ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಮಾಣದ ಶುದ್ದಜಲ ಕೊರತೆ ಕಂಡುಬಂದಿದ್ದು, ಸಂಬಂಧಪಟ್ಟವರು ಯಾವುದೇ ಉಪಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯಿಸುತ್ತಿದ್ದಾರೆ ಎಂದು ನಾಗರಿಕರು ದೂರಿಕೊಂಡಿದ್ದಾರೆ.
ಪೈವಳಿಕೆ ಗ್ರಾಮ ಪಂಚಾಯತಿಯ ಎಲ್ಲಾ 19 ವಾರ್ಡ್ ಗಳಲ್ಲೂ ಜಲಕ್ಷಾಮ ತೀವ್ರಗೊಂಡಿದ್ದು, ಕೃಷಿಕರು ಸಹಿತ ಜನಸಾಮಾನ್ಯರು ನೀರಿನ ಅಲಭ್ಯತೆಯ ಕಾರಣ ತೊಂದರೆಗೊಳಗಾಗಿದ್ದಾರೆ. ಅಲ್ಲದೆ ಸ್ಥಳೀಯ ಗ್ರಾಮ ಪಂಚಾಯತು ಅಗತ್ಯ ನೀರಿನ ವಿತರಣೆಗೆ ಯಾವುದೇ ಕ್ರಮಗಳನ್ನೂ ಈವರೆಗೆ ಕೈಗೊಂಳ್ಳದಿರುವುದೂ ಜನರನ್ನು ಆಕ್ರೋಶಿತರನ್ನಾಗಿಸಿದೆ.
ಗ್ರಾ.ಪಂ. ವ್ಯಾಪ್ತಿಯ ಬಹುತೇಕ ಪ್ರದೇಶಗಳಲ್ಲಿ ಸಾಕಷ್ಟು ಕೊಳವೆ ಬಾವಿಗಳಿದ್ದರೂ ಪಂಪ್ ಸೆಟ್ ಮತ್ತು ಇತರ ಉಪಕರಣಗಳು ಕಾರ್ಯವೆಸಗದೆ ಮೂಲೆಗುಂಪಾಗಿದ್ದು, ದುರಸ್ಥಿಯ ಕ್ರಮಕ್ಕೂ ಅಧಿಕೃತರು ಮುಂದಾಗುತ್ತಿಲ್ಲ. ಕಳೆದ ವರ್ಷ ಶುದ್ದಜಲ ವಿತರಣೆಗಾಗಿ ಬೇಸಿಗೆ ಕಾಲದಲ್ಲಿ ಪಂಚಾಯತಿಯ ವಿವಿಧೆಡೆ 9 ನೀರಿನ ಟ್ಯಾಂಕ್ ತಂದಿರಿಸಿದ್ದರೂ ಅವುಗಲಲ್ಲಿ ಈವರೆಗೆ ನೀರು ತುಂಬಿಸುವ ಜವಾಬ್ದಾರಿಗೆ ಯಾರೂ ಮುಂದಾಗದಿರುವುದರಿಂದ ಮಳೆ-ಬಿಸಿಲಿಗೆ ಟ್ಯಾಂಕ್ ನಾಶದ ಹಂತದಲ್ಲಿದೆ.
ಹಳ್ಳ ಹಿಡಿದ ಬಹುನಿರೀಕ್ಷೆಯ ಜಲನಿಧಿ ಯೋಜನೆ:
ಪೈವಳಿಕೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಎದುರಾಗುತ್ತಿರುವ ಜಲಕ್ಷಾಮದ ಹಿನ್ನೆಲೆಯಲ್ಲಿ 2013 ರಲ್ಲಿ ಸರ್ವೇ ನಡೆಸಿ ವಿಸ್ಕøತ ಕಾರ್ಯಯೋಜನೆಯನ್ನು ಒಳಗೊಂಡ ಬಹುನಿರೀಕ್ಷಿತ ಜಲನಿಧಿ ಯೋಜನೆಯನ್ನು ರೂಪೀಕರಿಸಿ 2014ರಲ್ಲಿ ಅನುಷ್ಠಾನಕ್ಕೆ ಚಾಲನೆ ನೀಡಲಾಗಿತ್ತು. ಪರಪ್ಪಿಲ್, ಪೊನ್ನೆಂಗಳ, ಪೆರ್ವೊಡಿ, ಚಿಪ್ಪಾರುಪದವು, ಗಾಳಿಯಡ್ಕ, ಕುಡಾಲು, ಬೆರಿಪದವು, ಬದಿಯಾರು, ಕುರುಡಪದವು, ಪೆರ್ಮುದೆ, ಪೈವಳಿಕೆ ಮತ್ತು ಪೊಸಡಿಗುಂಪೆ ಪ್ರದೇಶಗಳನ್ನು ಒಳಗೊಮಡ 12 ಜಲ ವಿತರಣಾ ಘಟಕಕ್ಕೆ ಅಂದು ರೂಪುನೀಡಿ 10 ಕೋಟಿ ರೂ.ಗಳ ಬೃಹತ್ ಮೊತ್ತ ವಿನಿಯೋಗಿಸಲಾಗಿತ್ತು. ಪ್ರಸ್ತುತ ಈ ಪೈಕಿ ಬೆರಿಪದವು, ಕುರುಡಪದವು, ಬದಿಯಾರು, ಪೊಸಡಿಗುಂಪೆ, ಕುಡಾಲು, ಪೊನ್ನೆಂಗಳ ಮತ್ತು ಪೈವಳಿಕೆ ಪ್ರದೇಶದ ಜಲ ವಿತರಣಾ ಯೋಜನೆ ಜಲನಿಧಿ ಯೋಜನೆಯ ನೇರ ಉಸ್ತುವಾರಿಯಲ್ಲಿ ಒಂದಷ್ಟು ತೃಪ್ತಿಕರವಾಗಿ ಕಾರ್ಯವೆಸಗುತ್ತಿದ್ದು, ಮಿಕ್ಕಿಳಿದ ಪ್ರದೇಶಗಳ ಯೋಜನೆಗಳು ಸಂಪೂರ್ಣ ನೆಲಕ್ಕಚ್ಚಿರುವುದು ಅಧಿಕೃತರ ಅನಾಸ್ಥೆಯ ಕಾರಣದಿಂದ ಎಂದು ಗುರುತಿಸಬಹುದಾಗಿದೆ.
ಅಪ್ರಬುದ್ದ ಯೋಜನೆ:
ಜಲನಿಧಿ ಯೋಜನೆಯ ಪೈವಳಿಕೆ ಗ್ರಾಮ ಪಂಚಾಯತಿಯ ಕಳಾಯಿ ಹೊಳೆ ಸಹಿತ ಸ್ಥಳೀಯ ಜಲಮೂಲಗಳಲ್ಲದೆ ಕೆರೆಗಳು ಮತ್ತು ಕೊಳವೆಬಾವಿಗಳನ್ನು ಬಳಸಿ ಜಲ ವಿತರಣೆಗೆ ರೂಪು ನೀಡಲಾಗಿತ್ತು. ಆದರೆ ಬಹುತೇಕ ನೀರು ಪೂರೈಕೆಯಲ್ಲಿ ಬಳಿಕ ನ್ಯೂನತೆಗಳ ಮಹಾ ಸಮಸ್ಯೆಗಳ ಸಂತೆ ಎದುರಾಯಿತು. ಗುಡ್ಡಗಾಡು ಪ್ರದೇಶಗಳಿಗೆ ನೀರು ತಲಪದಿರುವುದು, ಪಂಪ್ ಸೆಟ್ ಗಳ ಕಳಪೆ ಗುಣಮಟ್ಟದ ಕಾರಣ ಕೆಡುಕಾಗುವುದು, ನಿರೀಕ್ಷಿತ ಮಟ್ಟದ ನೀರಿನ ಅಲಭ್ಯತೆ, ನಿರ್ವಹಣೆಯ ಕೊರತೆ ಮೊದಲಾದ ಹತ್ತುಹಲವು ಸಮಸ್ಯೆಗಳು ಎದುರಾದವು. ಜೊತೆಗೆ ಈ ಸಮಸ್ಯೆಗಳ ಪರಿಹಾರಕ್ಕೆ ಪೂರಕ ವ್ಯವಸ್ಥೆಗಳಿಗೂ ಸಂಬಂಧಪಟ್ಟವರು ಆಸಕ್ತಿವಹಿಸಿಲ್ಲ. ಯೋಜನೆಯ ಸಮರ್ಪಕ ಜಾರಿಗೆ ರಚಿಸಲಾದ ಸ್ಥಳೀಯ ಜನಸಾಮಾನ್ಯರನ್ನೊಳಪಡಿಸಿರುವ ಸಮಿತಿಗಳು ಬೇಜವಾಬ್ದಾರಿಯುತರಾಗಿ ಕಳಪೆ ಮಟ್ಟ ಪ್ರದರ್ಶಿಸಿದ್ದೂ ಯೋಜನೆಯ ಸೋಲಿಗೆ ಕಾರಣವಾಯಿತು.
ಪ್ರಸ್ತುತ ವರ್ಷ ಪೈವಳಿಕೆ ಗ್ರಾ.ಪಂ. ನಲ್ಲಿ ವ್ಯಾಪಕ ಜಲಕ್ಷಾಮ ತೀವ್ರಗೊಂಡಿದ್ದು, ಜನಸಾಮಾನ್ಯರು ದಿಕ್ಕೆಟ್ಟಿದ್ದಾರೆ.ಅಧಿಕೃತರು ಕೂಡಲೇ ಕ್ರಮಕೈಗೊಳ್ಳದಿದ್ದರೆ ಜನರು ಗುಳೆ ಹೋಗಬೇಕಾದ ಸ್ಥಿತಿ ಉಂಟಾಗಲಿದೆ.
Éೀನಂತಾರೆ:
ಜಲವಿತರಣೆಯ ಯೋಜನಾನುಷ್ಠಾನದಲ್ಲಿ ಲೋಪಗಳಿರುವುದು ನಿಜ. ಇದೀಗ ಮತ್ತೆ ಸಮರ್ಪಕಗೊಳಿಸುವ ನಿಟ್ಟಿನಲ್ಲಿ ಮರು ಅವಿಷ್ಕರಿತ ಯೋಜನೆ ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಎರಡು ವಾರಗಳ ಹಿಂದೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆಯೂ ನಡೆದಿದ್ದು, ಚುನಾವಣೆಯ ಭರಾಟೆಯ ಬಳಿಕ ಅಗತ್ಯದ ಕ್ರಮ ಕೈಗೊಳ್ಲುವ ಭರವಸೆ ದೊರಕಿದೆ. ಉದ್ದೇಶಿತ ಪರಿಷ್ಕರಿಸಿದ ಯೋಜನೆಯಲ್ಲಿ ಸುಮಾರು 3 ಕೋಟಿಗಿಮತಲೂ ಮಿಕ್ಕಿದ ನಿಧಿಗೆ ಪ್ರಸ್ತಾವನೆ ಇರಿಸಲಾಗಿದೆ.
ಶಾಹಿದ್.
ಮುಖ್ಯ ಅಭಿಯಂತರರು, ಪೈವಳಿಕೆ ಗ್ರಾಮ ಪಂಚಾಯತಿ ಜಲನಿಧಿ ಯೋಜನೆ.