ಕಾಸರಗೋಡು: `ಅಮ್ಮ' ಎಂಬ ಸಂಕಲ್ಪವನ್ನು ಸಾಕ್ಷಾತ್ಕರಿಸುವ ಮಾತಾ ಅಮೃತಾನಂದಮಯಿ ಅವರ ಸಮಾಜ ಸೇವೆ ಪ್ರತೀಯೊಬ್ಬ ಮಹಿಳೆಗೂ ಚೈತನ್ಯವನ್ನು ತುಂಬುತ್ತದೆ ಎಂದು ಚಲನಚಿತ್ರ ನಿರ್ದೇಶಕ ಮೇಜರ್ ರವಿ ಹೇಳಿದರು.
ಅವರು ಕಾಸರಗೋಡು ಜಿಲ್ಲೆಯ ವಿವಿಧ ಪ್ರದೇಶಗಳಿಂದ ಭಾನುವಾರ ಬಂದು ಸೇರಿದ ಸಾವಿರಾರು ಮಂದಿ ಮಹಿಳೆಯರು ಭಾಗವಹಿಸಿದ `ಅಮೃತಶ್ರೀ ಸಂಗಮ' ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಕಾರ್ಯಕ್ರಮವನ್ನು ಉದ್ಘಾಟಿಸಿದರು. 458 ಅಮೃತಶ್ರೀ ಸ್ವಸಹಾಯ ಸಂಘಟನೆಗಳ ಕಾರ್ಯಚಟುವಟಿಕೆಗಳಿಗೆ ಮೂಲಧನ ಮೊತ್ತ ಮತ್ತು ಹೊಸ ಬಟ್ಟೆಯನ್ನು ವಿತರಿಸಲಾಯಿತು.
ಮಾತಾ ಅಮೃತಾನಂದಮಯಿ ಮಠ ಕಣ್ಣೂರು ಮಠಾಧಿಪತಿ ಸ್ವಾಮಿ ಅಮೃತಾ ಕೃಪಾನಂದಪುರಿ, ಶಾಸಕ ಎನ್.ಎ.ನೆಲ್ಲಿಕುನ್ನು, ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು, ನಗರಸಭಾ ಪ್ರತಿಪಕ್ಷ ನೇತಾರ ಪಿ.ರಮೇಶ್, ಬ್ರಹ್ಮಾಚಾರಿ ಪ್ರಜಿತ್, ಅಮೃತಶ್ರೀ ಹಿರಿಯ ಸಂಯೋಜನಾಧಿಕಾರಿ ಆರ್.ರಂಗನಾಥನ್, ಅಮೃತಶ್ರೀ ಜಿಲ್ಲಾ ಯೋಜನಾಧಿಕಾರಿ ಜಯಶ್ರೀ ಮೊದಲಾದವರು ಮಾತನಾಡಿದರು.
ಸ್ವೋದ್ಯೋಗ ಕಂಡುಕೊಳ್ಳಲು ಮಹಿಳೆಯರಿಗೆ ಸಾಧ್ಯವಾಗಬೇಕು ಎಂಬ ಗುರಿಯೊಂದಿಗೆ 20 ಮಂದಿಯ ತಂಡಗಳಿಗೆ ಪ್ರತೀ ವರ್ಷ 30 ಸಾವಿರ ರೂ. ಚಟುವಟಿಕೆ ಮೂಲಧನವನ್ನಾಗಿ ನೀಡಲಾಗುತ್ತಿದೆ. ಅಲ್ಲದೆ ಹೊಸ ಬಟ್ಟೆ ವಿತರಿಸಲಾಗುತ್ತಿದೆ ಹಾಗು ಇತರ ನೆರವನ್ನು ನೀಡಲಾಗುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ 15 ಸಾವಿರದಷ್ಟು ಸದಸ್ಯರಿದ್ದಾರೆ.