ಕಾಸರಗೋಡು: ಕಳೆದೆರಡು ವರ್ಷಗಳ ಅವಲೋಕನ ಗಮನಿಸಿದಾಗ ಕೇರಳ ರಾಜ್ಯದಲ್ಲಿ ಮಲೇರಿಯಾ ಜ್ವರ ಬಾಧಿತರ ಸಂಖ್ಯೆ ಕಡಿಮೆಯಾಗಿರುವುದಾಗಿ ತಿಳಿದು ಬಂದಿದೆ. ಡೈರೆಕ್ಟರೇಟ್ ಆಫ್ ಹೆಲ್ತ್ ಸರ್ವೀಸ್‍ನ ಲೆಕ್ಕಾಚಾರ ಪ್ರಕಾರ 2018 ರಲ್ಲಿ 908 ಮಂದಿಗೆ ಮಲೇರಿಯಾ ಜ್ವರ ಬಾಧಿಸಿದ್ದರೂ ಯಾರೂ ಸಾವಿಗೀಡಾಗಿಲ್ಲ.
2013 ರ ಬಳಿಕ ಮಲೇರಿಯಾ ಜ್ವರ ಬಾಧಿಸಿ ಸಾವು ಸಂಭವಿಸದಿರುವುದು ಕಳೆದ ವರ್ಷವಾಗಿದೆ. 2016, 2017 ಎಂಬೀ ವರ್ಷಗಳಲ್ಲಿ ಮಲೇರಿಯಾ ಬಾಧಿಸಿ ತಲಾ ಇಬ್ಬರು ಸಾವಿಗೀಡಾಗಿದ್ದರು. ಐದು ವರ್ಷಗಳ ಹಿಂದೆ ಪ್ರತೀ ವರ್ಷ 1500 ರಿಂದ 2000 ದಷ್ಟು ಮಂದಿಗೆ ಮಲೇರಿಯಾ ಬಾಧಿಸಿರುವುದು ವರದಿಯಾಗುತ್ತಿತ್ತು. ಆ ಸಂಖ್ಯೆ ಇದೀಗ ಅರ್ಧಕ್ಕಿಳಿದಿದೆ. ಅದೇ ರೀತಿ ಈ ಹಿಂದಿನ ವರ್ಷಗಳಲ್ಲಿ ಎರಡರಿಂದ ಆರರವರೆಗೆ ಸಾವು ಸಂಭವಿಸಿತ್ತೆಂದೂ ತಿಳಿಸಲಾಗಿದೆ. 2020 ರ ವೇಳೆಗೆ ರಾಜ್ಯದಲ್ಲಿ ಮಲೇರಿಯ ಪೂರ್ಣವಾಗಿ ಇಲ್ಲದಾಗಿಸಲು ಸಾಧ್ಯವಿದೆ ಎಂದು ನಿರೀಕ್ಷಿಸಲಾಗಿದೆ. ಇದೇ ವೇಳೆ ಕೋಟ್ಟಯಂ, ಎರ್ನಾಕುಳಂ, ಪತ್ತನಂತಿಟ್ಟ, ಆಲಪ್ಪುಳ ಜಿಲ್ಲೆಗಳಲ್ಲಿ 2009 ರ ನಂತರ ಈ ರೋಗ ವರದಿಯಾಗಿಲ್ಲ.
ಮಲೇರಿಯಾ ಮುಕ್ತವಾಗುತ್ತಿದ್ದರೂ ಸದಾ ಜಾಗೃತರಾಗಿರಬೇಕೆಂದೂ ಮಲಪ್ಪುರ ಜಿಲ್ಲಾ ವೈದ್ಯಾಧಿಕಾರಿ ಬೊಟ್ಟುಮಾಡಿದ್ದಾರೆ. ದೂರದ ಊರುಗಳಿಗೆ ಹೋಗಿ ಬರುವವರು ಹಾಗೂ ಅಲ್ಲಿಂದ ಇಲ್ಲಿಗೆ ಆಗಮಿಸುವವರು ರೋಗ ವಾಹಕರಾಗುವ ಸಾಧ್ಯತೆಯಿದೆ. ಆದ್ದರಿಂದ ಅಂತವರಿಗೆ ಜ್ವರದ ಅನುಭವವಾದಲ್ಲಿ ಕೂಡಲೇ ಚಿಕಿತ್ಸೆ ನೀಡಬೇಕಾಗಿದೆ. ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲೂ ಮಲೇರಿಯಾ ಜ್ವರಕ್ಕೆ ಉಚಿತ ಚಿಕಿತ್ಸೆ ಲಭ್ಯವಿದೆಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.