಿಷ್ಠಹತ್ತು ಕಾರ್ಯಕ್ರಮಗಳಂತೆ ರಾಜ್ಯಾದ್ಯಂತ ಸಾವಿರ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿರುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಹೇಳಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಗಡಿನಾಡು ಕಾಸರಗೋಡಿನಲ್ಲೂ ವಿವಿಧ ಕಾರ್ಯಕ್ರಮಗಳು ನಡೆದವು. ಈ ಪೈಕಿ ಮಂಜೇಶ್ವರ ಹೊಸಂಗಡಿಯ ದುರ್ಗಿಪಳ್ಳದಲ್ಲಿ ನೆನೆಗುದಿಗೆ ಬಿದ್ದಿದ್ದ ಕೇರಳ ತುಳು ಅಕಾಡೆಮಿಯ ತುಳು ಭವನಕ್ಕೆ ನಡೆಸಲಾದ ಶಿಲಾನ್ಯಾಸವೂ ಒಂದು. ಅಲ್ಲದೆ ಕಾಸ್ರೋಡ್ ಕೆಫೆ ಸಹಿತ ಇತರ ಯೋಜನೆಗಳೂ ಒಳಗೊಂಡಿದ್ದವು.
ಆದರೆ ಕಳೆದೊಂದು ದಶಕದಿಂದ ನೆನೆಗುದಿಗೆ ಬಿದ್ದಿರುವ ಕುಂಬಳೆ ಸಮೀಪದ ಮುಜುಂಗಾವಿನಲ್ಲಿ ನಿರ್ಮಿಸಲುದ್ದೇಶಿಸಿ ಅರ್ಧದಲ್ಲೇ ಮೊಟಕುಗೊಂಡಿರುವ ಕೇರಳ ಪಾರ್ತಿಸುಬ್ಬ ಯಕ್ಷಗಾನ ಅಕಾಡೆಮಿ ಸರಕಾರದ ಸಾವಿರ ದಿನದ ಯೋಜನೆಯಲ್ಲಿ ಒಳಗೊಳ್ಳದಿರುವುದು ನಿರಾಶೆಯ ಜೊತೆಗೆ ಹಲವು ಅನುಮಾನಗಳಿಗೂ ಕಾರಣವಾಗಿದೆ.
ಹಿನ್ನೆಲೆ:
ಪಶ್ಚಿಮ ಕರಾವಳಿ ತೀರದ ಅಚ್ಚಗನ್ನಡದ ನೆಲ ಯಕ್ಷಗಾನದ ತವರೂರು, ಶ್ರೀಮಂತ ಕಲೆಯು ಇಲ್ಲಿನ ಸಂಸ್ಕøತಿಯ ಪ್ರತೀಕವೂ ಹೌದು, ಶತಮಾನಗಳ ಇತಿಹಾಸವಿರುವ ಯಕ್ಷಗಾನ ಕಲೆಗೆ ಹಲವು ಕಲಾವಿದರು, ಮಹನೀಯರು ತಮ್ಮದೆ ಆದ ವಿಶಿಷ್ಟ ಶೈಲಿಯ ಮುಖಾಂತರ ಅನನ್ಯ ಕೊಡುಗೆ ನೀಡಿ ಕಲೆಯನ್ನು ಶ್ರೀಮಂತಗೊಳಿಸಿ, ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ್ದಾರೆ. ತೆಂಕಣ ಯಕ್ಷಗಾನ ಬೆಳೆದ ಕುಂಬಳೆ ಸೀಮೆಯಲ್ಲಿ ಹಲವು ಭಾಗವತರು, ಅರ್ಥಧಾರಿಗಳು, ವೇಷಧಾರಿ ಕಲಾವಿದರು ಹುಟ್ಟಿ ಬೆಳೆದು ಕಲಾ ಕ್ಷೇತ್ರದ ಉಳಿವಿಗೂ ಕಾರಣರಾಗಿದ್ದಾರೆ.
ಕುಂಬಳೆ ಸುಂದರರಾವ್, ಶೇಣಿ ಗೋಪಾಲಕೃಷ್ಣ ಭಟ್ ಸೇರಿದಂತೆ ಬಲಿಪ ನಾರಾಯಣ ಭಾಗವತರು ತೆಂಕಣ ಯಕ್ಷಗಾನದ ಮೇರು ವ್ಯಕ್ತತ್ವಗಳು. ಇಂತಹ ಪ್ರದೇಶದಲ್ಲಿ ಶತಮಾನಗಳ ಹಿಂದೆ ಹುಟ್ಟಿ ಬೆಳೆದು ಯಕ್ಷಗಾನ ಪಿತಾಮಹ ಎನಿಸಿಕೊಂಡ ಪಾರ್ತಿಸುಬ್ಬನ ಸ್ಮರಣಾರ್ಥ ಸ್ಥಾಪನೆಗೊಂಡ ಯಕ್ಷ ಕಲಾ ಮಂದಿರ ನಿರ್ಮಾಣ ಅರ್ಧಕ್ಕೆ ನಿಂತು ಆ ಮೂಲಕ ಶೋಚನೀಯಾವಸ್ಥೆ ತಲುಪಿರುವುದು ಯಕ್ಷ ಜನಕನ ಹೆಸರಿಗೆ ಕಳಂಕ ತರುತ್ತಿದೆ. ಸುಮಾರು ಸುಮಾರು ಹತ್ತು ವರ್ಷಗಳ ಹಿಂದೆ ಆರಂಭಗೊಂಡ ಕಲಾಕೇಂದ್ರ ನಿರ್ಮಾಣ ಪೂರ್ಣಗೊಳ್ಳದೆ ಕಟ್ಟಡವು ಕುಡುಕರ, ಪುಂಡರ ಆಶ್ರಯತಾಣವಾಗಿದೆ. ಪೊದೆ ಗಿಡಗಳಿಂದ ಆವೃತವಾದ ಕಟ್ಟಡದಲ್ಲಿ ಮದ್ಯದ ಬಾಟಲಿಗಳು, ಗಾಜಿನ ಚೂರು, ಒಡೆದ ಹೆಂಚು, ಕೆಡವಲ್ಪಟ್ಟ ಕಿಟಕಿ ಕಲ್ಲುಗಳು ಕಂಡು ಬರುತ್ತಿವೆ. ಮಳೆಗಾಲದ ವೇಳೆ ಮಳೆ ನೀರು ಶೇಖರವಾಗಿ ನೆಲ ಪಾಚಿ ಕಟ್ಟದ ಸ್ಥಿತಿಯಲ್ಲಿದೆ ಯಕ್ಷ ಮಂದಿರ. ಶ್ವಾನಗಳು ಕೂಡಾ ಹಗಲು ವಿಶ್ರಾಂತಿ ಪಡೆಯುವ ಸ್ಥಳವಾಗಿ ಮಾರ್ಪಟ್ಟಿದ್ದು, ಮಾಡಿಗೆ ಹೊದೆಸಲಾದ ಕಬ್ಬಿಣದ ಸರಳುಗಳ ಇಂದೋ ನಾಳೆಯೋ ಧರಾಶಾಯಿಯಾಗುವ ದುಸ್ಥಿತಿಯಿದೆ. 2009-10 ರಲ್ಲಿ ಅಂದಿನ ಎಡರಂಗ ಸರಕಾರದ ಅಧಿಕಾರದ ವೇಳೆ ಸುಮಾರು 20 ಲಕ್ಷ ರೂ. ಅನುದಾನದ ಮೂಲಕ ಯಕ್ಷ ರಸಿಕ, ಯಕ್ಷಗಾನ ಪಿತಾಮಹ ಪಾರ್ತಿಸುಬ್ಬನ ಸ್ಮರಣಾರ್ಥ ಯಕ್ಷಗಾನ ಕಲಾಕೇಂದ್ರ ಸ್ಥಾಪನೆ, ಆ ಮೂಲಕ ಯುವ ಕಲಾವಿದರನ್ನು ಮಹತ್ತರ ಕಲೆಯತ್ತ ಆಕರ್ಷಿಸಿ, ಕಲೆಯನ್ನು ಪ್ರವರ್ಧಿಸುವ ಯೋಜನೆಯನ್ನು ರೂಪಿಸಲಾಗಿತ್ತು.
ಕುಂಬಳೆ-ಮುಜಂಗಾವು ಪಾರ್ಥಸಾರಥಿ ದೇವಸ್ಥಾನ ಪರಿಸರದ ಮುಂಭಾಗದಲ್ಲಿರುವ ವಿಶಾಲವಾದ ಪ್ರದೇಶದಲ್ಲಿ ಕಲಾಕೇಂದ್ರ ಸ್ಥಾಪನೆಯ ಸ್ಥಳವೂ ನಿಶ್ಚಯಿಸಲ್ಪಟ್ಟು ಕಾಮಗಾರಿ ಭರದಿಂದ ಸಾಗಿತ್ತು. ಅಂದಿನ ಶಾಸಕರ ನಿಧಿಯಿಂದ(ಮಂಜೇಶ್ವರ ಮತ್ತು ಆಂಗ್ಲೋ ಇಂಡಿಯನ್) ಸುಮಾರು 15 ಲಕ್ಷ ರುಪಾಯಿಗಳ ಧನಸಹಾಯವು ದೊರೆತಿತ್ತು. ಕಲಾಕೇಂದ್ರದ 90 ಶೇ. ಕಾಮಗಾರಿಯು ಬಹಳ ಹಿಂದೆಯೇ ಪೂರ್ಣಗೊಂಡಿತ್ತು. ನೆಲಕ್ಕೆ ಟೈಲ್ಸ್ ಹೊದಿಕೆ, ಕಲಾವಿದರಿಗೆ ವೇಷ ಬದಲಿಸುವ ಕೊಠಡಿಗಳು ಪೂರ್ಣಗೊಂಡಿದ್ದರೂ, ಕ ಲಾಕೇಂದ್ರ ಉದ್ಘಾಟನೆಯಾಗದೆ, ಸಕಲ ನಿರ್ಲಕ್ಷಕ್ಕೆ ಒಳಪಟ್ಟ ಕಾರಣ ಯೋಜನೆ ಸಾಕಾರಗೊಳ್ಳದೆ ಸ್ತಬ್ದವಾಗಿರುವುದು ಈ ಭಾಗದ ಯಕ್ಷ ಕಲಾರಸಿಕರನ್ನು ಬಹಳ ನೋಯಿಸುತ್ತಿದೆ.
ಸ್ಮಾರಕ ಯೋಜನೆಗೆ ರೂಪುಗೊಂಡಿದ್ದ ಸಮಿತಿ 5 ಸೆಂಟ್ಸ್ ಸ್ಥಳವನ್ನು ಖರೀದಿಸಿ, ಅಚ್ಚುಕಟ್ಟಾಗಿ ಮುಂದುವರಿದಿದ್ದ ಯೋಜನೆ ಇಂದು ನೆನೆಗುದಿಗೆ ಬಿದ್ದಿದೆ. ಅಪೂರ್ಣವಾದ ಸ್ಮಾರಕವು ಪಡ್ಡೆ ಹುಡುಗರ, ಕಿಡಿಗೇಡಿಗಳ ಆಡೊಂಬಲವಾಗಿದೆ. ಪ್ರಸ್ತುತ ಸಮಿತಿ ಯೋಜನೆ ಸಾಕಾರದ ಬಗ್ಗೆ ಕಾಳಜಿ ವಹಿಸಿದಂತಿಲ್ಲ. ಸಮಿತಿಯ ಕಾಲಾವಧಿ ಮಗಿದರೂ ಹೊಸ ಸಮಿತಿ ಸದಸ್ಯರ ಆಯ್ಕೆಯಾಗಲಿ ನಡೆದಿಲ್ಲ. ಆದಷ್ಟು ಬೇಗ ಹೊಸ ಸಮಿತಿ ರೂಪುಗೊಂಡು ಕಾಮಗಾರಿ ಪೂರ್ಣಗೊಳಿಸಿ, ಯಕ್ಷಗಾನ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಕೆಲಸ ನಡೆಯಬೇಕಿದೆ.
ಯಕ್ಷ ಪಿತಾಮಹ ಪಾರ್ತಿಸುಬ್ಬನಿಗೆ ತನ್ನ ತಾಯ್ನೆಲದಲ್ಲಿ ಭವ್ಯವಾದ ಸ್ಮಾರಕ ತೆಲೆಯೆತ್ತಿ ನಿಲ್ಲುವಂತೆ ಇನ್ನಾದರೂ ಪ್ರಯತ್ನಿಸಿ ಯಕ್ಷಗಾನ ಸ್ಮಾರಕವನ್ನು ಕಲಾಕೇಂದ್ರವನ್ನು ಪುನರ್ಜೀವಿತಗೊಳಿಸಬೇಕು.
ಮಾಜಿ ಶಾಸಕ ಸಿ.ಎಚ್ ಕುಞಂಬು ಅವರು ಹೇಳುವಂತೆ 2009ರಲ್ಲಿ ಅಂದಿನ ಸರಕಾರವು ಹಲವು ಕಲೆ, ನಾಟ್ಯ, ಸಂಗೀತ, ಜನಪದ ಹಾಡು, ನೃತ್ಯ ಪ್ರಕಾರಗಳ ಪ್ರೋತ್ಸಾಹ ಹಾಗೂ ಉತ್ತೇಜನಕ್ಕಾಗಿ ಕಲಾಕೇಂದ್ರಗಳ ಸ್ಥಾಪನೆಗೆ ಯೋಜನೆ ರೂಪಿಸಿತ್ತು, ಪ್ರಸ್ತುತ ಹೊಸ ಸಮಿತಿ ರೂಪೀಕರಿಸಿ, ಯಕ್ಷಗಾನ ಮಂದಿರವನ್ನು ಸಾರ್ಥಕತೆಯತ್ತ ಕೊಂಡೊಯ್ಯಲಾಗುವುದು.
ಓರ್ವ ಮಹಾನ್ ಯಕ್ಷಗಾನ ಕಲಾ ಸಾಧಕನ ಹೆಸರಿನಲ್ಲಿ ಸ್ಥಾಪಿಸಲ್ಪಟ್ಟ ಈ ಸ್ಮಾರಕದ ದುಸ್ಥಿತಿ ನೋಡಿ ಬೇಸರಿಸದ ಸಹೃದಯಿ ಮನಸುಗಳು ಅನೇಕ, ಸೂಕ್ತ ಆವರಣ ಗೋಡೆಯಿಲ್ಲದೆ ಪ್ರಾಣಿಗಳ ಆವಸವಾಗಿರುವ ಸ್ಮಾರಕ ಕಟ್ಟಡದಲ್ಲಿ ಪುಂಡು ಪೋಕರಿಗಳ ಅಟ್ಟಹಾಸಕ್ಕೆ ಸ್ಮಾರಕ ಮಂದಿರದ ಹಂಚುಗಳು ಒಡೆದು ಬಿದ್ದಿವೆ. ಕುಡುಕರ ಆವಾಸವೋ ಎಂಬಂತೆ ಅಲ್ಲಲ್ಲಿ ಮದ್ಯದ ಬಾಟಲಿಗಳು ಒಡೆದ ಸ್ಥಿತಿಯಲ್ಲಿವೆ. ಟೈಲ್ಸ್ ಹೊದೆಸಿದ ನೆಲದ ಸಂದಿಗಳಲ್ಲಿ ಗಿಡಗಳು ಬೆಳದಿವೆ, ಹಲವು ರೂಪಾಯಿ ವ್ಯಯಿಸಿ ಕಟ್ಟಿಸಿದ ಕಟ್ಟಡಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಪಾರ್ತಿಸುಬ್ಬ ಸ್ಮಾರಕ ಗಗನ ಕುಸುಮ!
ತುಳುನಾಡಿನಲ್ಲಿ ಬಹಳಷ್ಟು ಮಂದಿ ಯಕ್ಷಗಾನ ಕಲಾವಿದರು ಹುಟ್ಟಿ ಬೆಳೆದಿದ್ದಾರೆ. ಯಕ್ಷಗಾನ ಜನಸಾಮಾನ್ಯರ ನಾಡಿ ಮಿಡಿತ ಎಂದರೆ ತಪ್ಪಾಗಲಾರದು. ಸಹಸ್ರಗಟ್ಟಲೆ ಯಕ್ಷಗಾನ ಕಲಾರಸಿಕರನ್ನು ಮನಸೂರೆಗೊಳಿಸಿದ ಈ ಪ್ರಕಾರಕ್ಕೆ ನೆರವಾಗಬಹುದಾದ ಯಕ್ಷಗಾನ ಕಲಾಕೇಂದ್ರ ಯೋಜನೆ ಕುಂಟುತ್ತಾ ಸಾಗಿ ಕ್ಷೀಣಾವಸ್ಥೆಗೆ ತಲುಪಿರುವುದು ವಿಶಾದನೀಯ. ಕುಂಬಳೆ ಸೀಮೆಯ ದಕ್ಷಿಣಕ್ಕೆ ಸಂಚರಿಸಿ, ಪ್ರಾಚೀನ ಕೇರಳ ದೇಶದ ಹಲವು ಕಲಾ ಪ್ರಕಾರಗಳನ್ನು ಅಭ್ಯಸಿಸಿ, ಯಕ್ಷಗಾನವೆಂಬ ಹಿರಿಯಾಟಕ್ಕೆ ಹೊಸ ಮೆರುಗನ್ನು ನೀಡಿದ ಯಕ್ಷ ಜನಕ ಪಾರ್ತಿಸುಬ್ಬನ ಸ್ಮಾರಕ ಇಂದು ಗಗನ ಕುಸುಮ ಎಂಬಂತೆ ಭಾಸವಾಗುತ್ತಿದೆ.
ಗೋವಿಂದ ಪೈ ಸಂಶೋಧನೆಯಲ್ಲಿ ಪಾರ್ತಿಸುಬ್ಬ!
ಕುಂಬಳೆಯ ಪಾರ್ತಿಸುಬ್ಬ ಯಕ್ಷಗಾನದ ಪಿತಾಮಹ, ಗಂಡು ಮೆಚ್ಚಿದ ಯಕ್ಷಗಾನ ಕಲೆಗೆ ಹೊಸ ಆಯಾಮವನ್ನು ನೀಡಿದ ಕಲಾಯೋಗಿ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನೆ ಆಧಾರದ ಪ್ರಕಾರ ಪಾರ್ತಿಸುಬ್ಬನ ಹುಟ್ಟು ಕ್ರಿ.ಶ 1730-50 ರೊಳಗೆ, ಕೆಂಗಣ್ಣ ನಾಯಕನೆಂಬ ವೇಷಧಾರಿ ಪಾರ್ತಿಸುಬ್ಬನ ಸಮಕಾಲೀನ. ಬ್ರಿಟಿಷ್ ಸೈನಿಕರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಅವರನ್ನು ದಿಕ್ಕಾಪಾಲಾಗಿ ಓಡಿಸಿದ್ದ ಕೆಂಗಣ್ಣ ನಾಯಕನಿಗೆ ಸಿಡಿಲ ಮರಿ ಎಂಬ ಬಿರುದು ಇತ್ತು. ಪಾರ್ತಿಸುಬ್ಬ ಒಟ್ಟು ಎಂಟು ಅದ್ಭುತ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದ. ಪಟ್ಟಾಭಿಷೇಕ, ಪಂಚವಟಿ, ವಾಲಿ-ಸುಗ್ರೀವ ಕಾಳಗ, ಉಂಗುರ ಸಂಧಿ, ಸೇತು ಬಂಧನ, ಕುಂಭಕರ್ಣ ಕಾಳಗ, ಅಂಗದ ಸಂಧಾನ, ಇಂದ್ರಜಿತು ಕಾಳಗ.ಜೊತೆಗೆ ಯಕ್ಷಗಾನ ಸಭಾ ಲಕ್ಷಣವೆಂಬ ಕೃತಿಯನ್ನೂ ರಚಿಸಿದ್ದು, ಇನ್ನಷ್ಟು ಕೃತಿಗಳು ಅಲಭ್ಯ ಎಂದು ನಂಬಲಾಗಿದೆ. 1801-02ರ ದುರ್ಮತಿ ನಾಮ ಸಂವತ್ಸರದಲ್ಲಿ ಪಾರ್ತಿಸುಬ್ಬ ಇಹಲೋಕ ತ್ಯಜಿಸಿದ. ಪಾರ್ತಿಸುಬ್ಬನು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯದ್ದೇ ಆದ ತೆಂಕಣ ಭಾಗದ ಕುಂಬಳೆ ಸೀಮೆಯವನು. ಆತನ ಊರು ಕುಂಬಳೆ ನೆರೆಯ ದೇಶಮಂಗಲ ಗ್ರಾಮ ಎಂದು ರಾಷ್ಟ್ರಕವಿ ಗೋವಿಂದ ಪೈಯವರು ಪಾರ್ತಿಸುಬ್ಬನ ಕುರಿತು 1949ರಲ್ಲಿ ಮದ್ರಾಸಿನಲ್ಲಿ ಮಾಡಿದ ರೇಡಿಯೋ ಭಾಷಣದಲ್ಲಿ, ಆ ಮೇಲೆ ಭಾಷಣ ಪ್ರಕಟವಾದ ನವಭಾರತ ಪತ್ರಿಕೆಯಲ್ಲಿ(3.5.1956). ಆ ಬಳಿಕ ಉತ್ತರ ಕರ್ನಾಟಕದ ಬಾಂಧವರಿಗೂ ಯಕ್ಷಗಾನ ಪಿತಾಮಹನ ಪರಿಚಯ ಮಾಡುವ ಸಲುವಾಗಿ ಜಯಕರ್ನಾಟಕ ವಿಶೇಷಾಂಕ(1957 ಮೇ)ದಲ್ಲಿ ಮೂರು ಆಧಾರಗಳನ್ನು ನೀಡಿ ವಿವರಿಸಿದ್ದಾರೆ.